ಶುಕ್ರವಾರ, ಡಿಸೆಂಬರ್ 6, 2019
25 °C

ಮನೋಹರ್‌ಗೆ ಜೆಡಿಎಸ್‌ ಟಿಕೆಟ್‌: ಕಾರ್ಯಕರ್ತರ ಸಂಭ್ರಮಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನೋಹರ್‌ಗೆ ಜೆಡಿಎಸ್‌ ಟಿಕೆಟ್‌: ಕಾರ್ಯಕರ್ತರ ಸಂಭ್ರಮಾಚರಣೆ

ಬಾಗೇಪಲ್ಲಿ: ಯಲಹಂಕದಲ್ಲಿ ನಡೆದ ಜೆಡಿಎಸ್ ವಿಕಾಸ ಪರ್ವ ಸಮಾವೇಶದಲ್ಲಿ ಪ್ರಕಟವಾದ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಬಾಗೇಪಲ್ಲಿಗೆ ವಿಧಾನ ಪರಿಷತ್‌ ಸದಸ್ಯ ಡಾ. ಸಿ.ಆರ್‌. ಮನೋಹರ್‌ ಹೆಸರು ಘೋಷಣೆಯಾಗಿದೆ.

ಕ್ಷೇತ್ರದಲ್ಲಿ ಜೆಡಿಎಸ್‌ ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆದಿತ್ತು. ಪಕ್ಷದ ಮುಖಂಡ ಡಿ.ಜೆ. ನಾಗರಾಜರೆಡ್ಡಿ ಪ್ರಮುಖ ಆಕಾಂಕ್ಷಿಯಾಗಿದ್ದರು. ಚುನಾವಣೆಯ ಉದ್ದೇಶದಿಂದಲೇ 20 ವರ್ಷದಿಂದ ಕ್ಷೇತ್ರದಲ್ಲಿ ನಿರಂತರವಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವಿತರಣೆ, ಬಡಜನರಿಗೆ ಆರ್ಥಿಕ ನೆರವು ನೀಡಿ ಎಲ್ಲರ ಗಮನ ಸೆಳೆದಿದ್ದರು. ಇತ್ತೀಚೆಗೆ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಟಿಕೆಟ್‌ಗೆ ಮನವಿ ಸಲ್ಲಿಸಿದ್ದರು. ಚುನಾವಣೆ ಉದ್ದೇಶದಿಂದಲೇ ವಿಕಾಸ ಪರ್ವ ಕಾರ್ಯಕ್ರಮ ಏರ್ಪಡಿಸಿದ್ದರು. ಆಗ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಅಭ್ಯರ್ಥಿ ಹೆಸರು ಪ್ರಕಟಿಸದೆ ಪಕ್ಷ ಸಂಘಟಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದ್ದರು.

ವರಿಷ್ಠರು ಡಾ. ಮನೋಹರ್‌ ಹೆಸರು ಪ್ರಕಟಿಸಿ ಅಚ್ಚರಿ ಮೂಡಿಸಿದ್ದಾರೆ. ಇದರಿಂದ ನಾಗರಾಜರೆಡ್ಡಿ ಅವರಿಗೆ ನಿರಾಸೆಯಾಗಿದೆ ಎಂದು ಪಕ್ಷದ ಮುಖಂಡರು ಹೇಳುವರು.

ಸಂಭ್ರಮಾಚರಣೆ: ಡಾ. ಮನೋಹರ್ ಅಭಿಮಾನಿಗಳು ಪಟ್ಟಣದ ಸ್ಕೇಟ್ ಬ್ಯಾಂಕ್ ವೃತ್ತದ ಮುಖ್ಯರಸ್ತೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಜೆಡಿಎಸ್ ಮುಖಂಡರಾದ ಸಿ.ಡಿ.ಗಂಗುಲಪ್ಪ, ಪ್ರದೀಪ್‌ಕುಮಾರ್, ಬಿ.ಜಿ.ಶ್ರೀನಿವಾಸ್ (ಜಿನ್ನಿ), ಯಲ್ಲಂಪಲ್ಲಿ ಶಿವಪ್ಪ, ಭಾನುಪ್ರಕಾಶ್, ಜಬೀವುಲ್ಲಾ, ಸುನೀಲ್, ಆನಂದ, ಪ್ರದೀಪ್,ರಾಮಸ್ವಾಮಿ ಪಲ್ಲಿವೆಂಕಿ, ಗೋಪಿ, ಸೀನ, ರವಿ ಇದ್ದರು.

ಬಂಡಾಯ ಸ್ಪರ್ಧೆ ನಿಶ್ಚಿತ: ನಾಗರಾಜರೆಡ್ಡಿ

ಬಾಗೇಪಲ್ಲಿ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ತಮಗೆ ಅವಕಾಶ ನೀಡದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ ಎಂದು ಪಕ್ಷದ ಮುಖಂಡ ಡಿ.ಜೆ. ನಾಗರಾಜರೆಡ್ಡಿ ತಿಳಿಸಿದರು.

ಜಡಲಭೈರವೇಶ್ವರ ದೇವಾಲಯದಲ್ಲಿ ಏರ್ಪಡಿಸಿದ್ದ ವಾಲಿಬಾಲ್, ಕ್ರಿಕೆಟ್, ಕಬಡ್ಡಿ ಟೂರ್ನಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಯಲಹಂಕ ಸಮಾವೇಶದಲ್ಲಿ ಬಿಡುಗಡೆಯಾದ ಮೊದಲ ಪಟ್ಟಿಯಲ್ಲಿ ಡಾ. ಮನೋಹರ್‌ ಹೆಸರು ಪ್ರಕಟಿಸಲಾಗಿದೆ. ಆದರೆ ಜೆಡಿಎಸ್‌ ವರಿಷ್ಠರ ಮೇಲೆ ವಿಶ್ವಾಸವಿದ್ದು, ತಮಗೇ ಟಿಕೆಟ್‌ ಸಿಗುವ ವಿಶ್ವಾಸವಿದೆ ಎಂದರು.

‘ಕ್ಷೇತ್ರದಲ್ಲಿ 20 ವರ್ಷದಿಂದ ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಪಕ್ಷದ ವರಿಷ್ಠರು ನನಗೆ ಮೋಸ ಮಾಡುವುದಿಲ್ಲ ಎಂಬ ನಂಬಿಕೆ ಇದೆ. ಮೂರು ಬಾರಿ ಚುನಾವಣೆಗೆ ಸ್ಪರ್ಧಿಸಿದ ಅನುಭವವಿದೆ. ಹೋರಾಟ ನಡೆಸುತ್ತೇನೆ. ಯುವಶಕ್ತಿ ನನ್ನ ಜೊತೆ ಇದ್ದು, ಗೆಲ್ಲವು ವಿಶ್ವಾಸವಿದೆ’ ಎಂದು ತಿಳಿಸಿದರು.ಫಲಿತಂಶ: ಕ್ರಿಕೆಟ್‌: ಬಾಗೇಪಲ್ಲಿ ಬಿಸಿಸಿ ಎ ತಂಡ–1, ಬಿಸಿಸಿ ಬಿ–2, ಲಿಯೋ ತಂಡ–3; ವಾಲಿಬಾಲ್‌: ಬಾಗೇಪಲ್ಲಿ ಪೊಲೀಸ್ ಪ್ರಿನ್ಸ್ ಫ್ರೆಂಡ್ಸ್ ತಂಡ–1, ಗುಡಿಬಂಡೆ ಎ–2, ಗುಡಿಬಂಡೆ ಬಿ–3; ಕಬಡ್ಡಿ: ಗುಡಿಬಂಡೆ–1, ಪೆದ್ದರೆಡ್ಡಿಪಲ್ಲಿ–2, ಬತ್ತಲಪಲ್ಲಿ–3.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಹರಿನಾಥರೆಡ್ಡಿ, ಮುಖಂಡರಾದ ವೆಂಕಟಾಶಿವಾರೆಡ್ಡಿ, ಗುರ್ರಾಲದಿನ್ನೆ ವೆಂಕಟರೆಡ್ಡಿ, ದೀಪಕ್‌ ನಾಗರಾಜರೆಡ್ಡಿ, ಪಿ.ಎಲ್.ಗಣೇಶ್. ಪತ್ರಕರ್ತ ಬಿ.ಆರ್. ಕೃಷ್ಣ ಇದ್ದರು.

ಪ್ರತಿಕ್ರಿಯಿಸಿ (+)