ಮಹದಾಯಿ: ದೂರಿನ ಸ್ವರೂಪ ಬದಲಿಸಿದ ಗೋವಾ

7

ಮಹದಾಯಿ: ದೂರಿನ ಸ್ವರೂಪ ಬದಲಿಸಿದ ಗೋವಾ

Published:
Updated:

ನವದೆಹಲಿ: ‘ಮಹದಾಯಿ ನದಿ ನೀರು ಹಂಚಿಕೆ ಕುರಿತ ವಿವಾದಕ್ಕೆ ಕಾರಣವಾಗಿರುವ ಗೋವಾ ಈ ಕುರಿತು ನೀಡಲಾಗಿರುವ ದೂರುಗಳ ಸ್ವರೂಪವನ್ನೂ ಬದಲಿಸುತ್ತ, ನಾವು ನದಿ ನೀರಿನ ಮೇಲೆ ಹಕ್ಕನ್ನೇ ಹೊಂದಿಲ್ಲ ಎಂಬಂತೆ ಪ್ರತಿಪಾದಿಸುತ್ತಿದೆ’ ಎಂದು ಕರ್ನಾಟಕ ದೂರಿದೆ.

ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್‌ ನೇತೃತ್ವದ ಮಹದಾಯಿ ಜಲವಿವಾದ ನ್ಯಾಯಮಂಡಳಿ ಎದುರು ಸೋಮವಾರ ವಾದ ಮಂಡಿಸಿದ ರಾಜ್ಯದ ಪರ ಹಿರಿಯ ವಕೀಲ ಅಶೋಕ ದೇಸಾಯಿ, 2002ರಲ್ಲಿ ಮೊದಲ ಬಾರಿಗೆ ಈ ಕುರಿತು ಕೇಂದ್ರದ ಜಲಸಂಪನ್ಮೂಲ ಸಚಿವಾಲಯಕ್ಕೆ ದೂರು ಸಲ್ಲಿಸಿದ್ದ ಗೋವಾ ನಂತರವೂ ದೂರು ಸಲ್ಲಿಸಿದೆ. ಆದರೆ, ಪ್ರತಿ ಬಾರಿಯೂ ದೂರಿನ ಸ್ವರೂಪ ಬದಲಾಗಿದೆ ಎಂದರು.

ಮಹದಾಯಿ ಅಂತರರಾಜ್ಯ ನದಿಯಾಗಿದೆ. ಯಾವುದೇ ರಾಜ್ಯಕ್ಕೆ ನದಿ ನೀರಿನ ಮೇಲೆ ಹಕ್ಕು ಇಲ್ಲ, ಪಾಲೇ ಇಲ್ಲ ಎಂದು ಹೇಳುವುದು ಸರಿಯಲ್ಲ ಎಂದು ತಿಳಿಸಿದ ಅವರು, ರಾಜ್ಯವು ಕುಡಿಯುವ ನೀರಿನ ಬೇಡಿಕೆ ಈಡೇರಿಕೆಗಾಗಿ ನದಿ ತಿರುವು ಯೋಜನೆ ಆರಂಭಿಸಿದೆ ಎಂದರು.

ಮಹದಾಯಿ ನದಿಯಲ್ಲಿ ಒಟ್ಟು 199.6 ಟಿಎಂಸಿ ಅಡಿ ನೀರಿನ ಲಭ್ಯತೆ ಇದೆ. ಅದರಲ್ಲಿ ಗೋವಾ 9.30 ಟಿಎಂಸಿ ಅಡಿಯಷ್ಟು ನೀರನ್ನು ಮಾತ್ರ ಬಳಕೆ ಮಾಡಿಕೊಳ್ಳುತ್ತಿದೆ. ಉಳಿದ ಭಾರಿ ಪ್ರಮಾಣದ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ ಎಂದು ಅವರು ಹೇಳಿದರು.

ಸೋಮವಾರ ರಾಜ್ಯದ ವಾದ ಅಂತ್ಯಗೊಂಡಿದ್ದು, ಗೋವಾ ಮಂಡಿಸಲಿರುವ ವಾದಕ್ಕೆ ಪ್ರತಿವಾದ ಮಾಡಲು ಅವಕಾಶ ಕಲ್ಪಿಸಬೇಕು ಎಂಬ ಕರ್ನಾಟಕದ ಅಡ್ವೋಕೇಟ್‌ ಜನರಲ್ ಮಧುಸೂದನ್ ನಾಯಕ್ ಅವರ ಮನವಿಯನ್ನು ನಿರಾಕರಿಸಿದ ನ್ಯಾಯಮೂರ್ತಿಗಳು, ಪ್ರತಿವಾದ, ಸಮರ್ಥನೆಯನ್ನು ಲಿಖಿತ ರೂಪದಲ್ಲಿ ಸಲ್ಲಿಸಿ ಸೂಚಿಸಿದರು.

ಕರ್ನಾಟಕದ ವಕೀಲರು ಮಂಡಿಸಿದ ವಾದಕ್ಕೆ ಪ್ರತಿಕ್ರಿಯೆ ನೀಡುವ ನಿಟ್ಟಿನಲ್ಲಿ ಗೋವಾ ಪ್ರತಿವಾದ ಆರಂಭಿಸಿದ್ದು, ಮಂಗಳವಾರವೂ ಮುಂದುವರಿಯಲಿದೆ. ಫೆಬ್ರುವರಿ 22ಕ್ಕೆ ಅಂತಿಮ ಹಂತದ ವಿಚಾರಣೆ ಮುಕ್ತಾಯಗೊಳಿಸುವುದಾಗಿ ತಿಳಿಸಿದ್ದ ನ್ಯಾಯಮಂಡಳಿಯು 21ಕ್ಕೆೇ ವಿಚಾರಣೆ ಮುಕ್ತಾಯಗೊಳಿಸುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry