ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬುರುಡೆ ದಾಸಯ್ಯಗೆ ಬೇರೇನು ಕಸುಬು’

ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಟೀಕಾ ಪ್ರಹಾರ
Last Updated 20 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬುರುಡೆ ದಾಸಯ್ಯ ಇಲ್ಲಿಗೆ ಬಂದು ಬುರುಡೆ ಬಿಟ್ಟು ಹೋಗುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೆಸರು ಪ್ರಸ್ತಾಪಿಸದೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಸೋಮವಾರ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ‘ಸುಳ್ಳು ಹೇಳುವುದೇ ಇವರ (ಮೋದಿ) ಕಸಬು. ನಾನು ಸುಳ್ಳು ಹೇಳುವುದಿಲ್ಲ. ಈವರೆಗೆ ಒಂದೇ ಒಂದು ಸುಳ್ಳು ಹೇಳಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸತ್ಯ ಮಾತ್ರ ಹೇಳಿ, ಸುಳ್ಳು ಹೇಳಬೇಡಿ. ಮಾಡಿರುವ ಕೆಲಸಗಳನ್ನು ಮಾತ್ರ ಹೇಳಿ, ಮಾಡದೇ ಇರುವುದನ್ನು ಹೇಳಬೇಡಿ ಎಂದು ಸಚಿವರುಗಳಿಗೆ ಸೂಚಿಸಿದ್ದೇನೆ’ ಎಂದರು.

‘ಅನ್ನಭಾಗ್ಯ’ ಮತ್ತು ‘ಮುಖ್ಯಮಂತ್ರಿ ಅನಿಲ ಭಾಗ್ಯ’ದಂತಹ ಯೋಜನೆಗಳು ದೇಶದ ಯಾವ ರಾಜ್ಯದಲ್ಲಿದೆ ಹೇಳಿ. ಅನ್ನ ಭಾಗ್ಯಕ್ಕೆ ಅಕ್ಕಿ ಕೊಡುತ್ತೇವೆ ಎಂದು ಹೇಳುತ್ತಾರೆ. ಹಾಗಿದ್ದರೆ, ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್‌, ರಾಜಸ್ಥಾನ ಮುಂತಾದ ರಾಜ್ಯಗಳಲ್ಲಿ ಅನ್ನಭಾಗ್ಯ ಯೋಜನೆ ಏಕೆ ಇಲ್ಲ. ಇಲ್ಲಿ ಬಂದು ಸುಳ್ಳು ಹೇಳುತ್ತಾರೆ’ ಎಂದು ಕಿಡಿ ಕಾರಿದರು.

‘ಅನಿಲ ಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಪ್ರತಿಯೊಬ್ಬ ಫಲಾನುಭವಿಗೆ ₹4,254 ಖರ್ಚು ಮಾಡುತ್ತದೆ. ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಪ್ರತಿ ಫಲಾನುಭವಿಗೆ 
₹1,600 ಖರ್ಚು ಮಾಡಲಾಗುತ್ತಿದೆ. ಅವರು ಕೇವಲ ಅನಿಲ ಸಂಪರ್ಕ ಕೋಡುತ್ತಾರೆ. ನಾವು ಸ್ಟೌ, ಲೈಟರ್‌ ಕೂಡಾ ಕೊಡುತ್ತೇವೆ. ಅವರಿಗಿಂತ ಮೂರು ಪಟ್ಟು ಹೆಚ್ಚು ಹಣ ಖರ್ಚು ಮಾಡುತ್ತಿದ್ದೇವೆ’ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

ರಾಜ್ಯದ 30 ಲಕ್ಷ ಕುಟುಂಬಗಳಿಗೆ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ನೀಡಲಾಗುತ್ತಿದೆ. ಆದರೆ, ಪ್ರಧಾನ ಮಂತ್ರಿ ಫೋಟೊ ಹಾಕಿಸಿಕೊಂಡ ಉಜ್ವಲ ಯೋಜನೆಯಡಿ ಕೇವಲ 10 ಲಕ್ಷ ಕುಟುಂಬಗಳಿಗೆ ಮಾತ್ರ ಅನಿಲ ಸಂಪರ್ಕ ಸಿಗುತ್ತಿದೆ ಎಂದು ಟೀಕಿಸಿದರು.

‘ನನ್ನವ್ವ ಅನಿಲ ಭಾಗ್ಯಕ್ಕೆ ಪ್ರೇರಣೆ’

‘ಹಳ್ಳಿಗಾಡು ಪ್ರದೇಶಗಳಲ್ಲಿ ಈಗಲೂ ಸೌದೆ ಒಲೆ ಬಳಸುತ್ತಿದ್ದಾರೆ.  ಅನ್ನಭಾಗ್ಯ ಫಲಾನುಭವಿಗಳು ಅನ್ನ ಮಾಡಬೇಕಲ್ಲ. ಅದಕ್ಕಾಗಿ ಅನಿಲ ಭಾಗ್ಯ ಯೋಜನೆ ಜಾರಿಗೆ ತಂದಿದ್ದೇವೆ. ಹಸಿ ಸೌದೆ ಉರಿಸಿದಾಗ ಹೊಗೆ ಬರುತ್ತದೆ. ಕಣ್ಣುರಿಯಿಂದ ಮಹಿಳೆಯರು ಕಷ್ಟಪಡುವುದನ್ನು ಮತ್ತು ಅವರು ಆರೋಗ್ಯ ಕೆಡಿಸಿಕೊಳ್ಳುವುದನ್ನು ಚಿಕ್ಕಂದಿನಿಂದಲೂ ನೋಡಿದ್ದೇನೆ. ನನ್ನವ್ವ ಕೂಡಾ ಹಾಗೇ ಅಡುಗೆ ಮಾಡುತ್ತಿದ್ದಳು. ಇದೇ ಅನಿಲ ಭಾಗ್ಯಕ್ಕೆ ಪ್ರೇರಣೆ’ ಎಂದೂ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT