ಮಂಗಳವಾರ, ಡಿಸೆಂಬರ್ 10, 2019
20 °C
‘ಭಾಷಾ ಹಕ್ಕು ಮತ್ತು ಸಮಾನತೆ’ ರಾಷ್ಟ್ರೀಯ ವಿಚಾರಸಂಕಿರಣಕ್ಕೆ ಚಾಲನೆ

ಪ್ರಾದೇಶಿಕ ಭಾಷೆ ಕಡೆಗಣನೆ ಮಡುಗಟ್ಟಿದೆ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಾದೇಶಿಕ ಭಾಷೆ ಕಡೆಗಣನೆ ಮಡುಗಟ್ಟಿದೆ ಆಕ್ರೋಶ

ಬೆಂಗಳೂರು: ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನ ಪಂಜಾಬ್‌ನ ಶಾಖೆಗಳಲ್ಲೇ ಪಂಜಾಬಿ ಭಾಷೆಗೆ ಮನ್ನಣೆ ಸಿಗುತ್ತಿಲ್ಲ. ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಅವಕಾಶವಿದೆ; ಆದರೆ, ಅಮೆರಿಕದ ವಿಸಾ ಸೇವೆ ಬಂಗಾಳಿ ಭಾಷೆಯಲ್ಲೂ ಲಭ್ಯ...

ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾಷೆಗಳನ್ನು ಹೇಗೆ ಕಡೆಗಣಿಸಲಾಗುತ್ತಿದೆ ಎಂಬುದಕ್ಕೆ ಕೋಲ್ಕತ್ತದ ಗರ್ಗ ಚಟರ್ಜಿ ನೀಡಿದ ಉದಾಹರಣೆಗಳಿವು. ಹಿಂದಿ ಮತ್ತು ಇಂಗ್ಲಿಷ್‌ಗೆ ಅಗತ್ಯಕ್ಕಿಂತ ಹೆಚ್ಚಿನ ಮಹತ್ವ ನೀಡುವುದರಿಂದ ಜನರ ಹಕ್ಕುಗಳನ್ನು ಹೇಗೆ ನಿರಾಕರಿಸಲಾಗುತ್ತಿದೆ ಎಂಬುದನ್ನು ಅವರು ಎಳೆಎಳೆಯಾಗಿ ಬಿಚ್ಚಿಟ್ಟರು.

ಬನವಾಸಿ ಬಳಗ ಹಾಗೂ ಭಾಷಾ ಸಮಾನತೆ ಮತ್ತು ಹಕ್ಕುಗಳಿಗಾಗಿ ಅಭಿಯಾನದ (ಕ್ಲಿಯರ್‌) ಆಶ್ರಯದಲ್ಲಿ ಸೋಮವಾರ ಇಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರಸಂಕಿರಣ ದೇಶದ ಪ್ರಾದೇಶಿಕ ಭಾಷೆಗನ್ನಾಡುವ ಜನರ ನೋವು, ಆತಂಕ ಹಂಚಿಕೊಳ್ಳಲು ವೇದಿಕೆ ಒದಗಿಸಿತು.

ಪ್ರಜಾಪ್ರಭುತ್ವದಲ್ಲಿ ಜನರ ಆಶೋತ್ತರಗಳಿಗೆ ಮಹತ್ವ ಸಿಗಬೇಕು ಎಂಬ ಕಾರಣಕ್ಕೆ ದೇಶದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಳ್ಳಲಾಯಿತು. ಹಿಂದಿ ಹಾಗೂ ಇಂಗ್ಲಿಷ್‌ ಬಾರದ ಜನರೇ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಅವರಿಗೆ ಅರ್ಥವಾಗದ ಭಾಷೆಯಲ್ಲೇ ಆಡಳಿತ ವ್ಯವಹಾರಗಳು ನಡೆಯುತ್ತಿದೆ. ಮಾತೃಭಾಷೆಯಲ್ಲೇ ಆಡಳಿತ ಕನ್ನಡಿಯೊಳಗಿನ ಗಂಟು ಎಂಬ ಸ್ಥಿತಿ ಇದೆ. ಜನರ ಹಕ್ಕನ್ನು ಕಿತ್ತುಕೊಳ್ಳಲಾಗಿದೆ ಎಂದು ಚಟರ್ಜಿ ಆಕ್ರೋಶ ವ್ಯಕ್ತಪಡಿಸಿದರು.

‘ಅಡುಗೆ ಅನಿಲ ಸಿಲಿಂಡರ್‌ ಬಳಸುವ ಸುರಕ್ಷಿತ ವಿಧಾನ ಮಾಹಿತಿಯನ್ನು ಪ್ರಾದೇಶಿಕ ಭಾಷೆಯಲ್ಲಿ ಒದಗಿಸಲು ಕೇಂದ್ರ ಸರ್ಕಾರದ ಸ್ವಾಮ್ಯದ ತೈಲ ಕಂಪನಿಗಳಿಗೆ ಏನು ಕಷ್ಟ ಎಂಬುದು ತಿಳಿಯದು. ಜನರಿಗೆ ಅರ್ಥವಾಗದ ಭಾಷೆಯಲ್ಲಿ ಇಂತಹ ಮಾಹಿತಿಯನ್ನು ಒದಗಿಸುವುದರಿಂದ ಆಗುವ ಪ್ರಯೋಜನವಾದರೂ ಏನು. ಕೇಂದ್ರ ಸರ್ಕಾರವು ನಮ್ಮ ಹಕ್ಕುಗಳನ್ನು ನಿರಾಕರಿಸುತ್ತಿರುವುದರ ಜೊತೆಗೆ ನಮ್ಮ ತೆರಿಗೆ ಹಣವನ್ನೂ ವ್ಯರ್ಥ ಮಾಡುತ್ತಿದೆ’ ಎಂದು ಆರೋಪಿಸಿದರು.

ಇಂಗ್ಲೆಂಡ್‌ನಲ್ಲಿ ಆಡಳಿತಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ತಮಿಳಿನಲ್ಲೂ ನೀಡಲಾಗುತ್ತಿದೆ. ಆದರೆ, ಸ್ವಾತಂತ್ರ್ಯ ಬಂದು ಏಳು ದಶಕಗಳ ಬಳಿಕವೂ ನಮಗೆ ಆಡಳಿತದಲ್ಲಿ ಜನರ ಭಾಷೆಯನ್ನು ಅಳವಡಿಸಿಕೊಳ್ಳಲು ಸಾಧ್ಯವಾಗದಿರುವುದು ವಿಪರ್ಯಾಸ ಎಂದರು.

‘ಭಾಷೆಯ ವಿಚಾರ ದೇಶವನ್ನು ಒಡೆಯಲೂ ಬಲ್ಲುದು ಒಗ್ಗೂಡಿಸಲೂ ಬಲ್ಲುದು. ಸ್ಥಳೀಯ ಭಾಷೆಗಳ ಮೇಲೆ ಯಾವುದೇ ಭಾಷೆಯನ್ನು ಹೇರಿದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ದೇಶದಲ್ಲಿ ಹಿಂದಿ ಮತ್ತು ಇಂಗ್ಲಿಷ್‌ ಅನ್ನು ಮಾತ್ರ ಅಧಿಕೃತ ಭಾಷೆಯನ್ನಾಗಿ ಬಳಸಲಾಗುತ್ತಿದೆ. ಇನ್ನುಳಿದ ಭಾಷೆಗಳಿಗೆ ಆ ಸ್ಥಾನಮಾನ ಏಕೆ ಸಿಕ್ಕಿಲ್ಲ ಎಂದು ನಾವು ಪ್ರಶ್ನಿಸಬೇಕಾಗಿದೆ. ಈ ಉದ್ದೇಶಕ್ಕಾಗಿಯೇ ನಾವು ಅಭಿಯಾನವನ್ನು ಆರಂಭಿಸಲಾಗಿದೆ’ ಎಂದು ‘ಕ್ಲಿಯರ್’ ಕಾರ್ಯದರ್ಶಿ ಸೆಂಥಿಲ್‌ನಾಥನ್‌ ತಿಳಿಸಿದರು.

‘ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸ್ಥಾನಪಡೆದ ಭಾಷೆಗಳು, ಈ ಸ್ಥಾನಮಾನಕ್ಕಾಗಿ ಹೋರಾಟ ನಡೆಸುತ್ತಿರುವ 40ಕ್ಕೂ ಅಧಿಕ ಭಾಷೆಗಳು ಹಾಗೂ ಅಳಿವಿನ ಅಂಚಿನಲ್ಲಿರುವ ಬುಡಕಟ್ಟು ಭಾಷೆಗಳು ಎಲ್ಲವೂ ಒಂದೇ. ಈ ಸಮಾನತೆಯನ್ನು ಸಾಧಿಸಲು ಈ ವಿಚಾರ ಸಂಕಿರಣದಲ್ಲಿ ರೂಪರೇಷೆ ಸಿದ್ಧಪಡಿಸಲಾಗುತ್ತದೆ. ಪ್ರಾದೇಶಿಕ ಭಾಷೆಗಳ ಆತಂಕವನ್ನು ಕೇಂದ್ರ ಸರ್ಕಾರಕ್ಕೆ ಅರ್ಥ ಮಾಡಿಸುವ ನಿಟ್ಟಿನಲ್ಲಿ ನಾವು ಬೆಂಗಳೂರು ಘೋಷಣೆಯನ್ನು ರೂಪಿಸಲಿದ್ದೇವೆ’ ಎಂದು ಅವರು ತಿಳಿಸಿದರು.

‘ಜಗತ್ತಿನ ಸಕಲ ಜ್ಞಾನ ಮಾತೃಭಾಷೆಯಲ್ಲೇ ಸಿಗಲಿ’

‘ಜಗತ್ತಿನ ಎಲ್ಲ ಜ್ಞಾನವೂ ಮಾತೃಭಾಷೆಯ ಮೂಲಕ ಸಿಗುವಂತಹ ವಾತಾವರಣವನ್ನು ನಿರ್ಮಿಸಬೇಕಾದ ಅಗತ್ಯವಿದೆ. ಜಪಾನೀಯರು ಇದನ್ನು ಸಾಧ್ಯವಾಗಿಸಿಕೊಂಡಿದ್ದಾರೆ. ವಿಜ್ಞಾನದ ಅಷ್ಟೂ ಜ್ಞಾನವನ್ನು ಹೀಬ್ರೂ ಭಾಷೆ ಮೂಲಕವೇ ಕಲಿಸಲು ಇಸ್ರೇಲ್‌ಗೆ ಸಾಧ್ಯವಾಗಿದೆ. ಎಲ್ಲ ಭಾರತೀಯ ಭಾಷೆಗಳಿಗೂ ಇದು ಸಾಧ್ಯವಾಗಬೇಕು’ಎಂದು ಬನವಾಸಿ ಬಳಗದ ಅಧ್ಯಕ್ಷ ಜಿ.ಆನಂದ್‌ ಅಭಿಪ್ರಾಯಪಟ್ಟರು.

ಭಾಷೆಯನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬ ಆಧಾರದಲ್ಲಿ ಅದರ ಮಹತ್ವ ನಿರ್ಧಾರವಾಗುತ್ತದೆ. ಮಕ್ಕಳ ಲಾಲಿ ಹಾಡು, ಪ್ರಾಸ ಪದ್ಯಗಳು, ಶಿಕ್ಷಣದಲ್ಲಿ, ಸಂಶೋಧನೆಯಲ್ಲಿ ನಿರ್ದಿಷ್ಟ ಭಾಷೆಯನ್ನು ಬಳಸಿಕೊಳ್ಳಲು ಎಷ್ಟರ ಮಟ್ಟಿಗೆ ಅವಕಾಶವಿದೆ ಎಂಬುದು ಮುಖ್ಯ. ಪರಿವರ್ತನೆಯನ್ನು ತಡೆಯಲಾಗದು. ಆದರೆ ಅದಕ್ಕೆ ಅನುಗುಣವಾಗಿ ಹೊಸಪದಗಳನ್ನು ಶೋಧಿಸಬೇಕು. ಅವು ಜನರಿಗೆ ಸುಲಭವಾಗಿ ಅರ್ಥವಾಗುವಂತಿರಬೇಕು ಎಂದರು.

***

ಕಾವೇರಿ ವಿಚಾರದಲ್ಲಿ ಕರ್ನಾಟಕ, ತಮಿಳುನಾಡು ನಡುವೆ ಭಿನ್ನಾಭಿಪ್ರಾಯ ಇರಬಹುದು. ಪ್ರಾದೇಶಿಕ ಭಾಷೆಗೆ ಮಹತ್ವ ಕಲ್ಪಿಸುವ ಹೋರಾಟದಲ್ಲಿ ನಾವು ಒಂದೇ

 – ಸೆಂಥಿಲ್‌ನಾಥನ್‌, ‘ಕ್ಲಿಯರ್’ ಕಾರ್ಯದರ್ಶಿ

ಪ್ರತಿಕ್ರಿಯಿಸಿ (+)