ಗುರುವಾರ , ಡಿಸೆಂಬರ್ 12, 2019
25 °C

ಖಾಲಿ ಜಾಗವೇ ಇಲ್ಲದ ಊರು !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾಲಿ ಜಾಗವೇ ಇಲ್ಲದ ಊರು !

ವಿಜಯಪುರ: ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ತಾಲ್ಲೂಕು ಎಂಬ ಹೆಗ್ಗಳಿಕೆ ಇದ್ದರೂ ಈ ಊರಿನಲ್ಲಿ ಖಾಲಿ ಜಾಗವಿಲ್ಲದ ಕಾರಣ ಗ್ರಾಮ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲು.

ಕಾರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸರಹಳ್ಳಿ ಗ್ರಾಮದಲ್ಲಿ 160ಕ್ಕೂ ಹೆಚ್ಚು ಮನೆಗಳಿವೆ. 900ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಚರಂಡಿ ನಿರ್ಮಾಣಕ್ಕೆ ಜಾಗವಿಲ್ಲ. ಸರ್ಕಾರದಿಂದ ಮನೆಗಳು ಮಂಜೂರಾದರೂ ಖಾಲಿ ಜಾಗ ಇಲ್ಲ. ಇನ್ನೂ ಶೌಚಾಲಯಗಳ ನಿರ್ಮಾಣ ಕೇಳುವುದೇ ಬೇಡ ಎಂದು ದಾಸರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 46 ಮಂದಿ ಮಕ್ಕಳಿದ್ದಾರೆ. ಮಕ್ಕಳಿಗೆ ಆಟದ ಮೈದಾನವಿಲ್ಲ. ಇದರಿಂದ ಮಕ್ಕಳು ಕ್ರೀಡಾ ಚಟುವಟಿಕೆಗಳಿಂದ ವಂಚಿತರಾಗಿದ್ದಾರೆ. ಇಕ್ಕಟ್ಟಿನ ಮನೆಗಳಲ್ಲೇ ಜನರು ವಾಸ ಮಾಡಬೇಕಿದೆ. ಒಂದೇ ಮನೆಯಲ್ಲಿ ಎರಡು ಮೂರು ಕುಟುಂಬ ವಾಸ ಮಾಡಬೇಕಾಗಿದೆ. ಜನ ಸತ್ತರೂ ಹೆಣ ಹೂಳಲು ಜಾಗವಿಲ್ಲದ ಪರಿಸ್ಥಿತಿ ಇದೆ. ಜಿಲ್ಲಾಧಿಕಾರಿ, ತಹಶೀಲ್ದಾರ್‌ರಿಗೂ ಮನವಿ ಮಾಡಲಾಗಿದ್ದು ಯಾವಾಗ ಗಮನ ಹರಿಸುತ್ತಾರೋ ನೋಡಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.

ಶಾಲಾ ಮಕ್ಕಳಿಗೆ ಕೊಠಡಿ ವ್ಯವಸ್ಥೆ ಇಲ್ಲದೆ, ಬೇರೆಡೆಗೆ ದಾಖಲಾಗಿದ್ದಾರೆ ಎನ್ನುತ್ತಾರೆ ಮುಖ್ಯಶಿಕ್ಷಕ ರವಿಪ್ರಕಾಶ್. ನಿವೇಶನಗಳಿಗಾಗಿ ಭೂಮಿ ಖರೀದಿಸುವಂತೆ ಗ್ರಾಮಸ್ಥರಿಂದ ಯಾವುದೇ ಮನವಿ ಬಂದಿಲ್ಲ ಎಂದು ಕಾರಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೀರಪ್ಪ ತಿಳಿಸಿದ್ದಾರೆ.

ಶಾಲಾ ಮಕ್ಕಳು ಕುಳಿತು ಊಟ ಮಾಡಲಿಕ್ಕೂ ಜಾಗವಿಲ್ಲ. ಮಳೆ ಬಂದರೆ ತೀವ್ರ ಸಮಸ್ಯೆ. ಇರುವ ಜಾಗಕ್ಕಾದರೂ ಕಾಂಕ್ರೀಟ್ ಹಾಕಿ ಕೊಡಿ

ವೆಂಕಟರವಣಪ್ಪ, ಗ್ರಾಮಸ್ಥ

ಪ್ರತಿಕ್ರಿಯಿಸಿ (+)