ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರ ಪ್ರಭಾವದ ಪಲ್ಲಟಗಳು...

Last Updated 20 ಫೆಬ್ರುವರಿ 2018, 20:15 IST
ಅಕ್ಷರ ಗಾತ್ರ

ಕರ್ನಾಟಕದ ರಾಜಕಾರಣವನ್ನು ಎರಡು ಪ್ರಭಾವಿ ಸಮುದಾಯಗಳು ನಿರ್ದೇಶಿಸುತ್ತಿವೆ. ಅವುಗಳಲ್ಲಿ ಒಕ್ಕಲಿಗ ಸಮುದಾಯವೂ ಒಂದು (ಇನ್ನೊಂದು ಲಿಂಗಾಯತ–ವೀರಶೈವ). ಹಳೆ ಮೈಸೂರು ಭಾಗದಲ್ಲಿ ಈ ಸಮುದಾಯದ ಹಿಡಿತ ಹೆಚ್ಚು ಬಿಗಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಇವರಲ್ಲಿರುವ ರಾಜಕೀಯ ಜಾಗೃತಿ. ಶಾಸನಸಭೆಯ ಪ್ರಾತಿನಿಧ್ಯದ ಮೇಲೂ ಇದರ ದಟ್ಟ ಪ್ರಭಾವ ಇದೆ.

ದಕ್ಷಿಣ ಕರ್ನಾಟಕದ ಬಹುಪಾಲು ಜಿಲ್ಲೆಗಳಲ್ಲಿ ಪ್ರಬಲವಾಗಿರುವ ಒಕ್ಕಲಿಗರು 1999ರ ಚುನಾವಣೆವರೆಗೂ ನಿರ್ದಿಷ್ಟ ಪಕ್ಷದ ಜತೆ ಗುರುತಿಸಿಕೊಂಡಿರಲಿಲ್ಲ. ನಂತರ ಪರಿಸ್ಥಿತಿ ಬದಲಾಯಿತು. 2004ರ ಚುನಾವಣೆಯಿಂದ ಈ ಭಾಗದಲ್ಲಿ ಅವರು ಜೆಡಿಎಸ್‌ ಜತೆ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ ಎನ್ನಬಹುದು. ಇಲ್ಲಿನ ರಾಜಕೀಯ ಚಟುವಟಿಕೆಗಳು ಬಹುಮಟ್ಟಿಗೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರ ಪರ ಅಥವಾ ವಿರುದ್ಧವೇ ಗಿರಕಿ ಹೊಡೆಯುತ್ತವೆ.

2004ರ ವಿಧಾನಸಭಾ ಚುನಾವಣೆಯಲ್ಲಿ ದೇವೇಗೌಡರ ಜತೆ ಆ ಪಕ್ಷದಲ್ಲಿ ಬೇರೆ ಬೇರೆ ಜಾತಿ ಸಮುದಾಯಗಳಿಗೆ ಸೇರಿದ ಪ್ರಮುಖ ಮುಖಂಡರಾದ ಸಿದ್ದರಾಮಯ್ಯ, ಎಚ್‌.ಸಿ.ಮಹದೇವಪ್ಪ, ವಿ.ಶ್ರೀನಿವಾಸ ಪ್ರಸಾದ್‌, ಎಂ.ಪಿ.ಪ್ರಕಾಶ್‌, ಡಿ.ಟಿ.ಜಯಕುಮಾರ್, ಸಿ.ಎಂ.ಇಬ್ರಾಹಿಂ ಮೊದಲಾದವರೂ ಇದ್ದರು. ಆಗ ಜೆಡಿಎಸ್‌ 58 ಸ್ಥಾನಗಳನ್ನು ಗೆದ್ದಿತ್ತು. 2008ರ ಚುನಾವಣೆ ವೇಳೆಗೆ ಇವರೆಲ್ಲರೂ ಜೆಡಿಎಸ್‌ನಿಂದ ದೂರವಾದರೂ ಮಂಡ್ಯ, ಹಾಸನ, ತುಮಕೂರು, ರಾಮನಗರ ಜಿಲ್ಲೆಗಳಲ್ಲಿ ಜೆಡಿಎಸ್‌ನ ಪ್ರಾಬಲ್ಯ ಕಾಯುವಲ್ಲಿ ಒಕ್ಕಲಿಗ ಸಮುದಾಯ ಪ್ರಧಾನ ಪಾತ್ರ ವಹಿಸಿತು. 2013ರ ಚುನಾವಣೆ ವೇಳೆಗೆ ಜೆಡಿಎಸ್‌ ಶಕ್ತಿ ಇನ್ನಷ್ಟು ವೃದ್ಧಿಗೊಂಡು, ಮೈಸೂರಿನಲ್ಲೂ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು.

ಹಾಸನ, ಮಂಡ್ಯ, ರಾಮನಗರ ಜಿಲ್ಲೆಗಳ ಮೀಸಲು ಕ್ಷೇತ್ರಗಳನ್ನು ಬಿಟ್ಟು ಉಳಿದೆಲ್ಲಾ ಕಡೆ ಎಲ್ಲ ರಾಜಕೀಯ ಪಕ್ಷಗಳೂ ಸಾಮಾನ್ಯವಾಗಿ ಒಕ್ಕಲಿಗ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುತ್ತ ಬಂದಿವೆ (ಕನಕಪುರ ಮತ್ತು ಬೇಲೂರು ಕ್ಷೇತ್ರಗಳಲ್ಲಿ ಮರಾಠಾ ಮತ್ತು ಲಿಂಗಾಯತ ಸಮುದಾಯವರಿಗೆ ಜೆಡಿಎಸ್‌ ಅವಕಾಶ ಕೊಟ್ಟಿತ್ತು). ಒಕ್ಕಲಿಗರ ಮತಗಳು ಹರಿದು ಹಂಚಿಹೋದರೂ ತುಮಕೂರು, ಹಾಸನ ಮತ್ತು ಮಂಡ್ಯದಲ್ಲಿ ಜೆಡಿಎಸ್‌ ನಗೆ ಬೀರುತ್ತಿರುವುದನ್ನು ಕಳೆದ ಮೂರು ಚುನಾವಣೆಗಳ ಅಂಕಿ ಅಂಶ ಸಾಬೀತುಪಡಿಸುತ್ತದೆ. 1999ರಲ್ಲಿ ಪಕ್ಷ ವಿಭಜನೆಯಾದ ಸಂದರ್ಭದಲ್ಲೂ ಜೆಡಿಎಸ್‌ ತುಮಕೂರಿನಲ್ಲಿ ಮೂರು ಹಾಗೂ ಮಂಡ್ಯದಲ್ಲಿ ಒಂದು ಸ್ಥಾನ ಗಳಿಸಿತ್ತು. ಆದರೆ ಹಾಸನದಲ್ಲಿ ಅದರ ಸಾಧನೆ ಶೂನ್ಯವಾಗಿತ್ತು.

ಒಂದು ಕಾಲಕ್ಕೆ ರಾಷ್ಟ್ರೀಯ ಪಕ್ಷವಾಗಿದ್ದ ಜನತಾಪಕ್ಷ ನಂತರ ಜನತಾದಳ, ಜನತಾದಳ (ಯು), ಜನತಾದಳ (ಎಸ್‌) ಎಂದು ವಿಭಜನೆಯಾಗಿದೆ. ಇಷ್ಟೆಲ್ಲ ಆದರೂ ರಾಜ್ಯದಲ್ಲಿ ಜೆಡಿಎಸ್‌ ತನ್ನ ಬಲ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ.

ದೇವೇಗೌಡ, ಎಸ್.ಎಂ.ಕೃಷ್ಣ, ಜಿ.ಮಾದೇಗೌಡರು ಒಕ್ಕಲಿಗ ಸಮುದಾಯದ ಹಿರಿಯ ಚೇತನಗಳು. ಮೂವರೂ ಒಂದೇ ತಲೆಮಾರಿನವರು. ಕಳೆದ ವರ್ಷ ಬಿಜೆಪಿ ಸೇರಿದ ನಂತರ ಕೃಷ್ಣ ಅವರು ರಾಜಕೀಯವಾಗಿ ಅಷ್ಟು ಸಕ್ರಿಯವಾಗಿಲ್ಲ. ಅವರು ಮುತ್ಸದ್ದಿ, ರಾಜಕೀಯ ಪಾಂಡಿತ್ಯ ಹೊಂದಿದ ಸಂಸದೀಯ ಪಟು. ಆದರೆ ಹೋರಾಟಗಾರ ಅಲ್ಲ. ರೈತಾಪಿ ಒಕ್ಕಲಿಗರಿಗೆ ಇದು ಒಪ್ಪಿಗೆಯಾಗಲಿಲ್ಲ. ಆದರೆ ನಗರ ಪ್ರದೇಶದವರು ಅವರನ್ನು ಹೆಚ್ಚು ಇಷ್ಟಪಡುತ್ತಾರೆ. ಅವರಿಂದ ಬಿಜೆಪಿಗೆ ಎಷ್ಟು ಲಾಭ ಎಂಬುದನ್ನು ಕಾದು ನೋಡಬೇಕು.

ಮಾಜಿ ಸಂಸದ, ಮಾಜಿ ಸಚಿವ ಮಾದೇಗೌಡರು ಒಂದು ಕಾಲಕ್ಕೆ ಮಂಡ್ಯದ ಅಗ್ರಗಣ್ಯ ನಾಯಕ. ಈಗ ಅವರು ಕಾವೇರಿ ಹೋರಾಟಕ್ಕೆ ಸೀಮಿತವಾಗಿದ್ದಾರೆ. ಆದರೆ ದೇವೇಗೌಡರು ಮಾತ್ರ ಈಗಲೂ 24x7 ರಾಜಕಾರಣಿ. ಈ ಇಳಿ ವಯಸ್ಸಿನಲ್ಲೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತುವ ಅವರು ಬರೀ ಜಾತಿಯಿಂದಾಗಿಯೇ ನಾಯಕರಾಗಿದ್ದಾರೆ ಎನ್ನಲಾಗದು. ‘ನಾಟಿ ರಾಜಕೀಯ’, ರೈತ ಪರ ಧೋರಣೆ ಮತ್ತು ಜನಸಾಮಾನ್ಯರ ನೋವಿಗೆ ಸ್ಪಂದನೆ ತೋರುವ ಗುಣದಿಂದಾಗಿ ನಾಯಕತ್ವವನ್ನು ಭದ್ರವಾಗಿ ಉಳಿಸಿ ಕೊಂಡಿದ್ದಾರೆ.

ಹೆಚ್ಚು ಕಾಲ ವಿರೋಧ ಪಕ್ಷದಲ್ಲಿಯೇ ಉಳಿದ ಕಾರಣ ದೇವೇಗೌಡರ ಶಕ್ತಿ ಹೆಚ್ಚಾಯಿತು. ಆದರೆ ಅವರು ಅಧಿಕಾರಸ್ಥರನ್ನು ಒಳಗೊಳಗೇ ಓಲೈಸುತ್ತಿದ್ದರು ಎಂದು ಅವರ ವಿರೋಧಿಗಳು ಹೇಳುತ್ತಾರೆ. ಆದರೆ, ‘ಕ್ಷೇತ್ರದ ಅಭಿವೃದ್ಧಿಗಾಗಿ ದೇವರಾಜ ಅರಸು ಮತ್ತು ಆರ್‌.ಗುಂಡೂರಾವ್‌ ಅವರೊಂದಿಗೆ ಸ್ನೇಹದಿಂದ ಇದ್ದೆ’ ಎಂದು ದೇವೇಗೌಡರು ಹೇಳಿಕೊಂಡಿದ್ದಾರೆ.

ಮಂಡ್ಯ, ಮೈಸೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಗಂಗಟಕಾರ ಒಕ್ಕಲಿಗರು ಹೆಚ್ಚು. ಹಾಸನದಲ್ಲಿ ಮಾತ್ರ ದಾಸಗೌಡ ಮತ್ತು ಮುಳ್ಳುಗೌಡ ಎಂಬ ಉಪಜಾತಿಗಳ ನಡುವೆ ರಾಜಕೀಯ ಕಾದಾಟ. ಅದೂ ಹಾಸನ ತಾಲ್ಲೂಕಿಗೆ ಮಾತ್ರ ಸೀಮಿತ. ಈ ಎರಡು ಉಪ ಜಾತಿಗಳ ನಡುವೆ ನಿತ್ಯದ ಜೀವನದಲ್ಲಿ ಇಲ್ಲದ ಭೇದ, ರಾಜಕೀಯದಲ್ಲಿ ಮಾತ್ರ ಢಾಳಾಗಿ ಎದ್ದು ಕಾಣುತ್ತದೆ. ಈ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌– ಜೆಡಿಎಸ್‌ ಯಾವಾಗಲೂ ದಾಸಗೌಡ ಸಮುದಾಯದವರನ್ನೇ ಕಣಕ್ಕಿಳಿಸುತ್ತವೆ.

ಬಿಜೆಪಿಯು ಕೆಲವೊಮ್ಮೆ ಬೇರೆ ಜಾತಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಾಜಿ ಸಚಿವ ಕೆ.ಎಚ್‌.ಹನುಮೇಗೌಡ ಈ ಕ್ಷೇತ್ರದಿಂದ ಕಾಂಗ್ರೆಸ್‌, ಬಿಜೆಪಿ, ಬಿಎಸ್‌ಪಿಯಿಂದ ಸ್ಪರ್ಧಿಸಿ ಒಟ್ಟು ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. ನಂತರದ ಸ್ಥಾನ ಹಾಲಿ ಶಾಸಕ ಎಚ್‌.ಎಸ್‌.ಪ್ರಕಾಶ್ ಅವರದ್ದು. ಅವರು ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. ಇಲ್ಲಿ ದೇವೇಗೌಡರ ನಾಮಬಲದ ಮೇಲೆ ಮುಳ್ಳುಗೌಡರು ಜೆಡಿಎಸ್‌ ಅಭ್ಯರ್ಥಿ ಪರ ನಿಲ್ಲುವುದರಿಂದ ಪ್ರಕಾಶ್‌ ಗೆಲುವು ಸಾಧ್ಯವಾಗುತ್ತಿದೆ.

ದಾಸಗೌಡ ಸಮುದಾಯ ಮುಂಚೆ ಹಾಸನ ತಾಲ್ಲೂಕಿಗಷ್ಟೇ ಸೀಮಿತವಾಗಿತ್ತು. ಆದರೆ ಗೊರೂರಿನಲ್ಲಿ ಹೇಮಾವತಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಿದ ನಂತರ ಅವರಿಗೆ ಜಿಲ್ಲೆಯ ಬೇರೆ ಬೇರೆ ಕಡೆ ಪುನರ್ವಸತಿ ಕಲ್ಪಿಸಲಾಗಿದೆ. ಹೀಗಾಗಿ ಜಿಲ್ಲೆಯ ಆಲೂರು, ಹೊಳೆನರಸೀಪುರ ತಾಲ್ಲೂಕಿನಲ್ಲೂ ಅಲ್ಪ ಪ್ರಮಾಣದಲ್ಲಿ ಅವರು ನೆಲೆಸಿದ್ದಾರೆ.

ಈಗಿನ ರಾಮನಗರ ಜಿಲ್ಲೆಯ, ಒಕ್ಕಲಿಗರೇ ಹೆಚ್ಚಾಗಿರುವ ಕನಕಪುರದಲ್ಲಿ ಆರು ಬಾರಿ ಸತತವಾಗಿ (ಜನತಾ ಪರಿವಾರದ ಅಭ್ಯರ್ಥಿಯಾಗಿ) ಗೆಲುವು ಸಾಧಿಸಿದ್ದ ಪಿ.ಜಿ.ಆರ್‌. ಸಿಂಧ್ಯ ಅವರಿಗೆ ಕ್ಷೇತ್ರ ಪುನರ್‌ವಿಂಗಡಣೆ ನಂತರ ಅದೇ ಕ್ಷೇತ್ರದಲ್ಲಿ ಗೆಲ್ಲಲು ಆಗಲೇ ಇಲ್ಲ. ಅಲ್ಲಿಯವರೆಗೂ ಅವರು ಕಾಂಗ್ರೆಸ್‌ನ ಒಕ್ಕಲಿಗ ಅಭ್ಯರ್ಥಿಯನ್ನು ಸೋಲಿಸುತ್ತಿದ್ದರು. ಮುಂದೆ ಅವರೇ ಜೆಡಿಎಸ್‌ ಅಭ್ಯರ್ಥಿಯಾದರೂ ಕಾಂಗ್ರೆಸ್‌ನಲ್ಲಿನ ಒಕ್ಕಲಿಗ ಮುಖಂಡ
ಡಿ.ಕೆ.ಶಿವಕುಮಾರ್‌ ಎದುರು ಸೋಲಬೇಕಾಯಿತು. ಈ ಭಾಗದಲ್ಲಿ ಶಿವಕುಮಾರ್‌ ಸಹ ಪ್ರಭಾವಿ. ರಾಮನಗರ ಜಿಲ್ಲೆಯಲ್ಲಿ ಅವರೂ ಹಿಡಿತ ಸಾಧಿಸಿದ್ದಾರೆ. ಆದರೆ ಅದು ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ತಂದುಕೊಡುವಷ್ಟು ಪ್ರಮಾಣದಲ್ಲಿ ಇಲ್ಲ.

ಇದೇ ಶಿವಕುಮಾರ್‌, 2004ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಪತ್ರಕರ್ತೆ ತೇಜಸ್ವಿನಿ ಗೌಡ ಅವರನ್ನು ಕಾಂಗ್ರೆಸ್‌ನಿಂದ ಕಣಕ್ಕಿಳಿಸಿ ದೇವೇಗೌಡರನ್ನೇ ಸೋಲಿಸಿದ್ದರು (ಹಾಸನ ಲೋಕಸಭಾ  ಕ್ಷೇತ್ರದಿಂದಲೂ ಸ್ಪರ್ಧಿಸಿದ್ದ ದೇವೇಗೌಡರು ಗೆಲುವು ಸಾಧಿಸಿದ್ದರು).

ಹಾಸನದ ಕಾಂಗ್ರೆಸ್‌ ಮುಖಂಡರೊಬ್ಬರ ಪ್ರಕಾರ, ‘ಕಾಂಗ್ರೆಸ್‌ನಲ್ಲಿ ಈಗ ಒಕ್ಕಲಿಗರ ನಾಯಕ ಎಂದು ಹೇಳಲು ಯಾರೂ ಇಲ್ಲ. ಶಿವಕುಮಾರ್‌ ಮಾತಿಗೆ ಅವರ ಪಕ್ಷದಲ್ಲೇ ಬೆಲೆ ಇಲ್ಲ. ಅವರಿಗೆ ಸಮುದಾಯದ ಹಿತ ಕಾಪಾಡುವ ಶಕ್ತಿ ಇಲ್ಲ’.

ದೇವೇಗೌಡರನ್ನು ಒಕ್ಕಲಿಗ ಸಮುದಾಯ ಪರಮೋಚ್ಚ ನಾಯಕ ಎಂದು ಒಪ್ಪಿಕೊಂಡಿದೆ. ಆದರೆ ಅವರ ಅತಿರೇಕದ ವರ್ತನೆಯನ್ನು ಸಹಿಸದೆ ಚುನಾವಣೆಯಲ್ಲಿ ಮಣಿಸಿ, ಬುದ್ಧಿಯನ್ನೂ ಕಲಿಸಿದೆ (1989ರಲ್ಲೂ ಅವರು ಸೋಲುಂಡಿದ್ದರು). ದೇವೇಗೌಡರು ಹಟವಾದಿ. ತಮ್ಮ ಸಮುದಾಯದ ಪ್ರಭಾವಿ ಮಠಾಧೀಶರೊಬ್ಬರ ಜೊತೆ ವೈಮನಸ್ಸು ಮೂಡಿದಾಗ, ಅವರನ್ನು ಮಣಿಸಲು ಮತ್ತೊಬ್ಬ ಮಠಾಧೀಶರಿಗೆ ಶಕ್ತಿ ತುಂಬಲು ಮುಂದಾಗಿದ್ದ ನಿದರ್ಶನವೂ ಇದೆ.

ಇನ್ನು ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ದಿವಂಗತ ಸಿ.ಬೈರೇಗೌಡ ಅಗ್ರಗಣ್ಯ ನಾಯಕರಾಗಿದ್ದವರು. ಅವರು ಚುನಾವಣೆಯಲ್ಲಿ ಸೋತೇ ಇರಲಿಲ್ಲ. ಅದೇ ರೀತಿ ದಿವಂಗತ ಆಂಜನೇಯ ರೆಡ್ಡಿ, ಟಿ.ಕೆ. ಗಂಗಿರೆಡ್ಡಿ ಮತ್ತು ಕೆ.ಎಂ. ಕೃಷ್ಣಾರೆಡ್ಡಿ ಅವರೂ ತಕ್ಕಮಟ್ಟಿಗೆ ಹಿಡಿತ ಹೊಂದಿದ್ದರು. ಚೌಡರೆಡ್ಡಿ, ಜಿ.ವಿ.ಶ್ರೀರಾಮ ರೆಡ್ಡಿ, ವೆಂಕಟಶಿವಾ ರೆಡ್ಡಿ ಈ ಜಿಲ್ಲೆಯ ಪ್ರಮುಖ ಒಕ್ಕಲಿಗ ನಾಯಕರು. ಆದರೆ ಇವರ ಹೆಸರಿನಲ್ಲಿ ರೆಡ್ಡಿ ಸೇರಿಕೊಂಡಿದೆ ಅಷ್ಟೆ.

ಕೋಲಾರ ತಾಲ್ಲೂಕಿನಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸ್ಥಳೀಯರಲ್ಲದ, ಕುರುಬ ಸಮುದಾಯದ ವರ್ತೂರು ಪ್ರಕಾಶ್‌ ಅವರು ಪ್ರಮುಖ ಮುಖಂಡ ಕೆ.ಶ್ರೀನಿವಾಸಗೌಡ ಅವರನ್ನು ಎರಡು ಬಾರಿ ಮಣಿಸಿದ್ದಾರೆ. ಇಲ್ಲಿ ಒಕ್ಕಲಿಗ ಅಥವಾ ಜೆಡಿಎಸ್‌ ಪ್ರಭಾವ ಏನೇನೂ ಕೆಲಸ ಮಾಡಿಲ್ಲ. ಮಾಲೂರಿನಲ್ಲಿ ಒಕ್ಕಲಿಗರಲ್ಲದ ಕೃಷ್ಣಯ್ಯ ಶೆಟ್ಟಿ ಗೆಲುವಿನ ನಗೆ ಬೀರಿದ್ದಾರೆ. ಇಂತಹ ವೈರುಧ್ಯಗಳೂ ಇವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದರೂ ಬಿ.ಎನ್‌.ಬಚ್ಚೇಗೌಡ (ಈಗ ಬಿಜೆಪಿ) ಅವರನ್ನು ಕುರುಬ ಸಮುದಾಯದ ಎಂ.ಟಿ.ಬಿ.ನಾಗರಾಜ್ ಎರಡು ಬಾರಿ ಸೋಲಿಸಿದ್ದಾರೆ.

ಮಲೆನಾಡು ಭಾಗದಲ್ಲಿ ಯುವಜನತೆ ಈಗ ಪಕ್ಷಾತೀತವಾಗಿ ಪ್ರಧಾನಿ ನರೇಂದ್ರ ಮೋದಿ ಪರವಿದ್ದಾರೆ. ಸಿ.ಟಿ.ರವಿ, ಡಿ.ಎನ್‌.ಜೀವರಾಜ್‌ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಿಡಿತ ಸಾಧಿಸಿದ್ದಾರೆ. ಮಲೆನಾಡು ರಾಜಕಾರಣಕ್ಕೆ ಮೆರುಗು ತಂದಿದ್ದ ಡಿ.ಬಿ.ಚಂದ್ರೇಗೌಡ, ತಾರಾದೇವಿ ಸಿದ್ಧಾರ್ಥ ಈಗ ಬದಿಗೆ ಸರಿದಿದ್ದಾರೆ. ಈ ಭಾಗದ ಹಿರಿಯರು ಈಗಲೂ ದೇವೇಗೌಡರ ಜತೆಗಿದ್ದಾರೆ.

ಈಗ ಒಕ್ಕಲಿಗ ಸಮುದಾಯದಲ್ಲಿ ಎರಡನೇ ಸಾಲಿನ ನಾಯಕರಾಗಿ ಎಚ್‌.ಡಿ.ಕುಮಾರಸ್ವಾಮಿ (ಜೆಡಿಎಸ್‌), ಡಿ.ಕೆ.ಶಿವಕುಮಾರ್‌ (ಕಾಂಗ್ರೆಸ್‌), ಆರ್. ಅಶೋಕ್‌ (ಬಿಜೆಪಿ) ಕಾಣಸಿಗುತ್ತಾರೆ. ಕುಮಾರಸ್ವಾಮಿ ಅವರಿಗೆ ದೇವೇಗೌಡರ ಶಕ್ತಿ ಮತ್ತು ಪ್ರಭಾವ ಬಳುವಳಿಯಾಗಿ ಬಂದಿದೆ. ಬಿಜೆಪಿಯಲ್ಲಿ ಅಶೋಕ್‌ ಜತೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರೂ ಇದ್ದಾರೆ. ಆದರೆ ಅವರ ಪ್ರಭಾವ ಸೀಮಿತ. ಅಶೋಕ್‌ ಅವರನ್ನು ಒಕ್ಕಲಿಗ ನಾಯಕನನ್ನಾಗಿ ಬಿಂಬಿಸುವ ಉದ್ದೇಶದಿಂದ ಬಿಜೆಪಿಯು ಅವರನ್ನು ಈ ಹಿಂದೆ ಉಪಮುಖ್ಯಮಂತ್ರಿ ಮಾಡಿತ್ತು. ಆದರೂ ಅವರಿಗೆ ಸಮುದಾಯದ ಮೇಲೆ ಪೂರ್ಣ ಹಿಡಿತ ಇಲ್ಲ.

ಒಕ್ಕಲಿಗ ಸಮುದಾಯ ಎಲ್ಲ ಕಾಲದಲ್ಲೂ ಸಾರಾಸಗಟಾಗಿ ಒಂದು ಪಕ್ಷ ಇಲ್ಲವೇ ಒಬ್ಬನೇ ನಾಯಕನ ಪರ ನಿಂತಿಲ್ಲ ಎಂಬುದಕ್ಕೆ ಅನೇಕ ವಿದ್ಯಮಾನಗಳು ನಮ್ಮ ಕಣ್ಣೆದುರು ಹಾದುಹೋಗುತ್ತವೆ. ಆದರೆ ಈಗ ಆ ಸಮುದಾಯದ ಮತಗಳಲ್ಲಿ ಸಿಂಹಪಾಲು ಪಡೆಯುವ ಸಾಮರ್ಥ್ಯವನ್ನು ಜೆಡಿಎಸ್‌ ಪಡೆದಿದೆ. ಈ ಪಕ್ಷ ತಮ್ಮದು ಎಂಬ ಭಾವನೆಯನ್ನು ಒಕ್ಕಲಿಗರಲ್ಲಿ ಮೂಡಿಸಿದೆ.

ಎಲ್ಲರೂ ಬೋಗಿಗಳೇ...

‘ದೇವೇಗೌಡರು ಒಂದು ರೀತಿಯಲ್ಲಿ ನಾಯಕರನ್ನು ಸೃಷ್ಟಿಸುವ ಕಾರ್ಖಾನೆ ಇದ್ದಂತೆ. ಅವರು ಬೆನ್ನು ತಟ್ಟಿ ಹಲವರನ್ನು ಒಂದು ಹಂತದವರೆಗೆ ಬೆಳೆಸಿದ್ದಾರೆ. ನಂತರ ನಾನಾ ಕಾರಣಗಳಿಂದಾಗಿ ಅವರಿಂದ ದೂರವಾಗಿರುವ ಅನೇಕರು ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ದೇವೇಗೌಡರು ಯಾರನ್ನಾದರೂ ಗುರುತಿಸಿ ಬೆಳೆಸುವ ಮುನ್ನ ಸಾಕಷ್ಟು ಆಲೋಚನೆ ಮಾಡುತ್ತಾರೆ. 10 ವರ್ಷಗಳ ನಂತರ ಅವರಿಂದ ತನಗೆ ಏನು ತೊಂದರೆ ಎದುರಾಗಬಹುದು ಎಂಬುದನ್ನು ಊಹಿಸುತ್ತಾರೆ. ಅಂತಹವರಿಗೆ ಹೇಗೆ ಪಾಠ ಕಲಿಸಬೇಕು ಎಂಬುದನ್ನೂ ಲೆಕ್ಕ ಹಾಕುತ್ತಾರೆ. ಆದರೆ ಆಲದ ಮರದ ನೆರಳಲ್ಲಿ ಬೇರೆ ಮರ ಬೆಳೆಯಲು ಸಾಧ್ಯವೇ’ ಎಂದು ಪ್ರಶ್ನಿಸುತ್ತಾರೆ ಅವರನ್ನು ಸಮೀಪದಿಂದ ಬಲ್ಲ ಹಿರಿಯರೊಬ್ಬರು.

ಆದ್ದರಿಂದಲೇ, ಜೆಡಿಎಸ್‌ನಲ್ಲಿ 3–4 ಬಾರಿ ಶಾಸಕರಾದವರ ಸಂಖ್ಯೆ ಸಾಕಷ್ಟಿದ್ದರೂ ಅವರಿಗೆ ನಾಯಕತ್ವ ಸಿಕ್ಕಿಲ್ಲ. ಎಲ್ಲರೂ ರೈಲಿನ ಬೋಗಿಗಳಂತೆ ಇರುತ್ತಾರೆಯೇ ಹೊರತು ಎಂಜಿನ್‌ ಆಗುವ ಅವಕಾಶ ಅವರಿಗೆ ಲಭಿಸಿಲ್ಲ.

ಉಪಜಾತಿಗಳು: ಗಂಗಟಕಾರ, ದಾಸಗೌಡ, ಮುಳ್ಳುಗೌಡ, ಮರಸು ಗೌಡ, ಕುಂಚಿಟಿಗ, ಅರೆಭಾಷಿಕ ಗೌಡ, ನಾಮಧಾರಿ ಗೌಡ, ರೆಡ್ಡಿ ಒಕ್ಕಲಿಗ, ಬಂಟರು.

ಒಕ್ಕಲಿಗರ ಪ್ರಾಬಲ್ಯದ ಜಿಲ್ಲೆಗಳು

1. ಮಂಡ್ಯ, 2. ಹಾಸನ, 3. ರಾಮನಗರ,
4. ತುಮಕೂರು, 5. ಕೋಲಾರ, 6. ಚಿಕ್ಕಬಳ್ಳಾಪುರ,

7. ಬೆಂಗಳೂರು ಗ್ರಾಮಾಂತರ
ಭಾಗಶಃ ಪ್ರಾಬಲ್ಯ

8. ಮೈಸೂರು, 9. ಕೊಡಗು, 10. ದಕ್ಷಿಣ ಕನ್ನಡ,
11. ಚಿಕ್ಕಮಗಳೂರು 12. ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT