ಶುಕ್ರವಾರ, ಡಿಸೆಂಬರ್ 13, 2019
27 °C

ಮಳೆಕಾಡು ಮಾಯ, ವಾತಾವರಣ ಏರುಪೇರು

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

ಮಳೆಕಾಡು ಮಾಯ, ವಾತಾವರಣ ಏರುಪೇರು

ಮಡಿಕೇರಿ: ಕೊಡಗು ಎಂದ ಕೂಡಲೇ ನಿಸರ್ಗದ ರಮಣೀಯತೆ ಕಣ್ಮುಂದೆ ಬರುತ್ತದೆ. ಇಲ್ಲಿನ ಮಂಜು, ಮಳೆ, ಚಳಿಯ ಅನುಭವ ಮನಸ್ಸಿಗೆ ಮುದ ನೀಡುವಂತಹದ್ದು. ಕಾವೇರಿ ನದಿ ಜಿಲ್ಲೆಯಲ್ಲಿ ಉಗಮವಾಗಿ ಲಕ್ಷಾಂತರ ರೈತರ ಜೀವನಾಡಿಯಾಗಿ ಹರಿಯುತ್ತಾಳೆ. ಕೊಡಗು ಜಿಲ್ಲೆಯ ರೈತರೊಂದಿಗೆ ಮಂಡ್ಯ, ಮೈಸೂರು ಜಿಲ್ಲೆಯ ರೈತರ ಜಮೀನಿಗೂ ನೀರುಣಿಸುವ ಮೂಲಕ ಬದುಕಿಗೆ ಆಧಾರವಾಗಿದ್ದಾಳೆ.

ಇದು ಹತ್ತಾರು ವರ್ಷಗಳ ಹಿಂದಿನ ಪರಿಸ್ಥಿತಿ. ಆದರೆ, ಕಾವೇರಿ ನದಿ ಜನಿಸುವ ನಾಡಿನಲ್ಲಿ ಕೆಲವು ವರ್ಷಗಳಿಂದ ವಾತಾವರಣ ಸಾಕಷ್ಟು ಬದಲಾಗಿದೆ. ಈ ಬದಲಾವಣೆ ಸ್ಥಳೀಯ ಹಾಗೂ ಅವಲಂಬಿತ ಜಿಲ್ಲೆಯ ಜನರನ್ನು ಕಾಡಲು ಆರಂಭಿಸಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅಪಾಯವಿದೆ ಎಂದು ಪರಿಸರ ಸಂಘಟನೆಗಳು ಎಚ್ಚರಿಸುತ್ತಿವೆ.

ಈಚೆಗೆ ಕೇಂದ್ರ ಸರ್ಕಾರದ ಪರಿಸರ ಸಚಿವಾಲಯವು ಬಿಡುಗಡೆ ಮಾಡಿರುವ ‘ಅರಣ್ಯ ಸ್ಥಿತಿಗತಿಯ ದ್ವೈವಾರ್ಷಿಕ ವರದಿ’ ಆತಂಕ ಮೂಡಿಸಿದೆ. ಬೇರೆಲ್ಲ ಜಿಲ್ಲೆಗಳಲ್ಲಿ ಕಾಡು ಹಿಗ್ಗಿದ್ದರೆ ಒಂದು ಕಾಲದಲ್ಲಿ ದಟ್ಟಕಾಡು ಹೊಂದಿದ್ದ ಕೊಡಗಿನಲ್ಲಿ ಎರಡು ವರ್ಷಗಳಲ್ಲಿ 102 ಚದರ ಕಿ.ಮೀಗಳಷ್ಟು ಕಾಡು ಕುಗ್ಗಿದೆ ಎಂಬ ಅಂಶವು ಜಿಲ್ಲೆಯ ಸ್ಥಿತಿಗತಿಗೆ ಹಿಡಿದ ಕನ್ನಡಿಯಾಗಿದೆ. ಒತ್ತುವರಿ ತಂದ ಆತಂಕ: ಪಶ್ಚಿಮಘಟ್ಟ ವ್ಯಾಪ್ತಿ ಒಳಗೊಂಡಿರುವ ಜಿಲ್ಲೆಯಲ್ಲಿ ಕಾಡು ಕುಗ್ಗುತ್ತಿರುವುದಕ್ಕೆ ಹಲವು ಕಾರಣಗಳಿವೆ.

‘ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಮರಗಳಿವೆ. ಖಾಸಗಿ ಜಮೀನಿನಲ್ಲಿ ಮರಗಳಿಲ್ಲ’ ಎಂದು ಅರಣ್ಯಾಧಿಕಾರಿಗಳು ವಾದ ಮಂಡಿಸುತ್ತಾರೆ. ಆದರೆ, ಅರಣ್ಯದಲ್ಲೂ ಮರಗಳಿಲ್ಲ. ಬರೀ ಕುರುಚಲು ಗಿಡಗಳದ್ದೇ ಕಾರುಬಾರು. ಇರುವ ಮರಗಳ ಸಂರಕ್ಷಣೆಯೂ ನಡೆಯುತ್ತಿಲ್ಲ. ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯಿದ್ದು ಗಸ್ತು ಮಾಡಲಾಗುತ್ತಿಲ್ಲ. ಮರಗಳ್ಳರೂ ಯಾವುದೇ ಅಳುಕಿಲ್ಲದೇ ಮರಗಳ ಹನನ ಮಾಡುತ್ತಿರುವ ಕಾರಣ ಕಾಡು ನಾಶವಾಗುತ್ತಿದೆ’ ಎಂಬ ಆರೋಪವೂ ಕೇಳಿಬರುತ್ತಿದೆ.

ವಾಣಿಜ್ಯ ಬೆಳೆಗೆ ಒತ್ತು!: ಕೊಡಗು ಪರಿಸರ ಸೂಕ್ಷ್ಮ ಪ್ರದೇಶ. ಇಲ್ಲಿ ಉತ್ತಮ ಮಳೆಯಾದರೆ ಮಾತ್ರ ಕಾವೇರಿ ಕಣಿವೆ ಜಲಾಶಯಗಳು ಭರ್ತಿಯಾಗುತ್ತವೆ. ಆದರೆ, ಈಚಿನ ವರ್ಷಗಳಲ್ಲಿ ಮಳೆ ಕೊರತೆ ಕಾಣಿಸುತ್ತಿದೆ. ಭಾಗಮಂಡಲ, ತಲಕಾವೇರಿ, ಚೇರಂಬಾಣೆ, ನಾಪೋಕ್ಲು, ಉಡೋತ್‌, ಚೆಟ್ಟಿಮಾನಿ, ಬೆಟ್ಟಗೇರಿ, ಬಾಡಾಗ ವ್ಯಾಪ್ತಿಯಲ್ಲಿ ವಾರ್ಷಿಕ 300 ಇಂಚುಗಳಷ್ಟು ಮಳೆ ಸುರಿಯುತ್ತಿತ್ತು. ಈಗ 120 ಇಂಚೂ ಮಳೆಯಾಗುತ್ತಿಲ್ಲ.

‘10 ವರ್ಷಗಳ ಹಿಂದೆ ಮಳೆಗೆ ಭಾಗಮಂಡಲವು ಒಂದು ತಿಂಗಳು ಜಲಾವೃತಗೊಳ್ಳುತ್ತಿತ್ತು. ಎರಡು ವರ್ಷಗಳಿಂದ ಅದು ಎರಡು ದಿನಕ್ಕೆ ಇಳಿದಿದೆ. ಅಲ್ಲಿ ಸತತ ಮಳೆಯಾದರೆ ಮಾತ್ರ ಕಾವೇರಿ ನದಿಯಲ್ಲಿ ನೀರಿನ ಹರಿವು ಕಾಣಿಸಲು ಸಾಧ್ಯ. ತಲಕಾವೇರಿ ವನ್ಯಧಾಮ ವ್ಯಾಪ್ತಿಯ ಶೋಲಾ ಅರಣ್ಯವು ಒತ್ತುವರಿ, ಮರಗಳ ಹನನದಿಂದ ಹವಾಮಾನದಲ್ಲೂ ಏರುಪೇರಾಗಿದೆ’ ಎನ್ನುತ್ತಾರೆ ಪರಿಸರ ತಜ್ಞರು.

ಕಾಡುಜಾತಿಯ ಮರಗಳಲ್ಲಿ ಕಾಳುಮೆಣಸಿನ ಬಳ್ಳಿಗಳನ್ನು ಬೆಳೆಸಲು ಸಾಧ್ಯವಿಲ್ಲ. ಬೆಳೆಗಾರರು ಅವುಗಳನ್ನು ತೆಗೆದು ಸಿಲ್ವರ್‌ ಓಕ್‌ ಬೆಳೆಸಲು ಆರಂಭಿಸಿದ್ದಾರೆ. ಇದರಿಂದಲೂ ದಟ್ಟ ಅರಣ್ಯ ಕಣ್ಮರೆಯಾಗುತ್ತಿದೆ. ಜತೆಗೆ, ಕಡಿವಾಣವಿಲ್ಲದ ಪ್ರವಾಸೋದ್ಯಮ ಚಟುವಟಿಕೆ, ಹೋಂಸ್ಟೇ ನಿರ್ಮಾಣಕ್ಕೆ ಖಾಸಗಿ ಜಮೀನಿನಲ್ಲಿದ್ದ ಮರಗಳನ್ನು ತೆರವು ಮಾಡಲಾಗುತ್ತಿದೆ. ಬೆಳೆ ಪದ್ಧತಿಯಲ್ಲಿ ಬದಲಾವಣೆ, ವಾಣಿಜ್ಯ ಬೆಳೆಗಳಿಗೆ ಒತ್ತು ನೀಡುತ್ತಿರುವುದೂ ಪ್ರತಿಕೂಲ ಪರಿಣಾಮಕ್ಕೆ ಕಾರಣವಾಗಿದೆ.

ಕಾಫಿ ಹಾಗೂ ಕಾಳುಮೆಣಸಿನ ಧಾರಣೆ ಕುಸಿದ ಕಾರಣ ಶುಂಠಿ ಬೆಳೆಗೆ ಜಮೀನು ನೀಡಲಾಗಿತ್ತು. ಅದೂ ಸಹ ಹವಾಮಾನ ಬದಲಾವಣೆಗೆ ಕಾರಣ ಎನ್ನಲಾಗಿದೆ.

ಪಾತಾಳ ಕಂಡ ಅಂತರ್ಜಲ: ಕಾವೇರಿ ನದಿ ಮಾತ್ರವಲ್ಲದೇ ಹಲವು ಉಪನದಿಗಳು ಜಿಲ್ಲೆಯಲ್ಲಿ ಹರಿಯುತ್ತವೆ. ಹಿಂದೆ ಮನೆ ಎದುರು ಸಣ್ಣದಾದ ತೆರೆದ ಬಾವಿ ತೆಗೆದರೂ ಅಂತರ್ಜಲ ಉಕ್ಕುತ್ತಿತ್ತು. ಈಗ ಆ ಪರಿಸ್ಥಿತಿಯಿಲ್ಲ. 300 ಅಡಿಗಳಷ್ಟು ಕೊಳವೆಬಾವಿ ತೆಗೆದರೆ ಮಾತ್ರ ನೀರು ಸಿಗುತ್ತಿದೆ. ಅಷ್ಟರಮಟ್ಟಿಗೆ ಬದಲಾವಣೆಯಾಗಿದೆ ಎಂಬ ಕೊರಗಿದೆ.

ಫೆಬ್ರುವರಿ, ಮಾರ್ಚ್‌ನಲ್ಲಿ ಕಾಫಿ ಹೂವು ಮಾಡಲು ನೀರಿನ ಅಗತ್ಯವಿದೆ. ಕೆರೆ– ಕಟ್ಟೆ, ಕೃಷಿ ಹೊಂಡ, ಕೊಳವೆಬಾವಿಗೆ ಸ್ಪ್ರಿಂಕ್ಲರ್‌ ಜೋಡಿಸಿ ಬೆಳೆಗಾರರು ನೀರು ಹಾಯಿಸುತ್ತಾರೆ. ಈಚಿನ ವರ್ಷಗಳಲ್ಲಿ ಅಗತ್ಯವಿರುವಷ್ಟು ನೀರೇ ಲಭ್ಯವಾಗುತ್ತಿಲ್ಲ ಎಂದು ಬೆಳೆಗಾರರು ನೋವಿನಿಂದ ನುಡಿಯುತ್ತಾರೆ.

(ಮುಂದಿನ ಭಾಗ: ‘ಕಿಡಿ’ಗೇಡಿಗಳ ಕೃತ್ಯಕ್ಕೆ ಕಾಡು ನಾಶ)

 

ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶ (ಹೆಕ್ಟೇರ್‌ಗಳಲ್ಲಿ)

ಕ್ರ.ಸಂ.  ಅರಣ್ಯ ವರ್ಗ      ಮಡಿಕೇರಿ ವಿಭಾಗ              ವಿರಾಜಪೇಟೆ ವಿಭಾಗ             ಒಟ್ಟು

1.    ಮೀಸಲು ಅರಣ್ಯ    37,861.18                 30,348.24                   68,209.42

2.    ರಕ್ಷಿತ ಅರಣ್ಯ      5,667.12                     1,601.67                    7,288.79

3.    ವರ್ಗಿಕರಿಸಿದ ಅರಣ್ಯ 3,765.64                   426.783                     4,192.423

4.    ವನ್ಯಜೀವಿ ವಿಭಾಗ   38,922.10                 .....                            38,922.10

       ಒಟ್ಟು ಪ್ರದೇಶ     1,18,612.733

ಅತಿಕ್ರಮಣ ಏನು– ಎತ್ತ?

7,358.89 ಎಕರೆ – ವಸತಿ, ಸಾಗುವಳಿ ಹಾಗೂ ಸಮುದಾಯ ಉದ್ದೇಶಕ್ಕೆ ಅತಿಕ್ರಮಣಗೊಂಡಿರುವ ಅರಣ್ಯ ಪ್ರದೇಶ

2,012 ಎಕರೆ – ಅರಣ್ಯ ಒತ್ತುವರಿ ತೆರವು

3,728 ಅರಣ್ಯ ಒತ್ತುವರಿ ಕುಟುಂಬಗಳು

ಇಂದಿನಿಂದ ಮಾಲಿಕೆ ಆರಂಭ

ಹಲವು ಕಾರಣದಿಂದ ಜಿಲ್ಲೆಯ ಕಾಡು ಕುಗ್ಗುತ್ತಿದೆ ಎಂದು ಕೇಂದ್ರದ ಅರಣ್ಯ ಸಚಿವಾಲಯವು ತನ್ನ ದ್ವೈವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದೆ. ದೂರಸಂವೇದಿ ತಂತ್ರಜ್ಞಾನ ಹಾಗೂ ಉಪಗ್ರಹಗಳು ರವಾನಿಸಿದ ಚಿತ್ರ ಆಧರಿಸಿ ಜಿಲ್ಲೆಯ 1,193.18 ಚದರ ಕಿ.ಮೀ ಅರಣ್ಯ ವಿಸ್ತೀರ್ಣದಲ್ಲಿ 102 ಚದರ ಕಿ.ಮೀ ಕಾಡು ಕುಗ್ಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಕೊಡಗಿನ ಪರಿಸರದಲ್ಲಿ ಆಗುತ್ತಿರುವ ಬದಲಾವಣೆ ಕುರಿತು ‘ಪ್ರಜಾವಾಣಿ’ಯಲ್ಲಿ ಇಂದಿನಿಂದ ಮಾಲಿಕೆ ಆರಂಭವಾಗಿದೆ.

ಪ್ರತಿಕ್ರಿಯಿಸಿ (+)