ಮಹಿಳೆ ಬರ್ಬರ ಹತ್ಯೆ: ಜಾಮೀನು ನಿರಾಕರಣೆ

7

ಮಹಿಳೆ ಬರ್ಬರ ಹತ್ಯೆ: ಜಾಮೀನು ನಿರಾಕರಣೆ

Published:
Updated:

ನವದೆಹಲಿ: ಮದುವೆಯ ಪ್ರಸ್ತಾವ ನಿರಾಕರಿಸಿದ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ರಾಜ್ಯದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕು ಮೂಲದ ಆರೋಪಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿದೆ.

ಕಳೆದ ನವೆಂಬರ್‌ನಲ್ಲಿ ಜಾಮೀನು ಅರ್ಜಿ ತಿರಸ್ಕರಿಸಿದ್ದ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಆರೋಪಿ ಕುಷ್ಟಗಿ ತಾಲ್ಲೂಕಿನ ಅಮರೇಗೌಡ ವಿರೂಪಾಕ್ಷಗೌಡ ಮೆನೆದಾಳ ಪರ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮದನ್‌ ಲೋಕೂರ್‌ ಹಾಗೂ ದೀಪಕ್‌ ಗುಪ್ತಾ ಅವರನ್ನು ಒಳಗೊಂಡ ನ್ಯಾಯಪೀಠವು, ‘ಇಂತಹ ಅರ್ಜಿಗಳ ಬಗ್ಗೆ ನಮಗೆ ಆಸಕ್ತಿ ಇಲ್ಲ. ಅಲ್ಲದೆ, ಇಂತಹ ಅರ್ಜಿಗಳನ್ನು ಪರಿಗಣಿಸುವ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ನೀಡಲಾಗದು’ ಎಂದು ಅಭಿಪ್ರಾಯಪಟ್ಟಿತು.

ಈಗಾಗಲೇ ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿರುವ ಅಮರೇಗೌಡ ಮುದೇನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶಹನಾಜ್‌ಬಿ ಅವರನ್ನು ಮದುವೆಯಾಗುವಂತೆ ಪೀಡಿಸಿದ್ದ. ಆದರೆ, ಆತನ ಪ್ರಸ್ತಾವ ನಿರಾಕರಿಸಿದ್ದರಿಂದ, 2017ರ ಮಾರ್ಚ್‌ 25ರಂದು ತನ್ನ ಬೈಕ್‌ನಲ್ಲಿ ಮಹಿಳೆ ಮತ್ತು ಅವರ ತಾಯಿಯನ್ನು ಹೊಲವೊಂದಕ್ಕೆ ಕರೆದೊಯ್ದು, ಮಹಿಳೆಯ ಕತ್ತು ಕುಯ್ದು ಕೊಲೆ ಮಾಡಿದ್ದ. ನಂತರ ಶವವನ್ನು ಪೆಟ್ರೋಲ್‌ ಹಾಕಿ ಬೆಂಕಿ ಹಚ್ಚಿ ಸುಟ್ಟಿದ್ದ.

ಶಹನಾಜ್‌ಬಿ ಅವರ ತಾಯಿ ಕಮಲಾಬಿ ಅವರು ತಮ್ಮ ಮಗಳ ರಕ್ಷಣೆಗೆ ಮುಂದಾದಾಗ ತೀವ್ರವಾಗಿ ಗಾಯಗೊಂಡಿದ್ದರು. ಈ ಕುರಿತು ಕುಷ್ಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry