ದಿಕ್ಕು ತಪ್ಪಿದ ‘ನವಗ್ರಾಮ’ ಯೋಜನೆ

7

ದಿಕ್ಕು ತಪ್ಪಿದ ‘ನವಗ್ರಾಮ’ ಯೋಜನೆ

Published:
Updated:

ಕಮಲನಗರ: ಮನೆಗಳ ಸುತ್ತಲೂ ಬೆಳೆದು ನಿಂತ ಜಾಲಿ ಗಿಡಗಳು, ಕುಸಿದು ಬಿದ್ದ ಗೋಡೆಗಳು, ಈ ಮನೆಗಳಿಗೆ ತೆರಳಲು ಇರುವ ಕಾಲುದಾರಿಯ ಗುರುತೇ ಸಿಗದಂತ ಸ್ಥಿತಿ. ಇದು ಕಮಲನಗರದ ಹೊರವಲಯದಲ್ಲಿ ನಿರ್ಮಾಣ ಮಾಡಲಾಗಿರುವ ‘ನವಗ್ರಾಮ’ ಯೋಜನೆಯ ಮನೆಗಳ ದುಸ್ಥಿತಿ.

ಬಡವರಿಗೆ ಮತ್ತು ವಸತಿ ರಹಿತರಿಗೆ ಸೂರು ನೀಡುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದ ‘ನವಗ್ರಾಮ’ ಯೋಜನೆಯಡಿ ಕಮಲನಗರದಿಂದ 2 ಕಿ .ಮೀ ದೂರದ ಖತಗಾಂವ್‌ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಪಕ್ಕದಲ್ಲಿ 2001–02ನೇ ಸಾಲಿನಲ್ಲಿ 5 ಎಕರೆ ಭೂಮಿ ಖರೀದಿಸಿ, 150 ಮನೆಗಳನ್ನು ನಿರ್ಮಿಸಲು ಯೋಜಿಸಲಾಗಿತ್ತು.

ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಮನೆಗಳು ಜನಪ್ರತಿನಿಧಿಗಳ ಹಿಂಬಾಲಕರಿಗೆ ದೊರೆತಿದ್ದು, ಅವರು ಈ ಮನೆಗಳಲ್ಲಿ ವಾಸಿಸಲು ಇಚ್ಛಿಸದೆ ಇರುವುದು ಹಾಗೂ ನವಗ್ರಾಮದಲ್ಲಿ ಮೂಲ ಸೌಕರ್ಯ ಕಲ್ಪಿಸದೇ ಇರುವುದರಿಂದ ಸರ್ಕಾರದ ಮಹತ್ವದ ಯೋಜನೆಯೊಂದು ವಿಫಲವಾದಂತಿದೆ.

ಕಾಮಗಾರಿ ಆರಂಭಗೊಂಡು ದಶಕಗಳೇ ಕಳೆದಿವೆ. ಹಲವು ಮನೆಗಳ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ. ಗ್ರಾಮದಲ್ಲಿ ಆರೇಳು ಮನೆಗಳು ಪೂರ್ಣಗೊಂಡಿದ್ದು, 13 ಮನೆಗಳು ಅಡಿಪಾಯಕ್ಕೆ ಸೀಮಿತಗೊಂಡಿದ್ದರೆ, ಉಳಿದ 51 ಮನೆಗಳು ಅಪೂರ್ಣವಾಗಿವೆ. ಇಷ್ಟಿದ್ದರೂ ಯಾರೊಬ್ಬರೂ ಇತ್ತ ಗಮನ ಹರಿಸಿಲ್ಲ.

ಇಲ್ಲಿಯ ಮನೆಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಕೊಳವೆ ಬಾವಿ ಮತ್ತು ಪೈಪ್‌ಲೈನ್‌ ಕಾಮಗಾರಿಗಾಗಿ ₹ 1.20 ಲಕ್ಷ ಹಣ ಖರ್ಚು ಮಾಡಲಾಗಿದೆ ಎಂದು ದಾಖಲಿಸಲಾಗಿದೆ. ಆದರೆ ಮನೆಗಳಿಗೆ ಪೈಪ್‌ಲೈನ್‌ ಅಳವಡಿಸದೇ ಇರುವುದು ಯೋಜನೆಯಡಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

‘ಸರ್ಕಾರದಿಂದ ಬಡ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ₹ 25 ಸಾವಿರ ನೀಡಲಾಗಿದೆ. ಆದರೆ ನಮಗೆ ಮನೆ ಕಟ್ಟಿಸಿಕೊಳ್ಳಲು ₹ 17 ಸಾವಿರ ನೀಡಿದ್ದಾರೆ. ಉಳಿದ ಹಣ ಕಟ್‌ ಆಗಿ ಬರುತ್ತಿದೆ ಎಂದು ಫಲಾನುಭವಿಗಳಿಗೆ ನೀಡಲಾಗಿದೆ’ ಎಂದು ಮುಸ್ತಫಾ ಬಾಗವಾನ್‌ ತಿಳಿಸಿದ್ದಾರೆ.

‘ನವಗ್ರಾಮ ಯೋಜನೆಗೆ ನಿಗದಿಪಡಿಸಿದ ಹಣದಲ್ಲಿ ₹ 10 ಲಕ್ಷ ತಾಲ್ಲೂಕು ಪಂಚಾಯಿತಿಯಲ್ಲಿ ಮೀಸಲಿರಿಸಲಾಗಿತ್ತು. ಆದರೆ ಯೋಜನೆ ನಿಗದಿತ ಅವಧಿ ಒಳಗಾಗಿ ಪೂರ್ಣಗೊಳ್ಳದ ಕಾರಣ ಸರ್ಕಾರ ಆ ಹಣವನ್ನು 2011–12 ರಲ್ಲಿ ವಾಪಸ್‌ ಪಡೆದುಕೊಂಡಿದೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀರಂಗ ಪರಿಹಾರ್‌ ತಿಳಿಸಿದ್ದಾರೆ.

ಅಪೂರ್ಣ ಕಾಮಗಾರಿಯಾಗಿ ನಿರ್ಮಾಣ ಮಾಡಿರುವ ಮನೆಗಳ ಬಾಗಿಲು, ಕಿಟಕಿ, ಕಲ್ಲುಗಳು ಕಳ್ಳರ ಪಾಲಾಗುತ್ತಿವೆ. ಅಲ್ಪಸ್ವಲ್ಪ ಪೂರ್ಣಗೊಂಡ ಮನೆಗಳು ಶಿಥಿಲಾವಸ್ಥೆ ತಲುಪಿವೆ. ಮನೆಗಳಿಗೆ ಹೋಗುವ ರಸ್ತೆಯಲ್ಲಿ ಮುಳ್ಳು ಕಂಟಿಗಳು ಬೆಳೆದು ನಿಂತಿವೆ. ಸಂಬಂಧಪಟ್ಟವರು ಸರ್ಕಾರದ ಮಹತ್ವಾಕಾಂಕ್ಷೆಯ ‘ನವಗ್ರಾಮ’ ಯೋಜನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಪ್ರಶಾಂತ್‌ ಮಠಪತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry