ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರದಲ್ಲಿ ನಂ.1 ರಾಜ್ಯ: ಶಾ

ಕುಲ್ಕುಂದ, ಬಿ.ಸಿ.ರೋಡ್‌ನಲ್ಲಿ ನವಶಕ್ತಿ, ಮಲ್ಪೆಯಲ್ಲಿ ಮೀನುಗಾರರ ಸಮಾವೇಶ
Last Updated 20 ಫೆಬ್ರುವರಿ 2018, 19:59 IST
ಅಕ್ಷರ ಗಾತ್ರ

ಮಂಗಳೂರು: ಭ್ರಷ್ಟಾಚಾರದ ಅರ್ಥವನ್ನು ಬದಲಾಯಿಸುವ ಕಾಲ ಬಂದಿದೆ. ಭ್ರಷ್ಟಾಚಾರಕ್ಕೆ ಅರ್ಥವೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ. ಭ್ರಷ್ಟಾಚಾರ ಸ್ಪರ್ಧೆ ನಡೆದಿದ್ದರೆ, ಐದು ವರ್ಷಗಳಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ಮೊದಲ ಪ್ರಶಸ್ತಿ ಲಭಿಸುತ್ತಿತ್ತು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದರು.

ಮಂಗಳವಾರ ಬಿ.ಸಿ.ರೋಡ್‌ನಲ್ಲಿ ನಡೆದ ನವಶಕ್ತಿ ಸಮಾವೇಶದಲ್ಲಿ ಮಾತನಾಡಿದ ಅವರು, ಮರಳು ಮಾಫಿಯಾ, ತುಷ್ಟೀಕರಣ ನೀತಿಯಿಂದ ಯಾವುದೇ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಮುಂಬರುವ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದವರು ಪಾತಾಳದಲ್ಲಿ ಅಡಗಿದ್ದರೂ, ಅವರನ್ನು ಹಿಡಿದು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದರು.

ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ‘ಕೇಂದ್ರ ಸರ್ಕಾರ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ವಿಶ್ವದರ್ಜೆಯ 20 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ತಲಾ ₹ 10 ಸಾವಿರ ಕೋಟಿ ಅನುದಾನ ನೀಡಲು ಉದ್ದೇಶಿಸಲಾಗಿದೆ’ ಎಂದರು.

ಸಂಜೆ ಮಲ್ಪೆಯಲ್ಲಿ ಮೀನುಗಾರರ ಸಮಾವೇಶದಲ್ಲಿ ಮಾತನಾಡಿದ ಶಾ, ಸಿದ್ದರಾಮಯ್ಯ ಸರ್ಕಾರ ನಿರ್ಲಜ್ಜ ಸರ್ಕಾರ. ಬೆಂಗಳೂರಿನಂತಹ ನಗರ ಇಟ್ಟುಕೊಂಡು ರಾಜ್ಯ ಬಡತನದಲ್ಲಿದೆ ಎಂದರೆ ನಿಜವಾಗಿಯೂ ಸೋಜಿಗ ಎಂದರು.

ಗೂಂಡಾ ಗವರ್ನೆನ್ಸ್‌ನಿಂದ ಗುಡ್‌ ಗವರ್ನೆನ್ಸ್‌ನತ್ತ’

‘ಭ್ರಷ್ಟಾಚಾರದ ಆರೋಪಕ್ಕೆ ದಾಖಲೆ ಕೊಡಿ ಎಂದು ಸಿದ್ದರಾಮಯ್ಯ ಯಾವಾಗಲೂ ಕೇಳುತ್ತಾರೆ. ಅವರ ಸರ್ಕಾರದ 19 ಹಗರಣಗಳ ದಾಖಲೆಗಳು ನಮ್ಮ ಬಳಿ ಇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ದುಬಾರಿ ವಾಚ್‌ ಹಗರಣ, ಡಿನೋಟಿಫಿಕೇಷನ್‌, ಸಚಿವರ ಮನೆಗಳ ಮೇಲೆ ಆದಾಯ ತೆರಿಗೆ ದಾಳಿ ಹೀಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಲು ಸಾಲು ಹಗರಣಗಳು ನಡೆದಿವೆ. ‘ಗೂಂಡಾ ಗವರ್ನೆನ್ಸ್‌’ನಿಂದ ಮುಕ್ತಿ ಪಡೆದು ಬಿಜೆಪಿಯ ‘ಗುಡ್‌ ಗವರ್ನೆನ್ಸ್‌’ಗಾಗಿ ಜನ ಕಾಯುತ್ತಿದ್ದಾರೆ’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT