ಎಚ್‌ಡಿಕೆ ಪ್ರವಾಸ ಫೆ. 25ರಿಂದ

7

ಎಚ್‌ಡಿಕೆ ಪ್ರವಾಸ ಫೆ. 25ರಿಂದ

Published:
Updated:

ಬಳ್ಳಾರಿ: ‘ಜಿಲ್ಲೆಯ ಕೂಡ್ಲಿಗಿ, ಕೊಟ್ಟೂರು, ಸಂಡೂರು ಭಾಗಗಳಲ್ಲಿ ಫೆ.25 ಮತ್ತು 26ರಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರವಾಸ ಕೈಗೊಳ್ಳಲಿದ್ದಾರೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಿವಪ್ಪ ತಿಳಿಸಿದರು.

‘ಕುಮಾರಸ್ವಾಮಿ ಅವರು 25 ರಂದು ಕೂಡ್ಲಿಗಿ ಬೆಳಿಗ್ಗೆ 11ಕ್ಕೆ ಹಾಗೂ ಕೊಟ್ಟೂರಿನಲ್ಲಿ ಮಧ್ಯಾಹ್ನ 1 ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. 26ರಂದು ಸಂಡೂರಿನ ಕುಮಾರಸ್ವಾಮಿ ದೇವಸ್ಥಾನ ದರ್ಶನ ಪಡೆದುಕೊಂಡು ಬಳಿಕ ಬೊಮ್ಮಘಟ್ಟ ಬೆಳಿಗ್ಗೆ 11ಕ್ಕೆ ರೈತರ ಮತ್ತು ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ಸಮಾವೇಶದಲ್ಲಿ 25 ಸಾವಿರ ಜನ ಸೇರುವ ನಿರೀಕ್ಷೆ ಇದೆ’ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಈಗಾಗಲೇ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಸಂಡೂರಿನಲ್ಲಿ ವಸಂತಕುಮಾರ ಹಾಗೂ ಕೂಡ್ಲಿಗಿಯಲ್ಲಿ ಎನ್‌.ಟಿ.ಬೊಮ್ಮಣ್ಣ ಅಭ್ಯರ್ಥಿಗಳೆಂದು ಘೋಷಿಸಲಾಗಿದೆ’ ಎಂದರು.

‘ವಿಕಾಸ ಪರ್ವ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಿದೆ. ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಭಾಗವಹಿಸಿದ್ದು ಇದಕ್ಕೆ ಸಾಕ್ಷಿ. ಇದರಿಂದ ಬೇರೆ ಪಕ್ಷದವರು ಭಯಭೀತರಾಗಿದ್ದಾರೆ. ಪಕ್ಷ ಈ ಬಾರಿ ಅಧಿಕಾರಕ್ಕೆ ಬರುವುದು ಖಚಿತ’ ಎಂದರು.

‘ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಒಂದು ವೇಳೆ ಅವರಿಗೆ ಟಿಕೆಟ್ ಸಿಗದಿದ್ದರೂ ಪಕ್ಷದ ಯಾರಿಗೆ ಟಿಕೆಟ್‌ ನೀಡುತ್ತದೆಯೋ ಅವರ ಗೆಲವಿಗಾಗಿ ಶ್ರಮಿಸಲಿದ್ದಾರೆ. ಇದು ಬೇರೆ ಪಕ್ಷಕ್ಕೆ ಮತ್ತು ನಮ್ಮ ಪಕ್ಷಕ್ಕೆ ಇರುವಂತ ವ್ಯತ್ಯಾಸವಾಗಿದೆ. ಈ ಬಾರಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿಯಾಗಿದೆ’ ಎಂದರು.

‘ಪಕ್ಷದ ಪ್ರಣಾಳಿಕೆಯಲ್ಲಿ ಈಗಾಗಲೇ ಅಧಿಕಾರ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಘೋಷಿಸಲಾಗಿದೆ. ಈ ಹಣವನ್ನು ತೆರಿಗೆ ಹಣದಿಂದ ಭರಿಸಲಾಗುತ್ತದೆ. ಅಲ್ಲದೇ, 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ₹ 5 ಸಾವಿರ ಗೌರವ ಧನ ನೀಡಲಾಗುವುದು. ಗರ್ಭಿಣಿಯರಿಗೆ ಆರು ತಿಂಗಳದವರೆಗೆ ಪ್ರತಿ ತಿಂಗಳಿಗೆ ₹ 6 ಸಾವಿರ ನೀಡಲಾಗುವುದು. ಅಲ್ಲದೇ, 24 ಗಂಟೆ ವಿದ್ಯುತ್ ಪೂರೈಸಲಾಗುತ್ತದೆ’ ಎಂದು ತಿಳಿಸಿದರು.

ಬಿಎಸ್‌ಪಿಗೆ ಬೆಂಬಲ: ಹೊಸಪೇಟೆಯ ವಿಜಯನಗರ ಕ್ಷೇತ್ರದಲ್ಲಿ ಬಹುಜನ ಸಮಾಜ ಪಾರ್ಟಿಗೆ(ಬಿಎಸ್‌ಪಿ) ಪಕ್ಷ ಬೆಂಬಲ ವ್ಯಕ್ತಪಡಿಸಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಿವಪ್ಪ ತಿಳಿಸಿದರು.

ಮುಖಂಡರಾದ ಮೀನಳ್ಳಿ ತಾಯಣ್ಣ, ಪಿ.ಎಸ್.ಸೋಮಲಿಂಗನಗೌಡ, ಮಂಜುನಾಥಗೌಡ, ವೈ.ಗೋಪಾಲ, ರೋಷನ್ ಬಾಷಾ, ಶಾಂತಕುಮಾರ, ಗೌಸಿಯಾಬೀ ಇದ್ದರು.

ಹುಚ್ಚುಚ್ಚಾಗಿ ಹೇಳಿಕೆ ನೀಡಬಾರದು!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳ್ಳಾರಿಯಲ್ಲಿ ಜೆಡಿಎಸ್ ಎಲ್ಲಿದೆ ಎಂಬ ಹೇಳಿಕೆಗೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಿವಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಈ ಥರ ಹುಚ್ಚುಚ್ಚಾಗಿ ಹೇಳಿಕೆಗಳನ್ನು ಅವರು ನೀಡಬಾರದು. ಬೆಂಗಳೂರಿನಲ್ಲಿ ನಡೆದ ವಿಕಾಸ ಪರ್ವ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ಹೋಗಿದ್ದಾರೆ. ಜೆಡಿಎಸ್ ಪಕ್ಷದಿಂದ ಬೆಳೆದು ಮುಖ್ಯಮಂತ್ರಿ ಆಗಿರುವುದನ್ನು ಮರೆತಿದ್ದಾರೆ. ಅವರು ಪಕ್ಷಕ್ಕೆ ಗೌರವ ನೀಡಬೇಕು ಎಂದು ಆಗ್ರಹಿಸಿದರು

ಆಕಾಂಕ್ಷಿಗಳ ಪಟ್ಟಿ ದೊಡ್ಡದು...

ಬಳ್ಳಾರಿಯ ಗ್ರಾಮೀಣ ಭಾಗದಲ್ಲಿ ಮುಖಂಡರಾದ ಮೀನಳ್ಳಿ ತಾಯಣ್ಣ ಸೇರಿ ಇನ್ನೊಬ್ಬರಿದ್ದಾರೆ. ಅವರ ಹೆಸರನ್ನು ಮುಂದಿನ ದಿನದಲ್ಲಿ ಪ್ರಕಟಿಸಲಾಗುವುದು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಿವಪ್ಪ ತಿಳಿಸಿದರು.

ನಗರಕ್ಕೆ ಸ್ಪರ್ಧಿಸಲು ಮುಖಂಡರಾದ ಶ್ರೀನಿವಾಸ ಮತ್ತು ಇಕ್ಬಾಲ್ ಅಹ್ಮದ್ ಅವರು ಆಕಾಂಕ್ಷಿಗಳಾಗಿದ್ದಾರೆ. ಹಗರಿಬೊಮ್ಮನಹಳ್ಳಿಯಲ್ಲಿ ಸ್ಪರ್ಧಿಸಲು 8 ಜನ ಆಕಾಂಕ್ಷಿಗಳಿದ್ದಾರೆ. ಅಲ್ಲದೇ, ಸಿರುಗುಪ್ಪ, ಹಡಗಲಿ ಕ್ಷೇತ್ರಗಳಲ್ಲೂ ಸ್ಪರ್ಧಿಸಲೂ ಅಭ್ಯರ್ಥಿಗಳು ಮುಂದೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳ ಹೆಸರಗಳನ್ನು ಖಚಿತ ಪಡಿಸಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry