ಸೋಮವಾರ, ಡಿಸೆಂಬರ್ 9, 2019
21 °C

ನೃತ್ಯದಲ್ಲಿ ‘ಉನ್ನತ’ ಸಾಧನೆ

Published:
Updated:
ನೃತ್ಯದಲ್ಲಿ ‘ಉನ್ನತ’ ಸಾಧನೆ

ನೃತ್ಯದ ಬಗ್ಗೆ ಆಸಕ್ತಿ ಮೂಡಿದ್ದು ಹೇಗೆ?

ನನಗಾಗ ಆರು ವರ್ಷ. ದೂರದರ್ಶನದಲ್ಲಿ ನೃತ್ಯ ಕಾರ್ಯಕ್ರಮ ನೋಡುವಾಗ ಅದರ ಸೆಳೆತ ಉಂಟಾಯಿತು. ಬೇಲೂರು, ಹಳೆಬೀಡಿಗೆ ಹೋಗಿದ್ದಾಗ ಆ ಸುಪ್ತ ಆಸಕ್ತಿಗೆ ಇನ್ನಷ್ಟು ಹುರುಪು ಬಂದಿತು. ನನ್ನ ಸೋದರ ಸಂಬಂಧಿ ಭರತನಾಟ್ಯ ಕಲಿಯುತ್ತಿದ್ದಳು. ಅವಳನ್ನು ನೋಡಿ ಕನಸಿನ ದಾರಿಯನ್ನು ಸ್ಪಷ್ಟಪಡಿಸಿಕೊಂಡೆ. ನೃತ್ಯಕ್ಕೆ ಸೇರಿಸುವಂತೆ ಮನೆಯವರ ಬಳಿ ದುಂಬಾಲುಬಿದ್ದೆ. ಆದರೆ ಅವರು ಒಪ್ಪಲಿಲ್ಲ. ನಾನು ನನ್ನ ಹಟ ಬಿಡಲಿಲ್ಲ. ಉಪವಾಸ ಮಾಡಿದೆ. ಅಷ್ಟರ ಮಟ್ಟಿಗೆ ನೃತ್ಯ ನನ್ನನ್ನು ಸೆಳೆದಿತ್ತು. ನನ್ನ ಒತ್ತಾಯಕ್ಕೆ ಮಣಿಯದೆ ಮನೆಯವರಿಗೆ ವಿಧಿ ಇರಲಿಲ್ಲ.

ಕುಟುಂಬದ ಹಿನ್ನೆಲೆ...

ತಂದೆ ಎಚ್‌.ಬಿ. ರತ್ನರಾಜು ಸ್ವಂತ ಉದ್ಯಮಿ. ಅಮ್ಮ ಜಯಪದ್ಮಾ ಗೃಹಿಣಿ.  ಅಜ್ಜಿಗೆ (ಅಪ್ಪನ ತಾಯಿ) ಸಂಗೀತದ ಒಲವಿತ್ತು. ರಾತ್ರಿ ಮಲಗುವಾಗ ಸಂಗೀತದ ಆಲಾಪನೆಯನ್ನು ಕೇಳುತ್ತಲೇ ಅವರು ನಿದ್ದೆಗೆ ಜಾರುತ್ತಿದ್ದುದು. ಇದರ ಹೊರತು ಮನೆಯವರಿಗೆ ಕಲೆಯ ಹಿನ್ನೆಲೆ ಇರಲಿಲ್ಲ.

ನೃತ್ಯದ ನಂಟಿನ ಬಗ್ಗೆ ತಿಳಿಸಿ...

ವಿದ್ವತ್‌ ಮುಗಿಸುವವರೆಗೂ ಅಂಬಳೆ ರಾಜೇಶ್ವರಿ ಅವರ ಬಳಿ ನೃತ್ಯ ಕಲಿತೆ. ನಂತರ ಬೇರೆ, ಬೇರೆ ಗುರುಗಳೊಂದಿಗೆ ಕೆಲಸ ಮಾಡಿದ್ದೇನೆ. ನೃತ್ಯ ಮತ್ತು ಇಂಗ್ಲಿಷ್‌ ಸಾಹಿತ್ಯದಲ್ಲಿ ಎಂ.ಎ ಮುಗಿಸಿದ್ದೇನೆ. ಹಾಸನದಲ್ಲಿ ರತ್ನಕಲಾ ಪದ್ಮಕುಟೀರ ಟ್ರಸ್ಟ್‌, ನಾಟ್ಯಕಲಾ ನಿವಾಸ್‌ ಎಂಬ ನೃತ್ಯ ಶಾಲೆಯನ್ನು ಪ್ರಾರಂಭಿಸಿದ್ದೇನೆ. 

ನೃತ್ಯದ ಜೊತೆಗೆ ಸಮಾಜಮುಖಿ ಕೆಲಸ ಮಾಡಲು ಪ್ರೇರಣೆ?

ಚಿಕ್ಕ ವಯಸ್ಸಿನಿಂದಲೂ ಸಮಾಜಕ್ಕೆ ಒಳಿತು ಮಾಡಬೇಕು ಎಂಬ ಹಂಬಲ ನನಗೆ. ಅದಕ್ಕಾಗಿ ನನ್ನ ಪ್ರೀತಿಯ ನೃತ್ಯವನ್ನು ಬಳಸಿಕೊಂಡೆ. ನನ್ನ ಸ್ನೇಹಿತ ದೇಸಾಯಿ ವಲಸೆ ಹಕ್ಕಿಗಳ ಬಗ್ಗೆ ಛಾಯಾಚಿತ್ರ ತೆಗೆದು, ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ನಾನು ಅವರೊಂದಿಗೆ ಕೈಜೋಡಿಸಿದೆ. ಜಾಗೃತಿ ಕಾರ್ಯಕ್ರಮಗಳಲ್ಲಿ ನೃತ್ಯ, ಸಂಗೀತ ಇದ್ದಾಗ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಹಾಸನದಲ್ಲಿರುವ ಕೆರೆಗಳ (ಬತ್ತಿ ಹೋದ ಕೆರೆಗಳೂ ಸೇರಿ) ಎದುರಲ್ಲಿ ನೃತ್ಯ ಪ್ರದರ್ಶನ ನೀಡಿ, ಅಲ್ಲಿಗೆ ಜನರನ್ನು ಕರೆಸಿ ನೀರನ್ನು ಉಳಿಸಬೇಕಾದ ಅಗತ್ಯವನ್ನು ನೃತ್ಯದ ಮೂಲಕ ತೋರಿಸಿಕೊಡುವ ಕೆಲಸ ಮಾಡುತ್ತಿದ್ದೇವೆ. ವಿಡಿಯೊ ಪ್ರದರ್ಶನ, ಸಾಕ್ಷ್ಯಚಿತ್ರಗಳ ಮೂಲಕವೂ ಜನರಲ್ಲಿ ಕೆರೆ ಉಳಿಸುವ ಕುರಿತು ಅರಿವು ಬೆಳೆಸುತ್ತಿದ್ದೇವೆ.

ಎಲ್ಲೆಲ್ಲಿ ಈ ಯೋಜನೆ ಹಮ್ಮಿಕೊಂಡಿದ್ದೀರಿ?

ಹಾಸನದಲ್ಲಿ ಹಿಂದೆ 108 ಕೆರೆಗಳಿದ್ದುವಂತೆ. ಈಗ ಐದು ಕೆರೆಗಳಿವೆ. ಅದರಲ್ಲಿ ನಾಲ್ಕು ಕೆರೆಗಳು ಬತ್ತಿವೆ. ದೊಡ್ಡವರನ್ನು ಬದಲಿಸುವುದು ಕಷ್ಟ. ಹಾಗಾಗಿ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಅರಿವು ಮೂಡಿಸುತ್ತೇವೆ. ಹಾಸನವನ್ನು ಮಾದರಿಯಾಗಿ ಮಾಡಿದ ನಂತರ ಬೇರೆ ಊರುಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸುವ ಯೋಜನೆ ಇದೆ. ನಮ್ಮ ಊರಿನಲ್ಲಿ ಯಶಸ್ಸು ಗಳಿಸಿದರೆ ಬೇರೆ ಪ್ರದೇಶಗಳಲ್ಲಿಯೂ ನಮಗೆ ಪ್ರೋತ್ಸಾಹ ದೊರಕುತ್ತದೆ.

ಎಲ್ಲೆಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡಿದ್ದೀರಿ?

ರಾಜಸ್ತಾನ, ಜಮ್ಮು ಕಾಶ್ಮೀರ ಮತ್ತು ಈಶಾನ್ಯ ಪ್ರಾಂತ್ಯ ಬಿಟ್ಟು ರಾಜ್ಯದ ಎಲ್ಲೆಡೆ ಪ್ರದರ್ಶನ ನೀಡಿದ್ದೇನೆ. ಅಮೆರಿಕ, ರಷ್ಯಾ, ಥಾಯ್ಲೆಂಡ್‌, ಮಲೇಷ್ಯಾ, ಯೂರೋಪ್‌ ಸೇರಿದಂತೆ ಹಲವೆಡೆ ನೃತ್ಯ ಪ್ರದರ್ಶನಗಳ ಜೊತೆಗೆ ಕಾರ್ಯಾಗಾರ ನಡೆಸಿದ್ದೇನೆ.

ನಮ್ಮ ದೇಶ ಮತ್ತು ಹೊರ ದೇಶಗಳಲ್ಲಿ ನೃತ್ಯ ಪ್ರದರ್ಶನಕ್ಕಿರುವ ವ್ಯತ್ಯಾಸವೇನು? 

ನಮ್ಮ ಮನೆಯ ಅಂಗಳದಲ್ಲಿಯೇ ಮಾವಿನ ಹಣ್ಣು ಇದ್ದರೆ, ಅದನ್ನು ತಿನ್ನುವ ಉತ್ಸಾಹ ಅಷ್ಟಾಗಿ ಇರುವುದಿಲ್ಲ. ಇದನ್ನೇ ನೃತ್ಯಕ್ಕೂ ಅನ್ವಯಿಸಬಹುದು. ವಿದೇಶಿಗರು ಶಿಸ್ತಿಗೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಾರೆ. ಕಾರ್ಯಕ್ರಮದ ರೂಪುರೇಷೆ, ಅದನ್ನು ಸಜ್ಜುಗೊಳಿಸುವುದು ವ್ಯವಸ್ಥಿತವಾಗಿರುತ್ತದೆ. ಸಮಯ, ಬದ್ಧತೆಗೆ ಆದ್ಯತೆ ನೀಡುತ್ತಾರೆ. ಇಂತಹದ್ದೇ ಸಮಯಪಾಲನೆ ಹಾಗು ಶಿಸ್ತನ್ನು ನಮ್ಮ ನೃತ್ಯಶಾಲೆಯಲ್ಲಿಯೂ ಅಳವಡಿಸಿಕೊಂಡಿದ್ದೇವೆ.

26 ವರ್ಷಗಳ ಅನುಭವಪಾಠ ಏನು?

ಕಲಿಕೆಯ ಅನುಭವ ಜೀವನದ ಹಲವು ಆಯಾಮ, ಏರು ಪೇರುಗಳನ್ನು ಅರ್ಥಮಾಡಿಸಿದೆ. ತಾಳ್ಮೆ ಕಲಿಸಿದೆ. ನೃತ್ಯ ಪ್ರದರ್ಶನಕ್ಕಾಗಿ ಹಲವು ಪ್ರದೇಶಗಳಿಗೆ ಹೋಗುತ್ತಲೇ ಇರುತ್ತೇನೆ. ಹೀಗಾಗಿ ವಿಭಿನ್ನ ಸಂಸ್ಕೃತಿಯ ಜನರ ಸ್ವಭಾವವನ್ನು ಅರಿಯುವುದು ಸಾಧ್ಯವಾಗಿದೆ. ಜೀವನದ ಮೌಲ್ಯವನ್ನು ನೃತ್ಯ ಕಲಿಸಿದೆ.

ದಿನಚರಿ ಹೇಗಿರುತ್ತದೆ?

ದಿನಕ್ಕೆ ಮೂರರಿಂದ ನಾಲ್ಕು ಗಂಟೆ ಅಭ್ಯಾಸ ಮಾಡುತ್ತೇನೆ. ಎಷ್ಟು ಹೊತ್ತು ಅಭ್ಯಾಸ ಮಾಡುತ್ತೇವೊ ಅದರ ಪರಿಪಕ್ವತೆ ರಂಗದಲ್ಲಿ ಕಾಣುತ್ತದೆ. ದೇಹದ ಬಾಗು, ಬಳಕುವಿಕೆಯ ಜೊತೆಗೆ ಅದರ ಬಲವನ್ನು ಉತ್ತಮ ಪಡಿಸಬೇಕು. ಹದಿನೆಂಟು ವರ್ಷದಿಂದ ಯೋಗ ಮಾಡುತ್ತಿದ್ದೇನೆ. ದೇಹದ ಮಾಸಖಂಡಗಳ ಬಲಕ್ಕಾಗಿ ಕೋರ್‌ ವರ್ಕೌಟ್‌ ಮಾಡುತ್ತೇನೆ. ಇದಕ್ಕೆ ಪ್ರತಿದಿನ ಎರಡು ಗಂಟೆ ಮೀಸಲು. ಓದುವ ಹವ್ಯಾಸ ಇದೆ. ಬೇರೆ, ಬೇರೆ  ಭಾಷೆಯ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳುತ್ತೇನೆ. ನೃತ್ಯಗಾರನೊಬ್ಬ ಸಾಹಿತ್ಯ, ಸಂಗೀತ, ತಾಳದ ಬಗ್ಗೆ ಅರಿವು ಬೆಳೆಸಿಕೊಳ್ಳಲೇಬೇಕು. ದಿನದ ಆರರಿಂದ ಏಳು ಗಂಟೆ ವಿದ್ಯಾರ್ಜನೆಗೆ ಮೀಸಲಿಡುತ್ತೇನೆ.

ವೃತ್ತಿಯಲ್ಲಿ ಖುಷಿ ಕೊಟ್ಟ ಸಂದರ್ಭ ಯಾವುದು?

ನಾನು ಪ್ರತಿ ಕ್ಷಣವನ್ನು ಖುಷಿಯಿಂದ ಅನುಭವಿಸುತ್ತೇನೆ. ಮಕ್ಕಳಿಗೆ ನೃತ್ಯ ಕಲಿಸುವ ಸಂದರ್ಭ ಹೆಚ್ಚು ಪ್ರಿಯವಾಗುತ್ತದೆ. ನಾನು ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದರೂ, ಇದುವರೆಗೂ ಪರಿಪೂರ್ಣತೆ ದೊರಕಿಲ್ಲ. ಪ್ರತಿಬಾರಿಯೂ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎನಿಸುತ್ತದೆ. ಸಾರ್ಥಕತೆ ಸಿಕ್ಕ ಕ್ಷಣ ನಾನು ನೃತ್ಯ ಮಾಡುವುದನ್ನು ನಿಲ್ಲಿಸಬಹುದು ಅನಿಸುತ್ತದೆ.‌

**

ಉಚಿತ ತರಬೇತಿ, ಕಲೆಗಾಗಿ ಗ್ರಂಥಾಲಯ ಯೋಜನೆ

ನಾನು ನೃತ್ಯ ಕೇಂದ್ರ ಪ್ರಾರಂಭಿಸಿದ ಹೊಸತರಲ್ಲಿ ಹಲವರು ಶುಲ್ಕ ನೀಡಲು ಸಾಧ್ಯವಾಗದ ಬಗ್ಗೆ ನನ್ನಲ್ಲಿ ಹೇಳಿಕೊಂಡಿದ್ದರು. ಹಾಗಾಗಿ ಕಲಿಯುವ ಆಸಕ್ತಿಯ ಜೊತೆಗೆ ಪ್ರತಿಭೆಯಿರುವ ಮಕ್ಕಳಿಗೆ ವಾರದಲ್ಲಿ ಎರಡು ದಿನ ಉಚಿತವಾಗಿ ಕಲಿಸುತ್ತಿದ್ದೇನೆ. ನನ್ನ ನಾಟ್ಯಶಾಲೆಯ ಶೇ 30ರಷ್ಟು ಮಕ್ಕಳು ಉಚಿತವಾಗಿ ಅಭ್ಯಾಸ ಮಾಡುತ್ತಿದ್ದಾರೆ. ಅದರ ಜೊತೆಗೆ ಮಕ್ಕಳಿಗೆ ‘ವಾಕ್‌ ಅಂಡ್‌ ಟಾಕ್‌’ ಕಾರ್ಯಕ್ರಮ ನಡೆಸುತ್ತೇವೆ. ಬೇರೆ, ಬೇರೆ ಕ್ಷೇತ್ರಗಳ ವಿದ್ವಾಂಸರನ್ನು ಕರೆಸಿ ಮಕ್ಕಳಿಗೆ ಪ್ರಯೋಜನವಾಗುವ ಕಾರ್ಯಕ್ರಮ ಆಯೋಜಿಸುತ್ತೇವೆ. ಮಕ್ಕಳಲ್ಲಿ ಸಕಾರಾತ್ಮಕ ನಡೆ ಬೆಳೆಸುವ ಪ್ರಯತ್ನ ಮಾಡುತ್ತಿದ್ದೇವೆ.

ದೃಶ್ಯ ಮತ್ತು ಪ್ರದರ್ಶಕ ಕಲೆ, ತತ್ವಜ್ಞಾನ, ಇತಿಹಾಸ, ಶಿಲ್ಪಕಲೆ, ಚಿತ್ರಕಲೆ, ಹಿಸ್ಟರಿ ಆಫ್‌ ಕಲ್ಚರ್‌ ಸೇರಿದಂತೆ ಇನ್ನು ಹಲವು ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು ಈ ಗ್ರಂಥಾಲಯದಲ್ಲಿ ಇರಲಿದೆ. ಈ ಗ್ರಂಥಾಲಯ ಪರಿಪೂರ್ಣವಾಗಿ ತಯಾರಾಗಿಲ್ಲ. ಜನರ ಸಹಾಯ ಕೇಳಿದ್ದೇನೆ. ವಿದೇಶದಿಂದ ಸಾಕಷ್ಟು ಪುಸ್ತಕಗಳು ದಾನವಾಗಿ ಬಂದಿವೆ.

ಪ್ರತಿಕ್ರಿಯಿಸಿ (+)