ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಪಾಲಿಕೆ: ಮತ್ತೆ ಚಿಗುರುವುದೇ ದೋಸ್ತಿ

Last Updated 21 ಫೆಬ್ರುವರಿ 2018, 6:56 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ಮಾರ್ಚ್ 3ರಂದು ನಿಗದಿಯಾಗಿದ್ದು, ಕೇವಲ 3 ತಿಂಗಳ ಅವಧಿಗೆ ಗಾದಿ ಅಲಂಕರಿಸುವವರು ಯಾರು ಎನ್ನುವ ಕುತೂಹಲ ನಾಗರಿಕರಲ್ಲಿ ಮನೆ ಮಾಡಿದೆ.

ಪಾಲಿಕೆಗೆ ಜೂನ್‌ನಲ್ಲಿ ಚುನಾವಣೆ ನಡೆಯುವುದು ಬಹುತೇಕ ಖಚಿತ. ಆದರೆ, ನಾಲ್ಕನೇ ಅವಧಿಯ ಮೇಯರ್, ಉಪ ಮೇಯರ್ ಅವಧಿ ಇದೇ ತಿಂಗಳ 28ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ, ಉಳಿದ ಮೂರು ತಿಂಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

ನಗರ ಪಾಲಿಕೆ ಅಸ್ತಿತ್ವಕ್ಕೆ ಬಂದ ನಂತರ ಮೊದಲ ಮೂರು ಅವಧಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟ ಅಧಿಕಾರ ಚುಕ್ಕಾಣಿ ಹಿಡಿದಿದ್ದವು. ಮೂರು ಅವಧಿಯೂ ಕಾಂಗ್ರೆಸ್‌ಗೆ ಮೇಯರ್ ಸ್ಥಾನ ಬಿಟ್ಟುಕೊಡಲಾಗಿತ್ತು. ಆದರೆ, ನಾಲ್ಕನೇ ಅವಧಿಯಲ್ಲಿ ಜೆಡಿಎಸ್‌ಗೆ ಸ್ಥಾನ ಬಿಟ್ಟುಕೊಡಲು ಕಾಂಗ್ರೆಸ್ ಮೀನಮೇಷ ಎಣಿಸಿದ ಪರಿಣಾಮ ಬೇಸರಗೊಂಡ ಜೆಡಿಎಸ್ ಸದಸ್ಯರು ಬಿಜೆಪಿ ಬೆಂಬಲ ಪಡೆದು ಅಧಿಕಾರ ಗದ್ದುಗೆ ಏರಿದ್ದರು.

ಈ ಬಾರಿ ಮೇಯರ್ ಸ್ಥಾನ ಬಿಸಿಎಂ-- ‘ಎ’ ಗೆ, ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಬಿಸಿಎಂ ‘ಎ’ ಮೀಸಲಾತಿಯಲ್ಲಿ ಬಿಜೆಪಿಯ ಎಸ್‌. ರಾಮು (22ನೇ ವಾರ್ಡ್), ಸಿ.ಎಚ್. ಮಾಲತೇಶ್ (6ನೇ ವಾರ್ಡ್‌) ಇದ್ದಾರೆ. ಜೆಡಿಎಸ್‌ನಲ್ಲಿ ಎಸ್.ಎನ್‌. ಮಹೇಶ್ (24ನೇ ವಾರ್ಡ್‌), ನಾಗರಾಜ್ ಕಂಕಾರಿ (19ನೇ ವಾರ್ಡ್), ಫಾಲಾಕ್ಷಿ (17ನೇ ವಾರ್ಡ್) ಹಾಗೂ ಕಾಂಗ್ರೆಸ್‌ನಲ್ಲಿ ಪಂಡಿತ್ ವಿ. ವಿಶ್ವನಾಥ್ (34ನೇ ವಾರ್ಡ್), ಎಲ್‌. ಮಂಜುನಾಥ್ (1ನೇ ವಾರ್ಡ್), ಎಸ್. ರಾಜಶೇಖರ್ (14ನೇ ವಾರ್ಡ್), ಎಸ್‌.ಕೆ. ಮರಿಯಪ್ಪ (33ನೇ ವಾರ್ಡ್) ಇದ್ದಾರೆ.

ಕಳೆದ ಬಾರಿ ಮೇಯರ್ ಸ್ಥಾನ ಪಡೆದಿದ್ದ ಜೆಡಿಎಸ್, ಈ ಬಾರಿ ಮಿತ್ರ ಪಕ್ಷ ಬಿಜೆಪಿಗೆ ಅಧಿಕಾರ ಬಿಟ್ಟುಕೊಟ್ಟರೆ ಎಸ್. ರಾಮು ಮೇಯರ್ ಆಗುವುದು ಬಹುತೇಕ ಖಚಿತ. ಜೆಡಿಎಸ್‌ ಪಟ್ಟು ಹಿಡಿದರೆ ಮೂವರಲ್ಲಿ ಒಬ್ಬರಿಗೆ ಅದೃಷ್ಟ ಒಲಿಯಲಿದೆ.

ಮತ್ತೆ ರೇಖಾ ಚಂದ್ರಶೇಖರ್‌ಗೆ ಅದೃಷ್ಟ?: ಮೇಯರ್ ಸ್ಥಾನ ಬಿಜೆಪಿಗೆ ಬಿಟ್ಟುಕೊಟ್ಟರೆ ಉಪ ಮೇಯರ್ ಸ್ಥಾನಕ್ಕೆ ಜೆಡಿಎಸ್‌ನಲ್ಲಿ ಇರುವ ಏಕೈಕ ಮಹಿಳೆ ರೇಖಾ ಚಂದ್ರಶೇಖರ್‌ಗೆ ಒಲಿಯಲಿದೆ. ಈಗಾಗಲೇ ಮೊದಲ ಅವಧಿಯಲ್ಲಿ ಉಪ ಮೇಯರ್‌ ಆಗಿದ್ದ ರೇಖಾ ಚಂದ್ರಶೇಖರ್ ಅವರಿಗೆ ಎರಡನೇ ಬಾರಿ ಅದೃಷ್ಟ ಒಲಿಯಲಿದೆ. ಬಿಜೆಪಿಗೆ ಬಿಟ್ಟುಕೊಟ್ಟರೆ ರೇಣುಕಾ ನಾಗರಾಜ್, ಅರ್ಚನಾ ಬಳ್ಳೇಕೆರೆ, ಸುರೇಖಾ ಮುರಳೀಧರ್, ಸುನೀತಾ ಅಣ್ಣಪ್ಪ ಅವರಲ್ಲಿ ಒಬ್ಬರು ಗಾದಿ ಅಲಂಕರಿಸಲಿದ್ದಾರೆ.

ಯಾವ ಪಕ್ಷಕ್ಕೂ ಇಲ್ಲ ಸ್ಪಷ್ಟ ಬಹುಮತ: 35 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್‌ನ 12, ಬಿಜೆಪಿಯ (ಕೆಜೆಪಿಯ ಮೂವರು ಸೇರಿ) 11, ಜೆಡಿಎಸ್–6, ಎಸ್‌ಟಿಪಿಐ–1, ಕೆಜೆಪಿ–4 ಹಾಗೂ ಒಬ್ಬರು ಪಕ್ಷೇತರ ಸದಸ್ಯರು ಇದ್ದಾರೆ. ಬಿಜೆಪಿಯ ಒಬ್ಬರು ಸಂಸತ್‌ ಸದಸ್ಯರು, ಮೂವರು ವಿಧಾನ ಪರಿಷತ್‌ ಸದಸ್ಯರು, ಕಾಂಗ್ರೆಸ್‌ನ ಒಬ್ಬರು ವಿಧಾನ ಪರಿಷತ್‌ ಸದಸ್ಯರು, ಜೆಡಿಎಸ್‌ನ ಒಬ್ಬರು ವಿಧಾನಸಭಾ ಸದಸ್ಯರು ಮತದಾನದ ಹಕ್ಕು ಪಡೆದಿದ್ದಾರೆ. ಒಟ್ಟು 41 ಜನಪ್ರತಿನಿಧಿಗಳು ಮತ ಚಲಾವಣೆ ಮಾಡಬಹುದು.

ಮೇಯರ್‌ ಸ್ಥಾನ ಅಲಂಕರಿಸಲು ಕನಿಷ್ಠ 21 ಮತ ಪಡೆಯಬೇಕಿದೆ. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲ. ಹಾಗಾಗಿ, ಎರಡು ಪಕ್ಷಗಳ ನಡುವೆ ಹೊಂದಾಣಿಕೆ ಅನಿವಾರ್ಯ.

ದೋಸ್ತಿ ಮತ್ತೆ ಚಿಗುರುವುದೇ?: ಮೊದಲ ಮೂರು ಅವಧಿಯಲ್ಲಿ ಕಾಂಗ್ರೆಸ್‌ಗೆ ಮೇಯರ್‌ ಸ್ಥಾನ ಪಡೆದಿತ್ತು. ನಾಲ್ಕನೇ ಅವಧಿಯಲ್ಲಿ ಜೆಡಿಎಸ್ ಪಟ್ಟು ಹಿಡಿದಿತ್ತು. ಆದರೆ, ಕೇವಲ 7 ಮತ ಹೊಂದಿರುವ ಜೆಡಿಎಸ್‌ಗೆ ಅಧಿಕಾರದ ಗದ್ದುಗೆ ಬಿಟ್ಟುಕೊಡಲು 13 ಮತ ಹೊಂದಿರುವ ಕಾಂಗ್ರೆಸ್ ಹಿಂದೇಟು ಹಾಕಿತ್ತು. ಅದರ ಫಲವಾಗಿ ಮೈತ್ರಿ ಮುರಿದು ಬಿದ್ದಿತ್ತು. ಈಗ ವಿಧಾನಸಭಾ ಚುನಾವಣೆ ಹತ್ತಿರ ಇರುವ ಕಾರಣ ಜೆಡಿಎಸ್, ಕಾಂಗ್ರೆಸ್ ಜಾತ್ಯತೀತ ನಿಲುವು ಪ್ರತಿಪಾದಿಸಲು ಮತ್ತೆ ಒಂದಾಗುವ ಸಾಧ್ಯತೆ ಇದೆ. ಆದರೆ, ಇಂತಹ ಸಾಧ್ಯತೆಯನ್ನೂ ಎರಡೂ ಪಕ್ಷಗಳ ಮುಖಂಡರು ಬಹಿರಂಗವಾಗಿಯೇ ತಳ್ಳಿಹಾಕುತ್ತಾರೆ.

ನೀತಿ ಸಂಹಿತೆ ಗುಮ್ಮ

ಮೂರು ತಿಂಗಳ ಅವಧಿಗೆ ಮೇಯರ್‌ ಸ್ಥಾನ ಅಲಂಕರಿಸಿದರೂ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಶೀಘ್ರ ಘೋಷಣೆಯಾಗುವ ಕಾರಣ ಒಂದೂವರೆ ತಿಂಗಳು ಅಜ್ಞಾತವಾಸ ಖಚಿತ.

ಅದು ಮುಗಿದ ತಕ್ಷಣ ವಿಧಾನ ಪರಿಷತ್ ನೈರುತ್ಯ ಕ್ಷೇತ್ರದ ಚುನಾವಣೆ. ಅದು ಮುಗಿದ ತಕ್ಷಣ ಪಾಲಿಕೆ ಚುನಾವಣೆ. ಹಾಗಾಗಿ, ಮೇಯರ್ ಸ್ಥಾನಕ್ಕೆ ಯಾವ ಪಕ್ಷದಲ್ಲೂ ಒಲವು ಕಂಡುಬರುತ್ತಿಲ್ಲ ಎನ್ನುತ್ತಾರೆ ಪಾಲಿಕೆಯ ಬಹುತೇಕ ಸದಸ್ಯರು.

ಪಕ್ಷಗಳ ಮತ ಬಲಾಬಲ

ಬಿಜೆಪಿ– 15
ಕಾಂಗ್ರೆಸ್‌–13
ಜೆಡಿಎಸ್‌–7
ಕೆಜೆಪಿ–4
ಎಸ್‌ಡಿಪಿಐ–1
ಪಕ್ಷೇತರ–1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT