ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಕ್ಷೇತ್ರಗಳ ಪರಿಣತರ ಜೊತೆ ಪ್ರಶ್ನೋತ್ತರ

Last Updated 20 ಫೆಬ್ರುವರಿ 2018, 4:04 IST
ಅಕ್ಷರ ಗಾತ್ರ

ಎಂ.ಎಸ್‌. ಶ್ರೀರಾಮ್‌
ಐಐಎಂಬಿ ಸಂದರ್ಶಕ ಪ್ರಾಧ್ಯಾಪಕ

*ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ಕಡಿಮೆಯಾಗಲಿರುವ ಆದಾಯ ಕೊರತೆ ಸರಿದೂಗಿಸಲು ಹಾಗೂ ಬೆಂಗಳೂರಿಗೆ ವಲಸೆ ತಡೆಯಲು ಏನು ಮಾಡುತ್ತೀರಿ?

ಜಿಎಸ್‌ಟಿ ಜಾರಿ ಮೂಲಕ ರಾಜ್ಯದ ಆದಾಯವನ್ನು ಕೇಂದ್ರ ಕಿತ್ತುಕೊಂಡಿದ್ದರಿಂದ ನಮ್ಮ ಮೂಲಭೂತ ಹಕ್ಕಿಗೆ ಹೊಡೆತ ಬಿದ್ದಿದೆ. ಈ ಕೊರತೆ ಸರಿದೂಗಿಸಲು ರಾಜ್ಯ ಸರ್ಕಾರ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲೇಬೇಕಾಗುತ್ತದೆ. ಕೇಂದ್ರದ ಜೊತೆ ಸಂಘರ್ಷಕ್ಕೆ ಇಳಿಯುವ ಬದಲು ಸಂಬಂಧ ಉತ್ತಮಪಡಿಸಿಕೊಳ್ಳುವ ಮೂಲಕ ನೆರವು ಪಡೆದುಕೊಳ್ಳಬೇಕು.

ಬೆಂಗಳೂರಿನ ದಟ್ಟಣೆ ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳಲೇಬೇಕಿದೆ. ಕೇವಲ 6, 7ನೇ ತರಗತಿ ಓದಿದ ಕೃಷಿ ಕಾರ್ಮಿಕರು ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬರುತ್ತಿದ್ದಾರೆ. ಹಳ್ಳಿಗಳಲ್ಲೇ ಉದ್ಯೋಗ ಸೃಷ್ಟಿಸುವ ಮೂಲಕ ಅದಕ್ಕೆ ತಡೆ ಒಡ್ಡಬೇಕಿದೆ. ಕಲಬುರ್ಗಿ, ಬೀದರ್‌, ಧಾರವಾಡ, ರಾಯಚೂರು ಮುಂತಾದ ಹತ್ತಿ ಬೆಳೆಯುವ ಜಿಲ್ಲೆಗಳಲ್ಲಿ ಕಾಟನ್‌ ಕೈಗಾರಿಕೆಗಳನ್ನು ಸ್ಥಾಪಿಸಿದರೆ ಸುಮಾರು 4 ಲಕ್ಷ ಜನರಿಗೆ ಉದ್ಯೋಗ ನೀಡಲು ಸಾಧ್ಯ.

***

ಸಂಪತ್‌ರಾಮನ್‌, ಎಫ್‌ಕೆಸಿಸಿಐ ಅಧ್ಯಕ್ಷ

*ಕೈಗಾರಿಕಾ ವಲಯಕ್ಕೆ ನಿಮ್ಮ ಆದ್ಯತೆಗಳೇನು?

ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಅಡ್ಡಿಯಾಗಿರುವ ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಏಕೀಕೃತ ವ್ಯವಸ್ಥೆ ಅಳವಡಿಸಲು ಈ ವಲಯದ ಗಣ್ಯರ ಸಲಹೆ ಪಡೆಯುತ್ತೇನೆ. ವ್ಯಾಪಾರ ಪರವಾನಗಿ, ತೆರಿಗೆ ಸಂಗ್ರಹ ಸೇರಿದಂತೆ ವಲಯ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಸುಧಾರಣೆ ತರಲು ಬದ್ಧ.

***

ವಿ. ರವಿಚಂದರ್‌, ನಗರ ಯೋಜನಾ ತಜ್ಞ

ಬೆಂಗಳೂರಿನ ಅಭಿವೃದ್ಧಿಗಾಗಿ ಪ್ರತ್ಯೇಕ ಕಾಯ್ದೆ ತರುವ ಅಗತ್ಯವಿದೆ. ಈ ಬಗ್ಗೆ ನಿಮ್ಮ ನಿಲುವೇನು?

ನಿಮ್ಮ ವಾದ ಸರಿ. ದೇಶದ ಜಿಡಿಪಿ ಬೆಳವಣಿಗೆಗೆ ಕೊಡುಗೆ ನೀಡುವ ನಗರಗಳಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದೆ. ನಗರಕ್ಕೆ ಇನ್ನಷ್ಟು ಮೂಲ ಸೌಲಭ್ಯ ಒದಗಿಸುವ ಅಗತ್ಯವಿದೆ. ಬೆಳ್ಳಂದೂರು ಕೆರೆಗೆ ಬೆಂಕಿ ಬಿದ್ದಾಗ ತಕ್ಷಣ ನಿಯಂತ್ರಿಸಲು ನಮ್ಮಲ್ಲಿ ವ್ಯವಸ್ಥೆ ಇಲ್ಲ ಎಂದಾದರೆ ಹೇಗೆ? ನಾವು ಎಲ್ಲಿ ಎಡವುತ್ತಿದ್ದೇವೆ? ಆಡಳಿತ ನಡೆಸುವವರಿಗೆ ದೂರದೃಷ್ಟಿ ಇರಬೇಕು.

***

ಪ್ರಕಾಶ ಬೆಳವಾಡಿ, ರಂಗಕರ್ಮಿ

*ಬಿಬಿಎಂಪಿ ಆಡಳಿತದಲ್ಲಿ ನೀವು ಪಾಲುದಾರ. ಆದರೆ, ಬೆಂಗಳೂರಿನ ಸ್ಥಿತಿ ಈಗ ಹೇಗಿದೆ? ಪ್ರಾದೇಶಿಕವಾಗಿ ಗುರುತಿಸಿಕೊಂಡ ಪಕ್ಷದ ನಾಯಕರಾದ ನೀವು ಶಿಕ್ಷಣದಲ್ಲಿ ಇಂಗ್ಲಿಷ್‌ ಕಡ್ಡಾಯಗೊಳಿಸಲು ಏನು ಕ್ರಮ ತೆಗೆದುಕೊಳ್ಳುತ್ತೀರಿ?

ನಾನು ಮುಖ್ಯಮಂತ್ರಿ ಆಗಿದ್ದಾಗ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡದ ಜೊತೆ ಒಂದು ಭಾಷೆಯಾಗಿ ಇಂಗ್ಲಿಷ್‌ ಕಡ್ಡಾಯಗೊಳಿಸಿದ್ದೆ. ಆದರೆ, ನಂತರ ಅಧಿಕಾರಕ್ಕೆ ಬಂದ ಸರ್ಕಾರ ಅದನ್ನು ಸರಿಯಾಗಿ ಅನುಷ್ಠಾನಗೊಳಿಸಿಲ್ಲ. ಬಿಬಿಎಂಪಿಯಲ್ಲಿ ನಮ್ಮ ಮಾತು ನಡೆಯುವುದಿಲ್ಲ. ಅಲ್ಲಿ ಕಾಂಗ್ರೆಸ್‌ ಜೊತೆ ನಮ್ಮದು ತಾತ್ಕಾಲಿಕ ವ್ಯವಸ್ಥೆ ಅಷ್ಟೆ. ನನ್ನ ಅವಧಿಯಲ್ಲಿ ಬೆಂಗಳೂರಿನ ಅಭಿವೃದ್ಧಿ ಗಮನದಲ್ಲಿಟ್ಟು ಐದು ಟೌನ್‌ಶಿಪ್‌ಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದೆ. ಆದರೆ ಸಾಕಾರಗೊಂಡಿಲ್ಲ. 20 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಆಡಳಿತದ ಅನುಭವ ಇರಲಿಲ್ಲ. ಆದರೆ, 10 ವರ್ಷಗಳಲ್ಲಿ ಆಡಳಿತ ಹೇಗೆ ನಡೆಸಬೇಕು ಎನ್ನುವುದು ಗೊತ್ತಾಗಿದೆ. ನನಗೆ ಒಮ್ಮೆ ಅವಕಾಶ ಕೊಟ್ಟು ನೋಡಿ.

ಬೆಂಗಳೂರು ಅಡ್ಡಾದಿಡ್ಡಿ ಬೆಳೆದಿದೆ. ನಗರವನ್ನು ನಾವೇ ಹಾಳು ಮಾಡಿದ್ದೇವೆ. ಪರಿಸರ ಮಾಲಿನ್ಯ, ವಾಹನ ದಟ್ಟಣೆಯಿಂದ ಇಡೀ ನಗರ ಹದಗೆಟ್ಟಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲೇಬೇಕಿದೆ.

***

ಎಸ್‌.ವಿ. ಮಂಜುನಾಥ್‌, ಶಿಕ್ಷಣ ತಜ್ಞ, ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ

ಶಿಕ್ಷಣ ಕ್ಷೇತ್ರದ ಸಬಲೀಕರಣಕ್ಕೆ ದೂರಗಾಮಿ ಯೋಜನೆಗಳನ್ನು ಕೈಗೊಳ್ಳುವ ಬದ್ಧತೆಯನ್ನು ಆಡಳಿತ ನಡೆಸಿದ ಯಾವ ಪಕ್ಷಗಳೂ ಪ್ರದರ್ಶಿಸಿಲ್ಲ. ಈ ಬಗ್ಗೆ ನಿಮ್ಮ ನಿಲುವು ಏನು?

ಶಿಕ್ಷಣ ಕ್ಷೇತ್ರದ ಏಳಿಗೆಗೆ ನಮ್ಮಲ್ಲಿ ಹಣದ ಕೊರತೆ ಇಲ್ಲ. ಆದರೆ, ದೂರದೃಷ್ಟಿ ಇಲ್ಲ. ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಒದಗಿಸಿ, ಗುಣಮಟ್ಟ ಸುಧಾರಣೆಗೆ ಕ್ರಮ ತೆಗೆದುಕೊಂಡರೆ ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡುವುದಿಲ್ಲ. ಬೆಂಗಳೂರಿನ ಜ್ಞಾನಭಾರತಿ, ಮೈಸೂರಿನ ಮಾನಸಗಂಗೋತ್ರಿ ವಿಶ್ವವಿದ್ಯಾಲಯಗಳಲ್ಲಿ ಎಕರೆಗಟ್ಟಲೆ ಜಾಗವಿದೆ. ಆದರೆ, ಯಾವುದೇ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲ. ಅವುಗಳ ಸಮರ್ಪಕ ಬಳಕೆಗೆ ಸೂಕ್ತ ಯೋಜನೆಗಳನ್ನು ಹಾಕಿಕೊಳ್ಳಬೇಕು.

***

ಮೀರಾ, ಸಿಟಿಜನ್‌ ಫೋರಂ

ಅಧಿಕಾರಕ್ಕೆ ಬಂದರೆ ನಿಮ್ಮ ಆಡಳಿತ ವೈಖರಿ ಹೇಗಿರುತ್ತದೆ?

ಶಿಕ್ಷಣ, ಆರೋಗ್ಯ, ಸೂರು ಕಲ್ಪಿಸಲು ನನ್ನ ಆದ್ಯತೆ. ಯುವ ವರ್ಗಕ್ಕೆ ಉದ್ಯೋಗ ಅವಕಾಶ ಸೃಷ್ಟಿಸಲು ಯೋಜನೆಗಳನ್ನು ಹಾಕಿಕೊಳ್ಳುತ್ತೇನೆ. ಕೌಶಲ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ಈ ಸುಧಾರಣೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ರೂಪು ಪಡೆಯಬೇಕು. ಅಂಥ ಆಡಳಿತ ನನ್ನ ಗುರಿ, ಧ್ಯೇಯ.

***

ನರೇಶ್ ನರಸಿಂಹನ್, ನಗರ ಯೋಜನಾ ತಜ್ಞ

ಬೆಂಗಳೂರಿನ ವಾಹನ ದಟ್ಟಣೆ ನಿವಾರಣೆಗೆ ಏನು ಕ್ರಮ ಕೈಗೊಳ್ಳುವಿರಿ? ಎರಡನೇ ಹಂತದ ನಗರಗಳಿಗೆ ಕೈಗಾರಿಕೆ ಸ್ಥಳಾಂತರ ಮಾಡುವಿರಾ?

ಮೆಟ್ರೊ, ಬಿಎಂಟಿಸಿ ವ್ಯವಸ್ಥೆಯನ್ನು ಒಂದೇ ಸೂರಿನಡಿ ತರಬೇಕಿದೆ. ಮೆಟ್ರೊ ನಿಲ್ದಾಣಗಳಿಗೆ ಸಾರ್ವಜನಿಕ ಸಾರಿಗೆ ಕಲ್ಪಿಸಿದರೆ ಖಾಸಗಿ ವಾಹನಗಳ ಓಡಾಟ ಕಡಿಮೆ ಮಾಡಲು ಸಾಧ್ಯ. ಕೈಗಾರಿಕೆಗಳಿಗೆ ಬೆಂಗಳೂರಿನಲ್ಲಿ ಜಾಗ ನೀಡುವ ಬದಲು ಮಾಗಡಿ, ಹೊಸಕೋಟೆ ಸೇರಿದಂತೆ ಉದ್ಯಮಿಗಳು ಎರಡನೇ ಹಂತದ ನಗರಗಳಿಗೆ ಹೋಗಲು ಬೇಕಾದ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳುವೆ.

ಬೆಂಗಳೂರನ್ನು ಲಾಸ್ ಏಂಜಲೀಸ್ ಮಾಡುವುದು ನನ್ನ ಕನಸಲ್ಲ. 1972ರಲ್ಲಿ ನಾನು ಬೆಂಗಳೂರಿಗೆ ಬಂದಾಗ ಸಂಜೆ ಹೊತ್ತಿಗೆ ಸ್ವೆಟರ್ ಹಾಕದೇ ಓಡಾಡುವುದು ಸಾಧ್ಯವೇ ಇರಲಿಲ್ಲ. ಕೆರೆಗಳು ನೀರಿನಿಂದ ತುಂಬಿದ್ದವು. ಹಸಿರು ಎಲ್ಲೆಲ್ಲೂ ಇತ್ತು. ಸಂಚಾರ ದಟ್ಟಣೆ ಇರಲಿಲ್ಲ. ಅಷ್ಟು ಉತ್ತಮ ವಾತಾವರಣ ಇತ್ತು. ರಾಜಧಾನಿಯ ಗತವೈಭವವನ್ನು ಮರಳಿ ತರುವುದು ನನ್ನ ಆಶಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT