ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ ಸ್ವರೂಪದ ಠೇವಣಿ ಯೋಜನೆ ತಡೆಗೆ ಮಸೂದೆ

Last Updated 20 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಿಯಂತ್ರಣಕ್ಕೆ ಒಳಪಡದ ಠೇವಣಿ ಯೋಜನೆಗಳ ಮೂಲಕ ಹಣ ಸಂಗ್ರಹಿಸುವವರನ್ನು ಶಿಕ್ಷೆಗೆ ಗುರಿಪಡಿಸಿ ವಂಚನೆ ಯೋಜನೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕಠಿಣ ಕಾಯ್ದೆ ರೂಪಿಸಲು ಮುಂದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮಂಗಳವಾರ ಇಲ್ಲಿ ನಡೆದ ಸಚಿವ ಸಂಪುಟ ಸಭೆಯು, ‘ಅನಿಯಂತ್ರಿತ ಠೇವಣಿ  ಯೋಜನೆಗಳ ಮಸೂದೆ–2018’ಯನ್ನು ಸಂಸತ್ತಿನಲ್ಲಿ ಮಂಡಿಸಲು ಅನುಮೋದನೆ ನೀಡಿತು.

ಕಾನೂನುಬಾಹಿರ ಠೇವಣಿ ಯೋಜನೆಗಳ ಹಾವಳಿ ನಿಯಂತ್ರಿಸುವುದು ಈ ಮಸೂದೆಯ ಉದ್ದೇಶವಾಗಿದೆ. ಇಂತಹ ಯೋಜನೆಗಳನ್ನು ನಿರ್ವಹಿಸುತ್ತಿರುವ ಸಂಸ್ಥೆಗಳು ಮತ್ತು ಕಂಪನಿಗಳು ಸದ್ಯಕ್ಕೆ ಇರುವ ನಿಯಂತ್ರಣ ಕ್ರಮಗಳಲ್ಲಿ ಇರುವ ದೋಷಗಳನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿವೆ.

ಕಠಿಣ ಸ್ವರೂಪದ ಆಡಳಿತಾತ್ಮಕ ಕ್ರಮಗಳು ಇಲ್ಲದಿರುವ ಕಾರಣಕ್ಕೆ, ಬಡವರು ಮತ್ತು ಸುಲಭವಾಗಿ ಮೋಸ ಹೋಗುವವರ ಉಳಿತಾಯದ ಹಣಕ್ಕೆ ಆಕರ್ಷಕ ಬಡ್ಡಿ ದರದ ಆಮಿಷ ಒಡ್ಡಿ ನಿರಂತರವಾಗಿ ವಂಚಿಸಲಾಗುತ್ತಿದೆ. ಇಂತಹ ವಂಚನೆಯ ಯೋಜನೆಗಳಿಗೆ ಕಡಿವಾಣ ಹಾಕುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ.

ಮಸೂದೆಯು ಮೂರು ಬಗೆಯ ಅಪರಾಧಗಳಿಗೆ ಸಂಬಂಧಿಸಿದೆ. ನಿಯಂತ್ರಣಕ್ಕೆ ಒಳಪಡದ ಠೇವಣಿ ಯೋಜನೆಯ ನಿರ್ವಹಣೆ, ನಿಯಂತ್ರಿತ ಠೇವಣಿ ಯೋಜನೆಯಲ್ಲಿ ವಂಚನೆ ಮತ್ತು ನಿಯಂತ್ರಣಕ್ಕೆ ಒಳಪಡದ ಠೇವಣಿ ಯೋಜನೆಗಳಲ್ಲಿ ವಂಚನೆ ಉದ್ದೇಶದ ಪ್ರಲೋಭನೆ ಒಡ್ಡುವುದನ್ನು ಅಪರಾಧ ಎಂದು ಪರಿಗಣಿಸಲು ಉದ್ದೇಶಿಸಲಾಗಿದೆ.

ಈ ನಿಯಮಗಳನ್ನು ಪಾಲಿಸದ ಠೇವಣಿ ಯೋಜನೆಗಳ ನಿರ್ವಾಹಕರಿಗೆ ದಂಡ ಮತ್ತು ಕಠಿಣ ಶಿಕ್ಷೆ ವಿಧಿಸಲು ಮಸೂದೆ ಅವಕಾಶ ಕಲ್ಪಿಸಿಕೊಡಲಿದೆ. ವಂಚನೆ ಎಸಗಿದವರ ಆಸ್ತಿ ವಶಪಡಿಸಿಕೊಂಡು ಠೇವಣಿದಾರರಿಗೆ ಮರಳಿಸಲು ಕಾಲಮಿತಿ ವಿಧಿಸಲಾಗಿದೆ. ಠೇವಣಿ ಸಂಗ್ರಹ ಯೋಜನೆಗಳ ಕೇಂದ್ರೀಕೃತ ಸಮಗ್ರ ಮಾಹಿತಿಯು ಆನ್‌ಲೈನ್‌ನಲ್ಲಿ ಲಭ್ಯ ಇರುವಂತೆ ನೋಡಿಕೊಳ್ಳಲು ಉದ್ದೇಶಿಸಲಾಗಿದೆ.

ಚಿಟ್‌ಫಂಡ್‌ ಕಾಯ್ದೆಗೆ ತಿದ್ದುಪಡಿ

ಚಿಟ್‌ಫಂಡ್‌ ವಹಿವಾಟು ವ್ಯವಸ್ಥಿತ ಬೆಳವಣಿಗೆ ಕಾಣಲು ನೆರವಾಗುವ ಮತ್ತು ಹೂಡಿಕೆದಾರರಿಗೆ ಹೊಸ ಹಣಕಾಸು ಉತ್ಪನ್ನಗಳನ್ನು ಒದಗಿಸುವ ತಿದ್ದುಪಡಿಗಳನ್ನು ಒಳಗೊಂಡ ‘ಚಿಟ್‌ಫಂಡ್‌ (ತಿದ್ದುಪಡಿ) ಮಸೂದೆ –2018’ಗೆ ಸಂಪುಟವು ಅನುಮತಿ ನೀಡಿದೆ.

ಈ ತಿದ್ದುಪಡಿ ಮಸೂದೆ ಜಾರಿಗೆ ಬರುವುದರಿಂದ ಈ ಉದ್ದಿಮೆ ಎದುರಿಸುತ್ತಿರುವ ಲೋಪದೋಷಗಳನ್ನು ನಿವಾರಿಸಲು ಸಾಧ್ಯವಾಗಲಿದೆ. ಈ ಉದ್ದೇಶಕ್ಕೆ ಚಿಟ್‌ಫಂಡ್‌ ಕಾಯ್ದೆ 1982ಕ್ಕೆ ತಿದ್ದುಪಡಿ ತರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT