ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಶಾಸ್ತ್ರ ತ್ರಿಭಾಷಾ ಪದಕೋಶ ಸಿದ್ಧ

ಭಾರತದಲ್ಲೇ ಮೊದಲ ಪ್ರಯೋಗ; ಇಂಗ್ಲಿಷ್‌–ಹಿಂದಿ–ಕನ್ನಡದಲ್ಲಿ ಅರ್ಥವಿವರಣೆ
Last Updated 20 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಮೈಸೂರು: ಭಾರತದ ಮೊಟ್ಟಮೊದಲ ‘ರಾಜ್ಯಶಾಸ್ತ್ರ ತ್ರಿಭಾಷಾ ಪದಕೋಶ’ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಿದ್ಧವಾಗಿದೆ.

ರಾಜ್ಯಶಾಸ್ತ್ರದ 4,500 ಪದಗಳಿಗೆ ಇಂಗ್ಲಿಷ್‌–ಹಿಂದಿ–ಕನ್ನಡದಲ್ಲಿ ಅರ್ಥವಿವರಣೆ ಇರುವುದು ಈ ನಿಘಂಟಿನ ವಿಶೇಷ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಸಹಯೋಗದಲ್ಲಿ ಮೈಸೂರು ವಿ.ವಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗವು ಹೊರತರುತ್ತಿದೆ.

ಕನ್ನಡ, ಹಿಂದಿ ಹಾಗೂ ಇಂಗ್ಲಿಷ್‌ ಭಾಷಾ ತಜ್ಞರ ಸಹಕಾರದಿಂದ ನಿಘಂಟು ರಚಿಸಲಾಗಿದೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇಂಗ್ಲಿಷಿನಲ್ಲಿರುವ ರಾಜ್ಯಶಾಸ್ತ್ರದ ಅನೇಕ ಪದಗಳು ಅರ್ಥವಾಗುವುದಿಲ್ಲ. ಹಾಗಾಗಿ, ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಇರುವ ಕೆಲವು ನಿಘಂಟುಗಳಲ್ಲಿ ಪದ ಸಂಪತ್ತಿನ ಕೊರತೆಯಿದೆ. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಕನ್ನಡ ಹಾಗೂ ಹಿಂದಿಯಲ್ಲಿ ಅರ್ಥವಿವರಣೆ ನೀಡುವ ಪ್ರಯತ್ನವನ್ನು ಮಾಡಲಾಗಿದೆ.

ಏನಿದರ ವಿಶೇಷ?: ಮೂರೂ ಭಾಷೆಗಳು ಒಂದೇ ನಿಘಂಟಿನಲ್ಲಿ ಸಿಗುತ್ತಿರುವುದು ಇದೇ ಮೊದಲು. ಕೇಂದ್ರದ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಭಾಷಾ ಆಯೋಗವು ಇದಕ್ಕೆ ಕೈಜೋಡಿಸಿದ್ದು, ಅಂತರರಾಷ್ಟ್ರೀಯಮಟ್ಟದ ಪದಕೋಶ ಮಾನದಂಡಗಳನ್ನು ಅನುಸರಿಸಲಾಗಿದೆ. ಸಚಿತ್ರ ಸಮೇತ ವಿವರಣೆ ನೀಡುವ ಈ ನಿಘಂಟನ್ನು ಸುಲಭವಾಗಿ ಬಳಸಬಹುದು. ಪ್ರತಿ ಪದಕ್ಕೆ ಏಕಕಾಲದಲ್ಲಿ ಮೂರು ಭಾಷೆಗಳಲ್ಲಿ ವಿವರಣೆ ಸಿಗುವ ಕಾರಣ, ಮೂರು ಭಾಷೆಗಳ ಸಂಸ್ಕೃತಿಯನ್ನು ಅರಿಯುವುದೂ ಸಾಧ್ಯವಾಗುತ್ತದೆ ಎಂದು ನಿಘಂಟಿನ ಸಂಪಾದಕ, ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಜಿ.ಟಿ.ರಾಮಚಂದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯಶಾಸ್ತ್ರ ವಿದ್ಯಾರ್ಥಿಗಳು ಮಾತ್ರವಲ್ಲದೆ ಮಾನವಿಕ ವಿಷಯಗಳನ್ನು ಅಧ್ಯಯನ ಮಾಡುವವರಿಗೂ ಅನುಕೂಲಕ್ಕೆ ಬರುತ್ತದೆ. ಕಲಿಕೆಗೆ ಪೂರಕವಾಗಿ ಶಿಕ್ಷಕರಿಗೂ ಸಹಾಯಕಾರಿಯಾಗಿದೆ’ ಎಂದು ವಿವರಣೆ ನೀಡಿದರು.

2 ವರ್ಷಗಳ ಶ್ರಮದಿಂದ ನಿಘಂಟು ರಚಿಸಲಾಗಿದೆ. ಒಟ್ಟು ನಾಲ್ಕು ಕಾರ್ಯಾಗಾರಗಳು ನಡೆದಿವೆ. ನಿಘಂಟು ರಚನಾ ಸಮಿತಿಯಲ್ಲಿ ಪ್ರೊ.ಜಿ.ಟಿ.ರಾಮಚಂದ್ರಪ್ಪ, ಪ್ರೊ.ಮುಜಾಫರ ಅಸ್ಸಾದಿ, ಪ್ರೊ.ಕೃಷ್ಣ ಆರ್‌.ಹೊಂಬಾಳ್, ಡಾ.ಕೆ.ಎಸ್.ಗೋವಿಂದರಾಜು, ಡಾ.ಜಿ.ಆರ್.ಪೂರ್ಣಿಮಾ, ಶಬಾನಾ ಫರ್ಹೀನ್‌, ಹರೀಶ್, ಕೇಂದ್ರ ಸರ್ಕಾರದ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಭಾಷಾ ಆಯೋಗದ ಅಧಿಕಾರಿ ಡಾ.ಶಹಜಾದ್ ಅಹಮದ್ ಅನ್ಸಾರಿ ಕಾರ್ಯನಿರ್ವಹಿಸಿದ್ದಾರೆ.

ಕಡಿಮೆ ಬೆಲೆಗೆ ಲಭ್ಯ: ಕೃತಿಗೆ ಇನ್ನೂ ಬೆಲೆ ನಿಗದಿಪಡಿಸಿಲ್ಲ. ₹15ರಿಂದ 50ರ ಒಳಗೆ ನಿಗದಿಪಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT