ಶುಕ್ರವಾರ, ಡಿಸೆಂಬರ್ 6, 2019
25 °C

ಲಕ್ಷ ಲಕ್ಷ ಜನ, ಬಾಹುಬಲಿಯೇ ಲಕ್ಷ್ಯ

ಕೆ.ಎಸ್‌.ಸುನಿಲ್‌ Updated:

ಅಕ್ಷರ ಗಾತ್ರ : | |

ಲಕ್ಷ ಲಕ್ಷ ಜನ, ಬಾಹುಬಲಿಯೇ ಲಕ್ಷ್ಯ

ಶ್ರವಣಬೆಳಗೊಳ: ಬಾಹುಬಲಿ ದರ್ಶನಕ್ಕೆ ದೇಶದ ಮೂಲೆ ಮೂಲೆಗಳಿಂದ ಜನಸಾಗರವೇ ಹರಿದು ಬರುತ್ತಿದೆ.  ಪೊಲೀಸ್‌ ಇಲಾಖೆ ಅಂಕಿ ಅಂಶಗಳ ಪ್ರಕಾರ, ನಾಲ್ಕು ದಿನಗಳಿಂದ ಐದು ಲಕ್ಷ ಜನರು ಭೇಟಿ ನೀಡಿದ್ದಾರೆ. 

ಮಹಾಮಜ್ಜನ ನಡೆಯುತ್ತಿರುವ ಸ್ಥಳ ವಿಂಧ್ಯಗಿರಿಯಾದರೂ ಜನರು ಚಂದ್ರಗಿರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಈವರೆಗೆ ಸುಮಾರು ಒಂದು ಲಕ್ಷ ಮಂದಿ ಚಿಕ್ಕಬೆಟ್ಟದ ಬಸದಿಗಳನ್ನು ಕಣ್ತುಂಬಿಕೊಂಡಿದ್ದಾರೆ.

ಸೂರ್ಯೋದಯದ ಬಳಿಕ ಪ್ರಾರಂಭವಾದ ಭಕ್ತರ ಸರದಿ ಸಾಲು ಸೂರ್ಯಾಸ್ತದವರೆಗೂ ಕಡಿಮೆಯಾಗುತ್ತಿರಲಿಲ್ಲ.  ಗಣ್ಯಾತಿಗಣ್ಯರು,  ಕಳಶ ಖರೀದಿಸಿದವರು, ವಿದೇಶದಿಂದ ಆಗಮಿಸಿರುವ ಭಕ್ತಾದಿಗಳಿಗೆ  ಬೆಳಗ್ಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ 2.30ರ ನಂತರ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಹೀಗಾಗಿ ಪ್ರಖರ ಬಿಸಿಲನ್ನೂ ಲೆಕ್ಕಿಸದೆ ಐದು ತಾಸು ಸರದಿ ಸಾಲಿನಲ್ಲಿ ನಿಂತಿದ್ದರು.  ಬಸ್‌ ನಿಲ್ದಾಣದ ಹೊರವಲಯದಿಂದ ಆರಂಭವಾಗಿರುವ ಸರದಿ ಸಾಲು ಕೆಪಿಟಿಸಿಎಲ್‌ ಕಚೇರಿವರೆಗೂ ಕಂಡು ಬಂತು. ಬಿಸಿಲ ಝಳದಿಂದ ರಕ್ಷಣೆ ಪಡೆಯಲು ಕೊಡೆ, ಟೋಪಿ, ಚಾಪೆಗಳನ್ನೇ ತಲೆ ಮೇಲಿರಿಸಿಕೊಂಡು ನೆರಳು ಮಾಡಿಕೊಂಡರು.

ಹೆಲಿ ಟೂರಿಸಂಗೆ ಚಾಲನೆ:

ಗೊಮ್ಮಟ ನಗರಿಯಲ್ಲಿ ಪ್ರಥಮ ಬಾರಿಗೆ ಹೆಲಿ ಟೂರಿಸಂಗೆ ಚಾಲನೆ ನೀಡಲಾಯಿತು. ಬಾಹುಬಲಿ ಮಸ್ತಕಾಭಿಷೇಕ ಹಾಗೂ ವಿಂಧ್ಯಗಿರಿ ಸುತ್ತ ಎಂಟು ನಿಮಿಷ ಹೆಲಿಕಾಪ್ಟರ್‌ನಲ್ಲಿ ಸುತ್ತಾಡಿ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ‘ಬಾಹುಬಲಿ ಹೆಲಿಟೂರಿಸಂ ಸಂಸ್ಥೆ’ ಇದನ್ನು ಆಯೋಜಿಸಿದೆ. ಒಬ್ಬರಿಗೆ ₹ 2100.

ಕನ್ನಡಕದಲ್ಲಿ ಮಜ್ಜನ ವೀಕ್ಷಣೆ ಯಾವುದೋ ಮೂಲೆಯಲ್ಲಿರುವ ಜನರು ಬಾಹುಬಲಿ ಮಹಾಮಜ್ಜನವನ್ನು ತಂತ್ರಜ್ಞಾನದ ಮೂಲಕ ವೀಕ್ಷಿಸಬಹುದು.

ಮಾಯಾ–ವಿಆರ್‌ ಎಂಬ ಸಂಸ್ಥೆ ನೈಜ ವಾಸ್ತವ (ವರ್ಚ್ಯುವಲ್‌ ರಿಯಾಲಿಟಿ) ಕನ್ನಡಕಗಳನ್ನು ಹೊರ ತಂದಿದ್ದು, ಇವುಗಳ ಮೂಲಕ ಮೊದಲ ದಿನದ ಮಹಾಮಜ್ಜನವನ್ನು 40 ಸಾವಿರ ಜನ ವೀಕ್ಷಿಸಿದ್ದಾರೆ. ಧಾರ್ಮಿಕ ಕಾರ್ಯಕ್ರಮಕ್ಕೆ ಪ್ರಥಮ ಬಾರಿಗೆ ವಿಆರ್ ಕನ್ನಡಕವನ್ನು ಬಳಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ಉಮಾಶ್ರೀ ಅವರು ಕನ್ನಡಕದ ಮೂಲಕ ಬಾಹುಬಲಿ ದರ್ಶನ ಪಡೆದರು.

ತಮ್ಮ ಮೊಬೈಲ್‌ನಲ್ಲಿ 2018 ಅಫಿಷಿಯಲ್‌ ಆ್ಯಪ್‌ ಹಾಗೂ ಯೂಟ್ಯುಬ್‌ನಲ್ಲಿ ಐಜಿಎಸ್‌ ಮಾಯಾ ವಿಆರ್ ಚಾನಲ್‌ ಮೂಲಕ ಲೈವ್‌ ಸ್ಟ್ರೀಮಿಂಗ್‌ ಮಾಡುತ್ತಿದೆ. ಕನ್ನಡಕ ಬೇಕಿದ್ದವರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಫೆ. 26ರವರೆಗೆ ಮಸ್ತಕಾಭಿಷೇಕ ಘಟನಾವಳಿಗಳನ್ನು ಕನ್ನಡಕದ ಮೂಲಕ ವೀಕ್ಷಿಸಿಬಹುದು. ಸಂಪರ್ಕ ಸಂಖ್ಯೆ 9845742085.

ಐದು ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದಾಗ ಒಳ್ಳೆಯ ಅನುಭವವಾಗಿತ್ತು. ಬಾಹುಬಲಿ ಮಹಾಮಸ್ತಕಾಭಿಷೇಕ ಹೇಗಿರುತ್ತದೆ ಎಂಬ ಕುತೂಹಲ ಇತ್ತು. ಹಲವು ನಿಯತಕಾಲಿಕೆಗಳಿಗೆ ಫೋಟೊಗಳನ್ನು ನೀಡುತ್ತೇನೆ. ನಾಲ್ಕು ದಿನಗಳಿಂದ ಬಾಹುಬಲಿ ಮಜ್ಜನದ ಅದ್ಭುತ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದೇನೆ. ಮುಂದಿನ ಬಾರಿ ಬರುವಾಗ ನನ್ನ ಕುಟುಂಬದ ಸದಸ್ಯರನ್ನೂ ಕರೆತರುತ್ತೇನೆ.

  ಲಿಯೊ ಫ್ಲಾಟ್‌ಕಿನ್, ಹವ್ಯಾಸಿ ಛಾಯಾಗ್ರಾಹಕ, ಅಮೆರಿಕ

***

ಬಾಹುಬಲಿ ಮಹಾಮಸ್ತಕಾಭಿಷೇಕ ನೋಡಬೇಕೆನ್ನುವುದು ನನ್ನ ಬಹುದಿನಗಳ ಕನಸಾಗಿತ್ತು. ಅದಕ್ಕಾಗಿ, 20 ದಿನಗಳ ಭಾರತ ಪ್ರವಾಸದ ಯೋಜನೆ ರೂಪಿಸಿಕೊಂಡು ಬಂದಿದ್ದೇನೆ. ಇಲ್ಲಿ ಬಂದಿರುವ ಜನರನ್ನು ನೋಡಿ ಸಾಕಷ್ಟು ಖುಷಿಯಾಗಿದೆ. ಇಂತಹ ಅದ್ಭುತ ದೃಶ್ಯವನ್ನು ನೋಡಲು ಎರಡು ಕಣ್ಣು ಸಾಲದು. ನನ್ನ ಸಂತೋಷಕ್ಕೆ ಪಾರವೇ ಇಲ್ಲ.

-ಮೊಗಾಸೆ, ಪ್ರವಾಸಿಗ, ಫ್ರಾನ್ಸ್‌

***

ಚಿಕ್ಕವಳಿದ್ದಾಗ ಅಪ್ಪನ ಜತೆ ಬಾಹುಬಲಿ ಮಹಾಮಜ್ಜನ ನೋಡಲು ಬರುತ್ತಿದ್ದೆ. ಆಗ ಬಿದಿರು, ಸುರುಗಿ ಕಂಬಗಳಿಂದ ಅಟ್ಟಣಿಗೆ ಕಟ್ಟುತ್ತಿದ್ದರು. ಅದಕ್ಕೆ ಎರಡು ವರ್ಷ ಹಿಡಿಯುತ್ತಿತ್ತು. ಇದು ನಾನು ನೋಡುತ್ತಿರುವ 6ನೇ ಮಸ್ತಕಾಭಿಷೇಕ. ಈಗ ವಯಸ್ಸು 90. ಮುಂದೆ ಇರುತ್ತೇನೋ ಇಲ್ಲವೋ ಎಂದು ಯಾರೋ ಪುಣ್ಯಾತ್ಮರು ಪಾಸ್‌ ಕೊಟ್ಟರು. ಮೊಮ್ಮಗನ ಜತೆ ಬೆಟ್ಟಕ್ಕೆ ಬಂದಿದ್ದೇನೆ.

  ಎಚ್‌.ಎನ್‌. ಸುಂದರಮ್ಮ, ಸಾಲಿಗ್ರಾಮದ ನಿವಾಸಿ

ಪ್ರತಿಕ್ರಿಯಿಸಿ (+)