ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರ ನೇಮಕ ಕೇಂದ್ರ ಈ ಜೈಲು

ಜಮ್ಮು ಮತ್ತು ಕಾಶ್ಮೀರ ಸಿಐಡಿ ವರದಿಯಲ್ಲಿ ಉಲ್ಲೇಖ
Last Updated 20 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಶ್ರೀನಗರ: ಇಲ್ಲಿನ ಕೇಂದ್ರ ಕಾರಾಗೃಹವು ಉಗ್ರರ ನೇಮಕಾತಿ ಕೇಂದ್ರವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಸಿಐಡಿ ವರದಿ ಹೇಳಿದೆ.

ಜೈಲುವಾಸಿಗಳು ತಮ್ಮಲ್ಲೇ ಒಂದು ಪರ್ಯಾಯ ಆಡಳಿತವನ್ನು ರಚಿಸಿಕೊಂಡಿದ್ದಾರೆ. ಈ ಬಗ್ಗೆ ಜೈಲು ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ಸ್ಥಳೀಯ ಪೊಲೀಸರು ಮೌನ ವಹಿಸಿದ್ದಾರೆ ಎಂದು ವರದಿ ತಿಳಿಸಿದೆ.

ಈ ಕಾರಾಗೃಹ ಎಷ್ಟು ಮಹತ್ವ ಪಡೆದಿದೆ ಎಂದರೆ, ‘ಹೊಸ ಉಗ್ರನೊಬ್ಬನ ನೇಮಕಾತಿಯಾಗಬೇಕಾದರೆ ಜೈಲಿನ ಒಳಗಿನಿಂದ ಅನುಮತಿ ಸಿಗಬೇಕು’ ಎಂದು ನಂಬಲರ್ಹ ಮೂಲಗಳ ಹೇಳಿಕೆಗಳನ್ನು ಆಧರಿಸಿ ವರದಿ ಇದನ್ನು ಉಲ್ಲೇಖಿಸಿದೆ.

ರಾಜ್ಯದ ಅಪರಾಧ ತನಿಖಾ ವಿಭಾಗದ ಐಜಿಪಿ ಎ.ಜಿ. ಮಿರ್ ಅವರು ಸಿದ್ಧಪಡಿಸಿರುವ ಈ ವರದಿಯನ್ನು ಡಿಜಿಪಿ ಎಸ್.ಪಿ ವೇದ್ ಅವರು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಕಳೆದ ವರ್ಷ ಕಳುಹಿಸಿದ್ದರು.

ಉಗ್ರರ ನೇಮಕಾತಿ ಪ್ರಕ್ರಿಯೆ ನಡೆಸಲು ಆರು ತಿಂಗಳ ಅವಧಿಗೆ ಕೈದಿಗಳ ಪೈಕಿ ಒಬ್ಬಾತನನ್ನು ಮುಖ್ಯಸ್ಥನನ್ನಾಗಿ (ಅಮೀರ್ ಎ–ಜಿಂದಾನ್‌) ನೇಮಿಸಲಾಗುತ್ತದೆ. ನೇಮಕಾತಿಗಳಿಗೆ ಜೈಲಿನೊಳಗೆ ಅನುಮತಿ ನೀಡುತ್ತಿರುವವರು ಯಾರು ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ ಎಂದು ವರದಿ ಹೇಳಿದೆ. 

ವರದಿ ಬಗ್ಗೆ ಪ್ರತಿಕ್ರಿಯಿಸಿರುವ ಕಾರಾಗೃಹದ ಮಾಜಿ ಡಿಜಿಪಿ ಎಸ್.ಕೆ ಮಿಶ್ರಾ ಅವರು, ಈ ವಿಷಯದ ಬಗ್ಗೆ ಮೊದಲೇ ಬೆಳಕು ಚೆಲ್ಲಿದ್ದೆ ಎಂದಿದ್ದಾರೆ. ಜೈಲಿನಲ್ಲಿ ಸಂಪೂರ್ಣ ಶೋಧ ನಡೆಸುವಂತೆ ಮಾಜಿ ಐಜಿಪಿ ಮುನೀರ್ ಖಾನ್ ಮತ್ತು ಡಿಐಜಿ ಅವರಿಗೆ ಹಲವು ಬಾರಿ ಮನವಿ ಮಾಡಿದ್ದೆ. ಆದರೆ ಅದು ಆಗಲಿಲ್ಲ ಎಂದಿದ್ದಾರೆ.

ಸದ್ಯ ಜಮ್ಮು–ಕಾಶ್ಮೀರ ಪೊಲೀಸ್ ವಸತಿ ನಿಗಮದ ಮುಖ್ಯಸ್ಥರಾಗಿರುವ ಮಿಶ್ರಾ, ‘ಜೈಲಿನಲ್ಲಿರುವ ತೀವ್ರಗಾಮಿಗಳು ಹಾಗೂ ಅವರ ಬಗ್ಗೆ ಸಹಾನುಭೂತಿ ಇರುವವರನ್ನು ರಾಜ್ಯದಿಂದ ಹೊರಗೆ ಸ್ಥಳಾಂತರಿಸಲು ಯತ್ನಿಸಿದರೂ, ವಿವಿಧ ಕೋರ್ಟ್‌ಗಳ ಕೆಲವು ನಿರ್ದೇಶನಗಳು ಇದಕ್ಕೆ ಅವಕಾಶ ನೀಡುತ್ತಿಲ್ಲ’ ಎಂದಿದ್ದಾರೆ.

ರಾಜ್ಯದಲ್ಲಿ ರಾಜಕೀಯ ಹಾಗೂ ಭಯೋತ್ಪಾದಕ ಸಂಬಂಧಿ ಬೆಳವಣಿಗೆಗಳ ಮೇಲೆ ನಿಗಾ ಇಡುವ ಅಧಿಕಾರವನ್ನು ಸಿಐಡಿ ಹೊಂದಿದೆ.

‘ಸಿಬ್ಬಂದಿಯನ್ನೇ ಬೆದರಿಸುವ ಕೈದಿಗಳು’

‘300 ಜೈಲುವಾಸಿಗಳನ್ನು ಕಾಯಲು 20 ಸಿಬ್ಬಂದಿ ಇದ್ದರೆ ಸಾಲದು. 150 ಮಂದಿಯನ್ನಾದರೂ ಹೆಚ್ಚುವರಿಯಾಗಿ ನಿಯೋಜಿಸಬೇಕು’ ಎಂದು ಮಾಜಿ ಡಿಜಿಪಿ ಎಸ್.ಕೆ ಮಿಶ್ರಾ ಹೇಳಿದ್ದಾರೆ.

ಕುಖ್ಯಾತ ಉಗ್ರರನ್ನು ಬಂಧಿಸಿಟ್ಟಿರುವ ಕಾರಾಗೃಹವು ನಗರದ ಕೇಂದ್ರ ಭಾಗದಲ್ಲಿದ್ದು, ಸ್ಥಳೀಯರ ಜೊತೆ ಅವರು ನಂಟು ಹೊಂದಿದ್ದಾರೆ. ಜೈಲು ಸಿಬ್ಬಂದಿಗೂ ಅವರು ಬೆದರಿಕೆ ಹಾಕುತ್ತಾರೆ ಎಂದು ಮಿಶ್ರಾ ಆರೋಪಿಸಿದ್ದಾರೆ.

ಕಾರಾಗೃಹದ ಎಲ್ಲ ಸಮಸ್ಯೆಗಳ ಬಗ್ಗೆ ಗೃಹ ಸಚಿವಾಲಯ ಹಾಗೂ ಡಿಜಿಪಿಗೆ ತಿಳಿದಿದೆ. ದೇಶದ ಹಿತಾಸಕ್ತಿ ಉದ್ದೇಶದಿಂದ ಅವರು ಕ್ರಮಕ್ಕೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಜೈಲಿನಲ್ಲಿ ಏನಾಗುತ್ತಿದೆ..?

ಕಾರಾಗೃಹದ ಒಳಗೆ ಇದೆ ಪರ್ಯಾಯ ಆಡಳಿತ

ಉಗ್ರರ ನೇಮಕಾತಿ ಉದ್ದೇಶಕ್ಕೆ ಕೈದಿಗಳ ಮುಖ್ಯಸ್ಥನ ನೇಮಕ

ಜೈಲಿನ ಒಳಗಿಂದ ಆದೇಶ ಬಂದರೆ ಮಾತ್ರ ಹೊಸ ನೇಮಕಾತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT