ಶುಕ್ರವಾರ, ಡಿಸೆಂಬರ್ 6, 2019
25 °C

ಹೊಲದಲ್ಲಿ 12 ಗಂಟೆ ದುಡಿಯುತ್ತಿದ್ದ ಪುಟ್ಟಣ್ಣಯ್ಯ!

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

ಹೊಲದಲ್ಲಿ 12 ಗಂಟೆ ದುಡಿಯುತ್ತಿದ್ದ ಪುಟ್ಟಣ್ಣಯ್ಯ!

ಮಂಡ್ಯ: ‘ಕುಸ್ತಿಪಟುವಾಗಿದ್ದ ಪುಟ್ಟಣ್ಣಯ್ಯ ಭೂಮಿಪುತ್ರನಂತಿದ್ದ. ಇಬ್ಬನಿ ಬೀಳುವ ಹೊತ್ತಿನಲ್ಲಿ ಹೊಲದಲ್ಲಿರುತ್ತಿದ್ದ ಅವನು ದಿನಕ್ಕೆ 12 ಗಂಟೆ ದುಡಿಯುತ್ತಿದ್ದ. ಮಣ್ಣಿನಲ್ಲಿ ಚಿನ್ನ ಬೆಳೆಯುತ್ತಿದ್ದ. ಕಬ್ಬಿನ ಕಂತೆಯನ್ನು ಒಂದೇ ಕೈಯಲ್ಲಿ ಎತ್ತಿ ಗಾಡಿಗೆ ಬಿಸಾಡುತ್ತಿದ್ದ. ಅವನು ಹೊಲದಲ್ಲಿ ದುಡಿಯುತ್ತಿದ್ದಾಗ ಭೂಮಿತಾಯಿ ಆನಂದದಿಂದ ಹಸಿರಾಗುತ್ತಿದ್ದಳು’ ಎಂದು ಹೇಳುವಾಗ ಕ್ಯಾತನಹಳ್ಳಿ ಗ್ರಾಮದ ಹಿರಿಯರಾದ ನಂಜೇಗೌಡರ ಕಣ್ಣಲ್ಲಿ ನೀರು ಜಿನುಗಿತ್ತು.

ಕ್ಯಾತನಹಳ್ಳಿ ಸೇರಿ ಸುತ್ತಮುತ್ತಲ ನಾಲ್ಕೈದು ಗ್ರಾಮಗಳಲ್ಲಿ ಕಳೆದೆರಡು ದಿನಗಳಿಂದ ಸ್ಮಶಾನ ಮೌನ ಆವರಿಸಿದೆ. ಗ್ರಾಮದ ವಿಶ್ವೇಶ್ವರಯ್ಯ ಕ್ರೀಡಾಂಗಣ ಸದಾ ಮಕ್ಕಳು, ಯುವಜನರಿಂದ ತುಂಬಿರುತ್ತಿತ್ತು. ಆದರೆ, ಇಂದು ಕ್ರೀಡಾಂಗಣದಲ್ಲಿ ಸ್ಫೂರ್ತಿ ಇಲ್ಲದಾಗಿದೆ. ಗ್ರಾಮದಲ್ಲಿ ಆಡಿ ಬೆಳೆದು ರೈತ ಹೋರಾಟಗಾರನಾಗಿ, ಶಾಸಕನಾಗಿ ಬೆಳೆದ ಪುಟ್ಟಣ್ಣಯ್ಯ ಹಳ್ಳಿಯಲ್ಲಿ ಮೂಡಿಸಿರುವ ಹೆಜ್ಜೆ ಗುರುತುಗಳು ಒಂದೊಂದಲ್ಲ. ಗ್ರಾಮದಲ್ಲಿರುವ ‘ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟ’ (ಕೆಕೆಒ) ಪುಟ್ಟಣ್ಣಯ್ಯ ಅವರ ಕನಸಿನ ಕೂಸು. ಈ ಬಳಗದಿಂದ ಬೆಳೆದ ಕ್ರೀಡಾಳುಗಳು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಮಿಂಚಿದ್ದಾರೆ. ಕ್ಯಾತನಹಳ್ಳಿಯ ಕ್ರೀರ್ತಿಯ ಬಾವುಟವನ್ನು ವಿವಿಧೆಡೆ ಹಾರಿಸಿದ್ದಾರೆ.

‘ಕಟ್ಟುಮಸ್ತಾದ ದೇಹ ಹೊಂದಿದ್ದ ಪುಟ್ಟಣ್ಣಯ್ಯ ಅವರು ನಿತ್ಯವೂ ತಪ್ಪದೇ ಗರಡಿಮನೆಯಲ್ಲಿ ದೇಹವನ್ನು ಹದಗೊಳಿಸುತ್ತಿದ್ದರು. ದೇಹಕ್ಕೆ ಎಣ್ಣೆ ಹಚ್ಚಿ ನಿಂತರೆ ಎಂತಹ ಕುಸ್ತಿಪಟುಗಳೂ ಗಡಗಡ ನಡುಗುತ್ತಿದ್ದರು. ಅವರು ಶಾಸಕರಾದಾಗಲೂ ಸದನದಲ್ಲಿ ಗ್ರಾಮೀಣ ಗರಡಿ ಮನೆಗಳಿಗೆ ಪುನಶ್ಚೇತನ ತುಂಬುವಂತೆ ಒತ್ತಾಯ ಮಾಡಿದ್ದರು. ಅವರ ಮನಸ್ಸು ಗ್ರಾಮೀಣ ಬದುಕಿಗಾಗಿ ಸದಾ ತುಡಿಯುತ್ತಿತ್ತು. ಎಷ್ಟು ಎತ್ತರಕ್ಕೆ ಬೆಳೆದರೂ ತಮ್ಮ ಗ್ರಾಮೀಣ ಸೊಗಡನ್ನು ಅವರು ಬಿಟ್ಟುಕೊಟ್ಟಿರಲಿಲ್ಲ’ ಎಂದು ಬೊಮ್ಮೇಗೌಡ ಹೇಳಿದರು.

ಉತ್ತಮ ನಟರೂ ಆಗಿದ್ದ ಪುಟ್ಟಣ್ಣಯ್ಯ ಆಗಾಗ ಬಣ್ಣ ಹಚ್ಚಿ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತಿದ್ದರು. ಅವರು ಅಭಿನಯಿಸುತ್ತಿದ್ದ ದುರ್ಯೋಧನ ಪಾತ್ರವನ್ನು ಕಣ್ತುಂಬಿಕೊಳ್ಳಲು ಹತ್ತೂರ ಜನರು ಗಾಡಿ ಕಟ್ಟಿಕೊಂಡು, ಟ್ರ್ಯಾಕ್ಟರ್‌ನಲ್ಲಿ ಬರುತ್ತಿದ್ದರು ಎಂದು ಗ್ರಾಮಸ್ಥರು ನೆನಪು ಮಾಡಿಕೊಳ್ಳುತ್ತಾರೆ.

ನ್ಯಾಯ, ಪಂಚಾಯಿತಿ: ಗ್ರಾಮಗಳಲ್ಲಿ ಬರುವ ಭಿನ್ನಾಭಿಪ್ರಾಯಗಳನ್ನು ಸ್ನೇಹಯುತವಾಗಿ ಬಗೆಹರಿಸಿಕೊಡುವಲ್ಲಿ ಪುಟ್ಟಣ್ಣಯ್ಯ ಹೆಸರುವಾಸಿಯಾಗಿದ್ದರು. ಪ್ರಕರಣಗಳು ಪೊಲೀಸ್‌ ಠಾಣೆ ಮೆಟ್ಟಿಲು ಹತ್ತದಂತೆ ಮಾಡುತ್ತಿದ್ದ ಅವರು ಎರಡೂ ಪಕ್ಷಗಳನ್ನು ಕೂರಿಸಿ ಮಾತಕತೆಯ ಮೂಲಕವೇ ಸ್ನೇಹದ ಸೇತುವೆ ಕಟ್ಟುತ್ತಿದ್ದರು. ಗ್ರಾಮಗಳಲ್ಲಿ ಇರುತ್ತಿದ್ದ ಗುಂಪುಗಳನ್ನು ಒಡೆದು ಒಗ್ಗಟ್ಟು ಸೃಷ್ಟಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದರು.

ಕನ್ನಡ ದೇಶ ಪಕ್ಷದಿಂದ ಸ್ವರಾಜ್‌ ಇಂಡಿಯಾವರೆಗೆ: ರೈತ ಚಳವಳಿ, ಸಮಾಜವಾದಿ ಚಳವಳಿ ಮೂಲಕ ಬೆಳೆದ ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಅವರು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ವಿಚಾರ ಶಾಲೆಯಲ್ಲಿ ಪಳಗಿದ್ದರು. ಹೋರಾಟದ ಹಾದಿಯಲ್ಲಿ ಅವರು ನಂಜುಂಡಸ್ವಾಮಿ ಅವರೊಂದಿಗೆ ‘ಕನ್ನಡ ದೇಶ’  ಪಕ್ಷ ಕಟ್ಟಿದ್ದರು. ಪಕ್ಷದಿಂದ ಪುಟ್ಟಣ್ಣಯ್ಯ ಸ್ಪರ್ಧಿಸಲಿಲ್ಲ. ಆದರೆ ಹಲವು ಯುವ ಮುಖಂಡರು ಸ್ಪರ್ಧಿಸಲು ಪ್ರೇರಣೆಯಾಗಿದ್ದರು.

‘ನನಗೆ ಇನ್ನೂ ನೆನಪಿದೆ, ಒಮ್ಮೆ ಕನ್ನಡ ದೇಶ ಪಕ್ಷದಿಂದ ಸ್ಪರ್ಧಿಸಿದ್ದ ಹಲವು ಅಭ್ಯರ್ಥಿಗಳು ಕೇವಲ ಒಂದೆರಡು ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ರಾಜ್ಯದಾದ್ಯಂತ ಪಕ್ಷಕ್ಕೆ ಉತ್ತಮ ಜನ ಬೆಂಬಲ ಇತ್ತು. ನಂತರ ರೈತಸಂಘದಿಂದಲೇ ಪುಟ್ಟಣ್ಣಯ್ಯ ಸ್ಪರ್ಧಿಸಿದರು. ಚುನಾವಣಾ ರಾಜಕಾರಣದಲ್ಲಿ ಅವರು ನಾಲ್ಕು ಸೋಲು ಅನುಭವಿಸಿದ್ದಾರೆ’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಹೇಳಿದರು.

ಹೋರಾಟದ ಹಾದಿಯಲ್ಲಿ ಬಂದ ಅವರು ಮೊದಲ ಬಾರಿಗೆ ರೈತಸಂಘದಿಂದ 1989ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. 1994ರಲ್ಲೂ ರೈತಸಂಘದಿಂದ, 1999ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸೋಲು ಕಂಡಿದ್ದರು. 2004ರಲ್ಲಿ ರೈತಸಂಘದಿಂದ ಸ್ಪರ್ಧಿಸಿ ಅಭೂತಪೂರ್ವ ಗೆಲುವು ದಾಖಲಿಸಿದರು. 2008ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಸೋಲು ಕಂಡರು. ಮತ್ತೆ 2013ರ ವಿಧಾನಸಭಾ ಚುನಾವಣೆಯಲ್ಲಿ ಸರ್ವೋದಯ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಸರ್ವೋದಯ ಪಕ್ಷವನ್ನು ‘ಸ್ವರಾಜ್‌ ಇಂಡಿಯಾ’ ಪಕ್ಷದ ಜೊತೆ ವಿಲೀನಗೊಳಿಸಿದ್ದ ಅವರು ಸ್ವರಾಜ್‌ ಇಂಡಿಯಾ ಅಭ್ಯರ್ಥಿಯಾಗಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಸಕಲ ಸಿದ್ಧತೆ ನಡೆಸಿದ್ದರು.

‘ಅವರು ಬದುಕಿದ್ದರೆ ಇಷ್ಟೊತ್ತಿಗೆ ಮುಂಬರುವ ವಿಧಾನಸಭಾ ಚುನಾವಣೆಗೆ ರಾಜ್ಯದ ವಿವಿಧೆಡೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದರು. ಈ ಕುರಿತು ರಾಷ್ಟ್ರಮಟ್ಟದ ಮುಖಂಡರಾದ ಯೋಗೇಂದ್ರ ಯಾದವ್‌ , ದೇವನೂರ ಮಹಾದೇವ ಮುಂತಾದವರ ಜೊತೆ ಚರ್ಚೆ ನಡೆಸಿದ್ದರು. ಆದರೆ ಈಗ ಬಾರದ ಲೋಕಕ್ಕೆ ತೆರಳಿದ್ದಾರೆ. ಮುಂದೆ ಅವರ ಹೋರಾಟವನ್ನು ಮುಂದುವರಿಸುವುದು ಹೇಗೆ ಎಂಬ ಯಕ್ಷ ಪ್ರಶ್ನೆ ರೈತಸಂಘದ ಮುಂದಿದೆ’ ಎಂದು ಸುರೇಶ್‌ ಹೇಳಿದರು.

ಇನ್ನೆಲ್ಲಿ ಕ್ರೀಡಾ ಸ್ಫೂರ್ತಿ?

‘ಭಾನುವಾರ ರಾತ್ರಿ ಬಿಜಿಎಸ್‌ ಕಬಡ್ಡಿ ಟೂರ್ನಿಯ ಫೈನಲ್‌ ಪಂದ್ಯ ನಡೆಯುವಾಗ ಪುಟ್ಟಣ್ಣಯ್ಯ ಅವರು ಚಪ್ಪಾಳೆಯ ಮೂಲಕ ತಮ್ಮ ಮಾಲೀಕತ್ವದ ಮೇಲುಕೋಟೆ ಮಾಣಿಕ್ಯ ತಂಡವನ್ನು ಪ್ರೋತ್ಸಾಹಿಸುತ್ತಿದ್ದರು. ಆರಂಭದಲ್ಲಿ ಅವರ ತಂಡ ಸೋಲುವ ಹಂತದಲ್ಲಿತ್ತು. 02–12 ಅಂಕದ ಅಂತರ ಇದ್ದರೂ ಚೆನ್ನಾಗಿ ಆಡಿ ಎಂದು ಹುರಿದುಂಬಿಸುತ್ತಿದ್ದರು. ಅದಾದ ಒಂದು ಗಂಟೆಯಲ್ಲಿ ಪುಟ್ಟಣ್ಣಯ್ಯ ಅವರ ಸಾವಿನ ಸುದ್ದಿ ಬಂತು. ಅಷ್ಟೊತ್ತಿಗೆ ಮೇಲುಕೋಟೆ ಮಾಣಿಕ್ಯ ತಂಡ ಚಾಂಪಿಯನ್‌ ಆಗಿತ್ತು’ ಎಂದು ಕಬಡ್ಡಿ ಆಟಗಾರ ಶಂಕರ್‌ ಹೇಳಿದರು.

‘ಪುಟ್ಟಣ್ಣಯ್ಯ ಅವರು ಇಡೀ ಮಂಡ್ಯ ಜಿಲ್ಲೆಯ ಕ್ರೀಡಾ ಸ್ಫೂರ್ತಿಯಾಗಿದ್ದರು. ಈಗ ಕ್ರೀಡಾ ಸ್ಫೂರ್ತಿ ಬಾರದ ಲೋಕಕ್ಕೆ ತೆರಳಿದೆ. ಅವರಿಗಾದರೂ ನಾವು ಜಿಲ್ಲೆಯಲ್ಲಿ ಕಬಡ್ಡಿಯನ್ನು ಮುಂದುವರಿಸಬೇಕು. ಎಲ್ಲವನ್ನೂ ಕ್ರೀಡಾ ಸ್ಫೂರ್ತಿಯಿಂದಲೇ ನೋಡುತ್ತಿದ್ದ ಅವರು ನಮ್ಮ ನಡುವಿನ ಹೆಮ್ಮೆಯಾಗಿದ್ದರು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)