ಅಸಾಂಕ್ರಾಮಿಕ ರೋಗ ಹೆಚ್ಚಳ: ವೈದ್ಯರ ಕಳವಳ

7

ಅಸಾಂಕ್ರಾಮಿಕ ರೋಗ ಹೆಚ್ಚಳ: ವೈದ್ಯರ ಕಳವಳ

Published:
Updated:

ಶ್ರೀನಿವಾಸಪುರ: ದೇಶದಲ್ಲಿ ಅಸಾಂಕ್ರಾಮಿಕ ರೋಗಗಳ ಸಂಖ್ಯೆ ಹೆಚ್ಚಿದೆ. ಇಂತಹ ರೋಗಗಳಿಂದ ಸಮಾಜ ಮುಕ್ತಗೊಳಿಸಬೇಕಾದ ಅಗತ್ಯವಿದೆ ಎಂದು ಇನ್ಫೋಸಿಸ್‌ ಸಂಸ್ಥೆಯ ಸಹ ಸಂಸ್ಥಾಪಕ ಕ್ರಿಸ್‌ ಗೋಪಾಲಕೃಷ್ಣ ಹೇಳಿದರು.

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿಆರ್‌ಎಸ್‌ ಆರೋಗ್ಯ ಸಂಶೋಧನಾ ಸಂಸ್ಥೆಯಿಂದ ಹೊಸದಾಗಿ ಸ್ಥಾಪಿಸಲಾಗಿರುವ ಡಯಾಲಿಸಿಸ್‌ ವಿಭಾಗವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ‘ತಾಲ್ಲೂಕು ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಈ ಡಯಾಲಿಸಿಸ್‌ ಕೇಂದ್ರ ಬಡ ರೋಗಿಗಳ ಪಾಲಿಗೆ ವರದಾನವಾಗಿದೆ. ಈ ಭಾಗದ ಜನ ಕೇಂದ್ರದ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಬೆಂಗಳೂರಿನ ನಿಮ್ಹಾನ್ಸ್‌ನ ಪ್ರೊ.ಗಿರೀಶ್‌ ಮಾತನಾಡಿ, ಅಸಾಂಕ್ರಾಮಿಕ ರೋಗಗಳ ವಿರುದ್ಧ ಸಮರ ಸಾರಲಾಗಿದೆ. ತಾಲ್ಲೂಕಿನ ದಳಸನೂರು ಮತ್ತಿತರ ಕೆಲವು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ರೋಗ ಗುರುತಿಸಲಾಗುತ್ತಿದೆ. 40 ವರ್ಷ ದಾಟಿದ ವ್ಯಕ್ತಿಗಳ ರಕ್ತದ ಮಾದರಿ ಪಡೆದು ತಪಾಸಣೆ ಮಾಡಲಾಗುತ್ತಿದೆ. ಮೆದುಳಿಗೆ ಹೇೆ ವೃದ್ಧಾಪ್ಯ ಬರುತ್ತದೆ ಎಂಬುದರ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಯಸ್ಸಾದ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುವ ಮರೆವಿನ ಕಾಯಿಲೆ ಸಮಸ್ಯೆಯಾಗಿ ಕಾಡುತ್ತಿದೆ. ಇದು ಮೆದುಳಿಗೆ ಸಂಬಂಧಿಸಿದ ವಿಷಯವಾಗಿದ್ದು, ಈ ಬಗ್ಗೆ ನಿಮ್ಹಾನ್ಸ್‌, ಸೆಂಟರ್‌ ಫಾರ್‌ ಬ್ರೈನ್‌ ರೀಸರ್ಚ್‌ ಹಾಗೂ ಜಾಲಪ್ಪ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಸಂಸ್ಥೆಯಿಂದ ಅಧ್ಯಯನ ನಡೆಸಲಾಗುತ್ತಿದೆ. ಈ ಅಧ್ಯಯನ ಮೆದುಳಿಗೆ ವೃದ್ಧಾಪ್ಯ ತಟ್ಟುವ ಬಗ್ಗೆ ಹೊಸ ಬೆಳಕು ಚೆಲ್ಲುತ್ತದೆ ಎಂದು ಹೇಳಿದರು.

ಮರೆವಿನ ಕಾಯಿಲೆ ಕೌಟುಂಬಿಕ ಸಮಸ್ಯೆಯಾಗಿ ಪರಿಣಮಿಸಿದೆ. ಇಂತಹ ಕಾಯಿಲೆ ಇರುವ ವ್ಯಕ್ತಿಗಳನ್ನು ಹೊಂದಿರುವ ಕುಟುಂಬದ ಸದಸ್ಯರು ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. ವೈದ್ಯರು ಹಾಗೂ ವಿದ್ಯಾವಂತ ಸಮುದಾಯ ಮರೆವು ಕಾಯಿಲೆ ಕುರಿತು ಸಮಾಜದಲ್ಲಿ ಅರಿವು ಮೂಡಿಸಬೇಕು. ಅಂತಹ ವ್ಯಕ್ತಿಗಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆಯೂ ತಿಳವಳಿಕೆ ನೀಡಬೇಕು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಲ್‌.ವಿ.ಗೋವಿಂದಪ್ಪ ಮಾತನಾಡಿ, ಆರೋಗ್ಯ ಸಚಿವ ಕೆ.ಅರ್‌.ರಮೇಶ್ ಕುಮಾರ್‌ ಅವರ ಪ್ರಯತ್ನದ ಫಲವಾಗಿ ಮೊದಲ ಬಾರಿಗೆ ತಾಲ್ಲೂಕು ಕೇಂದ್ರದಲ್ಲಿ ಡಯಾಲಿಸಿಸ್‌ ಘಟಕ ಸ್ಥಾಪಿಸಲಾಗಿದೆ. ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದ ಸಮೀಪ ₹ 2000 ಕೋಟಿ ವೆಚ್ಚದಲ್ಲಿ 300 ಹಾಸಿಗೆ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಕಲ್ಲೂರು ಗ್ರಾಮದ ಸಮೀಪ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಿಸಲು ಅಗತ್ಯ ಸಿದ್ಧತೆ ನಡೆಯುತ್ತಿದೆ ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜಿ.ಶ್ರೀನಿವಾಸ್‌, ಸೆಂಟರ್‌ ಫಾರ್‌ ಬ್ರೇನ್‌ ರೀಸರ್ಚ್‌ ಸಂಸ್ಥೆಯ ಡಾ.ವಿಜಯಲಕ್ಷ್ಮಿ ರವೀಂದ್ರನಾಥ್‌, ನಿಮ್ಹಾನ್ಸ್‌ನ ಡಾ.ನರೇನ್‌ ರಾವ್‌, ಡಾ.ಶಿವಕುಮಾರ್‌, ಡಾ.ಗಂಗಾಧರ್‌, ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಪುಷ್ಪಲತಾ, ಡಾ.ಜ್ಯೋತಿ, ಡಾ.ಗೋವಿಂದರಾಜ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry