ಮಂಗಳವಾರ, ಡಿಸೆಂಬರ್ 10, 2019
20 °C
ಚಳಿಗಾಲದ ಒಲಿಂಪಿಕ್ಸ್‌; ರೋಚಕ ಹಣಾಹಣಿಗೆ ಸಾಕ್ಷಿಯಾದ ಕೂಟ

ಹಾವರ್ಡ್‌ ಲೊರೆಂಟ್ಜನ್‌ಗೆ ದಾಖಲೆಯ ಚಿನ್ನ

Published:
Updated:
ಹಾವರ್ಡ್‌ ಲೊರೆಂಟ್ಜನ್‌ಗೆ ದಾಖಲೆಯ ಚಿನ್ನ

ಗಾಂಗ್‌ನೆವುಂಗ್‌ (ಎಎಫ್‌ಪಿ): ನಾರ್ವೆಯ ಹಾವರ್ಡ್‌ ಲೊರೆಂಟ್ಜನ್‌ ಪುರುಷರ 500ಮೀಟರ್‌ ಸ್ಪೀಡ್ ಸ್ಕೇಟಿಂಗ್‌ನಲ್ಲಿ ಚಿನ್ನ ಗೆದ್ದು ವಿಶ್ವದಾಖಲೆ ಬರೆದರು.

ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಸೋಮವಾರ ಅವರು 34.41ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ದಕ್ಷಿಣ ಕೊರಿಯಾದ ಚ ಮಿನ್ ಕ್ಯೂ ಬೆಳ್ಳಿ ಗೆದ್ದರು. ಚೀನಾದ ಸ್ಕೇಟರ್‌ ಗಾವೊ ತಿಂಗ್ಯು ಕಂಚಿನ ಪದಕ ಪಡೆದರು.  ನಾರ್ವೆ ತಂಡ ಗೆದ್ದುಕೊಂಡ ಹತ್ತನೇ ಪ್ರಶಸ್ತಿ ಇದಾಗಿದೆ. ಪಾಯಿಂಟ್ಸ್‌ ಪಟ್ಟಿಯಲ್ಲಿ ಜರ್ಮನಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ರೋಚಕ ಹಣಾಹಣಿ: ಕೆನಡಾದ ಜಸ್ಟಿನ್ ಕ್ರಿಪ್ಸ್ ಹಾಗೂ ಅಲೆಕ್ಸಾಂಡರ್‌ ಕೊಪಜ್‌ ಅವರು ಡಬಲ್ಸ್‌ ವಿಭಾಗದ ಬಾಬ್‌ಸ್ಲೀ ಸ್ಪರ್ಧೆಯಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ. ರೋಚಕ ಹಣಾಹಣಿಯಲ್ಲಿ ಈ ತಂಡ ಜರ್ಮನಿಯ ಆಟಗಾರರನ್ನು ಹಿಂದಿಕ್ಕಿತು. 3ನಿಮಿಷ 16.86ಸೆಕೆಂಡುಗಳಲ್ಲಿ ಗುರಿ ಸೇರಿತು.

ಫೈನಲ್‌ನಲ್ಲಿ ಅಮೆರಿಕ–ಕೆನಡಾ ಮುಖಾಮುಖಿ: ಸಾಂಪ್ರದಾಯಿಕ ಎದುರಾಳಿಗಳಾದ ಕೆನಡಾ ಹಾಗೂ ಹಾಲಿ ಚಾಂಪಿಯನ್ ಅಮೆರಿಕ ಮಹಿಳೆಯರ ಹಾಕಿ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಎರಡು ತಂಡಗಳು ಸೆಮಿಫೈನಲ್‌ನಲ್ಲಿ ಕ್ರಮವಾಗಿ 6–0 ಗೋಲುಗಳಲ್ಲಿ ರಷ್ಯಾ ಮೇಲೂ, 5–0ಯಲ್ಲಿ ಫಿನ್‌ಲ್ಯಾಂಡ್ ವಿರುದ್ಧವೂ ಗೆದ್ದಿವೆ.

ಸ್ಕೀ ಜಂಪಿಂಗ್‌ ಪುರುಷರ ತಂಡ ವಿಭಾಗದಲ್ಲಿ ನಾರ್ವೆ ಚಿನ್ನ ಗೆದ್ದುಕೊಂಡಿದೆ. ಈ ತಂಡ ಫೈನಲ್‌ನಲ್ಲಿ 1078.5 ಪಾಯಿಂಟ್ಸ್ ಕಲೆಹಾಕಿತು. ಜರ್ಮನಿ ಹಾಗೂ ಪೋಲೆಂಡ್ ತಂಡಗಳು ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದಿವೆ.

ಪೋಷಾಕು ಅವಾಂತರ: ಗ್ಯಾಬ್ರಿಯೆಲಾ ಕೈತಪ್ಪಿದ ಚಿನ್ನ

ಚಳಿಗಾಲದ ಒಲಿಂಪಿಕ್ಸ್‌ ಐಸ್‌ ಫಿಗರ್ ಸ್ಕೇಟಿಂಗ್‌ನಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಫ್ರಾನ್ಸ್‌ನ ಗ್ಯಾಬ್ರಿಯೆಲಾ ಪಾಪ್‌ಡಕಿನ್ಸ್‌ ಅವರ ಪೋಷಾಕಿನ ಒಂದು ಭಾಗ ಕಳಚಿತು. ಇದರಿಂದಾಗಿ ಗ್ಯಾಬ್ರಿಯೆಲಾ ಮತ್ತು ಅವರ ಜೊತೆಗಾರ ಗಲೆಮ್ ಸಿಜೋರ್ ಜೋಡಿಯ ಚಿನ್ನದ ಪದಕ ಗೆಲ್ಲುವ ಆಸೆ ಕೈಗೂಡಲಿಲ್ಲ.

ಗ್ಯಾಬ್ರಿಯೆಲಾ ಅವರು ಗಾಢಹಸಿರು ಬಣ್ನದ ಪೋಷಾಕು ಧರಿಸಿದ್ದರು. ಆರಂಭದಿಂದಲೂ ಉತ್ತಮ ಫ್ರದರ್ಶನ ನೀಡಿದರು. ಆದರೆ ಕೊನೆಯ ಹಂತದಲ್ಲಿ ಗ್ಯಾಬ್ರಿಯೆಲಾ ಎದೆಯ ಎಡಭಾಗದ ಪೋಷಾಕು ಕಳಚಿತು. ಇದು ಟಿವಿಯ ನೇರಪ್ರಸಾರದಲ್ಲಿಯೂ ಕಂಡುಬಂತು.  ಇದರ ಅರಿವಿದ್ದರೂ ಗ್ಯಾಬ್ರಿಯೆಲಾ ಜೋಡಿಯು ಶಾಂತಚಿತ್ತದಿಂದಲೇ ಸ್ಪರ್ಧೆಯನ್ನೂ ಪೂರ್ತಿಗೊಳಿಸಿದರು. ಆದರೆ, ನಿಖರತೆಯ ಕೊರತೆಯಿಂದ ಕೆಲವು ಪಾಯಿಂಟ್‌ಗಳು ಕೈತಪ್ಪಿದವು. ಬೆಳ್ಳಿಪದಕ ಒಲಿಯಿತು.

‘ಕಳಪೆ ಪೋಷಾಕಿನಿಂದಾಗಿ ನಿರಾಸೆ ಅನುಭವಿಸಬೇಕಾಯಿತು. ಇದೊಂದು ಕ್ಷುಲ್ಲಕ ವಿಚಾರ’ ಎಂದು ಗಲೆಮ್ ಸಿಜೋರ್ ಬೇಸರವ್ಯಕ್ತಪಡಿಸಿದ್ದಾರೆ.

ಸಲಿಂಗಿಗಳ ಚುಂಬನ:ವಿಡಿಯೋ ವೈರಲ್

ಪುರುಷರ ಫ್ರೀಸ್ಟೈಲ್‌ ಸ್ಕೀಯಿಂಗ್ ವಿಭಾಗದ ಸ್ಪರ್ಧಿ ಗನ್‌ ಕೆನ್‌ವೊರ್ತ್‌ ತಮ್ಮ ಗೆಳೆಯನಿಗೆ ಚುಂಬಿಸಿದ್ದು ನೇರಪ್ರಸಾರಗೊಂಡಿದೆ. 26 ವರ್ಷದ ಅಮೆರಿಕದ ಆಟಗಾರ 12ನೇ ಸ್ಥಾನ ಪಡೆದ ಬಳಿಕ ಕ್ಯಾಮೆರಾ ಎದುರು ಚುಂಬಿಸಿದ್ದಾರೆ. ತಮ್ಮ ಬಹುಕಾಲದ ಕನಸು ನನಸಾಯಿತು ಎಂದು ಅವರು ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದೆ.

‘ನಾವು ಚುಂಬಿಸುತ್ತಿರುವುದನ್ನು ಕ್ಯಾಮೆರಾ ಸೆರೆಮಾಡಿರುವುದು ಅರಿವಿಗೆ ಬಂದಿರಲಿಲ್ಲ. ವಿಡಿಯೊ ವೈರಲ್ ಆಗಿರುವುದು ತಿಳಿದು ಸಂತೋಷವಾಯಿತು’ ಎಂದು ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)