ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾಡಿ ಘಾಟ್‌ ಸುರಂಗ ಮಾರ್ಗ: ಈ ವರ್ಷವೇ ಟೆಂಡರ್‌

Last Updated 19 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳೂರು– ಬೆಂಗಳೂರು ರಾಷ್ಟ್ರಿಯ ಹೆದ್ದಾರಿಯಲ್ಲಿರುವ ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಿಸುವ ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧವಾಗಿದೆ. ಈ ಕಾಮಗಾರಿಗೆ ಈ ವರ್ಷವೇ ಟೆಂಡರ್‌ ಕರೆಯಲಾಗುವುದು ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

ಈ ಯೋಜನೆಯನ್ನು ಕೇಂದ್ರ ಸರ್ಕಾರವೇ ಅನುಷ್ಠಾನಗೊಳಿಸಲಿದೆ. ಪಶ್ಚಿಮಘಟ್ಟದ ಮೂಲಕ ಹಾದು ಹೋಗುವ ಈ ಮಾರ್ಗಕ್ಕೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಒಪ್ಪಿಗೆ ಸಿಕ್ಕಿಲ್ಲ. ಹಾಗಾಗಿ ಯೋಜನೆ ಸ್ವಲ್ಪ ವಿಳಂಬವಾಗಿದೆ ಎಂದು ಅವರು ತಿಳಿಸಿದರು.

ಈ ಮಾರ್ಗದಲ್ಲಿ ಸುರಂಗಗಳ ನಡುವೆ ಅಲ್ಲಲ್ಲಿ ಸೇತುವೆಗಳನ್ನೂ ನಿರ್ಮಿಸಲಾಗುತ್ತದೆ. ಇಲ್ಲಿ 10.5 ಮೀ ಅಗಲದ ರಸ್ತೆ ನಿರ್ಮಾಣವಾಗಲಿದ್ದು, ಇದು ಎರಡು ಪಥಗಳನ್ನು ಹೊಂದಿರಲಿದೆ ಎಂದರು.

ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ಕಾರಿಡಾರ್‌ ಯೋಜನೆಯ ಡಿಪಿಆರ್‌ ಸಿದ್ಧವಾಗಿದ್ದು ಟೆಂಡರ್‌ ಆಹ್ವಾನಿಸಲಾಗಿದೆ. ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಸಚಿವ ತಿಳಿಸಿದರು.

ಬೆಂಗಳೂರು– ಮಲಪ್ಪುರ ಎಕ್ಸ್‌ಪ್ರೆಸ್‌ ಕಾರಿಡಾರ್‌ನ ಭಾಗವಾಗಿರುವ ಈ ಹೆದ್ದಾರಿಗೆ ₹ 7,000 ಕೋಟಿ ವೆಚ್ಚವಾಗಲಿದೆ. 117 ಕಿ.ಮೀ ಉದ್ದದ ಈ ಮಾರ್ಗವು 8 ಕಿ.ಮೀ ಉದ್ದದ ಎತ್ತರಿಸಿದ ಮಾರ್ಗವನ್ನು ಒಳಗೊಂಡಿರಲಿದೆ. ಇದರಲ್ಲಿ 9 ಕಡೆ ದೊಡ್ಡ ಸೇತುವೆಗಳನ್ನು ಹಾಗೂ 4 ಕಡೆ ರೈಲ್ವೆ ಮೇಲ್ಸೇತುವೆಗಳನ್ನು ನಿರ್ಮಿಸಬೇಕಾಗುತ್ತದೆ ಎಂದರು.

ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಕಾಮಗಾರಿಯನ್ನೂ ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಲಾಗುವುದು. ದಾಬಸ್‌ಪೇಟೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಹುಮಾದರಿ ಸರಕು ಸಾರಿಗೆ ಕೇಂದ್ರಕ್ಕೂ (ಮಲ್ಟಿ ಮೋಡ್‌ ಲಾಜಿಸ್ಟಿಕ್‌ ಪಾರ್ಕ್‌) ಇದು ಸಂಪರ್ಕ ಕಲ್ಪಿಸಲಿದೆ. ಈ ಹೆದ್ದಾರಿಯಲ್ಲಿ ಒಟ್ಟು 76 ಕಿ.ಮೀ ಉದ್ದದ ಮಾರ್ಗ ಕರ್ನಾಟಕದಲ್ಲಿ ಹಾದುಹೋಗಲಿದೆ ಎಂದರು.

ಉಪನಗರ ವರ್ತುಲ ರಸ್ತೆ (ಎಸ್‌ಟಿಆರ್‌ಆರ್‌) ಯೋಜನೆಗೆ ಏಪ್ರಿಲ್‌ 1ಕ್ಕೆ ಶಂಕುಸ್ಥಾಪನೆ ಮಾಡಲಿದ್ದೇವೆ. ಹೊಸೂರು, ಆನೇಕಲ್, ಕನಕಪುರ, ಮಾಗಡಿ, ದಾಬಸ್‌ಪೇಟ್ ಸಂಪರ್ಕಿಸುವ ಈ  ಮಾರ್ಗವು 140 ಕಿ.ಮೀ ಉದ್ದವಿದೆ. ಇದರ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ 55 ಕಿ.ಮೀ ಉದ್ದ ವರ್ತುಲ ರಸ್ತೆಯನ್ನು ನಿರ್ಮಿಸಲಾಗುವುದು. ಇದಕ್ಕೆ ₹ 1,500 ಕೋಟಿ ವೆಚ್ಚವಾಗಲಿದೆ ಎಂದರು.

ಪ್ರಯಾಣಿಕರ ವಾಹನಗಳಿಗೆ ಟೋಲ್‌ಗೇಟ್‌ಗಳಲ್ಲಿ ಸುಂಕ ವಿನಾಯಿತಿ ನೀಡಲು ಸಾಧ್ಯವೇ ಇಲ್ಲ. ಉತ್ತಮ ಸೌಕರ್ಯ ಬೇಕಾದರೆ ಅದಕ್ಕೆ ತಗಲುವ ವೆಚ್ಚವನ್ನೂ ಜನರೇ ಭರಿಸಬೇಕಾಗುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ, ಪೆಟ್ರೋಲ್‌ ಮತ್ತು ಡೀಸೆಲ್‌ ಬದಲು ಜೈವಿಕ ಇಂಧನ ಉತ್ತೇಜನ ನೀಡಲಿದೆ ಎಂದರು.

ತದಡಿ ಬಂದರು ಅಭಿವೃದ್ಧಿಪಡಿಸಲು ಕೇಂದ್ರ ಒಲವು

ಕರ್ನಾಟಕಕ್ಕೆ ಇನ್ನೊಂದು ದೊಡ್ಡ ಪ್ರಮಾಣದ ಬಂದರಿನ ಅಗತ್ಯ ಇದೆ. ರಾಜ್ಯವು ಪ್ರಸ್ತಾವ ಸಲ್ಲಿಸಿದರೆ ತದಡಿ ಬಂದರನ್ನು ಕೇಂದ್ರ ಬಂದರು ಇಲಾಖೆಯೇ ಅಭಿವೃದ್ಧಿಪಡಿಸಲಿದೆ ಎಂದು ಗಡ್ಕರಿ ತಿಳಿಸಿದರು.

ನವಮಂಗಳೂರು ಹಾಗೂ ಗೋವಾ ಬಂದರುಗಳಲ್ಲಿ ಹೆಚ್ಚಿನ ಒತ್ತಡ ಇದೆ. ಕರ್ನಾಟಕದಲ್ಲಿ ಇನ್ನೊಂದು ಬಂದರನ್ನು ಅಭಿವೃದ್ಧಿಪಡಿಸಿದರೆ ಇಲ್ಲಿ ವಾಣಿಜ್ಯ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT