ಮಂಗಳವಾರ, ಡಿಸೆಂಬರ್ 10, 2019
21 °C
ಮೆಜೆಸ್ಟಿಕ್‌: ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣ

ರೈಲ್ವೆ ನಿಲ್ದಾಣ, ಬಸ್‌ನಿಲ್ದಾಣಗಳಿಗೆ ಕಾಲುದಾರಿ ಸಂಪರ್ಕಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈಲ್ವೆ ನಿಲ್ದಾಣ, ಬಸ್‌ನಿಲ್ದಾಣಗಳಿಗೆ ಕಾಲುದಾರಿ ಸಂಪರ್ಕಕ್ಕೆ ಚಾಲನೆ

ಬೆಂಗಳೂರು: ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣದಿಂದ ಸಂಗೊಳ್ಳಿ ರಾಯಣ್ಣ ನಗರ ರೈಲು ನಿಲ್ದಾಣ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ನಿಲ್ದಾಣಗಳಿಗೆ ನೇರ ಸಂಪರ್ಕ ಕಲ್ಪಿಸುವ ಕಾಲುದಾರಿಯನ್ನು (ಸಬ್‌ವೇ) ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಮಂಗಳವಾರ ಉದ್ಘಾಟಿಸಿದರು.

ಈ ಮೆಟ್ರೊ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ನಿಲ್ದಾಣಗಳನ್ನು ತಲುಪಲು ಇದುವರೆಗೆ ಪಶ್ಚಿಮ ದಿಕ್ಕಿನ ಪ್ರವೇಶ ದ್ವಾರದ ಮೂಲಕ ಹೊರಬಂದು ಪಾದಚಾರಿ ಮಾರ್ಗದಲ್ಲಿ ಸುಮಾರು 200 ಮೀಟರ್‌ ದೂರಕ್ಕೆ ನಡೆದುಕೊಂಡು ಹೋಗಬೇಕಿತ್ತು. ಈ ಪಾದಚಾರಿ ಮಾರ್ಗದಲ್ಲೇ ಪಾವತಿಸಿ ಬಳಸುವ ಶೌಚಾಲಯವಿದ್ದು, ಅಲ್ಲಿ ಪ್ರಯಾಣಿಕರು ರಸ್ತೆಯಲ್ಲೇ ನಡೆಯಬೇಕಾದ ಸ್ಥಿತಿ ಇತ್ತು. ಇನ್ನು ಮುಂದೆ ನಿಲ್ದಾಣದ ಕಾನ್‌ಕೋರ್ಸ್‌ ಹಂತದಿಂದ ನೇರವಾಗಿ ಈ ಬಸ್‌ನಿಲ್ದಾಣಗಳನ್ನು ತಲುಪಬಹುದು.

ಹೊಸ ಕಾಲುದಾರಿ ರೈಲು ನಿಲ್ದಾಣವನ್ನು ಸಂಪರ್ಕಿಸುವ ಕೆಳಸೇತುವೆಗೆ ಸಂಪರ್ಕಿಸಲಾಗಿದೆ. ಹಾಗಾಗಿ ಈ ಮೆಟ್ರೊ ನಿಲ್ದಾಣದಿಂದ ರೈಲು ನಿಲ್ದಾಣವನ್ನು ತಲುಪುವುದು ಸುಲಭವಾಗಲಿದೆ.

ಮೆಟ್ರೊ ನಿಲ್ದಾಣದ ದಕ್ಷಿಣ ದಿಕ್ಕಿನಲ್ಲಿ ಟ್ಯಾಂಕ್‌ ಬಂಡ್‌ ರಸ್ತೆ ಹಾಗೂ ಚಿಕ್ಕಲಾಲ್‌ಬಾಗ್‌ಗೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗವನ್ನು ಸಚಿವರು ಉದ್ಘಾಟಿಸಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೊ ನಿಲ್ದಾಣದ ಪಶ್ಚಿಮ ದಿಕ್ಕಿನಲ್ಲಿ ಮಾಗಡಿ ರಸ್ತೆ ಬಳಿಯ ಗೋಪಾಲಪುರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪಾದಚಾರಿ ಸುರಂಗ ಮಾರ್ಗವನ್ನೂ ಪ್ರಯಾಣಿಕರ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. 60 ಮೀ ಉದ್ದ ಹಾಗೂ 4.5 ಮೀ ಅಗಲವಿರುವ ಈ ಸುರಂಗ ನಿರ್ಮಾಣಕ್ಕೆ ₹ 4.5 ಕೋಟಿ ವೆಚ್ಚವಾಗಿದೆ. ಮಿನರ್ವ ಮಿಲ್ಸ್‌ ಬಳಿಯ ರಸ್ತೆ ದಾಟಲು ಮೆಟ್ರೊ ಪ್ರಯಾಣಿಕರು ಇದನ್ನು ಬಳಸಬಹುದಾಗಿದೆ.

ವೀರಸಂದ್ರ ಕೆರೆ ಅಭಿವೃದ್ಧಿಗೆ ಒಪ್ಪಂದ

ನಗರ ಜಿಲ್ಲೆಯ ಆನೇಕಲ್‌ ತಲ್ಲೂಕಿನ ವೀರಸಂದ್ರ ಕೆರೆ ಅಭಿವೃದ್ಧಿ ಮಾಡಲು ಇದರ ಸಮೀಪದಲ್ಲೇ ಕಾರ್ಪೊರೇಟ್‌ ಕಚೇರಿಯನ್ನು ಹೊಂದಿರುವ ಟೈಟಾನ್‌ ಕಂಪನಿ ಮುಂದೆ ಬಂದಿದೆ.

ಕೆರೆ ಅಭಿವೃದ್ಧಿ ಕುರಿತ ಒಪ್ಪಂದಕ್ಕೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ ಭಟ್‌, ಕರ್ನಾಟಕ ಸರೋವರಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀಮಾ ಗರ್ಗ್ ಹಾಗೂ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ಸಹಿ ಹಾಕಿದರು.

ಬಿಎಂಆರ್‌ಸಿಎಲ್‌ ಇತರ ಏಜೆನ್ಸಿಗಳ ನೆರವಿನಿಂದ ಈ ಕೆರೆಯನ್ನು ಪುನರುಜ್ಜೀವನಬೇಕಿದೆ. ಇದರ ಒತ್ತುವರಿ ತೆರವುಗೊಳಿಸಿ, ಇದಕ್ಕೆ ಒಳಚರಂಡಿ ನೀರು ಸೇರದಂತೆ ತಡೆಯಬೇಕಿದೆ. ₹ 8 ಕೋಟಿ ವೆಚ್ಚದಲ್ಲಿ ಈ ಜಲಮೂಲವನ್ನು ಅಭಿವೃದ್ಧಿಗೊಳಿಸುವ ಕುರಿತು ನಿಗಮವು ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿದೆ.

ಕೆಂಗೇರಿ ಕೆರೆಯನ್ನೂ ಕೂಡಾ ನಿಗಮವು ಅಭಿವೃದ್ಧಿಪಡಿಸಲಿದೆ. ಇದರ ಟೆಂಡರ್‌ ಪ್ರಕ್ರಿಯೆ ಚಾಲ್ತಿಯಲ್ಲಿದೆ. ತಾಂತ್ರಿಕ ಬಿಡ್‌ ತೆರೆಯಲಾಗಿದ್ದು ಅವುಗಳ ಮೌಲ್ಯಮಾಪನ ನಡೆಸಲಾಗುತ್ತಿದೆ. ಮೂರು ವಾರಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತ ರಾವ್ ತಿಳಿಸಿದರು.

ಅಂಕಿ ಅಂಶ

175 ಮೀ. – ಮೆಜೆಸ್ಟಿಕ್‌ ಬಳಿಯ ಹೊಸ ಕಾಲುದಾರಿಯ ಉದ್ದ

3 ಮೀ – ಕಾಲುದಾರಿಯ ಅಗಲ

₹ 1 ಕೋಟಿ – ಕಾಲುದಾರಿ ನಿರ್ಮಾಣಕ್ಕೆ ತಗಲಿದ ವೆಚ್ಚ

₹ 8 ಕೋಟಿ – ಚಿಕ್ಕಲಾಲ್‌ಬಾಗ್‌ ಕಡೆಗೆ ಸಂಪರ್ಕಿಸುವ ಪಾದಚಾರಿ ಸುರಂಗ ಮಾರ್ಗದ ವೆಚ್ಚ

–––––––––––––––––––

 

ಮೆಜೆಸ್ಟಿಕ್‌ ಮೆಟ್ರೊ ನಿಲ್ದಾಣ: ಹೊಸ ಕಾಲುದಾರಿ ಮಾರ್ಗ

ನಗರ ರೈಲು ನಿಲ್ದಾಣದ ಕಡೆಗೆ – ಈಗ ಇರುವ ಪಾದಚರಿ ಸುರಂಗ ಮಾರ್ಗ

ಬಿಎಂಟಿಸಿ ಬಸ್‌ ನಿಲ್ದಾಣದ ಕಡೆಗೆ – ಕೆಎಸ್‌ಆರ್‌ಟಿಸಿ ಟರ್ಮಿನಲ್‌ 1, ಮತ್ತು 2ರ ಕಡೆಗೆ

ಹೊಸ ಕಾಲುದಾರಿ – ಗುಬ್ಬಿ ತೋಟದಪ್ಪ ರಸ್ತೆ

ಮೆಟ್ರೊ ನಿಲ್ದಾಣದ ಪಶ್ಚಿಮ ಪ್ರವೇಶದ್ವಾರ – ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣ, ಮೆಜೆಸ್ಟಿಕ್‌

ಕೆಎಸ್‌ಆರ್‌ಟಿಸಿ ಬಸ್‌ ಟರ್ಮಿನಲ್‌– 1

ಕೆಎಸ್‌ಆರ್‌ಟಿಸಿ ಬಸ್‌ ಟರ್ಮಿನಲ್‌– 2

ಕೆಎಸ್‌ಆರ್‌ಟಿಸಿ ಬಸ್‌ ಟರ್ಮಿನಲ್‌– 3

ಧನ್ವಂತರಿ ರಸ್ತೆ

ಮೆಟ್ರೊ ನಿಲ್ದಾಣದ ದಕ್ಷಿಣದ ಪ್ರವೇಶ ದ್ವಾರ

ಉಪ್ಪಾರಪೇಟೆ ಪೊಲೀಸ್‌ ಠಾಣೆ ಕಡೆಗಿನ ಮಾರ್ಗ

ದಕ್ಷಿಣದ ಪ್ರವೇಶ ದ್ವಾರ (ಉದ್ಯಾನದ ಕಡೆಗೆ)

ಚಿಕ್ಕ ಲಾಲ್‌ಬಾಗ್‌ ಕಡೆಗಿನ ಪ್ರವೇಶದ್ವಾರ

ಅಕ್ಕಿಪೇಟೆ, ಬಳೆಪೇಟೆ ಕಡೆಗೆ

ಪ್ರತಿಕ್ರಿಯಿಸಿ (+)