ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರದಲ್ಲಿ ನಂ.1 ರಾಜ್ಯ– ಅಮಿತ್‌ ಶಾ

Last Updated 21 ಫೆಬ್ರುವರಿ 2018, 6:25 IST
ಅಕ್ಷರ ಗಾತ್ರ

ಮಂಗಳೂರು: ಭ್ರಷ್ಟಾಚಾರದ ಅರ್ಥವನ್ನು ಬದಲಾಯಿಸುವ ಕಾಲ ಬಂದಿದೆ. ಭ್ರಷ್ಟಾಚಾರಕ್ಕೆ ಅರ್ಥವೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ. ಭ್ರಷ್ಟಾಚಾರ ಸ್ಪರ್ಧೆ ನಡೆದಿದ್ದರೆ, ಐದು ವರ್ಷಗಳಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ಮೊದಲ ಪ್ರಶಸ್ತಿ ಲಭಿಸುತ್ತಿತ್ತು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದರು.

ಮಂಗಳವಾರ ಬಿ.ಸಿ. ರೋಡ್‌ನಲ್ಲಿ ನಡೆದ ನವಶಕ್ತಿ ಸಮಾವೇಶದಲ್ಲಿ ಮಾತನಾಡಿದ ಅವರು, ಮರಳು ಮಾಫಿಯಾ, ತುಷ್ಟೀಕರಣ ನೀತಿಯಿಂದ ಯಾವುದೇ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಮುಂಬರುವ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದವರು ಪಾತಾಳದಲ್ಲಿ ಅಡಗಿದ್ದರೂ, ಅವರನ್ನು ಹಿಡಿದು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದರು.

‘ಕರ್ನಾಟಕದ ಚುನಾವಣೆ ಬಿಜೆಪಿಗೆ ಅತ್ಯಂತ ಮಹತ್ವದ್ದಾಗಿದೆ. 2014ರ ನಂತರ ವಿಧಾನಸಭಾ ಚುನಾವಣೆಗಳಲ್ಲಿ, ಪಂಜಾಬ್‌ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಬಿಜೆಪಿ ಜಯ ಗಳಿಸಿದೆ. ಮೋದಿ ಅವರ ವಿಜಯ ರಥವು ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹೊರಟಿದ್ದು, ಕರ್ನಾಟಕದಲ್ಲಿ ಈ ಬಾರಿ ಬಿಜೆಪಿಗೆ ಜಯ ತಂದುಕೊಡುವುದು ನಿಮ್ಮ ಕರ್ತವ್ಯ’ ಎಂದು ಹೇಳಿದರು.

ಕರಾವಳಿಯಲ್ಲಿ ಅನೇಕ ದೇವಸ್ಥಾನಗಳಿವೆ. ದೇವಸ್ಥಾನಗಳ ಮೇಲೆ ಹಿಡಿತ ಸಾಧಿಸಲು ಯತ್ನಿಸಿದ ಹಾಗೂ ಅವುಗಳನ್ನು ಅಪವಿತ್ರಗೊಳಿಸಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಕಿತ್ತೆಸೆಯಲು ಪರಶುರಾಮ, ರಾಣಿ ಅಬ್ಬಕ್ಕಳ ನಾಡಿನಿಂದಲೇ ಸಂಕಲ್ಪ ಮಾಡಬೇಕು ಎಂದು ಶಾ ಹೇಳಿದರು.

ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ‘ಯುವಜನಾಂಗದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, 10 ಸರ್ಕಾರಿ ಹಾಗೂ 10 ಖಾಸಗಿ ಸೇರಿದಂತೆ 20 ವಿಶ್ವದರ್ಜೆಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ತಲಾ ₹ 10 ಸಾವಿರ ಕೋಟಿ ಅನುದಾನ ನೀಡಲು ಉದ್ದೇಶಿಸಲಾಗಿದೆ’ ಎಂದರು.

ಸಂಜೆ ಮಲ್ಪೆಯಲ್ಲಿ ಮೀನುಗಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ನಿರ್ಲಜ್ಜ ಸರ್ಕಾರ. ಬೆಂಗಳೂರಿನಂತಹ ನಗರ ಇಟ್ಟುಕೊಂಡು ರಾಜ್ಯ ಬಡತನದಲ್ಲಿದೆ ಎಂದರೆ ನಿಜವಾಗಿಯೂ ಸೋಜಿಗ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT