ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟ ಸಿಬ್ಬಂದಿ ಅಹೋರಾತ್ರಿ ಧರಣಿ

Last Updated 21 ಫೆಬ್ರುವರಿ 2018, 6:40 IST
ಅಕ್ಷರ ಗಾತ್ರ

ರಾಮನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ ಜಿಲ್ಲಾ ಘಟಕದ ನೇತೃತ್ವದಲ್ಲಿ ಬಿಸಿಯೂಟ ಸಿಬ್ಬಂದಿ ಇಲ್ಲಿನ ಕಂದಾಯ ಭವನದ ಎದುರು ಮಂಗಳವಾರ ಅಹೋರಾತ್ರಿ ಧರಣಿ ಆರಂಭಿಸಿದರು.

ನಗರದ ಮಿನಿವಿಧಾನ ಸೌಧದಿಂದ ಮೆರವಣಿಗೆ ಮೂಲಕ ಕಂದಾಯ ಭವನಕ್ಕೆ ಧಾವಿಸಿದ ಅವರು ಅಲ್ಲಿಯೇ ಧರಣಿ ಕುಳಿತರು. ಸರ್ಕಾರವು ಈಗಾಲಾದರೂ ನಮ್ಮ ಬೇಡಿಕೆಗಳಿಗೆ ಓಗೊಡಬೇಕು. ಅಲ್ಲಿಯವರೆಗೂ ಧರಣಿ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುವ ಯೋಜನೆ ಪ್ರಾರಂಭವಾಗಿ 15 ವರ್ಷಗಳೇ ಕಳೆದಿವೆ. ಆದರೆ ಇಂದಿಗೂ ಮುಖ್ಯ ಅಡುಗೆ ಸಿಬ್ಬಂದಿಗೆ ತಿಂಗಳಿಗೆ ₹ 2,200 ಹಾಗೂ ಸಹಾಯಕ ಸಿಬ್ಬಂದಿಗೆ ₹ 2,100 ನೀಡಲಾಗುತ್ತಿದೆ. ಉಳಿದಂತೆ ಬೇರೆ ಯಾವ ಸೌಕರ್ಯವನ್ನು ನೀಡುತ್ತಿಲ್ಲ. ಇದರಿಂದ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಮುಖ್ಯ ಅಡುಗೆ ಸಿಬ್ಬಂದಿ ಹಾಗೂ ಸಹಾಯಕ ಸಿಬ್ಬಂದಿಯನ್ನು ಅರೆಕಾಲಿಕ ಕಾಯಂ ನೌಕರರನ್ನಾಗಿ ಘೋಷಿಸಬೇಕು. ಅಪಘಾತ ವಿಮೆ ಸೌಲಭ್ಯವನ್ನು ₹ 5 ಲಕ್ಷಕ್ಕೆ ಏರಿಸಬೇಕು. ತಮಿಳುನಾಡಿನ ಮಾದರಿಯಲ್ಲಿ ರಾಜ್ಯದಲ್ಲೂ ಅಡುಗೆ ಸಿಬ್ಬಂದಿಗೆ ತಿಂಗಳಿಗೆ ₹ 1,000 ಹೆಚ್ಚುವರಿ ಭತ್ಯೆ, ಪಿಎಫ್ ಹಾಗೂ ಇಎಸ್‌ಐ ಹಾಗೂ ನಿವೃತ್ತರಿಗೆ ಪಿಂಚಣಿ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗಳನ್ನು ಈಡೇರಿಸುವಂತೆ ಶಿಕ್ಷಣ ಸಚಿವರ ಗಮನಕ್ಕೆ ತಂದರೂ ಇಲ್ಲಿಯವರೆಗೆ ಈಡೇರಿಲ್ಲ. ಕಳೆದ ವರ್ಷ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸುವ ಸ್ಥಳಕ್ಕೆ ಬಂದ ಸಚಿವರು ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಬೇಡಿಕೆಗಳ ಬಗ್ಗೆ ಗಮನ ಹರಿಸಿಲ್ಲ. ಬಜೆಟ್‌ನಲ್ಲಿ ವೇತನ ಹೆಚ್ಚಿಸುತ್ತೇವೆ ಎಂದು ಹೇಳಿ ನಮ್ಮನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಚಿವರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಮುಖ್ಯಮಂತ್ರಿ ಜತೆ ಸಭೆ ನಡೆಸಲು ದಿನಾಂಕ ನಿಗದಿಪಡಿಸಬೇಕು. ಜಿಲ್ಲೆಯಲ್ಲಿ ಇಂದಿನಿಂದ ಬಿಸಿಯೂಟ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಎಚ್. ನಿರ್ಮಲಾ, ಎಂ. ಲತಾ, ರೋಸ್‌ಮೇರಿ, ಬಿ.ವಿ. ಸುಕನ್ಯಾ, ಶಂಭುಗೌಡ, ರಮೇಶ್‌ ಇದ್ದರು.

ನೀರು, ಶೌಚಾಲಯಕ್ಕೆ ಪರದಾಟ
ಕಂದಾಯ ಭವನದ ಆವರಣದಲ್ಲಿ ಧರಣಿ ನಿರತರು ಶಾಮಿಯಾನ ಹಾಕಿಕೊಂಡಿದ್ದು, ಅಲ್ಲಿಯೇ ತಂಗಿದ್ದಾರೆ. ಬೆಳಿಗ್ಗೆ ಮನೆಗಳಿಂದ ತಂದಿದ್ದ ಬುತ್ತಿಯನ್ನೇ ಮಧ್ಯಾಹ್ನ ತಿಂದರು. ಸಂಜೆ ಅಲ್ಲಿಯೇ ಸ್ಟೌ ವ್ಯವಸ್ಥೆ ಮಾಡಿಕೊಂಡು ಚಹಾ ಮಾಡಿದರು.

‘ಧರಣಿ ನಿರತ ಮಹಿಳೆಯರಿಗೆ ಶೌಚಾಲಯದ್ದೇ ಸಮಸ್ಯೆಯಾಗಿದೆ. ಕಂದಾಯ ಭವನದಲ್ಲಿನ ಶೌಚಾಲಯಗಳ ಬಾಗಿಲು ತೆರೆದಿದ್ದರೂ ಅಲ್ಲಿ ನೀರಿನ ವ್ಯವಸ್ಥೆ ಇಲ್ಲ. ಹೀಗಾಗಿ ಮಹಿಳೆಯರು ಪರದಾಡುತ್ತಿದ್ದಾರೆ. ರಾತ್ರಿ ಹೇಗೆ ಕಳೆಯುವುದೋ ಎಂಬುದೇ ಚಿಂತೆಯಾಗಿದೆ’ ಎಂದು ಫೆಡರೇಶನ್‌ನ ಜಿಲ್ಲಾ ಘಟಕದ ಅಧ್ಯಕ್ಷೆ ಎಚ್. ನಿರ್ಮಲಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT