ಶುಕ್ರವಾರ, ಡಿಸೆಂಬರ್ 6, 2019
24 °C

ಜಾಣಮೌನದ ಹಿಂದಿದೆ ಸರಳ ರಹಸ್ಯ

ಕೋಡಿಬೆಟ್ಟು ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

ಜಾಣಮೌನದ ಹಿಂದಿದೆ ಸರಳ ರಹಸ್ಯ

ಮಂಗಳೂರು: ಅನೈತಿಕ ಪೊಲೀಸ್‌ಗಿರಿಯ ಘಟನೆಗಳಿಂದಾಗಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ದೇಶದಾದ್ಯಂತ ಆಗಾಗ ಸುದ್ದಿ ಮಾಡಿದರೂ, ಅನೈತಿಕ ಪೊಲೀಸ್‌ಗಿರಿಯು ಚುನಾವಣೆಯ ವಿಷಯವಾಗಿ ಗುರುತಿಸಿಕೊಳ್ಳದೇ ಇರುವುದು ವಿಪರ್ಯಾಸ.

ಅಭಿವೃದ್ಧಿಯ ಸಮಸ್ಯೆಗಳು, ನಿರುದ್ಯೋಗದ ಪರಿಣಾಮವಾದ ನಿರಂತರ ವಲಸೆ ಅಥವಾ ನೀರು ನಿರ್ವಹಣೆಯ ಸ್ಥಳೀಯ ಸಮಸ್ಯೆಗಳು ಕರಾವಳಿಯಲ್ಲಿ ಚುನಾವಣೆಯ ವಿಷಯವಾಗುತ್ತಿಲ್ಲ. ಇದೇ ಸಾಲಿಗೆ ಅನೈತಿಕ ಪೊಲೀಸ್‌ಗಿರಿಯೂ ಸೇರಿದೆ ಎನ್ನಬಹುದು. ಜಿಲ್ಲೆಯಲ್ಲಿ ಶಿಕ್ಷಣ ಪಡೆದ ಜನರೇ ಇರುವುದರಿಂದ ರಾಜ್ಯ ರಾಜಕೀಯ ವಿದ್ಯಮಾನ ಮತ್ತು ದೇಶದ ರಾಜಕೀಯ ಚಿತ್ರಣವೂ ಇಲ್ಲಿನ ಮತದಾರರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

ಹಿಂದೂ ಹುಡುಗಿಯರು ಮುಸ್ಲಿಂ ಹುಡುಗರೊಂದಿಗೆ ಸಲುಗೆಯಿಂದ ಇದ್ದರೆ ಹಿಂದೂ ಕೋಮುವಾದಿ ಸಂಘಟನೆಗಳು, ಮುಸ್ಲಿಂ ಹುಡುಗಿ ಹಿಂದು ಹುಡುಗರೊಂದಿಗೆ ಸಲುಗೆಯಿಂದ ಇದ್ದರೆ ಮುಸ್ಲಿಂ ಕೋಮುವಾದಿ ಸಂಘಟನೆಗಳು ಅವರನ್ನು ಬೆದರಿಸುವ ಘಟನೆಗಳು ನಡೆದಿವೆ. ಆದರೆ, ಇವು ಮಾಧ್ಯಮಗಳಿಗೆ ವಸ್ತುವಾದಷ್ಟು ಇಲ್ಲಿನ ಜನರನ್ನು ಅದು ಕಾಡಿಲ್ಲವೇ ಎಂದು ಪ್ರಶ್ನಿಸಿದರೆ ಕಾಲೇಜು ವಿದ್ಯಾರ್ಥಿಗಳು ಹಿರಿಯರ ರಾಜಕಾರಣವನ್ನು ದೂರುತ್ತಾರೆ.

‘ಅನೈತಿಕ ಪೊಲೀಸ್‌ಗಿರಿ ಈಗಷ್ಟೇ ಕಾಲೇಜು ಮೆಟ್ಟಿಲೇರಿದ ವಿದ್ಯಾರ್ಥಿಗಳ ವಿಷಯವಾದ್ದರಿಂದ ರಾಜಕೀಯದಲ್ಲಿ ಇರುವವರಿಗೆ ಇದು ಆಕರ್ಷಕ ಆಗಿಲ್ಲವೇನೋ’ ಎಂದು ಆಗ್ನೆಸ್‌ ಕಾಲೇಜಿನ ಪತ್ರಿಕೋದ್ಯಮದ ಪ್ರಥಮ ವರ್ಷದ ವಿದ್ಯಾರ್ಥಿನಿ ಸುಷ್ಮಾಶೆಟ್ಟಿ ಹೇಳುತ್ತಾರೆ. ಈಕೆಯ ಮಾತನ್ನು ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್‌ ಸಮರ್ಥಿಸುತ್ತಾರೆ.

‘ಪೋಷಕರಿಗೆ ಅಂತರಂಗದಲ್ಲಿ ಇದು ಇಷ್ಟವೇ ಆಗುತ್ತದೆ. ಕಾಲೇಜಿಗೆ ಹೋಗುವ ತಮ್ಮ ಮಕ್ಕಳು ಪ್ರೀತಿ ಪ್ರೇಮ ಅಂತ ಹಚ್ಚಿಕೊಳ್ಳುವುದು ಯಾವ ಪೋಷಕರಿಗೆ ತಾನೇ ಬೇಕಾಗಿದೆ. ಇಂತಹುದೊಂದು ಭಯ ಇದ್ದರೆ ಒಳ್ಳೆಯದೇ ಆಯಿತು ಎಂಬ ಧೋರಣೆ ಪಾಲಕರಲ್ಲಿ ಇದೆ ಎನ್ನುತ್ತಾರೆ ಅವರು.

ಮುಸ್ಲಿಂ ಕೋಮು ಸಂಘಟನೆ ಮತ್ತು ಹಿಂದೂ ಕೋಮು ಸಂಘಟನೆಗಳು ಇದರಲ್ಲಿ ತೊಡಗಿಸಿಕೊಂಡಿರುವುದರಿಂದ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಈ ಬಗ್ಗೆ ಜಾಣಕುರುಡು ಪ್ರದರ್ಶಿಸುತ್ತಾರೆ ಎನ್ನುವುದು ಮತ್ತೊಂದು ಆರೋಪ.

ಕಳೆದ ಲೋಕಸಭೆ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಗಮನಿಸಿದರೆ, ಸುಷ್ಮಾ ಮತ್ತು ವಿದ್ಯಾ ಅವರು ಹೇಳಿಕೆಗಳು ವಿಶ್ಲೇಷಣೆಗೆ ಅರ್ಹ.

2009ರ ಜನವರಿಯಲ್ಲಿ ಮಂಗಳೂರಿನಲ್ಲಿ ನಡೆದ ಪಬ್‌ ದಾಳಿ ಪ್ರಕರಣದ ಮೂಲಕ ಕರಾವಳಿಯಲ್ಲಿ ಇರುವ ‘ಅನೈತಿಕ ಪೊಲೀಸ್‌ ಗಿರಿ’ ದೇಶಾದ್ಯಂತ ಸುದ್ದಿ ಮಾಡಿತು. ಮಂಗಳೂರಿನ ಸಾಮಾಜಿಕ ಕಾರ್ಯಕರ್ತರು ಶ್ರೀರಾಮ್‌ ಸೇನೆಯ ಪ್ರಮೋದ್‌ ಮುತಾಲಿಕ್‌ ಅವರಿಗೆ ಪಿಂಕ್‌ ಚಡ್ಡಿಗಳನ್ನು ಕಳುಹಿಸುವ ಮೂಲಕ ಬೃಹತ್‌ ಪ್ರತಿಭಟನೆಯೂ ವ್ಯಕ್ತಪಡಿಸಿದ್ದರು.

ಆದರೆ, ವಾಸ್ತವವಾಗಿ ಮೇಲ್ವರ್ಗದ ಜನತೆಯನ್ನು ಕಾಡಿದ ಪಬ್ ದಾಳಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮಧ್ಯಮ ವರ್ಗವನ್ನು ಕಾಡಿದಂತೆ ಕಾಣಲಿಲ್ಲ. ‘ಮಕ್ಕಳು ಹಾದಿ ತಪ್ಪಿದರೆ ಹೀಗೇ ಆಗುವುದು’ ಎಂಬ ಧೋರಣೆಯೊಂದು ಕರಾವಳಿಯ ಜನರಲ್ಲಿ ಇತ್ತೇ ವಿನಾ ಇದು ‘ವ್ಯಕ್ತಿ ಸ್ವಾತಂತ್ರ್ಯ ಅಥವಾ ಅಭಿವ್ಯಕ್ತಿಯ ಮೇಲಿನ ಘಾಸಿ’ ಎಂಬ ಅರಿವು ಮೂಡಿಸಿದಂತಿಲ್ಲ. ಅದೇ ವರ್ಷ ಏಪ್ರಿಲ್‌ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿತ್ತು.

ಆದರೆ, 2012 ರ ಜುಲೈನಲ್ಲಿ ನಡೆದ ಹೋಮ್‌ಸ್ಟೇ ದಾಳಿ ಅತ್ಯಂತ ಕೆಟ್ಟದಾಗಿತ್ತು. ದಾಳಿಯ ದೃಶ್ಯಗಳು ಮಾಧ್ಯಮಗಳಲ್ಲಿ ಪದೇ ಪದೇ ಕಾಣಿಸಿಕೊಂಡಾಗ, ಪರಿಸ್ಥಿತಿ ಹದ ಮೀರಿರುವುದು ಜನರ ಅರಿವಿಗೆ ಬಂದಿತ್ತು. 2013ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ದಕ್ಷಿಣ ಕನ್ನಡದಲ್ಲಿ ತನ್ನ ತೆಕ್ಕೆಯಲ್ಲಿದ್ದ ನಾಲ್ಕು ಸೀಟುಗಳ ಪೈಕಿ ಮೂರೂ ಸೀಟುಗಳನ್ನು ಕಳೆದುಕೊಂಡು ನೆಲಕಚ್ಚಿತು.

ಹೀಗಾದರೂ ಪ್ರಸ್ತುತ ಚುನಾವಣೆಯತ್ತ ಗಮನ ಹರಿಸಿದರೆ ಕರಾವಳಿಯಲ್ಲಿ ಅನೈತಿಕ ಪೊಲೀಸ್‌ಗಿರಿ ಚುನಾವಣೆಯ ವಿಷಯವೇ ಅಲ್ಲ ಎನ್ನುವುದು ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ಅನಿಸಿಕೆ. ‘ಅನೈತಿಕ ಪೊಲೀಸ್‌ಗಿರಿಯಿಂದಾಗಿ ಬಜರಂಗದಳ, ಹಿಂದೂ ಜಾಗರಣ ವೇದಿಕೆ ಸಂಘಟನೆಗಳು ಹೆಸರು ಕೆಡಿಸಿಕೊಂಡಿವೆ. ಹಿರಿಯ ನಾಯಕರಿಗೆ ಅದನ್ನು ಸಮರ್ಥಿಸುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದಲೇ ಈ ಬಾರಿ ಲವ್‌ಜಿಹಾದ್‌ ಎಂಬ ವಿಷಯವನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಯುತ್ತಿದೆ’ ಎನ್ನುತ್ತಾರೆ ಸ್ಥಳೀಯ ಪ್ರಗತಿಪರರು.

ಶಾಸಕ ಜೆ. ಆರ್‌. ಲೋಬೊ ಈ ವಿಷಯವನ್ನು ನಿರುದ್ಯೋಗ ಸಮಸ್ಯೆಯ ಪರಿಣಾಮ ಎಂದು ವಿಶ್ಲೇಷಿಸುತ್ತಾರೆ ‘ವಾಸ್ತವವಾಗಿ ಇಲ್ಲಿನ ಯುವಜನತೆಗೆ ಕೈ ತುಂಬ ಕೆಲಸ ಕೊಟ್ಟರೆ ಎಲ್ಲ ಸಮಸ್ಯೆಯೂ ಪರಿಹಾರ ಆಗುತ್ತದೆ. ಉದ್ಯೋಗ ಸೃಷ್ಟಿಯ ಉದ್ದೇಶದಿಂದಲೇ ಕಾಂಗ್ರೆಸ್‌ ಅಭಿವೃದ್ಧಿಯ ಪ್ರಣಾಳಿಕೆಯೊಂದಿಗೆ ಚುನಾವಣೆ ಎದುರಿಸುತ್ತಿದೆ’ ಎಂದು ವಿಶ್ಲೇಷಿಸುತ್ತಾರೆ. ಈ ಮಾತನ್ನೇ ಶಾಸಕ ಐವನ್‌ ಡಿಸೋಜ ಸಮರ್ಥಿಸುತ್ತಾರೆ.

ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಾಲೆಟ್‌ ಪಿಂಟೊ ಅವರ ಪ್ರಕಾರ ‘ಪಕ್ಷದ ಅಜೆಂಡ ರಾಜ್ಯಮಟ್ಟದಲ್ಲಿ ನಿರ್ಧಾರ ಆಗುವುದರಿಂದ ಕರಾವಳಿಗೆ ಮಾತ್ರ ಸೀಮಿತ ಆಗಿರುವ ಅನೈತಿಕ ಪೊಲೀಸ್‌ಗಿರಿ ಚುನಾವಣೆ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿಲ್ಲ’.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಮಠಂದೂರು ಅವರೂ ಬಹುತೇಕ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ‘ಇಲ್ಲಿನ ಮರಳುಗಾರಿಕೆ ಮಾಫಿಯಾ, ಅಭಿವೃದ್ಧಿಯ ಹಿನ್ನಡೆ, ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿಚಾರಗಳೇ ಚುನಾವಣೆಯ ವಿಷಯ. ಅನೈತಿಕ ಪೊಲೀಸ್‌ಗಿರಿ ಚುನಾವಣೆಯ ವಿಷಯವ ಅಲ್ಲ.’

ಇದನ್ನು ಚುನಾವಣಾ ವಿಷಯ ಮಾಡುವುದು ಬೇಕಿಲ್ಲ. ಕಾನೂನು ಕೈಗೆ ತೆಗೆದುಕೊಂಡು ಇನ್ನೊಬ್ಬರ ಮನೆ ಹೆಣ್ಮಕ್ಕಳನ್ನು ಹೊಡೆಯುವ ಪ್ರವೃತ್ತಿ ಇರುವವರಿಗೆ ಶಿಕ್ಷೆ ವಿಧಿಸುವುದೊಂದಿಗೆ ಮಾರ್ಗ.

ಶಕುಂತಳಾ ಶೆಟ್ಟಿ

ಶಾಸಕಿ

*

ಅನೈತಿಕ ಪೊಲೀಸ್‌ಗಿರಿ ಘಟನೆ ನಡೆದಾಗ ತೀರಾ ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತದೆ. ಕೆಟ್ಟ ಹೆಸರು ಬಂದರೆ, ಉದ್ಯಮಗಳು ಬರುವುದಿಲ್ಲ. ಉದ್ಯಮಗಳು ಬಾರದೇ ನಿರುದ್ಯೋಗ ನೀಗಲ್ಲ ಎಂಬ ಬೀಜವೃಕ್ಷ ನ್ಯಾಯದಂತಾಗಿದೆ ಪರಿಸ್ಥಿತಿ. ಕಾನೂನು ಸುವ್ಯವಸ್ಥೆಯೊಂದೇ ಇದಕ್ಕೆ ಮಾರ್ಗ.

ಜೆ. ಆರ್‌. ಲೋಬೊ

ಶಾಸಕ

*

ಅನೈತಿಕ ಪೊಲೀಸ್‌ಗಿರಿಯ ಬಗ್ಗೆ ಹಿಂದೂ ಸಂಘಟನೆಗಳು ಮತ್ತು ಮುಸ್ಲಿಂ ಸಂಘಟನೆಗಳೂ ಸಮಾನ ಅಭಿಪ್ರಾಯವನ್ನು ಹೊಂದಿವೆ. ಪರಸ್ಪರ ಭಿನ್ನಾಭಿಪ್ರಾಯವಿಲ್ಲದ ಕಾರಣ ಇದು ಚುನಾವಣಾ ವಿಷಯ ಆಗದೇ ಇರಲು ಒಂದು ಕಾರಣ ಇರಬಹುದು. ಲೈಂಗಿಕ ನೈತಿಕತೆಯ ಪ್ರಶ್ನೆ ಬಂದಾಗ ಅದನ್ನು ಉಲ್ಲಂಘಿಸಿದ್ದಾರೆ ಎಂದು ಸಾಮಾಜಿಕ ಮಾನಸಿಕತೆ ಅದರ ವಿರುದ್ಧವೇ ಕೆಲಸ ಮಾಡುತ್ತದೆ. ಇದನ್ನು ಒಂದು ರಾಜಕೀಯ ‘ಇಶ್ಯೂ’ ಆಗಿ ಕೊಂಡೊಯ್ಯಲು ಪ್ರಯತ್ನಿಸುವುದು ಅತೀ ವಿರಳ ಸಂಖ್ಯೆಯಲ್ಲಿರುವ ತೀವ್ರ ಪ್ರಗತಿಪರರು ಮಾತ್ರ. ಅವರು ಸಾಮಾನ್ಯವಾಗಿ ಕಾನೂನಿನ ನೆಲೆಯಲ್ಲಿ ಮಾಧ್ಯಮಗಳ ಮೂಲಕ ಜನರಿಗೆ ಸಂದೇಶ ರವಾನಿಸುವವರೆ ಹೊರತು ಜನರೊಂದಿಗೆ ಬೆರೆಯುವವರಲ್ಲ. ಆದ್ದರಿಂದ ಸಮಾಜದ ಪ್ರಬಲ ಮಾನಸಿಕತೆಯ ಮೇಲೆ ಅವರ ಪ್ರಭಾವ ಬೀರುವುದಿಲ್ಲ. ಸಂತ್ರಸ್ತರಿಗೆ ಇದು ವೈಯಕ್ತಿಕ ವಿಷಯವಾಗಿರುತ್ತದೆ. ಆದರೆ ಬಹಳ ಮುಖ್ಯವಾಗಿ ಜನಪ್ರಿಯ ಭಾಷೆಯಲ್ಲಿ ‘ಅನೈತಿಕ ಪೊಲೀಸ್ ಗಿರಿ’ ಎನ್ನುವ ಈ ಚಟುವಟಿಕೆ ಮೂಲದಲ್ಲಿ ನೈತಿಕತೆಯ ವಿಷಯಕ್ಕೆ ಸಂಬಂಧಿಸಿದ ಆಕ್ರಮಣಗಳಾಗಿರದೆ ಹಣಕಾಸಿನ ವ್ಯವಹಾರ ಅಥವಾ ರಾಜಕೀಯ ಲೆಕ್ಕಾಚಾರಗಳಿಗಾಗಿ ಗಮನ ಸೆಳೆಯಲು ನಡೆದ ಘಟನೆಗಳಾಗಿರುತ್ತವೆ.

ಅರವಿಂದ ಚೊಕ್ಕಾಡಿ

ಲೇಖಕ

ಅಂಕಿ ಅಂಶ

ಜಿಲ್ಲೆಯಲ್ಲಿ ಅನೈತಿಕ ಪೊಲೀಸ್‌ಗಿರಿ ಪ್ರಕರಣಗಳು

2014– 14

2015 – 8

2016– 4

2017– 6

2918– 2

**

2009 ಲೋಕಸಭೆ ಚುನಾವಣೆ:

ಬಿಜೆಪಿ ಗೆಲುವು

**

2004 ವಿಧಾನ ಸಭೆ ಚುನಾವಣೆ:

(ಕ್ಷೇತ್ರ ಪುನರ್‌ವಿಂಗಡಣೆಗೆ ಮುನ್ನ)

7 ಬಿಜೆಪಿ –2 ಕಾಂಗ್ರೆಸ್‌

**

2008 ವಿಧಾನ ಸಭೆ ಚುನಾವಣೆ

(ಕ್ಷೇತ್ರ ಪುನರ್‌ವಿಂಗಡಣೆ ಬಳಿಕ)

ದಕ್ಷಿಣ ಕನ್ನಡ

4 ಬಿಜೆಪಿ 4 ಕಾಂಗ್ರೆಸ್‌

**

2013ರ ವಿಧಾನ ಸಭೆ ಚುನಾವಣೆ

1 ಬಿಜೆಪಿ 7 ಕಾಂಗ್ರೆಸ್‌

 

ಪ್ರತಿಕ್ರಿಯಿಸಿ (+)