ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

943 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಸಂಸ್ಕೃತ ವಿಶ್ವವಿದ್ಯಾಲಯದ 6ನೇ ದೀಕ್ಷಾಂತ ಘಟಿಕೋತ್ಸವ
Last Updated 20 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ 6ನೇ ದೀಕ್ಷಾಂತ ಘಟಿಕೋತ್ಸವದಲ್ಲಿ 943 ಸ್ನಾತಕೋತ್ತರ, ಪದವಿ ಹಾಗೂ ಎಂಫಿಲ್‌ ವಿದ್ಯಾರ್ಥಿಗಳಿಗೆ ರಾಜ್ಯಪಾಲ ವಜುಭಾಯಿ ವಾಲಾ ಪದವಿ ಪ್ರದಾನ ಮಾಡಿದರು.

ಸಾಹಿತಿ ಪ್ರೊ.ಸತ್ಯವ್ರತಶಾಸ್ತ್ರಿ ದೀಕ್ಷಾಂತ ಭಾಷಣ ಮಾಡಿದರು. ಸ್ನಾತಕೋತ್ತರ ಪದವಿಯ 12 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಲಾಯಿತು. ಸ್ನಾತಕೋತ್ತರ ಪದವಿ ಹಾಗೂ ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ತಲಾ ಎಂಟು ವಿದ್ಯಾರ್ಥಿಗ ಳಿಗೆ ಇನ್ಫೊಸಿಸ್‌ ಪ್ರತಿಷ್ಠಾನದ ದತ್ತಿನಿಧಿ ಬಹುಮಾನ ಕೊಡಲಾಯಿತು.

ಅಭಿಜಿತ್‌ ಜ್ಯೋಷಿ ಅವರಿಗೆ ಡಿ.ಲಿಟ್‌ ಪದವಿ ಹಾಗೂ ವಿದ್ವಾನ್‌ ಬಿ.ರಾಜಶೇಖರಯ್ಯ ಅವರಿಗೆ ಗೌರವ ಡಿ.ಲಿಟ್‌ ಪದವಿ ಪ್ರದಾನ ಮಾಡಲಾಯಿತು.

‘ಅಲಂಕಾರ’ ಶಾಸ್ತ್ರದಲ್ಲಿ ಸ್ವರ್ಣ ಪದಕ ಪಡೆದ ಎಸ್‌ಎಂಎಸ್‌ಪಿ ಸಂಸ್ಕೃತ ಅಧ್ಯಯನ ಕೇಂದ್ರದ ಬಾಲಚಂದ್ರ ಕೃಷ್ಣ ಭಟ್‌, ‘ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ರೇವಣಕಟ್ಟೆ ನನ್ನೂರು. ತಂದೆ ಕೃಷ್ಣ, ತಾಯಿ ಚಂದ್ರಕಲಾ ಕೃಷಿಕರು. ಎಂ.ಎ ಪದವಿಯಲ್ಲಿ ಶೇ 86ರಷ್ಟು ಅಂಕ ಗಳಿಸಿದ್ದೇನೆ. ಸದ್ಯ ಬಿ.ಇಡಿ ಮಾಡುತ್ತಿದ್ದೇನೆ. ಸಂಸ್ಕೃತ ಭಾಷೆ ಇಂದಿಗೂ ಪ್ರಸ್ತುತವಾಗಿದೆ. ವಿಜ್ಞಾನ, ಗಣಿತ ಸೇರಿದಂತೆ ಅನೇಕ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಈ ಭಾಷೆಯಲ್ಲಿದೆ. ಈ ಕಾರಣಕ್ಕೆ ಸಂಸ್ಕೃತ ಅಧ್ಯಯನ ಮಾಡುತ್ತಿದ್ದೇನೆ’ ಎಂದರು.

ವೇದ ವಿಜ್ಞಾನ ಶೋಧ ಸಂಸ್ಥಾನಂ ಸಂಸ್ಕೃತ ಮಹಾಪಾಠ ಶಾಲೆಯ ಕೆ.ಎಸ್‌.ಶ್ರುತಿ ‘ವ್ಯಾಕರಣ’ ಶಾಸ್ತ್ರದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಅವರು ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲ್ಲೂಕಿನ ಹಂಪಾಪುರದವರು. ತಂದೆ ಸಿದ್ದಪ್ಪ, ತಾಯಿ ನೀಲಾ.

‘ಸಂಸ್ಕೃತ ಭಾಷೆಯನ್ನು ಸಾಮಾನ್ಯರಿಗೆ ಮುಟ್ಟಿಸುವ ಉದ್ದೇಶವಿದೆ. ಸದ್ಯ ಮಂಗಳೂರಿನ ಮೈತ್ರೇಯಿ ಗುರುಕುಲದಲ್ಲಿ ಶಿಕ್ಷಕಿಯಾಗಿದ್ದು, ಸಂಸ್ಕೃತ ಶಾಸ್ತ್ರ ಬೋಧಿಸುತ್ತಿದ್ದೇನೆ’ ಎಂದು ಶ್ರುತಿ ಹೇಳಿದರು.

ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ ಸಂಸ್ಕೃತ ಕಾಲೇಜಿನ ಕೆ.ಎಸ್‌.ಕೃಷ್ಣ ‘ನವೀನ ನ್ಯಾಯ’ ಶಾಸ್ತ್ರದಲ್ಲಿ ಸ್ವರ್ಣದ ಪದಕ ಪಡೆದಿದ್ದಾರೆ. ಕೇಶವ ಕಮಲಾಕರ್‌ ಭಟ್‌ ಅವರು ‘‍ಪೂರ್ವ ಮೀಮಾಂಸ’ ಶಾಸ್ತ್ರದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಶಿರಸಿ ತಾಲ್ಲೂಕಿನ ಧೋರಣಗಿರಿ ಗ್ರಾಮದ ಅವರಿಗೆ ಸಂಸ್ಕೃತದ ಮೇಲೆ ವಿಶೇಷ ಒಲವು. ಬಿ.ಎ ‘ಅಲಂಕಾರ ಶಾಸ್ತ್ರ’ದಲ್ಲಿ ನಗದು ಬಹುಮಾನ ಪಡೆದಿರುವ ಪಿ.ಸುಧಾ ಹಾಗೂ ಜಿ.ಎಸ್‌.ದಾಕ್ಷಾಯಿಣಿ ಶಿಕ್ಷಕಿಯಾಗಿದ್ದಾರೆ.

***

ಕರ್ನಾಟಕವು ಅನೇಕ ಆಚಾರ್ಯರ ಜನ್ಮ ಹಾಗೂ ಕರ್ಮಭೂಮಿ. ಇಲ್ಲಿ ಅನೇಕ ಮತ ಪಂಥಗಳು ಉಗಮಗೊಂಡಿವೆ.
–ಪ್ರೊ. ಸತ್ಯವ್ರತಶಾಸ್ತ್ರಿ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT