ಗುರುವಾರ , ಮೇ 28, 2020
27 °C

‘ಜಿಐಟಿ’ ಮಾನ್ಯತೆ ಸಿಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಜಿಐಟಿ’ ಮಾನ್ಯತೆ ಸಿಗಲಿ

ತುಮಕೂರು: ಜಿಲ್ಲೆಯ ವೈ.ಎನ್‌.ಹೊಸಕೋಟೆ ಮತ್ತು ಕಲ್ಲೂರುಗಳಲ್ಲಿ ಉತ್ತಮ ಗುಣಮಟ್ಟದ ಕೈಮಗ್ಗದ ಬಟ್ಟೆಗಳು ತಯಾರಾಗುತ್ತಿದ್ದು, ಇವುಗಳಿಗೆ ಭೌಗೋಳಿಕ ಸೂಚಕ ಪಟ್ಟಿಯ (ಜಿಯೋಗ್ರಾಫಿಕಲ್‌ ಇಂಡಿಕೇಷನ್ಸ್‌ ಟ್ಯಾಗ್‌) ಮಾನ್ಯತೆ ಸಿಗುವಂತಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಸ್‌ ಕಣ್ಮಣಿ ಜಾಯ್ ಹೇಳಿದರು.

ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ 6 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮ್ಮ ಜಿಲ್ಲೆಯಲ್ಲಿಯೇ ತಯಾರಾಗುವ ಹಲವು ಬಟ್ಟೆ, ಸೀರೆಗಳು ಬೆಂಗಳೂರಿನ ಎಂ.ಜಿ ರಸ್ತೆಯ ಹವಾನಿಯಂತ್ರಿತ ಮಳಿಗೆಗಳಲ್ಲಿ ಒಳ್ಳೆಯ ದರಕ್ಕೆ ಮಾರಾಟವಾಗುತ್ತಿವೆ. ಆದರೆ ಈ ಪ್ರದೇಶದಲ್ಲಿ ತಯಾರಾಗುವ ಬಟ್ಟೆಗಳಿಗೆ ಜಿಐಟಿ ಇಲ್ಲದೆ ಇರುವುದರಿಂದ ಬಟ್ಟೆ ತಯಾರಿಸುವವರು ಮಾತ್ರ ಕಡಿಮೆ ಆದಾಯ ಪಡೆಯುತ್ತಿದ್ದಾರೆ’ ಎಂದು ಹೇಳಿದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ವಿ.ಎಸ್‌.ಜ್ಯೋತಿ ಗಣೇಶ್‌ ಮಾತನಾಡಿ, ‘ತರಬೇತಿಯನ್ನು ಪಡೆಯಲು ಬಂದವರು ತಮ್ಮ ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಬೇಕು. ಕಾರ್ಯಕ್ರಮದ ವೇಳಾ‍ಪಟ್ಟಿಯಂತೆ ತರಬೇತಿಗೆ ಹಾಜರಾಗಿ, ಇಲ್ಲಿ ನೀಡುವ ಹಲವು ಸೂಕ್ತ ಮಾರ್ಗದರ್ಶನವನ್ನು ತಮ್ಮದಾಗಿಸಿಕೊಳ್ಳುವುದರ ಮೂಲಕ ಉತ್ತಮ ಉದ್ಯಮಿಯಾಗುವ ಪ್ರಯತ್ನ ಮಾಡಬೇಕು’ ಎಂದು ಹೇಳಿದರು.

ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ‍ಪ್ರಾಂಶುಪಾಲ ಎಂ.ಕೆ.ವೀರಯ್ಯ ಮಾತನಾಡಿ, ‘ಒಬ್ಬರು ಒಂದು ಕೈಗಾರಿಕೆಯನ್ನು ಆರಂಭಿಸಿದರೆ ಸಾವಿರಾರು ಜನರಿಗೆ ಉದ್ಯೋಗ ನೀಡಬಹುದು. ಹೀಗಾಗಿ ಇಂತಹ ತರಬೇತಿಗಳಲ್ಲಿ ಭಾಗವಹಿಸುವ ಶಿಬಿರಾರ್ಥಿಗಳು ಕೇವಲ ಪ್ರಶಸ್ತಿ ಪತ್ರಗಳನ್ನು ಪಡೆಯುವ ಉದ್ದೇಶದಿಂದ ಮಾತ್ರ ಭಾಗವಹಿಸದೇ, ಉದ್ದಿಮೆಯನ್ನು ಸ್ಥಾಪಿಸುವ ಗುರಿಯನ್ನು ಇಟ್ಟುಕೊಳ್ಳಬೇಕು’ ಎಂದು ಹೇಳಿದರು.

ಒಂದು ದೇಶ ಪ್ರಗತಿಯತ್ತ ಸಾಗಬೇಕಾದರೆ ಆ ದೇಶದಲ್ಲಿನ ಕೈಗಾರಿಕೆಗಳು ಅಭಿವೃದ್ಧಿ ಸಾಧಿಸಬೇಕು. ಇಂತಹ ಕೈಗಾರಿಕೆ ಮತ್ತು ಉದ್ದಿಮೆಗಳನ್ನು ಆರಂಭಿಸುವವರಿಗೆ ಅನುಕೂಲವಾಗುವಂತೆ ಸ್ಟಾರ್ಟ್‌ಅಪ್‌ ಇಂಡಿಯಾ, ಮೇಕ್‌ ಇನ್‌ ಇಂಡಿಯಾ ಮತ್ತು ಡಿಜಿಟಲ್‌ ಇಂಡಿಯಾದಂತಹ ಯೋಜನೆಗಳನ್ನು ತಂದಿದ್ದು, ಅದರ ಲಾಭಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಅವಕಾಶ ಬಳಸಿಕೊಳ್ಳಿ

‘ಜಿಲ್ಲೆಯ ಕೆಲವು ಗ್ರಾಮಗಳಲ್ಲಿನ ಕೈಮಗ್ಗ ಮತ್ತು ಜವಳಿ ಉದ್ಯಮಿಗಳಿಗೆ ಮಾರುಕಟ್ಟೆಯ ಜ್ಞಾನ ಇಲ್ಲದೇ ಇರುವುದರಿಂದ ಅವರು ಹೆಚ್ಚಿನ ಲಾಭ ಪಡೆಯಲಾಗುತ್ತಿಲ್ಲ’ ಎಂದು ಅನಿಸ್‌ ಕಣ್ಮಣಿ ಜಾಯ್‌ ಹೇಳಿದರು.

‘ಅವರು ಆಧುನಿಕ ಮಾರುಕಟ್ಟೆ ತಂತ್ರಗಳನ್ನು ಸರಿಯಾಗಿ ಬಳಸಿಕೊಳ್ಳದೇ ಇರುವುದರಿಂದ ಇದರ ಲಾಭವನ್ನು ದೊಡ್ಡ ದೊಡ್ಡ ಮಾರಾಟ ಮಳಿಗೆಗಳ ವರ್ತ

ಕರು ಬಳಸಿಕೊಳ್ಳುತ್ತಾರೆ. ಇಲ್ಲಿನ ಜನರು ತಯಾರಿಸುವ ಬಟ್ಟೆಯನ್ನೇ ಹೆಚ್ಚಿನ ಹಣಕ್ಕೆ ಮಾರಿ ಹಣ ಮಾಡಿಕೊಳ್ಳುತ್ತಾರೆ. ಹೀಗಾಗಿ ‘ಆನ್‌ಲೈನ್‌ ಮಾರ್ಕೆಟಿಂಗ್‌’ನಂತಹ ಹಲವು ತಂತ್ರಜ್ಞಾನಗಳನ್ನು ಬಳಸಿಕೊಂಡು ಲಾಭಗಳಿಸುವ ಕಡೆ ಜವಳಿ ಉದ್ಯಮಿಗಳು ಗಮನಹರಿಸಬೇಕು’ ಎಂದು ಸಲಹೆ ನೀಡಿದರು.

ಉದ್ದಿಮೆ ಸ್ಥಾಪನೆಗೆ ವಿಪುಲ ಅವಕಾಶ

ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕ ಸಿ.ಎಸ್.ಯೋಗೇಶ್ ಮಾತನಾಡಿ, ‘ಜವಳಿ ಕ್ಷೇತ್ರದಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಸಾಕಷ್ಟು ಅವಕಾಶಗಳಿವೆ. ಋತುಗಳಿಗೆ ತಕ್ಕಂತೆ ‘ಫ್ಯಾಷನ್ ಟ್ರೆಂಡ್’ ಬದಲಾಗುತ್ತದೆ. ಇದಕ್ಕೆ ಅನುಗುಣವಾಗಿ ಉತ್ಪನ್ನಗಳನ್ನು ಸಿದ್ಧಪಡಿಸಿದರೆ ಆರ್ಥಿಕ ಮುನ್ನಡೆ ಸಾಧಿಸಬಹುದು’ ಎಂದು ತಿಳಿಸಿದರು.

ಸರ್ಕಾರವು ವಿವಿಧ ಯೋಜನೆಗಳಡಿ ಕೈಮಗ್ಗ ಮತ್ತು ಜವಳಿ ಉದ್ದಿಮೆ ಸ್ಥಾಪಿಸುವವರಿಗೆ ಬ್ಯಾಂಕ್ ನೆರವಿನೊಂದಿಗೆ ಸಹಾಯಧನವನ್ನು ನೀಡುತ್ತಿದೆ. ಜಿಲ್ಲೆಯಲ್ಲಿ ಉಣ್ಣೆ, ರೇಷ್ಮೆ, ಪವರ್‌ಲೂಮ್, ಗಾರ್ಮೆಂಟ್ಸ್ ಉದ್ದಿಮೆಗಳನ್ನು ಸ್ಥಾಪಿಸಲು ಬೇಕಾದ ಸಂಪನ್ಮೂಲವಿದೆ. ಜವಳಿ ಕ್ಷೇತ್ರದಲ್ಲಿ ಹಲವು ಉಪ ಘಟಕಗಳಿರುವುದರಿಂದ ಉದ್ದಿಮೆದಾರರಿಗೆ ಅನುಕೂಲವಾಗಲಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.