ಸೋಮವಾರ, ಡಿಸೆಂಬರ್ 9, 2019
21 °C

ಶಿವಾಜಿ ರಾಷ್ಟ್ರಪ್ರೇಮಿ; ಪ್ರಜಾಹಿತ ರಕ್ಷಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಾಜಿ ರಾಷ್ಟ್ರಪ್ರೇಮಿ; ಪ್ರಜಾಹಿತ ರಕ್ಷಕ

ವಿಜಯಪುರ: ‘ಶಿವಾಜಿ ಮಹಾರಾಜರು ನಿಷ್ಠುರ ಪ್ರಜಾಹಿತ ರಕ್ಷಕ. ಸರ್ವಧರ್ಮ ಸಹಿಷ್ಣು. ಅಪ್ಪಟ್ಟ ರಾಷ್ಟ್ರಪ್ರೇಮಿ’ ಎಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಆರ್.ಪಾಟೀಲ ಯತ್ನಾಳ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿ.ಪಂ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉದ್ಘಾಟಿಸಿದ ಅವರು ಮಾತನಾಡಿದರು.

‘ಶಿವಾಜಿ ಗೋ ಹತ್ಯೆ ವಿರೋಧಿಯಾಗಿದ್ದರು. ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರು. ತಾಯಿ ಜೀಜಾಬಾಯಿಯಿಂದ ಕಲಿತ ಜೀವನ ಮೌಲ್ಯ, ಗುರು ದಾದಾಜಿ ಕೊಂಡದೇವನಿಂದ ಶಸ್ತ್ರಾಸ್ತ್ರ ವಿದ್ಯೆ ಕಲಿತು ಎದುರಾಳಿಗಳನ್ನು ಮಟ್ಟ ಹಾಕಿದವರು’ ಎಂದು ತಿಳಿಸಿದರು.

‘ಮರಾಠಾ ಸಮಾಜಕ್ಕೆ ಮೀಸಲಾತಿ ನೀಡಬೇಕು ಎಂಬ ಬೇಡಿಕೆಯಿದೆ. ಇದಕ್ಕೆ ಸ್ಪಂದಿಸುವ ಜತೆಗೆ ನಗರದಲ್ಲಿ ಮಾತಾ ಜೀಜಾಬಾಯಿಯ ಮೂರ್ತಿ ಪ್ರತಿಷ್ಠಾಪನೆ, ಛತ್ರಪತಿ ಶಿವಾಜಿಯ ವಸ್ತು ಸಂಗ್ರಹಾಲಯ ಸ್ಮಾರಕ ಭವನ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ’ ಯತ್ನಾಳ ಇದೇ ಸಂದರ್ಭ ಭರವಸೆ ನೀಡಿದರು.

ಸಾಹಿತಿ ಮಾರುತಿ ಪಾಂಡುರಂಗ ತರಸೆ ಉಪನ್ಯಾಸ ನೀಡಿ ‘ಛತ್ರಪತಿ ಶಿವಾಜಿ ದೌರ್ಜನ್ಯ, ಅನ್ಯಾಯಕ್ಕೆ ಒಳಗಾದವರನ್ನು ರಕ್ಷಿಸಿದ ಮಹಾನ್‌ ವ್ಯಕ್ತಿ. ಹಿಂದೂ ಧರ್ಮದ ಸಂಸ್ಕೃತಿ ಪರಂಪರೆ ರಕ್ಷಿಸುವಲ್ಲಿ ಹೋರಾಡಿದ ಶೂರ’ ಎಂದರು.

‘ಶಿವಾಜಿ ಮೊಘಲರು, ಬಿಜಾಪುರದ ಆದಿಲ್ ಶಾಹಿಗಳ ವಿರುದ್ಧ ಹೋರಾಡಿದರು. ದೇಶಕ್ಕೆ ಇವರ ಕೊಡುಗೆ ಅಪಾರ. ಹಿಂದೂ ಧರ್ಮವನ್ನು ಪ್ರಯಾಗದ ವಟ ವೃಕ್ಷದಂತೆ ಮತ್ತೆ ಚಿಗುರುವಂತೆ ರಕ್ಷಣೆ ಮಾಡಿದರು. ಸ್ವ ಧರ್ಮ ಪೂಜಿಸಿ, ಇತರ ಧರ್ಮವನ್ನು ಗೌರವಿಸುತ್ತಿದ್ದರು. ಪ್ರಸ್ತುತ ಬಲಾಢ್ಯವೆನಿಸಿರುವ ದೇಶಗಳು ಬಳಸುತ್ತಿರುವ ಗೆರಿಲ್ಲಾ ಯುದ್ಧ ತಂತ್ರವನ್ನು ಬಳಕೆಗೆ ತಂದವರು ಛತ್ರಪತಿ ಶಿವಾಜಿ’ ಎಂದು ನೆನಪಿಸಿಕೊಂಡರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಎಸ್.ಮೇಟಿ, ಮಹಾನಗರ ಪಾಲಿಕೆ ಮೇಯರ್‌ ಸಂಗೀತಾ ಪೋಳ, ಕೃಷ್ಣಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಕ್ಕಪ್ಪ ಯಡವೆ, ಉಪ ಮೇಯರ್‌ ರಾಜೇಶ ದೇವಗಿರಿ, ಮಹಾನಗರ ಪಾಲಿಕೆ ಸದಸ್ಯ ರಾಹುಲ ಜಾಧವ, ಸಮಾಜದ ಮುಖಂಡರಾದ ವಿಜಯಕುಮಾರ ಚವ್ಹಾಣ, ಸದಾಶಿವ ಪವಾರ, ರಾಜಾರಾಮ ಗಾಯಕವಾಡ, ಬಾಪುಜಿ ನಿಕ್ಕಂ, ಶಿವಾಳಕರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾದೇವ ಮುರಗಿ, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಅಲ್ಲಾಪುರ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ ಸ್ವಾಗತಿಸಿ, ವಂದಿಸಿದರು. ನಿರ್ಮಲಾ ಥಿಟೆ ಹಾಗೂ ಸಂಗಡಿಗರಿಂದ ಸುಗಮ ಸಂಗೀತ, ಡಿ.ಎಚ್.ಕೊಲ್ಹಾರ ನಿರ್ದೇಶನದಲ್ಲಿ ಜಲಜಮಿತ್ರ ಕಲಾ ವೇದಿಕೆಯಿಂದ ಕರುಣಾಮಯಿ ಶಿವಾಜಿ ಮಹಾರಾಜ ನಾಟಕ ಪ್ರದರ್ಶಿಸಲಾಯಿತು.

ಇದಕ್ಕೂ ಮೊದಲು ಬೆಳಿಗ್ಗೆ ಶಿವಾಜಿ ವೃತ್ತದಿಂದ ಕಂದಗಲ್ ಹನುಮಂತರಾಯ ರಂಗಮಂದಿರದವರೆಗೂ ವಿವಿಧ ಕಲಾತಂಡಗಳೊಂದಿಗೆ ನಡೆದ ಮೆರವಣಿಗೆಗೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಚಾಲನೆ ನೀಡಿದರು.

* * 

ವಿಜಯಪುರದೊಂದಿಗೆ ಅನ್ಯೋನ್ಯ ಸಂಬಂಧವನ್ನು ಶಿವಾಜಿ ಹೊಂದಿದ್ದರು. ಧರ್ಮದ ಗಡಿಯನ್ನು ಮೀರಿ ಸ್ತ್ರೀ ರಕ್ಷಣೆಗೆ ಮುಂದಾಗುತ್ತಿದ್ದರು

ಬಸನಗೌಡ ಆರ್.ಪಾಟೀಲ ಯತ್ನಾಳ, ವಿಧಾನ ಪರಿಷತ್ ಸದಸ್ಯ

ಪ್ರತಿಕ್ರಿಯಿಸಿ (+)