ಮಾವಿನ ತೋಟಗಳಿಗೆ ಬೆಂಕಿ; ಫಸಲು ನಾಶ

7

ಮಾವಿನ ತೋಟಗಳಿಗೆ ಬೆಂಕಿ; ಫಸಲು ನಾಶ

Published:
Updated:

ರಾಮನಗರ: ತಾಲ್ಲೂಕಿನ ಕೈಲಾಂಚ ಹೋಬಳಿಯ ವಿಭೂತಿಕೆರೆಯಲ್ಲಿ ಸೋಮವಾರ ಕಿಡಿಗೇಡಿಗಳ ಕೃತ್ಯದಿಂದಾಗಿ ಮಾವಿನ ಮರ ಬೆಂಕಿಗೆ ಆಹುತಿಯಾಗಿವೆ. ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಇದರಿಂದ ಆಘಾತಕ್ಕೀಡಾಗಿದ್ದಾರೆ.

ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಹೊಲ ಒಂದರಲ್ಲಿ ಕಿಡಿಗೇಡಿಗಳು ಬೆಂಕಿ ಹೊತ್ತಿಸಿ ಹೋಗಿದ್ದಾರೆ. ಬೇಸಿಗೆಯ ಕಾಲವಾದ್ದರಿಂದ ತರಗೆಲೆಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಕ್ರಮೇಣ ಮರಗಳಿಗೂ ತಗುಲಿದೆ. ಗಾಳಿಯ ವೇಗಕ್ಕೆ ಬೆಂಕಿಯು ಮರದಿಂದ ಮರಕ್ಕೆ ವ್ಯಾಪಿಸುತ್ತಾ ಅಕ್ಕಪಕ್ಕದ ತೋಟಗಳಿಗೂ ತಗುಲಿತು.

ಗ್ರಾಮದ ವೀರಭದ್ರಯ್ಯ, ರವಿ. ಮರಿಸ್ವಾಮಿ, ದುಂಡಮಾದಮಾದಯ್ಯ ಎಂಬುವರಿಗೆ ಸೇರಿದ ಮಾವಿನ ತೋಟಗಳಲ್ಲಿನ ಹತ್ತಾರು ಮರಗಳು ಬೆಂಕಿಯಿಂದ ಹಾನಿಗೀಡಾಗಿವೆ. ತರಗೆಲೆಗಳು ಹೆಚ್ಚಾಗಿದ್ದ ಕಡೆ ಅಗ್ನಿಯ ಜ್ವಾಲೆಗಳು ಹೆಚ್ಚಾಗಿದ್ದು, ಸುತ್ತ ದಟ್ಟನೆಯ ಹೊಗೆಯು ಆವರಿಸಿಕೊಂಡಿತ್ತು. ಹೊಲಗಳಿಗೆ ತೆರಳಲು ರಸ್ತೆ ಇಲ್ಲದ ಕಾರಣ ಅಗ್ನಿಶಾಮಕ ದಳವೂ ಬರಲಾಗಲಿಲ್ಲ.

ನಂದಿಸಲು ಯತ್ನ: ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ತೋಟಗಳಿಗೆ ದೌಡಾಯಿಸಿ ಬೆಂಕಿ ನಂದಿಸಲು ಯತ್ನಿಸಿದರು. ನೀರು ಚಿಮುಕಿಸಿ, ಸೊಪ್ಪು ಬಡಿದು ಅಗ್ನಿಯನ್ನು ಹತೋಟಿಗೆ ತರುವ ಪ್ರಯತ್ನ ಮಾಡಿದರು. ಕೆಲವು ಕಡೆ ಅಗ್ನಿ ಶಮನವಾದರೆ, ಮತ್ತೆ ಕೆಲವೆಡೆ ತನ್ನ ಕೆನ್ನಾಲಗೆ ಚಾಚಿ ಮುಂದುವರಿಯುತ್ತಲೇ ಇತ್ತು.

ಈಗಷ್ಟೇ ಮಾವಿನ ಮರಗಳು ಮೈತುಂಬ ಹೂವು ತುಂಬಿಕೊಂಡು, ಸಣ್ಣ ಗಾತ್ರದ ಕಾಯಿಗಳು ತೂಗತೊಡಗಿವೆ. ಇಂತಹ ಹೊತ್ತಿನಲ್ಲಿ ಈ ಅಗ್ನಿ ಆಕಸ್ಮಿಕವು ರೈತರ ನಿದ್ದೆಗೆಡಿಸಿದೆ.

‘ಸತತ ನಾಲ್ಕು ವರ್ಷ ಕಾಲ ಬರಗಾಲದಿಂದಾಗಿ ಫಲಸು ಕೈಸೇರಿರಲಿಲ್ಲ. ಈ ಬಾರಿ ವರುಣ ಕೈಹಿಡಿದ ಪರಿಣಾಮ ಉತ್ತಮ ಫಸಲು ಪಡೆಯುವ ನಿರೀಕ್ಷೆ ಇತ್ತು. ಆದರೆ ಕಿಡಿಗೇಡಿಗಳ ಕೃತ್ಯದಿಂದ ಮಾವಿನ ಮರಗಳೊಂದಿಗೆ ನಮ್ಮ ಬದುಕು ಸಹ ಸುಟ್ಟು ಹೋಗಿದೆ’ ಎಂದು ಸ್ಥಳೀಯ ರೈತರು ಅಳಲು ತೋಡಿಕೊಂಡರು.

ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ವಿಕೋಪ ಪರಿಹಾರ ನಿಧಿಯ ಅಡಿ ಪರಿಹಾರ ನೀಡಿ ನಷ್ಟ ಅನುಭವಿಸಿದ ರೈತರಿಗೆ ಸಾಂತ್ವನ ಹೇಳಬೇಕು ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry