ಶುಕ್ರವಾರ, ಡಿಸೆಂಬರ್ 6, 2019
26 °C
ಚಳಿಗಾಲದ ಒಲಿಂಪಿಕ್ಸ್‌: ಕ್ವಾರ್ಟರ್‌ಗೆ ಅಮೆರಿಕ, ನಾರ್ವೆ

ಉದ್ದೀಪನಾ ಮದ್ದು: ಜಿಗಾ ಅಮಾನತು

Published:
Updated:
ಉದ್ದೀಪನಾ ಮದ್ದು: ಜಿಗಾ ಅಮಾನತು

ಗಾಂಗ್‌ ನೆವುಂಗ್‌ (ಎಎಫ್‌ಪಿ): ಉದ್ದೀಪನಾ ಮದ್ದು ಸೇವಿಸಿರುವುದು ಸಾಬೀತಾದ ಕಾರಣ ಸ್ಲೊವೇನಿಯಾದ ಐಸ್ ಹಾಕಿ ಆಟಗಾರ ಜಿಗಾ ಜೆಗ್ಲಿಕ್ ಅವರನ್ನು ಚಳಿಗಾಳದ ಒಲಿಂಪಿಕ್ಸ್‌ನಿಂದ ಅಮಾನತು ಮಾಡಲಾಗಿದೆ. ಕ್ರೀಡಾ ನ್ಯಾಯಾಲಯ ನಡೆಸಿದ ತನಿಖೆಯಿಂದ ಆರೋಪ ಸಾಬೀತಾಗಿದ್ದು 24 ತಾಸುಗಳ ಒಳಗೆ ಕ್ರೀಡಾ ಗ್ರಾಮವನ್ನು ತೊರೆಯುವಂತೆ ಮಂಗಳವಾರ ಸೂಚಿಸಲಾಗಿದೆ.

ಇದು ಈ ಒಲಿಂಪಿಕ್ಸ್‌ನಲ್ಲಿ ಉದ್ದೀಪನ ಮದ್ದು ಸೇವನೆಯ ಮೂರನೇ ಪ್ರಕರಣವಾಗಿದೆ. ಅಲೆಕ್ಸಾಂಡರ್‌ ಮದ್ದು ಸೇವನೆ ಸಾಬೀತು

ರಷ್ಯಾದ ಕರ್ಲಿಂಗ್‌ ಪಟು ಅಲೆಕ್ಸಾಂಡರ್‌ ಕ್ರೂಶೆಲ್‌ನಿಟ್‌ಸ್ಕಿ ನಿಷೇಧಿತ ಉದ್ದೀಪನಾ ಮದ್ದು ಸೇವನೆ ಮಾಡಿರುವುದು ಸಾಬೀತಾಗಿದೆ. ಡಬಲ್ಸ್‌ ವಿಭಾಗದಲ್ಲಿ ಅವರು ಕಂಚು ಗೆದ್ದಿದ್ದರು.

ಮೆಲ್ಡೋನಿಯಂ ಸೇವನೆ ಆರೋಪಕ್ಕೆ ಒಳಗಾಗಿದ್ದ ಅಲೆಕ್ಸಾಂಡರ್ ಅವರನ್ನು ಎರಡು ದಿನಗಳಲ್ಲಿ ಎರಡು ಬಾರಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಪ್ರಕರಣ ಕ್ರೀಡಾ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯವು ಪರೀಕ್ಷೆಯ ಕುರಿತಾಗಲಿ ಅಲೆಕ್ಸಾಂಡರ್‌ ಸೇವಿಸಿದ ಪದಾರ್ಥದ ಕುರಿತಾಗಲಿ ಯಾವುದೇ ವಿವರ ನೀಡಲಿಲ್ಲ. ಆದರೆ ಅವರು ಪರೀಕ್ಷೆಯಲ್ಲಿ ವಿಫಲರಾಗಿದ್ದು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಉದ್ದೀಪನಾ ಮದ್ದು ಸೇವನೆಗೆ ರಾಷ್ಟ್ರೀಯ ಬೆಂಬಲ ಇದೆ ಎಂಬ ಆರೋಪದಡಿ ಕಳೆದ ಡಿಸೆಂಬರ್‌ನಲ್ಲಿ ರಷ್ಯಾವನ್ನು ಚಳಿಗಾಲದ ಒಲಿಂಪಿಕ್ಸ್‌ನಿಂದ ಅಮಾನತು ಮಾಡಲಾಗಿತ್ತು. ಆದರೆ ರಾಷ್ಟ್ರದ ಹೆಸರನ್ನು ಬಳಸದೆ ಕೂಟದಲ್ಲಿ ಪಾಲ್ಗೊಳ್ಳಲು 168 ಮಂದಿಗೆ ಅವಕಾಶ ನೀಡಲಾಗಿತ್ತು. ಅವರಲ್ಲಿ ಅಲೆಕ್ಸಾಂಡರ್ ಕೂಡ ಒಬ್ಬರು. ಮುಂದಿನ ವಿಚಾರಣೆಯ ದಿನಾಂಕವನ್ನು ಇನ್ನೂ ನಿಗದಿ ಮಾಡಲಿಲ್ಲ.

ಕಳೆದ ವಾರ ಜಪಾನ್‌ನ ಶಾರ್ಟ್‌ ಟ್ರ್ಯಾಕ್‌ ಸ್ಪೀಡ್‌ ಸ್ಕೇಟರ್‌ ಕೀ ಸಾಯಿಟೊ ಕೂಡ ಇಂಥಹುದೇ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಬೀತಾಗಿತ್ತು.

ಕ್ವಾರ್ಟರ್ ಫೈನಲ್‌ಗೆ ಅಮೆರಿಕ: ಸ್ಲೊವಾಕಿಯಾವನ್ನು 5–1 ಗೋಲುಗಳಿಂದ ಮಣಿಸಿದ ಅಮೆರಿಕ ಚಳಿಗಾಲದ ಒಲಿಂಪಿಕ್ಸ್‌ನ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ರಯಾನ್‌ ಡೊನಾಟೊ ಮತ್ತು ರಯಾನ್ ಜಪೊಲ್‌ಸ್ಕಿ ಅಮೆರಿಕದ ಜಯದ ರೂವಾರಿಗಳೆನಿಸಿದರು. ಬುಧವಾರ ನಡೆಯಲಿರುವ ಎಂಟರ ಘಟ್ಟದ ಪಂದ್ಯದಲ್ಲಿ ಈ ತಂಡ ಜೆಕ್ ಗಣರಾಜ್ಯ ತಂಡವನ್ನು ಎದುರಿಸಲಿದೆ.

ನಾರ್ವೆಗೆ ಗೆಲುವು: 16ರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಸ್ಲೋವೇನಿಯಾವನ್ನು 2–1 ಗೋಲುಗಳಿಂದ ನಾರ್ವೆ ಮಣಿಸಿತು. ಮೊದಲ ಒಲಿಂಪಿಕ್ಸ್ ಪದಕದ ನಿರೀಕ್ಷೆಯಲ್ಲಿರುವ ಈ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ರಷ್ಯಾವನ್ನು ಎದುರಿಸಲಿದೆ.

ಗಾಳಿ: ಬಿಗ್ ಏರ್ ಫೈನಲ್‌ ನಾಳೆ

ಮಹಿಳೆಯರ ಬಿಗ್ ಏರ್‌ ಸ್ಪರ್ಧೆಯನ್ನು ಭಾರಿ ಗಾಳಿ ಬೀಸುವ ಸಾಧ್ಯತೆ ಇದ್ದುದರಿಂದ ಗುರುವಾರವೇ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘಟಕರು ಮಂಗಳವಾರ ತಿಳಿಸಿದ್ದಾರೆ. ಪೂರ್ವ ನಿರ್ಧಾರದಂತೆ ಈ ಸ್ಪರ್ಧೆ ಶುಕ್ರವಾರ ನಡೆಯಬೇಕಾಗಿತ್ತು.

ಭಾರಿ ಗಾಳಿಯಿಂದಾಗಿ ಮಹಿಳೆಯರ ಆಲ್ಪೈನ್ ಸ್ಕೀಯಿಂಗ್ ಸೇರಿದಂತೆ ಅನೇಕ ಸ್ಪರ್ಧೆಗಳ ವೇಳಾಪಟ್ಟಿಯನ್ನು ಬಸಲಿಸಲಾಗಿತ್ತು.

ಪ್ರತಿಕ್ರಿಯಿಸಿ (+)