ಬುಧವಾರ, ಡಿಸೆಂಬರ್ 11, 2019
16 °C

ಸಂಡೂರು, ಕೂಡ್ಲಿಗಿಯಲ್ಲಿ ಹೆಚ್ಚಿದ ಕುತೂಹಲ

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಸಂಡೂರು, ಕೂಡ್ಲಿಗಿಯಲ್ಲಿ ಹೆಚ್ಚಿದ ಕುತೂಹಲ

ಬಳ್ಳಾರಿ: ಜಿಲ್ಲೆಯ ಒಂಬತ್ತು ಕ್ಷೇತ್ರಗಳ ಪೈಕಿ ಕೂಡ್ಲಿಗಿಯಲ್ಲಿ ಎನ್‌.ಟಿ.ಬೊಮ್ಮಣ್ಣ ಮತ್ತು ಸಂಡೂರು ಕ್ಷೇತ್ರದಲ್ಲಿ ವಂಸತಕುಮಾರ್‌ ಅವರನ್ನು ಅಭ್ಯರ್ಥಿಗಳೆಂದು ಘೋಷಿಸಿರುವ ಜೆಡಿಎಸ್‌, ಇನ್ನೆರಡು ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗಿಂತ ಒಂದು ಹೆಜ್ಜೆ ಮುಂದೆ ಹೋಗಿದೆ.

ಈ ಎರಡೂ ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ ಎಂಬುದು ವಿಶೇಷ. ಹಿಂದಿನ ವರ್ಷ ಡಿಸೆಂಬರ್‌ನಲ್ಲಿ ನಡೆದಿದ್ದ ಕಾಂಗ್ರೆಸ್‌ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಗರಿಬೊಮ್ಮನಹಳ್ಳಿಯಲ್ಲಿ ಜೆಡಿಎಸ್‌ ಉಚ್ಛಾಟಿತ ಶಾಸಕ ಎಸ್‌.ಭೀಮಾನಾಯ್ಕ ಅವರನ್ನು ಬೆಂಬಲಿಸುವಂತೆ ಕೋರಿದ್ದರು.

ಜನವರಿಯಲ್ಲಿ ಪರಿವರ್ತನಾ ಯಾತ್ರೆಯ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸಿರುಗುಪ್ಪದಲ್ಲಿ ಎಂ.ಎಸ್‌.ಸೋಮಲಿಂಗಪ್ಪ, ಬಳ್ಳಾರಿ ನಗರ ಕ್ಷೇತ್ರದಲ್ಲಿ ಜಿ.ಸೋಮಶೇಖರರೆಡ್ಡಿ ಹಾಗೂ ಹಗರಿಬೊಮ್ಮನಹಳ್ಳಿಯಲ್ಲಿ ಕೆ.ನೇಮಿರಾಜ ನಾಯ್ಕ ಅವರನ್ನು ಅಭ್ಯರ್ಥಿಗಳೆಂದು ಘೋಷಿಸಿದ್ದರು.

ಕೂಡ್ಲಿಗಿ: ನಾಗೇಂದ್ರ ಅವರು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡ ಬಳಿಕ ಜಿಲ್ಲೆಯ ರಾಜಕಾರಣದಲ್ಲಿ ಕುತೂಹಲಕಾರಿ ಯಾಗಿರುವ ಕೂಡ್ಲಿಗಿ ಯಲ್ಲಿ ಜೆಡಿಎಸ್‌ ಅನುಭವಿ ರಾಜಕಾರಣಿ ಬೊಮ್ಮಣ್ಣ ಅವರನ್ನು ಅಭ್ಯರ್ಥಿಯನ್ನಾಗಿಸಿದೆ.

ಅವರು ಕಾಂಗ್ರೆಸ್‌ನಿಂದ 1985ರಲ್ಲಿ ಮತ್ತು 1989ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. 1994ರಲ್ಲಿ ಕಾಂಗ್ರೆಸ್‌ ಮತ್ತು 1999ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸಮೀಪ ಸ್ಪರ್ಧಿಯಾಗಿ ಪ್ರಬಲ ಪೈಪೋಟಿ ನೀಡಿ ಸೋತಿದ್ದರು. ಕೆಲವೇ ತಿಂಗಳ ಹಿಂದಷ್ಟೇ ಅವರು ಜೆಡಿಎಸ್‌ ಸೇರಿದ್ದರು. ಎರಡೂ ಪಕ್ಷಗಳಲ್ಲಿದ್ದು ಬಂದಿರುವ ಅವರಿಗೇ ಪಕ್ಷ ಸ್ಪರ್ಧಿಸುವ ಅವಕಾಶ ನೀಡಿದೆ. ಅವರ ಎದುರಾಳಿಗಳಾಗಿ ಎರಡೂ ಪಕ್ಷಗಳು ಯಾರನ್ನು ಕಣಕ್ಕೆ ಇಳಿಸುತ್ತವೆ ಎಂಬ ಕುತೂಹಲವೂ ಆರಂಭವಾಗಿದೆ.

ಸಂಡೂರು: ಅಕ್ರಮ ಗಣಿಗಾರಿಕೆ ಚರ್ಚೆಯ ಭೂಮಿಯಾಗಿರುವ ಸಂಡೂರು ಕ್ಷೇತ್ರದಲ್ಲಿ ಪಕ್ಷವು ಉದ್ಯಮಿ ವಸಂತಕುಮಾರ್‌ ಅವರನ್ನು ಆಯ್ಕೆ ಮಾಡಿರುವುದೇ ಕುತೂಹಲ ಮೂಡಿಸಿದೆ.

ಅವರು ಒಮ್ಮೆಯೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದವರಲ್ಲ. ಆದರೆ, ಕಾಂಗ್ರೆಸ್‌ನ ಇ.ತುಕಾರಾಂ ಆಯ್ಕೆಯಾಗಿ ನೆಲೆಗೊಂಡು, 3ನೇ ಬಾರಿಗೆ ಆಯ್ಕೆಯಾಗುವ ನಿರೀಕ್ಷೆ ಹೊಂದಿದ್ದಾರೆ. ಅವರಿಗೆ ವಸಂತಕುಮಾರ್‌ ಮೂಲಕ ಜೆಡಿಎಸ್‌ ಹೇಗೆ ಪೈಪೋಟಿ ನೀಡಬಲ್ಲದು ಎಂಬ ಚರ್ಚೆಯೂ ಕ್ಷೇತ್ರದಲ್ಲಿ ಆರಂಭವಾಗಿದೆ.

‘ಹಿಂದಿನ ಚುನಾವಣೆಯಲ್ಲಿ ತುಕಾರಾಂ ಅವರಿಗೆ ಸಮೀಪ ಸ್ಪರ್ಧೆ ನೀಡಿದ್ದ ಆರ್‌.ಧನಂಜಯ ನಂತರ ಪಕ್ಷದೊಂದಿಗೆ ಹೆಚ್ಚು ಗುರುತಿಸಿಕೊಳ್ಳದ ಕಾರಣ ಅವರ ಆಯ್ಕೆಯನ್ನು ಮಾಡಲಿಲ್ಲ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಿವಪ್ಪ ‘ಪ್ರಜಾವಾಣಿ’ಗೆ ಸೋಮವಾರ ತಿಳಿಸಿದರು. ದೇವೇಗೌಡರ ಕಟ್ಟಾ ಅನುಯಾಯಿ ಆಗಿರುವ ವಸಂತಕುಮಾರ್‌, ಈ ಹಿಂದಿನ ಚುನಾವಣೆಗಳಲ್ಲಿ ಸಕ್ರಿಯವಾಗಿ ದುಡಿದಿದ್ದೇ ಅವರ ಆಯ್ಕೆಗೆ ಕಾರಣ.

ಟಿಕೆಟ್‌ಗಾಗಿ ಹೆಚ್ಚಿದ ಪೈಪೋಟಿ!

ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮತ್ತು ಹಡಗಲಿ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದರಿಂದ ಪಕ್ಷವು ಇಲ್ಲಿಅಭ್ಯರ್ಥಿಗಳ ಘೋಷಣೆ ಮಾಡಲಿಲ್ಲ. ಹಗರಿಬೊಮ್ಮನಹಳ್ಳಿಯಲ್ಲಿ ಎಂಟು ಮಂದಿ ಹಾಗೂ ಹಡಗಲಿಯಲ್ಲಿ ಇಬ್ಬರು ಆಕಾಂಕ್ಷಿಗಳಿದ್ದಾರೆ. ಅವರಲ್ಲೇ ಸಮರ್ಥರನ್ನು ಆಯ್ಕೆ ಮಾಡಲಾಗುವುದು ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಿವಪ್ಪ ತಿಳಿಸಿದ್ದಾರೆ.

* * 

ಹೆಚ್ಚು ಆಕಾಂಕ್ಷಿಗಳಿರುವುದರಿಂದ ಹಗರಿಬೊಮ್ಮನಹಳ್ಳಿ ಮತ್ತು ಹಡಗಲಿ ಕ್ಷೇತ್ರದ ಅಭ್ಯರ್ಥಿ ಘೋಷಣೆಯನ್ನು ತಡೆಹಿಡಿಯಲಾಗಿದೆ

ಕೆ.ಶಿವಪ್ಪ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ

ಪ್ರತಿಕ್ರಿಯಿಸಿ (+)