7
ಈಗ ಬೆಳಕಿಗೆ ಬರುತ್ತಿವೆ ನಲಪಾಡ್ ದಬ್ಬಾಳಿಕೆ ಪ್ರಕರಣಗಳು

‘ಕತ್ತರಿಸಿ ಕೊಲ್ಲುವುದಾಗಿ ಬೆದರಿಸಿದ್ದರು’

Published:
Updated:

ಬೆಂಗಳೂರು: ಉದ್ಯಮಿ ಪುತ್ರನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮೊಹಮದ್ ನಲಪಾಡ್ ಬಂಧನದ ಬೆನ್ನಲ್ಲೇ, ಅವರ ವಿರುದ್ಧ ಮತ್ತಷ್ಟು ದಬ್ಬಾಳಿಕೆ ಕೃತ್ಯಗಳು ಬೆಳಕಿಗೆ ಬರುತ್ತಿವೆ.

‘ಮೂರು ವರ್ಷಗಳ ಹಿಂದೆ ಎನ್‌ಜಿಒಗಳ ಸಮ್ಮೇಳನದಲ್ಲಿ ನಲಪಾಡ್ ಬೆಂಬಲಿಗರು ನನಗೆ ಜೀವ ಬೆದರಿಕೆ ಹಾಕಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಳ್ಳಲು ಕಬ್ಬನ್‌ಪಾರ್ಕ್‌, ಹಲಸೂರು ಠಾಣೆಗಳ ಪೊಲೀಸರು ನಿರಾಕರಿಸಿದ್ದರು’ ಎಂದು ವರ್ಷಿತಾ ದಾಸ್‌ ಪೂರ್ಣಿಮಾ ಎಂಬುವರು ಆರೋಪಿಸಿದ್ದಾರೆ.

ಅಂದಿನ ಘಟನೆ ಹಾಗೂ ನಾಲಪಾಡ್ ರಕ್ಷಣೆಗೆ ಪೊಲೀಸರು ನಿಂತುಕೊಂಡ ಬಗೆಯನ್ನು ಆರು ನಿಮಿಷಗಳ ವಿಡಿಯೊದಲ್ಲಿ ವಿವರಿಸಿರುವ ಪೂರ್ಣಿಮಾ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅಂದು ಮಾಧ್ಯಮಗಳಾಗಲೀ, ಪೊಲೀಸರಾಗಲೀ, ಸಂಘಟನೆಗಳಾಗಲೀ ತಮ್ಮ ಬೆಂಬಲಕ್ಕೆ ನಿಲ್ಲಲಿಲ್ಲ ಎಂದು ಬೇಸರ

ವ್ಯಕ್ತಪಡಿಸಿದ್ದಾರೆ.

‘ಮೂರು ವರ್ಷಗಳ ಹಿಂದೆ ಶಾಸಕ ಹ್ಯಾರಿಸ್ ಎಂ.ಜಿ.ರಸ್ತೆಯ ಹೋಟೆಲ್‌ವೊಂದರಲ್ಲಿ ಸಮ್ಮೇಳನ ಆಯೋಜಿಸಿದ್ದರು. ಅಲ್ಲಿ ದೇಶದ ಪ್ರಗತಿ ಹಾಗೂ ಸಾಮಾಜಿಕ ವಿಚಾರಗಳ ಚರ್ಚೆಯ ಬದಲಾಗಿ, ಧಾರ್ಮಿಕ ವಿಚಾರಗಳ ಬಗ್ಗೆಯೇ ಸಮಾಲೋಚನೆ ನಡೆಯುತ್ತಿತ್ತು. ಅದಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸಿದಾಗ, ವೇದಿಕೆಯಲ್ಲಿದ್ದ ಸಂಪನ್ಮೂಲ ವ್ಯಕ್ತಿಗಳಿಗೆ ಮುಜುಗರವಾಯಿತು’ ಎಂದು ಪೂರ್ಣಿಮಾ ಹೇಳಿದ್ದಾರೆ.

‘ವೇದಿಕೆ ಮೇಲಿದ್ದವರ ಸೂಚನೆಯಂತೆ ಸ್ಥಳಕ್ಕೆ ಬಂದ ಬೌನ್ಸರ್‌ಗಳು, ‘ಮೇಡಂ ನಿಮ್ಮ ಜತೆ ಮಾತನಾಡಬೇಕಿದೆ’ ಎಂದು ಬಲವಂತವಾಗಿ ಹೊರಗೆ ಕರೆದುಕೊಂಡು ಹೋದರು. ನಂತರ, ‘ಇಲ್ಲಿಂದ ಸುಮ್ಮನೆ ಹೋಗದಿದ್ದರೆ ತುಂಡು ತುಂಡಾಗಿ ಕತ್ತರಿಸಿ ಹಾಕುತ್ತೇವೆ’ ಎಂದು ಬೆದರಿಸಿದರು. ಕೂಡಲೇ ನಾನು ಶಾಸಕ ಹ್ಯಾರಿಸ್ ಅವರಿಗೆ ಕರೆ ಮಾಡಿದೆ. ಅವರಿಂದ ಪ್ರತಿಕ್ರಿಯೆ ದೊರೆಯಲಿಲ್ಲ.’

‘ಇದಾದ ಸ್ವಲ್ಪ ಸಮಯದಲ್ಲೇ ಯಾರಿಗೋ ಕರೆ ಮಾಡಿದ್ದ ಬೌನ್ಸರ್‌ಗಳು, ‘ಮೊಹಮದ್ ಬಾಯ್ ನೋಡಿಕೊಳ್ಳುತ್ತಾರೆ ಬನ್ರೋ’ ಎಂದು ಹೊರಟು ಹೋದರು. ಮೊಹಮದ್ ಎಂದರೆ ಹ್ಯಾರಿಸ್ ಮಗ ಎಂಬುದು ನನಗೆ ಆಗ ಗೊತ್ತಿರಲಿಲ್ಲ. ರಕ್ಷಣೆ ಕೋರಿ ಕಬ್ಬನ್‌ಪಾರ್ಕ್ ಠಾಣೆಗೆ ಹೋದರೆ, ಸಮ್ಮೇಳನ ನಡೆಯುತ್ತಿದ್ದ ಹೋಟೆಲ್ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹಲಸೂರು ಠಾಣೆಗೆ ಕಳುಹಿಸಿದರು. ಅಲ್ಲಿನ ಸಿಬ್ಬಂದಿ ವಾಪಸ್ ಕಬ್ಬನ್‌ಪಾರ್ಕ್‌ ಠಾಣೆಗೇ ಕಳುಹಿಸಿದ್ದರು.’

‘ನಂತರ ದೂರಿನ ಪ್ರತಿಯನ್ನು ಪಡೆದುಕೊಂಡ ಸಿಬ್ಬಂದಿ, ಅದನ್ನು ಓದದೆಯೇ ಹರಿದು ಕಸದ ಬುಟ್ಟಿಗೆ ಎಸೆದರು. ಪೊಲೀಸರು ಅಪ್ಪ–ಮಗನ (ಹ್ಯಾರಿಸ್–ನಲಪಾಡ್) ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಈಗ ಹಲ್ಲೆಗೊಳಗಾದ ವಿದ್ಯಾರ್ಥಿಯ ತಂದೆ ಪ್ರಭಾವಿ ವ್ಯಕ್ತಿ. ಅದೊಂದೇ ಕಾರಣಕ್ಕೆ ಆರೋಪಿಗಳ ಬಂಧನವಾಗಿದೆ. ಇಲ್ಲವಾಗಿದ್ದರೆ, ಇದು ಸಹ ನೂರರಲ್ಲಿ ಒಂದು ಪ್ರಕರಣವಾಗಿ ಹೋಗುತ್ತಿತ್ತು’ ಎಂದು ಪೂರ್ಣಿಮಾ ಹೇಳಿದ್ದಾರೆ.

‘ಏ... ನಾನು ಎಂಎಲ್‌ಎ ನೆನಪಿರಲಿ’: ‘ಕಳೆದ ವರ್ಷ ನಲಪಾಡ್ ಕುಡಿದ ಮತ್ತಿನಲ್ಲಿ ನನ್ನ ಮೇಲೆ ಭೀಕರವಾಗಿ ಹಲ್ಲೆಮಾಡಿದ್ದ. ಪೊಲೀಸರು ದೂರು ಸ್ವೀಕರಿಸಲಿಲ್ಲ. ನನ್ನನ್ನು ಹುಡುಕಿಕೊಂಡು ಆಸ್ಪತ್ರೆಗೆ ಬಂದಿದ್ದ ಹ್ಯಾರಿಸ್ ದೂರು ಕೊಡದಂತೆ ಬೆದರಿಸಿ ಹೋಗಿದ್ದರು’ ಎಂದು ಜೀವನ್‌ಬಿಮಾನಗರದ ಕಾಂಗ್ರೆಸ್ ಕಾರ್ಯಕರ್ತ ಪೀಟರ್ ಪ್ರಮೋದ್ ದೂರಿದ್ದಾರೆ.

‘2017ರ ಜೂನ್ 12ರಂದು ಎಐಸಿಸಿ ಅಧ್ಯಕ್ಷ (ಆಗ ಉಪಾಧ್ಯಕ್ಷ) ರಾಹುಲ್‌ಗಾಂಧಿ ನಗರಕ್ಕೆ ಭೇಟಿ ನೀಡಿದ್ದರು. ಅವರಿಗೆ ಸ್ವಾಗತ ಕೋರಿ ಹಿಂದಿನ ದಿನ ರಾತ್ರಿ ಎಚ್‌ಎಎಲ್ ರಸ್ತೆಯಲ್ಲಿ ಬ್ಯಾನರ್ ಕಟ್ಟುತ್ತಿದ್ದೆವು. ಆಗ ಸಹಚರರೊಂದಿಗೆ ಅಲ್ಲಿಗೆ ಬಂದಿದ್ದ ನಲಪಾಡ್, ಏಕಾಏಕಿ ನನ್ನ ಮೇಲೆ ಹಲ್ಲೆ ನಡೆಸಿದ್ದ’ ಎಂದರು.

‘ಸ್ನೇಹಿತರು ತಕ್ಷಣ ನನ್ನನ್ನು ಹಾಸ್ಮ್ಯಾಟ್ ಆಸ್ಪತ್ರೆಗೆ ದಾಖಲಿಸಿದ್ದರು. ಐಸಿಯುನಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಅಲ್ಲಿಗೇ ಬಂದ ಹ್ಯಾರಿಸ್ ಅವರಿಗೆ, ಕಾಂಗ್ರೆಸ್‌ನ ಸಿ.ವಿ.ರಾಮನ್‌ನಗರ ಬ್ಲಾಕ್ ಅಧ್ಯಕ್ಷ ಘಟನೆ ಬಗ್ಗೆ ವಿವರಿಸಿದರು. ಅಲ್ಲದೆ, ತಮ್ಮ ಮಗನಿಗೆ ಸ್ವಲ್ಪ ಬುದ್ಧಿ ಹೇಳುವಂತೆ ತಿಳಿಸಿದ್ದರು. ಅಷ್ಟಕ್ಕೇ ಅವರು, ‘ಏ.. ಯಾರ ಹತ್ರ ಮಾತಾಡ್ತಿದ್ದಿಯಾ. ನಾನು ಎಂಎಲ್‌ಎ ಎಂಬುದು ನೆನಪಿರಲಿ’ ಎಂದು ಗದರಿದ್ದರು. ಈ ವಿಚಾರವನ್ನೂ ಪೊಲೀಸರ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಪ್ಪ–ಮಗ ಅಧಿಕಾರದ ಮದದಲ್ಲಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಅವರಿಗೆ ಪೊಲೀಸರ ಕಿಂಚಿತ್ತೂ ಭಯವಿಲ್ಲ. ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry