ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ದಂಧೆ: ಅಧಿಕಾರಿಗಳಿಗೆ ನೋಟಿಸ್‌

Last Updated 21 ಫೆಬ್ರುವರಿ 2018, 9:05 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ಸಂಬಂಧ ಕರ್ತವ್ಯ ಲೋಪದ ಆರೋಪದ ಮೇಲೆ ಕಂದಾಯ ಅಧಿಕಾರಿಗಳು ಹಾಗೂ ವಿವಿಧ ಇಲಾಖಾಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯರಗೋಳ್ ನೀರಾವರಿ ಯೋಜನೆ ಕಾಮಗಾರಿ ಪರಿಶೀಲನೆಗೆ ಹೋಗಿದ್ದ ಸಂದರ್ಭದಲ್ಲಿ ಮರಳು ದಂಧೆ ಸಂಬಂಧ ಸಾಕಷ್ಟು ದೂರು ಬಂದಿದ್ದವು. ಆ ದೂರು ಆಧರಿಸಿ ಪರಿಶೀಲನೆ ಮಾಡಿದಾಗ ದಂಧೆಯ ಕರ್ಮಕಾಂಡ ಬಯಲಾಯಿತು ಎಂದು ಹೇಳಿದರು.

ಜಿಲ್ಲೆಯ ಗಡಿಯಂಚಿನ ಜಾಗಗಳಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವುದು ಗೊತ್ತಾಗಿದೆ. ನೀರಿನ ಕಾಲುವೆಗಳಿಂದ ಮರಳು ತೆಗೆದು ರಾಶಿ ಹಾಕಿದ್ದು, ಅಲ್ಲಿಂದ ಬೂದಿಕೋಟೆ, ಮಾಸ್ತಿ, ಮಾಲೂರು ಮಾರ್ಗವಾಗಿ ಲಾರಿಗಳಲ್ಲಿ ಬೆಂಗಳೂರಿಗೆ ಮರಳು ಸಾಗಿಸಲಾಗುತ್ತಿದೆ. ಈ ದಂಧೆಗೆ ಕಡಿ ವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗು ವುದು ಎಂದರು.

ಕಡ್ಡಾಯ ರಜೆ: ಕೋಲಾರ ನಗರಸಭೆ ಆಯುಕ್ತ ಎಸ್‌.ಎ.ರಾಮ್‌ಪ್ರಕಾಶ್‌ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ. ‘ಆಯುಕ್ತರು ಅನಾರೋಗ್ಯದ ಕಾರಣ ಮಾ.1ರವರೆಗೆ ರಜೆ ಪಡೆದಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ನಗರಸಭೆ ಆಯುಕ್ತರು ಮತ್ತು ಸದಸ್ಯರ ನಡುವಿನ ಕಚ್ಚಾಟದಲ್ಲಿ ಕುಡಿಯುವ ನೀರು ಸೇರಿದಂತೆ ವಿವಿಧ ಸೌಲಭ್ಯಗಳಿಗೆ ತೊಂದರೆಯಾಗುತ್ತಿದೆ.  ಸದಸ್ಯರು ಆಯುಕ್ತರ ವಿರುದ್ಧ ದೂರು ನೀಡಿದ್ದಾರೆ. ಆಯುಕ್ತರು ಸದಸ್ಯರ ಲೋಪದೋಷಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ಅಧಿಕಾರಿಗಳು ಬೇರೆಯವರ ವಿರುದ್ಧ ಆರೋಪ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಹೇಳಿದರು.

ಸಮಂಜಸವಲ್ಲ: ಟ್ಯಾಂಕರ್ ನೀರು ಪೂರೈಕೆ ಸಂಬಂಧ ಬೋಗಸ್ ಬಿಲ್ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳುವುದು ಸೂಕ್ತವಲ್ಲ. ನೀರು ಸರಬರಾಜು ಮಾಡುವಾಗಲೇ ಕ್ರಮ ತೆಗೆದುಕೊಳ್ಳಬೇಕು. ತಪ್ಪು ಆಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ. ಆಗ ಕರ್ತವ್ಯ ನಿರ್ಲಕ್ಷ್ಯ ತೋರಿ ಈಗ ಸದಸ್ಯರತ್ತ ಬೆಟ್ಟು ತೋರಿಸುವುದು ಸಮಂಜಸವಲ್ಲ ಎಂದರು.

ನಗರದ ನೀರಿನ ಸಮಸ್ಯೆ ಸಂಬಂಧ ಸಾಕಷ್ಟು ದೂರು ಬಂದಿವೆ. ಅಮ್ಮೇರಹಳ್ಳಿ ಕೆರೆಯಲ್ಲಿನ ನೀರು ಶುದ್ಧೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಸದ್ಯದಲ್ಲೇ ನಗರಕ್ಕೆ ನೀರು ಹರಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

* * 

ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿ ಮರಳು ಸಾಗಣೆ ಲಾರಿಗಳ ಓಡಾಟದ ಮೇಲೆ ಹದ್ದಿನ ಕಣ್ಣಿಡುತ್ತೇವೆ. ತಪ್ಪಿತಸ್ಥರಿಗೆ ಶಿಕ್ಷೆ ತಪ್ಪಿದ್ದಲ್ಲ ಜಿ.ಸತ್ಯವತಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT