ಶುಕ್ರವಾರ, ಡಿಸೆಂಬರ್ 6, 2019
26 °C

ಮರಾಠರಿಗೆ 2 ‘ಎ’ ಸ್ಥಾನಮಾನ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರಾಠರಿಗೆ 2 ‘ಎ’ ಸ್ಥಾನಮಾನ ನೀಡಿ

ದಾವಣಗೆರೆ: ‘ಛತ್ರಪತಿ ಶಿವಾಜಿ ಜನ್ಮತಾಳದಿದ್ದರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಎಲ್ಲ ದೇಗುಲಗಳು ಮಸೀದಿಗಳಾಗಿ ಬದಲಾಗುತ್ತಿದ್ದವು. ಶಿವಾಜಿ ಹಿಂದೂ ಧರ್ಮಕ್ಕಾಗಿ ಹೋರಾಡಿದ ಮಹಾನ್‌ ವ್ಯಕ್ತಿ’ ಎಂದು ಪಾಲಿಕೆ ಮೇಯರ್ ಅನಿತಾಬಾಯಿ ಮಾಲತೇಶ್‌ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಾಲಿಕೆ ಹಾಗೂ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಸೋಮವಾರ ದೇವರಾಜ ಅರಸ್‌ ಬಡಾವಣೆಯಲ್ಲಿರುವ ಕೃಷ್ಣಭವಾನಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಶಿವಾಜಿ ಜಯಂತಿಯಲ್ಲಿ ಅವರು ಮಾತನಾಡಿದರು.

ಮರಾಠ ಸಮಾಜವು ತೀರಾ ಹಿಂದುಳಿದಿದೆ. ಸಂಘಟಿತವಾಗಿ ಹೋರಾಡಿದರೆ ಸರ್ಕಾರದ ಸವಲತ್ತುಗಳನ್ನು ಪಡೆಯಬಹುದು. ಮುಂದಿನ ಪೀಳಿಗೆಯಾದರೂ ಮೀಸಲಾತಿ ಸೌಲಭ್ಯಗಳನ್ನು ಪಡೆಯಬೇಕು. ಈ ನಿಟ್ಟಿನಲ್ಲಿ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದರು.

ಆವರಗೆರೆ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸನಾತನ ಹಿಂದೂ ಧರ್ಮದ ರಕ್ಷಣೆಗೆ ಹೋರಾಡಿದ ಶಿವಾಜಿಯನ್ನು ಪ್ರತಿಯೊಬ್ಬ ಹಿಂದುವೂ ಆರಾಧಿಸಬೇಕು’ ಎಂದರು.

ಧರ್ಮ ರಕ್ಷಣೆ ಮಾತ್ರವಲ್ಲ, ಆತನ ಆಡಳಿತದಲ್ಲಿ ರೈತರಿಗೂ ಹಲವು ಕೊಡುಗೆಗಳನ್ನು ನೀಡಲಾಯಿತು. ಶಿವಾಜಿ ಮರಾಠ ಸಮಾಜಕ್ಕೆ ಮಾತ್ರ ಸೀಮಿತರಲ್ಲ; ಸರ್ವ ಜನಾಂಗದ ನಾಯಕ ಎಂದು ಹೇಳಿದರು.

ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ‘ಮೊಘಲರ ದಬ್ಬಾಳಿಕೆಯನ್ನು ಸಮರ್ಥವಾಗಿ ತಡೆದು, ಹಿಂದೂ ಧರ್ಮ ಉಳಿಸಿದ ನಾಯಕ ಶಿವಾಜಿ ಎಂದು ಬಣ್ಣಿಸಿದರು.

ದಾವಣಗೆರೆಯನ್ನು ಕಟ್ಟಿದವರು ಮರಾಠರು. ಜಿಲ್ಲೆಯಲ್ಲಿ ಇಂದಿಗೂ ಹಳೆಯ ತಲೆಮಾರಿನ ಮರಾಠ ಕುಟುಂಬಗಳು ಇವೆ. ಒಗ್ಗಟ್ಟಿನ ಕೊರತೆಯಿಂದಾಗಿ ಸಮಾಜ ಅಧೋಗತಿಗೆ ತಲುಪಿದೆ. ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ಪಕ್ಷಬೇಧ ಮರೆತು ಸಾಗೋಣ ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಮಾಲತೇಶ್‌ ಜಾಧವ್ ಮಾತನಾಡಿ, ಮರಾಠ ಸಮಾಜ ಸಂಕಷ್ಟದಲ್ಲಿದ್ದು, ಸರ್ಕಾರ 2 ‘ಎ’ ಮೀಸಲಾತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಟಿ.ವಿ.ರಾಜು ಮಾತನಾಡಿ, ‘ಮಹಾನ್‌ ನಾಯಕರ ಸ್ಮರಣೆ ಜಯಂತಿಗೆ ಮಾತ್ರ ಸೀಮಿತವಾಗಬಾರದು. ಸರ್ಕಾರ ಪ್ರತ್ಯೇಕವಾಗಿ ಜಯಂತಿಗಳನ್ನು ಆಚರಿಸುವ ಬದಲು, ಒಂದೇ ವೇದಿಕೆಯಲ್ಲಿ ಎಲ್ಲ ಸಮುದಾಯಗಳನ್ನು ಒಳಗೊಂಡಂತೆ ಜಯಂತಿ ಆಚರಿಸಬೇಕು’ ಎಂದರು.

ಉಪನ್ಯಾಸಕ ಎಂ.ಪಿ.ಶಿಂಧೆ ಶಿವಾಜಿ ಕುರಿತು ಉಪನ್ಯಾಸ ನೀಡಿದರು. ಮುಖಂಡರಾದ ವೈ.ಮಲ್ಲೇಶ್‌, ಗೌರಿಬಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಕೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರೂ ಇದ್ದರು. ಬಿ.ಎಸ್‌.ಪದ್ದಪ್ಪ ಕಾರ್ಯಕ್ರಮ ನಿರೂಪಿಸಿದರು. ಶಿವಾಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

‘ಷಹಾಜಿ ಸಮಾಧಿಸ್ಥಳ ಪ್ರವಾಸಿತಾಣವಾಗಲಿ’

ಚನ್ನಗಿರಿ ತಾಲ್ಲೂಕಿನಲ್ಲಿರುವ ಷಹಾಜಿ ಮಹಾರಾಜರ ಸಮಾಧಿ ಸ್ಥಳ ಮೂಲಸೌಕರ್ಯಗಳಿಂದ ನರಳುತ್ತಿದೆ. ವಿವಿಧ ರಾಜ್ಯಗಳಿಂದ ಸಮಾಧಿ ಸ್ಥಳ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಉಳಿಯಲು ವ್ಯವಸ್ಥೆ ಇಲ್ಲ. ಈ ನಿಟ್ಟಿನಲ್ಲಿ ಸಮಾಧಿ ಸ್ಥಳವನ್ನು ಪ್ರವಾಸಿತಾಣವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಟಿ.ವಿ.ರಾಜು ಹೇಳಿದರು.

ಪ್ರತಿಕ್ರಿಯಿಸಿ (+)