ಭಾನುವಾರ, ಡಿಸೆಂಬರ್ 8, 2019
25 °C

ಮೆಟ್ರೊ ಎರಡನೇ ಹಂತ: ಸುರಂಗ ಕಾಮಗಾರಿಗೆ ಮರು ಟೆಂಡರ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಟ್ರೊ ಎರಡನೇ ಹಂತ: ಸುರಂಗ ಕಾಮಗಾರಿಗೆ ಮರು ಟೆಂಡರ್‌?

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಗೊಟ್ಟಿಗೆರೆ– ನಾಗವಾರ ಮಾರ್ಗದಲ್ಲಿ ಡೇರಿ ವೃತ್ತ– ನಾಗವಾರದವರೆಗೆ ನಿರ್ಮಾಣಗೊಳ್ಳಲಿರುವ ಸುರಂಗ ಕಾಮಗಾರಿಗೆ ಮರು ಟೆಂಡರ್‌ ಕರೆಯುವ ಸಾಧ್ಯತೆ ಇದೆ. ಹಾಗಾಗಿ, ಈ ಕಾಮಗಾರಿ ಈ ಹಿಂದೆ ನಿಗದಿಪಡಿಸಿದ್ದ ಗಡುವಿನೊಳಗೆ ಪೂರ್ಣಗೊಳ್ಳುವುದು ಅನುಮಾನ.

ಈ ಸುರಂಗದ ಕಾಮಗಾರಿಯ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿರುವ ಕಂಪನಿಗಳು ಟೆಂಡರ್‌ನಲ್ಲಿ ನಮೂದಿಸಿದ ದರಕ್ಕಿಂತ ಬಹಳ ಹೆಚ್ಚು ಮೊತ್ತವನ್ನು ನಮೂದಿಸಿರುವುದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಈ ಕಾಮಗಾರಿಯನ್ನು ನಿಗದಿತ ಅವಧಿಯಲ್ಲೇ ಪೂರ್ಣಗೊಳಿಸಲು ಶತಾಯ ಗತಾಯ ಪ್ರಯತ್ನಿಸುತ್ತಿರುವ ನಿಗಮವು ಟೆಂಡರ್‌ನಲ್ಲಿ ಭಾಗವಹಿಸಿರುವ ಕಂಪನಿಗಳ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುತ್ತಿದೆ.

‘ಕಂಪನಿಗಳು ನಮೂದಿಸಿರುವ ಮೊತ್ತವು ಟೆಂಡರ್‌ ಮೊತ್ತಕ್ಕಿಂತ ಬಹಳ ಜಾಸ್ತಿ ಇದೆ. ಅಷ್ಟೊಂದು ಮೊತ್ತಕ್ಕೆ ಕಾಮಗಾರಿಯ ಗುತ್ತಿಗೆ ನೀಡಲು ಸಾಧ್ಯವಿಲ್ಲ. ಮೊತ್ತವನ್ನು ಕಡಿಮೆಗೊಳಿಸುವಂತೆ ನಾವು ಚೌಕಾಸಿ ನಡೆಸುತ್ತಿದ್ದೇವೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಂಪನಿಗಳು ನಮ್ಮ ಕೋರಿಕೆಗೆ ಒಪ್ಪದಿದ್ದರೆ, ಈ ಕಾಮಗಾರಿಗೆ ಮರು ಟೆಂಡರ್‌ ಕರೆಯುವುದು ಅನಿವಾರ್ಯ’ ಎಂದು ಅವರು ಸ್ಪಷ್ಟಪಡಿಸಿದರು.

ಸುರಂಗ ಮಾರ್ಗದ ಉದ್ದವನ್ನು ಕಡಿಮೆಗೊಳಿಸುವ ಮೂಲಕ ವೆಚ್ಚವನ್ನು ಕಡಿತಗೊಳಿಸುವ ಸಾಧ್ಯತೆಯ ಬಗ್ಗೆಯೂ ಚಿಂತನೆ ನಡೆದಿದೆ. ಇದಕ್ಕೂ ನಾವು ಮರು ಟೆಂಡರ್‌ ಕರೆಯಲೇಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಸುರಂಗ ಮಾರ್ಗಕ್ಕೆ ನಿಗಮವು 2017ರ ಜುಲೈನಲ್ಲಿ ನಿಗಮವು ಟೆಂಡರ್‌ ಆಹ್ವಾನಿಸಿತ್ತು. ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು 36 ತಿಂಗಳು ಕಾಲಾವಕಾಶ ನೀಡುವುದಾಗಿ ನಿಗಮವು ತಿಳಿಸಿತ್ತು.

ಡೇರಿ ವೃತ್ತದಿಂದ ನಾಗವಾರದವರೆಗಿನ ಸುರಂಗ ಮಾರ್ಗ ಮೊದಲ ಹಂತದ ಸುರಂಗ ಮಾರ್ಗಗಳಿಗಿಂತಲೂ ಉದ್ದವಿದೆ. ಇದರ ನಿರ್ಮಾಣಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ. ಇದರ ಟೆಂಡರ್‌ ಪ್ರಕ್ರಿಯೆ ಆರಂಭವಾಗಿ ಈಗಾಗಲೇ 7 ತಿಂಗಳು ಕಳೆದಿದೆ. ಮರು ಟೆಂಡರ್‌ ಕರೆದರೆ ಮತ್ತೆ ಏಳೆಂಟು ತಿಂಗಳು ವ್ಯರ್ಥವಾಗುತ್ತದೆ. ಅಷ್ಟು ಸಮಯ ಈ ಕಾಮಗಾರಿ ವಿಳಂಬವಾಗಲಿದೆ ಎನ್ನುತ್ತಾರೆ ‘ಪ್ರಜಾ ರಾಗ್‌’ ಸಂಘಟನೆಯ ಸಂಜೀವ ದ್ಯಾಮಣ್ಣವರ್‌.

ಕಾರ್ಯಾದೇಶ ನೀಡಿದ ಬಳಿಕ ಸುರಂಗ ಕೊರೆಯುವ ಯಂತ್ರಗಳನ್ನು ತರಿಸಿಕೊಳ್ಳುವುದಕ್ಕೇ ವರ್ಷಾನುಗಟ್ಟಲೆ ಹಿಡಿಯುತ್ತದೆ. ಈ ಯಂತ್ರಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕು. ಸುರಂಗ ಕೊರೆಯುವುದಕ್ಕೆ 36 ತಿಂಗಳು ಕಾಲಾವಕಾಶ ನೀಡಲಾಗಿದೆ. ಅದಾದ ಬಳಿಕ ಹಳಿ ಜೋಡಣೆ, ವಿದ್ಯುತ್‌ ಸಂಪರ್ಕ ಕಲ್ಪಿಸುವುದು ಮೊದಲಾದ ಕೆಲಸಗಳಿಗೆ ಮತ್ತೆ ಹೆಚ್ಚೂ ಕಡಿಮೆ ಒಂದು ವರ್ಷ ಬೇಕಾಗುತ್ತದೆ ಎಂದು ಅವರು ವಿಶ್ಲೇಷಿಸಿದರು.

ಗೊಟ್ಟಿಗೆರೆ–ನಾಗವಾರ ಮಾರ್ಗಕ್ಕೆ 2014ರ ಫೆಬ್ರುವರಿಯಲ್ಲೇ ಮಂಜೂರಾತಿ ಸಿಕ್ಕಿತ್ತು. ತಕ್ಷಣವೇ ಟೆಂಡರ್‌ ಆಹ್ವಾನಿಸಿದ್ದರೆ ಇಷ್ಟು ಹೊತ್ತಿಗೆ ಕಾಮಗಾರಿ ಆರಂಭವಾಗುತ್ತಿತ್ತು. ಆದರೆ, ಎರಡು ವರ್ಷ ತಡವಾಗಿ ಟೆಂಡರ್‌ ಕರೆಯಲಾಯಿತು ಎಂದು ಅವರು ಟೀಕಿಸಿದರು.

ನಿಗಮವು 2020ರ ಒಳಗೆ ಎರಡನೇ ಹಂತವನ್ನು ಪೂರ್ಣಗೊಳಿಸುವುದಾಗಿ ಹೇಳಿತ್ತು. ಈಗ ಗಡುವನ್ನು ಒಂದು ವರ್ಷ ವಿಸ್ತರಿಸಿದೆ. ನಿಗಮ ಹೇಳಿರುವಂತೆ 2021ರ ಒಳಗೂ ಕಾಮಗಾರಿ ಖಂಡಿತಾ ಪೂರ್ಣಗೊಳ್ಳದು ಎಂದರು.

‘ಕಾಮಗಾರಿ ವಿಳಂಬವಾದಂತೆ ಅದರ ವೆಚ್ಚವೂ ಸಹಜವಾಗಿಯೇ ಹೆಚ್ಚಳ ಆಗುತ್ತದೆ. ತೆರಿಗೆದಾರರ ಮೇಲೆ ಹಾಗೂ ಪ್ರಯಾಣಿಕರ ಮೇಲೆ ಈ ಹೊರೆಯನ್ನು ವರ್ಗಾಯಿಸಲಾಗುತ್ತದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)