ಭಾನುವಾರ, ಡಿಸೆಂಬರ್ 8, 2019
24 °C

ಬಬ್ಲಿ ಹುಡುಗಿ ಸಿನಿಮಾ ಕಥಾನಕ

Published:
Updated:
ಬಬ್ಲಿ ಹುಡುಗಿ ಸಿನಿಮಾ ಕಥಾನಕ

ನಮಸ್ಕಾರ ಮೇಡಂ...ನಿಮ್ಮ ಪರಿಚಯ...

ನಮಸ್ತೇ. ನನ್ನ ಹೆಸರು ಸುಕೃತಾ (ಅಂಜನಾ) ದೇಶಪಾಂಡೆ. ಅಪ್ಪ ಧಾರವಾಡದವರು. ಅಮ್ಮ ಬೆಂಗಳೂರಿನವರು. ಹುಟ್ಟಿ, ಬೆಳೆದಿದ್ದು ಬೆಂಗಳೂರಲ್ಲೇ. ಬಿ.ಕಾಂ ಓದಿದ್ದೀನಿ. ನಾನು ವೃತ್ತಿಯಿಂದ ಬ್ಯೂಟೀಷಿಯನ್, ಆದರೆ, ಸಿನಿಮಾ ನನ್ನ ಪ್ರವೃತ್ತಿ. ನಾನು ತುಂಬಾ ಚೂಟಿ, ಒಂಚೂರು ದಪ್ಪ ಅಂತ ಜನ ಅಂತಾರೆ. ಆದರೆ ನಂಗೇನೂ ಬೇಜಾರಿಲ್ಲ.

ಬೆಳ್ಳಿತೆರೆಗೆ ನಿಮ್ಮ ಆಗಮನದ ಕನಸು ಈಡೇರಿದ್ದು ಯಾವಾಗ?

ನಾನು ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದಾಗ, ನಿರೂಪಣೆ ಮಾಡುತ್ತಿದ್ದೆ. ಆಮೇಲೆ, ರಾಜ್ ಮ್ಯೂಸಿಕ್ ಮತ್ತು ಉದಯ ಮ್ಯೂಸಿಕ್ ಅಲ್ಲಿ ಕೆಲಸ ಮಾಡಿದೆ. ಅಲ್ಲಿಂದಾಚೆಗೆ ತುಂಬಾ ಆಡಿಷನ್‌ಗಳಲ್ಲಿ ಕಾಣಿಸಿಕೊಂಡೆ. ನನಗೆ ಸಿನಿಮಾ ಕ್ಷೇತ್ರದಲ್ಲಿ ಯಾರ ಪರಿಚಯವೂ ಇರಲಿಲ್ಲ. ಆದರೆ, ಅದೃಷ್ಟ ಖುಲಾಯಿಸಿತು. ಸದ್ಯಕ್ಕೆ ಬೆಳ್ಳಿ ಪರದೆಯ ಮೇಲೆ ಬ್ಯುಸಿಯಾಗಿದ್ದೇನೆ.

ಕಿರುತೆರೆಯಲ್ಲಿ ಯಾವ ಯಾವ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದೀರಿ?

ನಾನು ಜೀ ಕನ್ನಡದಲ್ಲಿ ಬರುತ್ತಿದ್ದ ‘ರಾಜಕುಮಾರಿ’ ಧಾರಾವಾಹಿಯಲ್ಲಿ ಮೊದಲು ನಟಿಸಿದ್ದು. ನಂತರ ‘ನೂರೆಂಟು ಸುಳ್ಳು’, ‘ಚಲಿಸುವ ಮೋಡ’ಗಳಲ್ಲಿ ಅಭಿನಯಿಸಿದ್ದೇನೆ.

ನೀವು ಅಭಿನಯಿಸಿರುವ ಸಿನಿಮಾಗಳು?

ಕಿರುತೆರೆಯ ಜೊತೆ ಜೊತೆಗೆ ನಾನು ಅಭಿನಯಿಸಿದ ಮೊದಲ ಸಿನಿಮಾ ಯತಿರಾಜ್ ಮತ್ತು ನಾಗಶೇಖರ್ ಅವರ ‘ತರ್‍ಲೇ ನನ್ ಮಕ್ಳು’. ಅದಾದ ಮೇಲೆ ‘ನೇನು ನಾ ಫ್ರೆಂಡ್ಸ್’ ತೆಲುಗು ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡೆ. ಈ ಎರಡು ಸಿನಿಮಾಗಳ ನಂತರ ನನಗೆ ‘ಪ್ರೀತಿಯ ರಾಯಭಾರಿ’ ಮಾಡುವ ಅವಕಾಶ ಸಿಕ್ಕಿತು.

ಪ್ರೀತಿಯ ರಾಯಭಾರಿಯ ಬಗ್ಗೆ ನಿಮ್ಮ ಅನಿಸಿಕೆ...

ನಾನು ಯಾವಾಗಲೂ ಹೊಸ ಪಾತ್ರಗಳಿಗೆ ಒಡ್ಡಿಕೊಳ್ಳಲು ಇಷ್ಟ ಪಡ್ತೀನಿ. ಈ ಸಿನಿಮಾದಲ್ಲಿ ನಾನು ಹಳ್ಳಿ ಹುಡುಗಿಯ ನಾಯಕಿ ಪಾತ್ರಕ್ಕೆ ಜೀವ ತುಂಬಿದ್ದೀನಿ. ಇದರಲ್ಲಿ ನನ್ನದು ಬೋಲ್ಡ್ ರೋಲ್, ಆದರೆ ಅದರಲ್ಲಿ ಅಶ್ಲೀಲತೆ ಇಲ್ಲ. ಸಂಪೂರ್ಣ ಹಳ್ಳಿಯ ಸೊಗಡಿನಲ್ಲಿ ಸಿನಿಮಾ ಮೂಡಿಬಂದಿದೆ. ಇದಾಗಲೇ ‘ಅಮ್ಮೀ...ಅಮ್ಮೀ...ಒಂಚೂರು ನೋಡಮ್ಮೀ...’ ಎನ್ನುವ ಹಾಡು ಸೂಪರ್ ಹಿಟ್ ಆಗಿದೆ.

ನಿಮ್ಮ ಹವ್ಯಾಸಗಳು...

ನಾನು ಸ್ವಿಮ್ಮಿಂಗ್ ಚಾಂಪಿಯನ್. ಈಜಾಡೋದು ಅಂದ್ರೆ ಪಂಚ ಪ್ರಾಣ. ಅದರ ಜೊತೆಗೆ ಅಡುಗೆ ಮಾಡೋದು ಅಂದರೆ ತುಂಬಾ ಇಷ್ಟ.

ಕನ್ನಡದ ಜೊತೆಗೆ ಮತ್ಯಾವ ಭಾಷೆಯ ಸಿನಿಮಾ ಮಾಡೋಕೆ ಇಷ್ಟ?

ನನಗೆ ಭಾಷಾ ಸಮಸ್ಯೆ ಇಲ್ಲ. ಈಗಾಗಲೇ ಕನ್ನಡದ ಜೊತೆಗೆ ತೆಲುಗು ಸಿನಿಮಾ ಮಾಡಿದ್ದೀನಿ. ಆದರೆ, ನನಗೆ ನನ್ನ ಆಡುಭಾಷೆ ಅಂದರೆ, ಪಕ್ಕಾ ಹುಬ್ಬಳ್ಳಿ-ಧಾರವಾಡದ ಭಾಷೆಯಲ್ಲಿ ಒಂದು ಸಿನಿಮಾ ಮಾಡುವ ಹಂಬಲವಿದೆ. 

ಹುಬ್ಬಳ್ಳಿ-ಧಾರವಾಡದಲ್ಲಿ ನಿಮಗೆ ಇಷ್ಟವಾಗುವುದು?

(ಜೋರಾಗಿ ನಗು) ನನಗೆ ಇಲ್ಲಿನ ಖಡಕ್ ರೊಟ್ಟಿ ಊಟ ಅಂದ್ರೆ ಬಾಯಲ್ಲಿ ನೀರು ಬರುತ್ತೆ. ಅಪ್ಪನ ಜೊತೆ ಕುಳಿತುಕೊಂಡು ಅವಾಗಾವಾಗ ರೊಟ್ಟಿ ಊಟ ಮಾಡ್ತೀನಿ. ಇಲ್ಲಿನ ಜನ, ಅವರ ಮಾತು ಎಲ್ಲವೂ ರೋಮಾಂಚನ. ಮುಂದೊಂದು ದಿನ ಹುಬ್ಬಳ್ಳಿ ಭಾಷೆ ಸಿನಿಮಾ ಮಾಡೋ ಕನಸಿದೆ.

ಯಾವ ರೀತಿಯ ಪಾತ್ರ ಒಪ್ಪಿಕೊಳ್ತೀರಾ?

ನನಗೆ ಪ್ರಯೋಗಗಳಿಗೆ ಒಡ್ಡಿಕೊಳ್ಳುವುದೆಂದರೆ ಇಷ್ಟ. ಸಿನಿಮಾಗಳಲ್ಲಿ ಗ್ಲಾಮರ್ ಜಾಸ್ತಿ ಆಗುತ್ತಾ ಹೋದಂತೆ ಪಾತ್ರಗಳಿಗೆ ಜೀವ ತುಂಬೋದು ಕಷ್ಟ ಆಗ್ತಿದೆ. ಅದಕ್ಕಾಗಿ ನಾನು ಗ್ಲಾಮರ್ ಪಾತ್ರಗಳಿಗಿಂತ ವಿಷಯಾಧಾರಿತ ಸಿನಿಮಾಕ್ಕೆ ಪ್ರಾಶಸ್ತ್ಯ ಕೊಡ್ತೀನಿ.

ಯುವತಿಯರಿಗೆ ನಿಮ್ಮ ಸಲಹೆ?

ಜೀವನದಲ್ಲಿ ಏನೇ ಆದ್ರೂ ಎದೆಗುಂದದಿರಿ. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಇದ್ದೇ ಇರುತ್ತೆ. ಯಾವುದಕ್ಕೂ ಭಯ ಪಡ್ಬೇಡಿ. ಛಲ ಯಾವತ್ತೂ ಬಿಡ್ಬೇಡಿ.⇒v

ಪ್ರತಿಕ್ರಿಯಿಸಿ (+)