4

ಪೂರೈಕೆ ವೆಚ್ಚಕ್ಕೆ ಅನುಸಾರ ವಿದ್ಯುತ್‌ ಶುಲ್ಕ ಪರಿಷ್ಕರಿಸಿ: ಎಫ್‌ಕೆಸಿಸಿಐ ಸಲಹೆ

Published:
Updated:

ಬೆಂಗಳೂರು: ವಿದ್ಯುತ್‌ ಪೂರೈಕೆಗೆ ತಗುಲುವ ವೆಚ್ಚಕ್ಕೆ ಅನುಸಾರವಾಗಿ ವಿದ್ಯುತ್‌ ದರ ಪರಿಷ್ಕರಣೆ ಮಾಡಬಹುದೇ ಹೊರತು ಸರಾಸರಿ ವೆಚ್ಚದ ಮೇಲೆ ನಿರ್ಧರಿಸುವುದು ಸರಿಯಲ್ಲ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ಕರ್ನಾಟಕ ವಿದ್ಯುತ್‌ ದರ ನಿಯಂತ್ರಣ ಆಯೋಗಕ್ಕೆ ತನ್ನ ಆಕ್ಷೇಪ ಸಲ್ಲಿಸಿದೆ.

ಆಯೋಗಕ್ಕೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಶಾಸನಬದ್ಧ ಅಧಿಕಾರ ಇದೆ. ಹಾಗಾಗಿ ವಿವೇಚನೆಯಿಂದ ಅದನ್ನು ಚಲಾಯಿಸಬೇಕು. ದರ ಪರಿಷ್ಕರಣೆ ಪಟ್ಟಿಯಲ್ಲಿ ಒಂದು ಪುಟದಲ್ಲಿರುವ ಅಂಕಿ ಅಂಶ ಇನ್ನೊಂದು ಪುಟದ ಮಾಹಿತಿಗೆ ಹೋಲಿಕೆಯಾಗುತ್ತಿಲ್ಲ. ಸರಿಯಾದ ಮಾಹಿತಿ ಖಚಿತಪಡಿಸಿಕೊಂಡು ದರ ಪರಿಷ್ಕರಣೆ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಎಫ್‌ಕೆಸಿಸಿಐ ಒತ್ತಾಯಿಸಿದೆ.

ಯಾವ ಯಾವ ವರ್ಗದ ಗ್ರಾಹಕರಿಗೆ ವಿದ್ಯುತ್‌ ಪೂರೈಕೆಗೆ ಎಷ್ಟೆಷ್ಟು ವೆಚ್ಚ ತಗುಲುತ್ತಿದೆ ಎನ್ನುವುದನ್ನು ಗಮನಿಸಬೇಕು. ಅಲ್ಲದೆ, ವಿದ್ಯುತ್‌ ಸರಬರಾಜು ಕಂಪನಿಗಳು ದೈನಂದಿನ ನಿರ್ವಹಣೆಗೆ ಮಾಡುತ್ತಿರುವ ವೆಚ್ಚಗಳು ನ್ಯಾಯಬದ್ಧವಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಚರಾಸ್ತಿಗಳ ಮೇಲೆ ಹೂಡಿಕೆ ಮಾಡುತ್ತಿರುವ ಬಂಡವಾಳ ಗ್ರಾಹಕರಿಗೆ ವಿದ್ಯುತ್‌ ಸರಬರಾಜು ಮಾಡಲು ಪೂರಕವೇ ಅಥವಾ ಇಲ್ಲವೇ ಎನ್ನುವುದನ್ನು ಪರಿಶೀಲಿಸಬೇಕು. ಜತೆಗೆ ಸರ್ಕಾರದ ಅನುದಾನ ಗಮನದಲ್ಲಿಟ್ಟುಕೊಂಡು ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದೆ.

ದರ ಪರಿಷ್ಕರಣೆಗೆ ಬಿ–ಪ್ಯಾಕ್‌ ಆಕ್ಷೇಪ: ಅನಧಿಕೃತ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸದೆ ಸಬ್ಸಿಡಿ ನೀಡಬಾರದು. ಸಕ್ರಮಗೊಳಿಸಿರುವ ಪಂಪ್‌ಸೆಟ್‌ಗಳ ವಿದ್ಯುತ್‌ ಶುಲ್ಕವನ್ನು ಸರ್ಕಾರವೇ ಭರಿಸಬೇಕು. ಆ ಹೊರೆಯನ್ನು ಉಳಿದ ಗ್ರಾಹಕರ ಮೇಲೆ ಹೇರಬಾರದು ಎಂದು ಬಿ ಪ್ಯಾಕ್‌ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದೆ.

‘ನಗರದ ನಾಗರಿಕರ ಹಿತರಕ್ಷಣೆ ಮಾಡಬೇಕು. ಯಾವುದೇ ಪೂರ್ವಗ್ರಹ ಪೀಡಿತವಾಗಿ ವಿದ್ಯುತ್‌ ದರ ಪರಿಷ್ಕರಣೆ ಮಾಡಬಾರದೆಂದು ಆಯೋಗಕ್ಕೆ ಮನವಿ ಸಲ್ಲಿಸಿದ್ದೇವೆ’ ಎಂದು ಬಿ ಪ್ಯಾಕ್‌ ಉಪಾಧ್ಯಕ್ಷ ಟಿ.ವಿ.ಮೋಹನದಾಸ್‌ ಪೈ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry