ಶುಕ್ರವಾರ, ಡಿಸೆಂಬರ್ 13, 2019
27 °C
ಅರಣ್ಯದಂಚಿನ ಗ್ರಾಮಗಳಲ್ಲಿ ಆತಂಕ, ಶೋಧ ಚುರುಕು

ಕೊಡಗಿನಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಡಗಿನಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷ

ಮಡಿಕೇರಿ: ಕೊಡಗು ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಶಂಕಿತ ನಕ್ಸಲರು ಮತ್ತೆ ಪ್ರತ್ಯಕ್ಷರಾಗಿದ್ದು, ಮಂಗಳವಾರ ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್‌) ಹಾಗೂ ಪೊಲೀಸರು ಶೋಧ ನಡೆಸಿದರು.

ತಾಲ್ಲೂಕಿನ ನಾಪೋಕ್ಲು ಸಮೀಪದ ನಾಲಾಡಿಯಲ್ಲಿ ಬಲ್ಲಚಂಡ ಮುತ್ತಣ್ಣ ಅವರಿಗೆ ಸೇರಿದ ಲೈನ್‌ಮನೆಗೆ ಸೋಮವಾರ ಸಂಜೆ 6 ಗಂಟೆ ಸಮಯದಲ್ಲಿ ಶಸ್ತ್ರಸಜ್ಜಿತ ಮೂವರು ಪುರುಷರು ಭೇಟಿ ನೀಡಿದ್ದರು. ಅಲ್ಲಿ ವಾಸವಿದ್ದ ಪೆಮ್ಮಯ್ಯರಿಂದ ಅಕ್ಕಿ, ಖಾರದ ಪುಡಿ, ಉಪ್ಪು ಮತ್ತಿತರ ಅಡುಗೆ ಸಾಮಗ್ರಿ ಸಂಗ್ರಹಿಸಿದ್ದಾರೆ. ಮನೆಯಲ್ಲಿ ಮಾಡಿದ್ದ ಮಾಂಸದ ಅಡುಗೆಯನ್ನು ಸೇವಿಸಿ, ಮೊಬೈಲ್‌ ಚಾರ್ಜ್‌ ಮಾಡಿಕೊಂಡು ರಾತ್ರಿ 10ರ ಸುಮಾರಿಗೆ ಅರಣ್ಯದೊಳಕ್ಕೆ ಹೋಗಿದ್ದಾರೆ.

‘ನಾವು ನಕ್ಸಲರು. ಯಾರಿಗೂ ಮಾಹಿತಿ ನೀಡಬಾರದೆಂದು ಎಚ್ಚರಿಕೆ ನೀಡಿದರು’ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಾಲಾಡಿ, ತಡಿಯಂಡಮೋಳ್‌ ಬೆಟ್ಟ, ನಾಪೋಕ್ಲು ಸುತ್ತಮುತ್ತಲ ಪ್ರದೇಶದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌, ಡಿವೈಎಸ್‌ಪಿ ಸುಂದರ್‌ರಾಜ್‌ ಮಾರ್ಗದರ್ಶನದಲ್ಲಿ ಎಎನ್‌ಎಫ್‌ ಸಿಬ್ಬಂದಿ ಇಡೀ ದಿನ ಕಾರ್ಯಾಚರಣೆ ನಡೆಸಿದರೂ ಸುಳಿವು ಸಿಕ್ಕಿಲ್ಲ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದಿಂದಾಗಿ ಸುಳ್ಯ, ಸಂಪಾಜೆ, ಕುಕ್ಕೆ ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಎಎನ್‌ಎಫ್‌ ಎರಡು ದಿನಗಳಿಂದ ಕಾರ್ಯಾಚರಣೆ ಚುರುಕುಗೊಳಿಸಿತ್ತು. ಹೀಗಾಗಿ, ಶಸ್ತ್ರಸಜ್ಜಿತ ಮೂವರು ಕೊಡಗು ಭಾಗಕ್ಕೆ ಬಂದಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಅದೇ ತಂಡ?: ಫೆ.2ರಂದು ದಕ್ಷಿಣ ಕನ್ನಡ– ಕೊಡಗು ಜಿಲ್ಲೆಯ ಗಡಿಪ್ರದೇಶವಾದ ಕೊಯಿನಾಡು ವ್ಯಾಪ್ತಿಯಲ್ಲಿ ಶಸ್ತ್ರಸಜ್ಜಿತ ಮೂವರು ಪುರುಷರು ಕಾಣಿಸಿಕೊಂಡಿದ್ದರು. ಆಗಲೂ ಕಾರ್ಯಾಚರಣೆ ನಡೆದಿತ್ತು. ಕೊಯಿನಾಡುಗೆ ಬಂದಿದ್ದವರಲ್ಲಿ ಪೊಲೀಸರಿಗೆ ಬೇಕಾಗಿದ್ದ ಉಡುಪಿಯ ವಿಕ್ರಂಗೌಡ ಇದ್ದ ಎನ್ನುವ ಮಾಹಿತಿ ಲಭಿಸಿತ್ತು.

ಜ.16ರಂದು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಶಿರಾಡಿ ಗ್ರಾಮದ ಮಿತ್ತ ಮಜಲಿಯಲ್ಲಿ ಕಾಣಿಸಿಕೊಂಡಿದ್ದ ತಂಡವೇ ಜಿಲ್ಲೆಗೂ ಬಂದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಕೆ.ಜಿ.ಬೋಪಯ್ಯ ಸ್ಪೀಕರ್‌ ಆಗಿದ್ದ ಅವಧಿಯಲ್ಲಿ ಅವರ ಸ್ವಗ್ರಾಮದ ಕಾಲೂರಿನಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರು. ನಂತರ, ನಾಪೋಕ್ಲು, ಬಿರುನಾಣಿಯಲ್ಲೂ ಪ್ರತ್ಯಕ್ಷವಾಗಿ ಆತಂಕ ಮೂಡಿಸಿದ್ದರು.

ಪ್ರತಿಕ್ರಿಯಿಸಿ (+)