ಸೋಮವಾರ, ಡಿಸೆಂಬರ್ 9, 2019
22 °C
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆ l ಪ್ರಸ್ತಾವ ತಿರಸ್ಕಾರಕ್ಕೆ ಆಗ್ರಹ

ಪರಿಶಿಷ್ಟರಿಗೆ ನಿವೇಶನ ಹಂಚಿಕೆ: ಗದ್ದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಿಶಿಷ್ಟರಿಗೆ ನಿವೇಶನ ಹಂಚಿಕೆ: ಗದ್ದಲ

ಬೆಂಗಳೂರು: ನಗರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನಿವೇಶನ ಹಂಚಿಕೆ ಮಾಡುವ ಪ್ರಸ್ತಾವವು ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.

ವಿವಿಧ ವಿಷಯಗಳಿಗೆ ಅನುಮೋದನೆ ಪಡೆಯುವ ವೇಳೆ ವಿಷಯ ಸಂಖ್ಯೆ 62 ಅನ್ನು ತಿರಸ್ಕರಿಸುವಂತೆ ಒತ್ತಾಯಿಸಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ನಿಲುವಳಿ ಸೂಚನೆ ಮಂಡಿಸಿದರು.

ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರದ ಲಕ್ಷ್ಮಿಪುರ ಹಾಗೂ ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಅಗರ ಗ್ರಾಮದಲ್ಲಿ ಒಟ್ಟು 29 ಎಕರೆ 10 ಗುಂಟೆಯಲ್ಲಿ ಬಡಾವಣೆ ನಿರ್ಮಿಸಿ ನಿವೇಶನ ಹಂಚಲು ಸರ್ಕಾರ ಮುಂದಾಗಿದೆ. ಆದರೆ, ಬಿಬಿಎಂಪಿ ವ್ಯಾಪ್ತಿಯ ಹೊರಗೆ ಇರುವ ಪ್ರದೇಶದಲ್ಲಿ ನಿವೇಶನ ಹಂಚಿಕೆ ಮಾಡಬೇಕಾದರೆ ಸ್ಥಳೀಯ ಶಾಸಕರ ಅಧ್ಯಕ್ಷತೆಯ ಆಶ್ರಯ ಸಮಿತಿಯು ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಆದರೆ, ಸ್ಥಳೀಯರಿಗೆ ಆದ್ಯತೆ ನೀಡದೆ ಚಿಕ್ಕಪೇಟೆ, ವಿಜಯ ನಗರದ ನಿವಾಸಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪ್ರಸ್ತಾವವನ್ನು ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.‌

ಶಾಸಕ ಎಸ್‌.ಆರ್‌.ವಿಶ್ವನಾಥ್‌, ‘ವಿಶೇಷ ಪ್ರಕರಣದಡಿ ಬಡಾವಣೆ ನಿರ್ಮಿಸಲು ಸರ್ಕಾರ ಮುಂದಾಗಿದೆ. ಆದರೆ, ಅಂಗವಿಕಲರು, ಅಂಧರು, ಅಪರೂಪದ ಕಾಯಿಲೆ ಇರುವವರಿಗೆ ವಿಶೇಷ ಪ್ರಕರಣದಡಿ ನಿವೇಶನ ಹಂಚಿಕೆ ಮಾಡಬೇಕು. ಅಲ್ಲದೆ, ಲಕ್ಷ್ಮಿಪುರದ ಬಡಾವಣೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿಲ್ಲ. ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರ ಪಾಲಿಕೆಗೆ ಇಲ್ಲ. ಈ ಪ್ರಸ್ತಾವವನ್ನು ತಿರಸ್ಕರಿಸಬೇಕು’ ಎಂದು ಆಗ್ರಹಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ಈ ಕಡತವು ಎರಡು ವರ್ಷಗಳಿಂದ ಇದೆ. 1,111 ಫಲಾನುಭವಿಗಳಿಗೆ ನಿವೇಶನ ಹಂಚಲು 29 ಎಕರೆಯನ್ನು ಪಾಲಿಕೆಗೆ ಸರ್ಕಾರ ಹಸ್ತಾಂತರಿಸಿದೆ. ಫಲಾನುಭವಿಗಳ ಪಟ್ಟಿಯನ್ನು ಆಯ್ಕೆ ಮಾಡುವ ಅಧಿಕಾರ ಶಾಸಕರ ಅಧ್ಯಕ್ಷತೆಯ ಆಶ್ರಯ ಸಮಿತಿಗೆ ಇದೆ. ಪಾಲಿಕೆ ವತಿಯಿಂದ ಫಲಾನುಭವಿಗಳನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ನಗರ ಜಿಲ್ಲಾಧಿಕಾರಿ, ರಾಜೀವ್‌ ಗಾಂಧಿ ವಸತಿ ಯೋಜನೆ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ’ ಎಂದರು.

ಮಧ್ಯಪ್ರವೇಶಿಸಿದ ಮೇಯರ್‌ ಆರ್‌.ಸಂಪತ್‌ ರಾಜ್‌, ‘ಈ ಪ್ರಸ್ತಾವಕ್ಕೆ ಅನುಮೋದನೆ ನೀಡುತ್ತಿಲ್ಲ. ಸರ್ಕಾರದ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವವನ್ನು ಕಳುಹಿಸುತ್ತೇವೆ’ ಎಂದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪದ್ಮನಾಭರೆಡ್ಡಿ, ‘ನೀವು ಕಾನೂನುಬಾಹಿರವಾಗಿ ಸಭೆ ನಡೆಸುತ್ತಿದ್ದೀರಿ. ಈ ವಿಷಯದ ಬಗ್ಗೆ ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ಹೇಳಿದರು.

ಇದೇ ವೇಳೆ ಕೆಲ ವಿಷಯಗಳಿಗೆ ಅನುಮೋದನೆ ಪಡೆಯಲು ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್‌ ಮುಂದಾದರು. ಈ ವೇಳೆ ಎದ್ದು ನಿಂತ ಬಿಜೆಪಿ ಸದಸ್ಯರು, ‘ಶೇಮ್‌ ಶೇಮ್‌ ಮೇಯರ್‌’ ಎಂದು ಕೂಗಿದರು. ಇದರಿಂದ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ಚಕಮಕಿ ನಡೆಯಿತು.

ಎಸ್‌.ಆರ್‌.ವಿಶ್ವನಾಥ್‌, ‘ಫಲಾನುಭವಿಗಳಿಗೆ ಹೇಗೆ ನಿವೇಶನ ಹಂಚಿಕೆ ಮಾಡುತ್ತೀರಿ, ನೋಡುತ್ತೇನೆ’ ಎಂದು ಸವಾಲು ಹಾಕಿದರು. ಇದರಿಂದ ಕೆರಳಿದ ಕಾಂಗ್ರೆಸ್‌ ಸದಸ್ಯರು, ‘ಗೂಂಡಾಗಿರಿ ಮಾಡುವುದನ್ನು ನಿಲ್ಲಿಸಿ’ ಎಂದು ಕಿಡಿಕಾರಿದರು.

ಶಾಸಕ ಗೋಪಾಲಯ್ಯ, ‘ಶಾಸಕರ ಹಕ್ಕು ಕಿತ್ತುಕೊಳ್ಳುವುದು ಅಪರಾಧ. ಫಲಾನುಭವಿಗಳನ್ನು ಆಶ್ರಯ ಸಮಿತಿಯೇ ಆಯ್ಕೆ ಮಾಡಬೇಕು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌, ‘ನಿವೇಶನ ಹಂಚಿಕೆಯು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಪ್ರಸ್ತಾವವನ್ನು ಹಿಂದಕ್ಕೆ ಕಳುಹಿಸಿದ್ದೇವೆ’ ಎಂದರು.

ಬಂಧನಕ್ಕೆ ಖಂಡನೆ

ತ್ಯಾಜ್ಯ ಸಂಗ್ರಹಣಾ ಗುಂಡಿಗೆ ಇಳಿದು ಕಾರ್ಮಿಕರು ಮೃತಪಟ್ಟ ಹಾಗೂ ಕಸವನಹಳ್ಳಿಯ ಕಟ್ಟಡ ದುರಂತ ಪ್ರಕರಣದಲ್ಲಿ ವೈದ್ಯಾಧಿಕಾರಿ ಕಲ್ಪನಾ, ಆರೋಗ್ಯ ಪರಿವೀಕ್ಷಕ ದೇವರಾಜ್‌ ಹಾಗೂ ಕಾರ್ಯಪಾಲಕ ಎಂಜಿನಿಯರ್ ಮುನಿರೆಡ್ಡಿ ಅವರನ್ನು ಬಂಧಿಸಿರುವುದಕ್ಕೆ ಸಭೆಯಲ್ಲಿ ಖಂಡನೆ ವ್ಯಕ್ತವಾಯಿತು.

ಯಾವುದೇ ಅಧಿಕಾರಿ ತಪ್ಪು ಮಾಡಿದ್ದರೆ ಈ ಬಗ್ಗೆ ವಿವರಣೆ ಕೇಳಬೇಕು. ಪಾಲಿಕೆ ಆಯುಕ್ತರಿಂದ ವರದಿ ತರಿಸಿಕೊಳ್ಳಬೇಕು. ಪೊಲೀಸರ ಕ್ರಮದಿಂದ ಅಧಿಕಾರಿಗಳು ಭಯಭೀತರಾಗಿದ್ದಾರೆ ಎಂದು ಪದ್ಮನಾಭರೆಡ್ಡಿ ಹೇಳಿದರು.

ಎಲ್ಲ ವಲಯಗಳಲ್ಲಿ ಸಾಕಷ್ಟು ನೆಲಮಾಳಿಗೆಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ತೆರೆಯಲಾಗಿದೆ. ಹಾಗಿದ್ದರೆ ಎಲ್ಲ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹಾಕಿ ಜೈಲಿಗೆ ಕಳುಹಿಸಲಿ ಎಂದು ಕಿಡಿಕಾರಿದರು.

ಕೊಳಚೆ ನೀರು ಶುದ್ಧೀಕರಣ ಘಟಕಗಳ (ಎಸ್‌ಟಿಪಿ) ಮೇಲುಸ್ತುವಾರಿಯನ್ನು ಜಲಮಂಡಳಿ ನೋಡಿಕೊಳ್ಳಬೇಕು. ಮಂಡಳಿಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ. ಪಾಲಿಕೆ ಅಧಿಕಾರಿಗಳನ್ನು ಅಮಾನತು ಅಥವಾ ವರ್ಗಾವಣೆ ಮಾಡುವ ಅಧಿಕಾರ ಆಯುಕ್ತರಿಗೆ ಇದೆ. ಆದರೆ, ಈ ವಿಷಯದಲ್ಲಿ ಪೊಲೀಸರು ಮೂಗು ತೂರಿಸಿರುವುದು ಖಂಡನೀಯ ಎಂದರು.

ಅಧಿಕಾರಿಗಳ ಬಂಧನ ವಿರೋಧಿಸಿ ಸಾಂಕೇತಿಕವಾಗಿ ಕಪ್ಪುಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಮೇಯರ್‌ ಆರ್‌.ಸಂಪತ್‌ ರಾಜ್‌, ‘ವಲಯವಾರು ಎಸ್‌ಟಿಪಿಗಳನ್ನು ಮೇಲ್ವಿಚಾರಣೆ ಮಾಡಲು ಪ್ರತ್ಯೇಕ ಕೋಶವನ್ನು ರಚಿಸುತ್ತೇವೆ’ ಎಂದರು.

ಪದ್ಮನಾಭರೆಡ್ಡಿ, ‘ಅವುಗಳ ಹೊಣೆಯನ್ನು ಪಾಲಿಕೆ ಏಕೆ ವಹಿಸಿಕೊಳ್ಳಬೇಕು’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನ ಸದಸ್ಯ ಬಿ.ಎನ್‌.ಮಂಜುನಾಥರೆಡ್ಡಿ, ‘ಎಸ್‌ಟಿಪಿ ಹಾಗೂ ಮ್ಯಾನ್‌ಹೋಲ್‌ ದುರಂತಗಳಲ್ಲಿ ಮೃತರ ಕುಟುಂಬಗಳಿಗೆ ಜಲಮಂಡಳಿಯು ಒಂದು ರೂಪಾಯಿಯೂ ಪರಿಹಾರ ನೀಡುವುದಿಲ್ಲ’ ಎಂದು ದೂರಿದರು.

ಈ ವೇಳೆ, ಎಸ್‌ಟಿಪಿಗಳ ಉಸ್ತುವಾರಿ ಬಗ್ಗೆ ಮಾಹಿತಿ ನೀಡುವಂತೆ ಜಲಮಂಡಳಿಯ ಅಧಿಕಾರಿಗೆ ಮೇಯರ್‌ ಸೂಚಿಸಿದರು. ಅಪಾರ್ಟ್‌ಮೆಂಟ್‌ ಒಳಗಿರುವ ಎಸ್‌ಟಿಪಿಗಳ ನಿರ್ವಹಣೆಯನ್ನು ಜಲಮಂಡಳಿ ನೋಡಿಕೊಳ್ಳುತ್ತಿಲ್ಲ ಎಂದು ಸಹಾಯಕ ಮುಖ್ಯ ಎಂಜಿನಿಯರ್‌ ಗಂಗಾಧರ್‌ ಹೇಳಿದರು.

ಇದರಿಂದ ಕೆರಳಿದ ಮೇಯರ್‌, ‘20 ಅಥವಾ 50 ಅಪಾರ್ಟ್‌ಮೆಂಟ್‌ಗಳಿರುವ ವಸತಿ ಸಮುಚ್ಚಯಗಳಲ್ಲಿ ಕಡ್ಡಾಯವಾಗಿ ಎಸ್‌ಟಿಪಿ ಹಾಕಿಕೊಳ್ಳಬೇಕು ಎಂದು ಜಲಮಂಡಳಿ ಸೂಚಿಸುತ್ತದೆ. ನಿರ್ವಹಣಾ ವೆಚ್ಚವನ್ನೂ ಪಡೆಯುತ್ತದೆ. ಆದರೆ, ಅದರ ಉಸ್ತುವಾರಿಯನ್ನು ಮಾತ್ರ ನೋಡಿಕೊಳ್ಳುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎನ್‌.ಮಂಜುನಾಥ ಪ್ರಸಾದ್‌, ‘ಸುಪ್ರೀಂಕೋರ್ಟ್‌ನ ಆದೇಶದ ಪ್ರಕಾರ ಮೃತರ ಕುಟುಂಬಗಳಿಗೆ ಪಾಲಿಕೆಯೇ ಪರಿಹಾರ ನೀಡಬೇಕು. ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವ ಮುನ್ನ ಪಾಲಿಕೆಯ ಅಭಿಪ್ರಾಯ ಕೇಳಬೇಕು. ಅಲ್ಲದೆ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ದಲಿತ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಈ ಬಗ್ಗೆ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದಿದ್ದೇನೆ’ ಎಂದರು.

ಕ್ಯಾಂಟೀನ್‌ ಮೆನು ಬದಲಾವಣೆ

ಇಂದಿರಾ ಕ್ಯಾಂಟೀನ್‌ನಲ್ಲಿ ನೀಡುತ್ತಿರುವ ಆಹಾರದ ಮೆನು ಮುಂದಿನ ವಾರದಿಂದ ಬದಲಾಯಿಸಲಾಗುತ್ತದೆ ಎಂದು ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

‘ಮೆನು ಬದಲಾಯಿಸುವಂತೆ ಗ್ರಾಹಕರಿಂದ ಮನವಿಗಳು ಬಂದಿವೆ. ಮೊಸರನ್ನ ಬದಲಿಗೆ ಸಿಹಿ ನೀಡುವಂತೆ ಕೆಲವರು ಮನವಿ ಮಾಡಿದ್ದಾರೆ. ಹೀಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಮೆನು ಬದಲಾಯಿಸಲು ನಿರ್ಧರಿಸಲಾಗಿದೆ. ಈಗಾಗಲೇ 5–6 ವಾರ್ಡ್‌ಗಳಲ್ಲಿ ಮುದ್ದೆ, ಸೊಪ್ಪಿನ ಸಾಂಬಾರ್‌ ನೀಡುತ್ತಿದ್ದೇವೆ. ಮುದ್ದೆ ಮಾಡುವ ಯಂತ್ರವನ್ನು ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಿಂದ (ಸಿಎಫ್‌ಟಿಆರ್‌ಐ) ತರಿಸಲಾಗಿದೆ. ಅದು ಗಂಟೆಗೆ 250 ಮುದ್ದೆಗಳನ್ನು ತಯಾರಿಸುತ್ತದೆ. ಮೆನು ಬದಲಾದರೂ ದರದಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದರು.

ನೌಕರರ ಪ್ರತಿಭಟನೆ

ಬೆಂಗಳೂರು: ಪ್ರಾಥಮಿಕ ಹಂತದ ತನಿಖೆ ನಡೆಸದೆ ಬಿಬಿಎಂಪಿ ಅಧಿಕಾರಿಗಳ ಬಂಧನ ಖಂಡಿಸಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.

ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್, ‘ಯಾವುದೇ ದುರಂತ ನಡೆದಾಗ, ಪೊಲೀಸರು ಮೊದಲು ಪ್ರಾಥಮಿಕ ಹಂತದ ತನಿಖೆ ನಡೆಸಿ ಸಂಬಂಧ ಪಟ್ಟವರನ್ನು ಬಂಧಿಸಬೇಕು. ಆದರೆ, ತ್ಯಾಜ್ಯ ಸಂಗ್ರಹಣಾ ಗುಂಡಿಗೆ ಇಳಿದು ಕಾರ್ಮಿಕರು ಮೃತಪಟ್ಟ ಹಾಗೂ ಕಸವನಹಳ್ಳಿಯ ಕಟ್ಟಡ ದುರಂತ ಪ್ರಕರಣಗಳಲ್ಲಿ ಹೀಗಾಗಿಲ್ಲ’ ಎಂದರು.

ಸ್ಥಳಕ್ಕೆ ಬಂದ ಗೃಹ ಸಚಿವ ರಾಮ ಲಿಂಗಾರೆಡ್ಡಿ, ‘ಬೇಡಿಕೆ ಸಂಬಂಧ ಮನವಿ ನೀಡಿ. ಅದನ್ನು ಕಾರ್ಯರೂಪಕ್ಕೆ ತರಲು ಹಾಗೂ ತನಿಖೆ ನಡೆಸದೆಯೇ ಅಧಿಕಾರಿಗಳನ್ನು ಬಂಧಿಸದಂತೆ ಸೂಚಿಸುತ್ತೇನೆ’ ಎಂದರು.

ಪ್ರಮುಖ ಬೇಡಿಕೆಗಳು

* ಒಳ ಚರಂಡಿ ದುರಸ್ತಿ ಅಥವಾ ಸ್ವಚ್ಛತಾ ಕೆಲಸಗಳ ಮೇಲುಸ್ತುವಾರಿಯನ್ನು ಪಾಲಿಕೆ ನೌಕರರ ಮೇಲೆ ಹೇರಬಾರದು‌

* ಕಸ ವಿಲೇವಾರಿ ಹಾಗೂ ಸ್ವಚ್ಛತೆಗೆ ನಗರದಲ್ಲಿ ಪ್ರತ್ಯೇಕ ಸೆಲ್ ಸೃಷ್ಟಿಸಿ, ಸಿಬ್ಬಂದಿ ನಿಯೋಜಿಸಬೇಕು

* ಮಾಲೀಕರು ಮತ್ತು ಗುತ್ತಿಗೆದಾರರಿಗೆ ಕಟ್ಟಡ ಸುರಕ್ಷತಾ ಕ್ರಮದ ಹೊಣೆ ವಹಿಸಬೇಕು

* ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಮುಂಬಡ್ತಿ ಮೂಲಕ ತಕ್ಷಣಕ್ಕೆ ಭರ್ತಿ ಮಾಡಬೇಕು

ಪ್ರತಿಕ್ರಿಯಿಸಿ (+)