ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರ್ಮನ್‌ಪ್ರೀತ್‌ ಪಡೆಗೆ ಜಯದ ಕನಸು

ನಾಲ್ಕನೇ ಟ್ವೆಂಟಿ–20 ಕ್ರಿಕೆಟ್‌ ಪಂದ್ಯ: ಇಂದು ದಕ್ಷಿಣ ಆಫ್ರಿಕಾ ಎದುರು ಹೋರಾಟ
Last Updated 20 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಸೆಂಚೂರಿಯನ್‌ (ಪಿಟಿಐ): ಮೊದಲ ಎರಡು ಪಂದ್ಯಗಳಲ್ಲಿ ಗೆದ್ದು ಮೂರನೇ ಹೋರಾಟದಲ್ಲಿ ಮುಗ್ಗರಿಸಿದ್ದ ಭಾರತ ಮಹಿಳಾ ತಂಡದವರು ಈಗ ಮತ್ತೆ ಜಯದ ಮಂತ್ರ ಜಪಿಸುತ್ತಿದ್ದಾರೆ.

ಸೂಪರ್‌ಸ್ಪೋರ್ಟ್ಸ್‌ ಪಾರ್ಕ್‌ ಅಂಗಳದಲ್ಲಿ ಬುಧವಾರ ನಡೆಯುವ ಹಣಾಹಣಿಯಲ್ಲಿ ಹರ್ಮನ್‌ಪ್ರೀತ್ ಕೌರ್‌ ಬಳಗ ದಕ್ಷಿಣ ಆಫ್ರಿಕಾ ತಂಡದ ಸವಾಲು ಎದುರಿಸಲಿದೆ.

ಹರಿಣಗಳ ನಾಡಿನ ಪ್ರವಾಸದಲ್ಲಿ ಏಕದಿನ ಮತ್ತು ಟ್ವೆಂಟಿ–20 ಸರಣಿ ಸರಣಿ ಗೆದ್ದ ದಾಖಲೆ ಬರೆಯಲು ಭಾರತಕ್ಕೆ ಈಗ ಉತ್ತಮ ಅವಕಾಶ ಇದೆ. ಇದಕ್ಕಾಗಿ ಮುಂದಿನ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಗೆಲ್ಲಬೇಕಿದೆ.

ಆರಂಭದ ಎರಡು ಪಂದ್ಯಗಳಲ್ಲಿ ಪ್ರಾಬಲ್ಯ ಮೆರೆದಿದ್ದ ಭಾರತ ತಂಡ ಮೂರನೇ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಆತಿಥೇಯರಿಗೆ ಶರಣಾಗಿತ್ತು. ಬ್ಯಾಟಿಂಗ್‌ನಲ್ಲಿ ತಂಡ ಸಂಪೂರ್ಣವಾಗಿ ಮಂಕಾಗಿತ್ತು. ಸತತ ಎರಡು ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದ ಮಿಥಾಲಿ ರಾಜ್‌, ವಾಂಡರರ್ಸ್‌ ಅಂಗಳದಲ್ಲಿ ಶೂನ್ಯಕ್ಕೆ ಔಟಾಗಿದ್ದರು.

ನಾಯಕಿ ಹರ್ಮನ್‌ಪ್ರೀತ್‌, ಉಪ ನಾಯಕಿ ಮಂದಾನ ಮತ್ತು ಕರ್ನಾಟಕದ ವೇದಾ ಕೃಷ್ಣಮೂರ್ತಿ ಮಧ್ಯಮ ಕ್ರಮಾಂಕದಲ್ಲಿ ತಂಡದ ಆಧಾರಸ್ತಂಭಗಳೆನಿಸಿದ್ದಾರೆ. ಇವರು ಹಿಂದಿನ ಪಂದ್ಯದಲ್ಲಿ ಹರಿಣಗಳ ನಾಡಿನ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ್ದರು. ಆದರೆ ಜೆಮಿಮಾ ರಾಡ್ರಿಗಸ್‌, ಅನುಜಾ ಪಾಟೀಲ್‌, ಶಿಖಾ ಪಾಂಡೆ ಮತ್ತು ವಿಕೆಟ್‌ ಕೀಪರ್‌ ಬ್ಯಾಟ್ಸ್‌ವುಮನ್‌ ತಾನಿಯಾ ಭಾಟಿಯಾ ಅವರು ಎರಡಂಕಿಯ ಮೊತ್ತ ದಾಟಲು ವಿಫಲರಾಗಿದ್ದರು. ಇವರು ಬುಧವಾರದ ಹೋರಾಟದಲ್ಲಿ ಲಯ ಕಂಡುಕೊಳ್ಳಬೇಕಿದೆ.

ಬೌಲಿಂಗ್‌ನಲ್ಲೂ ತಂಡ ಗುಣಮಟ್ಟದ ಆಟ ಆಡಬೇಕು. ಜೂಲನ್‌ ಗೋಸ್ವಾಮಿ ಬದಲು ತಂಡದಲ್ಲಿ ಸ್ಥಾನ ಗಳಿಸಿರುವ ಪೂಜಾ ವಸ್ತ್ರಾಕರ್‌ ಮೂರನೇ ಪಂದ್ಯದಲ್ಲಿ 21ರನ್‌ ನೀಡಿ 2 ವಿಕೆಟ್‌ ಉರುಳಿಸಿದ್ದರು.

ಆದರೆ ಶಿಖಾ ಪಾಂಡೆ ದುಬಾರಿಯಾಗಿದ್ದರು. ಮೂರು ಓವರ್‌ ಬೌಲ್‌ ಮಾಡಿದ್ದ ಅವರು 30ರನ್‌ ಕೊಟ್ಟಿದ್ದರು. ರಾಜೇಶ್ವರಿ ಗಾಯಕವಾಡ, ಅನುಜಾ ಪಾಟೀಲ್‌ ಮತ್ತು ಪೂನಮ್‌ ಯಾದವ್‌ ಅವರೂ ಜವಾಬ್ದಾರಿ ಅರಿತು ಆಡಬೇಕು.

ಗೆಲುವಿನ ಹುಮ್ಮಸ್ಸು: ಮೂರನೇ ಪಂದ್ಯದಲ್ಲಿ ಗೆದ್ದು ಕಳೆದುಕೊಂಡಿದ್ದ ವಿಶ್ವಾಸ ಮರಳಿ ಪಡೆದಿರುವ ಆತಿಥೇಯರು ನಾಲ್ಕನೇ ಹೋರಾಟದಲ್ಲೂ ಪ್ರವಾಸಿ ಬಳಗದ ಸವಾಲು ಮೀರಿನಿಲ್ಲುವ ವಿಶ್ವಾಸದಲ್ಲಿದ್ದಾರೆ. ಸರಣಿ ಜಯದ ಕನಸು ಜೀವಂತವಾಗಿಟ್ಟುಕೊಳ್ಳುವ ದೃಷ್ಟಿಯಿಂದಲೂ ಈ ಪಂದ್ಯ ಡೇನ್‌ ವ್ಯಾನ್‌ ನೀಕರ್ಕ್‌ ಪಡೆಗೆ ಮಹತ್ವದ್ದೆನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT