ಯೋಗ್ಯ ನಿವೇಶನ ಹಂಚಲು ಮನವಿ

7

ಯೋಗ್ಯ ನಿವೇಶನ ಹಂಚಲು ಮನವಿ

Published:
Updated:

ಮೈಸೂರು: ನಾಗರಿಕ ಸೇವಾ ಸೌಲಭ್ಯದಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯಲ್ಲಿ ಮುಡಾ ವತಿಯಿಂದ ಹಂಚಲು ಉದ್ದೇಶಿಸಿರುವ ಸಿ.ಎ ನಿವೇಶನಗಳಲ್ಲಿ ಸಮರ್ಪಕ ಸೌಲಭ್ಯಗಳಿಲ್ಲ. ಹೀಗಾಗಿ, ಅವುಗಳನ್ನು ಹಿಂಪಡೆದು ಯೋಗ್ಯ ನಿವೇಶನ ನೀಡಬೇಕು ಎಂದು ಮೈಸೂರು ವಿಭಾಗೀಯ ಪರಿಶಿಷ್ಟ ಜಾತಿ– ವರ್ಗಗಳ ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಶಾಂತರಾಜು ಒತ್ತಾಯಿಸಿದರು.

ಖಾಸಗಿ ಹಾಗೂ ಪ್ರಾಧಿಕಾರದ ಬಡಾವಣೆ ಮಾಲೀಕರು ಬಿಟ್ಟ ಸಮತಟ್ಟಲ್ಲದ, ಉಪಯುಕ್ತವಲ್ಲದ ಜಾಗವನ್ನು ಪರಿಶಿಷ್ಟರಿಗೆ ಮೀಸಲಿಡಲಾಗಿದೆ. ಮುಡಾ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ ಸಾಮಾನ್ಯರಿಗೆ ಯೋಗ್ಯ ನಿವೇಶನ ನೀಡಿದ್ದು, ಪರಿಶಿಷ್ಟರಿಗೆ ತಾರತಮ್ಯ ಮಾಡಲಾಗಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಶಿಕ್ಷಣ ಸಂಸ್ಥೆ ಆರಂಭಿಸಲು 1 ಎಕರೆಗಿಂತ ಹೆಚ್ಚಿನ ಪ್ರದೇಶವಿರಬೇಕು. ಆದರೆ, ಮುಡಾ ಪ್ರಕಟಿಸಿರುವ ನಿವೇಶನಗಳ ಅಳತೆ 1 ಎಕರೆಗಿಂತ ಕಡಿಮೆ ಇದೆ. ಹೀಗಾಗಿ, ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಪರಿಶಿಷ್ಟರಿಗೆ ಸಾಧ್ಯವಾಗುತ್ತಿಲ್ಲ ಎಂದು ಸಮಸ್ಯೆ ಹೇಳಿಕೊಂಡರು.

ಒಕ್ಕೂಟದ ಗೌರವಾಧ್ಯಕ್ಷ ಎಚ್.ಸುಬ್ಬಯ್ಯ, ‘ನಿವೇಶನ ಹಂಚಿಕೆ ಸಂಬಂಧ ಪ್ರಾಧಿಕಾರ ನೇಮಿಸಿರುವ ಉಪಸಮಿತಿಯಲ್ಲಿ ಪರಿಶಿಷ್ಟ ಜಾತಿಯ ಪ್ರತಿನಿಧಿಯೇ ಇಲ್ಲ. ನಿಯಮಾನುಸಾರ ಠೇವಣಿ ಮತ್ತು ನೋಂದಣಿ ಶುಲ್ಕದಲ್ಲಿ ವಿನಾಯಿತಿ ನೀಡಬೇಕು. ನ್ಯೂನತೆಗಳನ್ನು ಸರಿಪಡಿಸಿ ಸಾಮಾಜಿಕ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.

ಉಪಾಧ್ಯಕ್ಷ ಡಿ.ಗೋಪಾಲ್, ಕಾರ್ಯದರ್ಶಿ ಎಂ.ಸಾವಕಯ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry