ಬುಧವಾರ, ಡಿಸೆಂಬರ್ 11, 2019
16 °C

ಅಶ್ವಿನ್‌–ಗಿಬ್ಸ್‌ ಟ್ವೀಟ್‌ ಸಮರ

Published:
Updated:
ಅಶ್ವಿನ್‌–ಗಿಬ್ಸ್‌ ಟ್ವೀಟ್‌ ಸಮರ

ನವದೆಹಲಿ (ಪಿಟಿಐ): ಭಾರತದ ಕ್ರಿಕೆಟಿಗ ರವಿಚಂದ್ರನ್‌ ಅಶ್ವಿನ್‌ ಮತ್ತು ದಕ್ಷಿಣ ಆಫ್ರಿಕಾದ ಹಿರಿಯ ಆಟಗಾರ ಹರ್ಷಲ್‌ ಗಿಬ್ಸ್‌ ನಡುವೆ ಸೋಮವಾರ ಟ್ವೀಟ್‌ ಸಮರ ತಾರಕಕ್ಕೇರಿತ್ತು.

ಶೂ ಬ್ರ್ಯಾಂಡ್‌ವೊಂದರ ಪ್ರಚಾರ ರಾಯಭಾರಿಯಾಗಿರುವ ಅಶ್ವಿನ್‌ ‘ಈ ಶೂ ಹಾಕಿಕೊಂಡರೆ ಚುರುಕಾಗಿ ಓಡಬಹುದು’ ಎಂದು ಟ್ವೀಟ್‌ ಮಾಡಿದ್ದರು.

‘ಇನ್ನು ಮುಂದಾದರೂ ನೀವು ಅಂಗಳದಲ್ಲಿ ಕ್ಷೇತ್ರರಕ್ಷಣೆ ಮಾಡುವಾಗ ಮೊದಲಿಗಿಂತಲೂ ತುಸು ವೇಗವಾಗಿ ಓಡಬಹುದೇನೊ ಅಲ್ಲವೇ ಅಶ್ವಿನ್‌’ ಎಂದು ಗಿಬ್ಸ್‌ ವ್ಯಂಗ್ಯ ಮಾಡಿದ್ದರು.

ಇದರಿಂದ ಕುಪಿತರಾದಂತೆ ಕಂಡ ಅಶ್ವಿನ್‌ ‘ನಿಮ್ಮಷ್ಟು ವೇಗವಾಗಿ ಖಂಡಿತವಾಗಿಯೂ ಓಡಲಾಗುವುದಿಲ್ಲ. ಆ ಅದೃಷ್ಟ ನನಗಿಲ್ಲ. ಅದರೆ ಫಿಕ್ಸಿಂಗ್‌ನಿಂದ ಹಣ ಗಳಿಸಿ ಬದುಕು ಸಾಗಿಸುವ ದುರ್ಗತಿ ಖಂಡಿತವಾಗಿಯೂ ಬಂದಿಲ್ಲ. ನಾನು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು ಬದುಕುತ್ತಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದರು.

2001ರಲ್ಲಿ ನಡೆದಿದ್ದ ಮ್ಯಾಚ್‌ ಫಿಕ್ಸಿಂಗ್‌ ಹಗರಣದಲ್ಲಿ ಗಿಬ್ಸ್‌ ಭಾಗಿಯಾಗಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಅವರನ್ನು ಅಮಾನತು ಮಾಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಗಿಬ್ಸ್‌ ‘ನಾನು ತಮಾಷೆಗೆ ಹೀಗೆ ಹೇಳಿದೆ’ ಎಂದು ಮರು ಟ್ವೀಟ್‌ ಮಾಡಿದ್ದಾರೆ. ನಂತರ ಅಶ್ವಿನ್, ‘ನಾನು ಕೂಡ ತಮಾಷೆ ಮಾಡಿದೆ. ನೀವು ಇದನ್ನು ತಪ್ಪಾಗಿ ಗ್ರಹಿಸಿದಿರಿ ಅನಿಸುತ್ತದೆ. ಇದನ್ನು ಇಲ್ಲಿಯೇ ಬಿಟ್ಟುಬಿಡಿ. ಮುಂದೆ ಎಂದಾದರೂ ಭೇಟಿಯಾದಾಗ ಜೊತೆಗೆ ಕುಳಿತು ಊಟ ಮಾಡೋಣಾ’ ಎಂದು ಟ್ವೀಟ್ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)