ಸರ್ವಧರ್ಮಗಳ ಸಾರ ಒಂದೇ

7

ಸರ್ವಧರ್ಮಗಳ ಸಾರ ಒಂದೇ

Published:
Updated:

ಶನಿವಾರಸಂತೆ: ಭೂಮಿಯಲ್ಲಿ ನೆಮ್ಮದಿ, ಶಾಂತಿ ಸುವ್ಯವಸ್ಥೆ ನೆಲೆಸಲು ಧರ್ಮ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ ಎಂದು ಎಸ್‌ಕೆಎಸ್ಎಸ್ಎಫ್ ಜಿಲ್ಲಾ ಘಟಕದ ಕಾರ್ಯದರ್ಶಿ ಶುಹೈಬ್ ಫೈಝಿ ಅಭಿಪ್ರಾಯಪಟ್ಟರು.

ಸಮೀಪದ ಕೊಡ್ಲಿಪೇಟೆ ಹ್ಯಾಂಡ್ ಪೋಸ್ಟ್‌ನ ಶಂಸುಲ್ ಉಲಮಾ ಮೈದಾನದಲ್ಲಿ ಎಸ್‌ಕೆಎಸ್ಎಸ್ಎಫ್ ಹಾಗೂ ಎಸ್‌ವೈಎಸ್ ಸಹಭಾಗಿತ್ವದಲ್ಲಿ ನಡೆದ ಧಾರ್ಮಿಕ ಸೌಹಾರ್ದ ಸಮಾವೇಶವನ್ನು ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಹಾಗೂ ಗೋಪಾಲಪುರ ಚರ್ಚ್‌ನ ರೆವರೆಂಡ್ ಫಾದರ್ ಡೇವಿಡ್ ಜತೆ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿ ಧರ್ಮವೂ ಶಾಂತಿ ಸಂದೇಶವನ್ನೇ ಸಾರುತ್ತವೆ. ಸರ್ವಧರ್ಮ ಸಮನ್ವಯತೆ, ದಯೆ ಇರುವ ಭಾರತದಲ್ಲಿ ಶಾಂತಿ ಕದಡಲು ಸಾಧ್ಯವಿಲ್ಲ. ಸರ್ವಧರ್ಮಗಳ ಸಾರ ಒಂದೇ ಎಂಬುದನ್ನು ಯುವ ಜನತೆ ಅರಿಯಬೇಕು’ ಎಂದರು.

ಗೋಪಾಲಪುರ ಸಂತ ಅಂಥೋಣಿ ಚರ್ಚ್‌ನ ರೆವರೆಂಡ್ ಫಾದರ್ ಡೇವಿಡ್, ‘ಧಾರ್ಮಿಕ ಸೌಹಾರ್ದ ಸಮಾವೇಶ ಧ್ಯಾನಕ್ಕೆ ಕರೆ ನೀಡುವ ವೇದಿಕೆಯಾಗಿದೆ. ಮೊದಲಿಗೆ ಮನುಷ್ಯರೆಲ್ಲ ಒಂದೇ ಎಂಬ ಭಾವನೆ ಮೂಡಿಸಿಕೊಳ್ಳಬೇಕು. ಸಹೋದರತ್ವ ಭಾವನೆಯಿಂದ ಜೀವಿಸಬೇಕು’ ಎಂದು ಹೇಳಿದರು.

ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ, ವಿವಿಧ ಜನಾಂಗದವರನ್ನು ಒಂದೇ ವೇದಿಕೆಯಡಿ ಸಮಾವೇಶಗೊಳಿಸಿ, ಏಕತೆಯ ಭಾವನೆ ಮೂಡಿಸಿರುವುದು ಉತ್ತಮ ಕಾರ್ಯ. ಏಕತೆ ಮನಸ್ಸಿನಲ್ಲಿ ಬಂದಾಗ ಸೌಹಾರ್ದ ಸಹಜವಾಗಿ ಮೂಡುತ್ತದೆ. ಸತ್ಯವನ್ನು ಹೇಳಿ ಧರ್ಮವನ್ನು ಆಚರಣೆಗೆ ತರಬೇಕು. ಸಾಮ್ಯತೆ ಇರುವ ಧರ್ಮದ ತಿರುಳನ್ನು ಅರಿಯಬೇಕು. ಮನಸ್ಸುಗಳನ್ನು ಕಟ್ಟಬೇಕು ಎಂದು ತಿಳಿಸಿದರು.

ಎಸ್‌ಕೆಎಸ್ಎಸ್ಎಫ್‌ನ ಜಿಲ್ಲಾ ಮುಖಂಡ ಶಾಫಿ ಅದಿ, ವಕ್ಫ್‌ ಬೋರ್ಡ್ ಸದಸ್ಯ ಎಚ್.ಎಂ.ಅಬ್ಬಾಸ್ ಹಾಜಿ, ಟಿಪ್ಪು ಯುವಕ ಸಂಘ ಅಧ್ಯಕ್ಷ ಔರಂಗಜೇಬ್, ಸಮಾಜಸೇವಕ ಆರ್.ಮಂಜುನಾಥ್, ಪತ್ರಕರ್ತ ಸಂಘದ ಅಧ್ಯಕ್ಷ ಎಚ್.ಆರ್.ಹರೀಶ್‌ ಹಾಗೂ ವಕ್ಫ್ ಬೋರ್ಡ್ ಉಪಾಧ್ಯಕ್ಷ ಹಸೈನಾರ್ ಮಾತನಾಡಿದರು.

ಎಸ್‌ವೈಎಸ್‌ನ ಅಧ್ಯಕ್ಷ ಕೆ.ಎ.ಇಬ್ರಾಹಿಂ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ತಹಶೀಲ್ದಾರ್ ಜಯರಾಂ, ಎಸ್‌ಕೆಎಸ್ಎಸ್ಎಫ್ ಉಪಾಧ್ಯಕ್ಷ ಮಹಮ್ಮದ್ ಝಹೀರ್, ಖತೀಬ ಮಹಮ್ಮದ್ ಫೈಝಿ, ರೆಹಮಾನ್, ಪ್ರಮುಖರಾದ ತಮ್ಮಯ್ಯ, ವರಪ್ರಸಾದ್, ಎಸ್.ಎನ್.ರಘು, ಡಿ.ಎ.ಸುಲೈಮಾನ್, ಕೆ.ಆರ್.ಚಂದ್ರಶೇಖರ್, ಭೂಪಾಲ್, ರಾಜಪ್ಪ, ಜಿ.ಎಂ.ಅಬುಬಕ್ಕರ್ ಹಾಜಿ, ಮಹಮ್ಮದಾಲಿ ಮೇಸ್ತ್ರಿ, ಅಬ್ದುಲ್ ರಝಾಕ್, ಬಿ.ಎ.ಅಹಮ್ಮದ್, ಎಚ್.ವೈ.ಶುಕೂರ್, ವೇದಕುಮಾರ್, ಸೋಮಶೇಖರ್, ಶೋಭಿತ್ ಗೌಡ, ನೌಫಲ್ ಉಪಸ್ಥಿತರಿದ್ದರು. ಸಮಾವೇಶಕ್ಕೂ ಮುನ್ನ ಮೂವರು ಧರ್ಮಗುರುಗಳ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry