ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ತತ್ವವೇ ನನ್ನ ಗೆಲ್ಲಿಸಿತು.. ಶಾಸಕತ್ವ ಕೊಡಿಸಿದ ಸಹಕಾರ ಕ್ಷೇತ್ರ

Last Updated 21 ಫೆಬ್ರುವರಿ 2018, 9:43 IST
ಅಕ್ಷರ ಗಾತ್ರ

ಬಳ್ಳಾರಿ: ‘ಸಹಕಾರಿ ಕ್ಷೇತ್ರದಲ್ಲಿ ನನ್ನ ನಿರಂತರ ಸೇವೆ, ಮಾವ ಸಿ.ಎಂ.ರೇವಣಸಿದ್ದಯ್ಯ ಅವರ ಪ್ರಭಾವ, ಜನಪರ ಕಾರ್ಯವೈಖರಿಯೇ ನನ್ನನ್ನು ಶಾಸಕನ ಸ್ಥಾನಕ್ಕೆ ಕರೆದೊಯ್ದಿತ್ತು...’

ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಪ್ರಸಿದ್ಧವಾದ ಸಿರುಗುಪ್ಪ ಕ್ಷೇತ್ರದಲ್ಲಿ ಜನತಾ ಪರಿವಾರದ ಎರಡನೇ ಶಾಸಕರಾಗಿ ಆಯ್ಕೆಯಾಗಿದ್ದ ಟಿ.ಎಂ.ಚಂದ್ರಶೇಖರಯ್ಯ ತಾವು ಮೊದಲು ಶಾಸಕನಾದ ನೆನಪುಗಳನ್ನು ಈ ಮಾತುಗಳಿಂದ ಆರಂಭಿಸಿದರು.

ನಗರದ ಸದಾಶಿವ ನಗರದಲ್ಲಿರುವ ಅವರ ಮನೆಗೆ ‘ಪ್ರಜಾವಾಣಿ’ ಬೆಳಿಗ್ಗೆ 11ರ ವೇಳೆಗೆ ಭೇಟಿ ನೀಡಿದಾಗ ಅವರ ಗೃಹ ಕಚೇರಿಯ ಪುಟ್ಟ ಕೋಣೆಯ ಕುರ್ಚಿಗಳೆಲ್ಲವೂ ಭರ್ತಿಯಾಗಿದ್ದವು. ಬೆಂಬಲಿಗರು, ಹಿತೈಷಿಗಳೊಂದಿಗೆ ಅವರು ಚರ್ಚಿಸುತ್ತಿದ್ದರು.

ಸಮಸ್ಯೆಗಳೊಂದಿಗೆ ಬಂದಿದ್ದವರ ನೆರವಿಗಾಗಿ ಅವರು ಕೆಲವು ಕಚೇರಿಗಳಿಗೆ ಕರೆ ಮಾಡುತ್ತಿದ್ದರು. 70 ವಯಸ್ಸಿನಲ್ಲೂ ಅವರ ಜನಸೇವೆಯ ಉತ್ಸಾಹ ಅಲ್ಲಿ ಗಮನ ಸೆಳೆದಿತ್ತು.

ಬಂದಿದ್ದವರನ್ನು ಕಳಿಸಿದ ಬಳಿಕ ನೆನಪಿಗೆ ಜಾರಿದ ಅವರು ತಮ್ಮ ಮಾವ ರೇವಣಸಿದ್ದಯ್ಯ ಹಾಗೂ ತಮಗೆ ರಾಜಕೀಯ ಜನ್ಮ ನೀಡಿದ ಹುಟ್ಟೂರು ಕುಡುದರಹಾಳ್‌ ಗ್ರಾಮವನ್ನು ವಿಶೇಷವಾಗಿ ಸ್ಮರಿಸಿದರು.

ರೈತ ಕುಟುಂಬದ ಹಿನ್ನೆಲೆಯ ಅವರು, ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ಪದವಿ ಬಿ.ಎಸ್‌ಸಿ ತರಗತಿಗೆ ಸೇರಿ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟುಕುಗೊಳಿಸಿದ್ದರು. ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಅವರ ರಾಜಕೀಯ ಜೀವನ ಆರಂಭವಾಯಿತು.

‘ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದಾಗಲೇ ನನಗೆ ಶಾಸಕ ಸ್ಥಾನ ಮಹತ್ವದ ಅರಿವಿತ್ತು. ಶಾಸಕನಾದರೆ ಜನ ಸೇವೆ ಮತ್ತು ಅಭಿವೃದ್ಧಿಯ
ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತಾರಗೊಳ್ಳುತ್ತದೆ ಎಂಬ ಮಹತ್ವಾಕಾಂಕ್ಷೆಯೂ ಇತ್ತು. ಅದಕ್ಕೆ ನನ್ನ ಮಾವ ನೀರೆರೆದು ಪ್ರೋತ್ಸಾಹಿಸಿದರು’ ಎಂದು ಹೇಳಿದರು.

‘1962ರಲ್ಲೇ ಶಾಸಕರಾಗಿದ್ದ ನನ್ನ ಮಾವ ಮತ್ತೆ 1985ರಲ್ಲಿ ಜನತಾ ಪಕ್ಷದಿಂದ ಆಯ್ಕೆಯಾಗಿದ್ದರು. ಅವರ ಮಾರ್ಗದರ್ಶನದಲ್ಲೇ ನಡೆದಿದ್ದ ನಾನು
ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದಾಗಲೇ, 1989ರಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದೆ. ಆದರೆ ಮೊದಲ ಬಾರಿಗೆ ಸೋತಿದ್ದರೂ ಪ್ರಬಲ ಪೈಪೋಟಿ ನೀಡಿದ್ದೆ. ಆದರೆ ಆಗ ಗೆಲ್ಲುತ್ತೇನೆ ಎಂಬ ಭರವಸೆ ಇರಲಿಲ್ಲ’ ಎಂದರು.

‘ನಂತರ ನಡೆದ 1994ರ ಚುನಾವಣೆಯಲ್ಲಿ ಅದೇ ಪಕ್ಷದಿಂದ ಸ್ಪರ್ಧಿಸುವ ಹೊತ್ತಿಗೆ ಆತ್ಮವಿಶ್ವಾಸ ಹೆಚ್ಚಿತ್ತು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ದಶಕಕ್ಕೂ ಹೆಚ್ಚು ಕಾಲ ಸಲ್ಲಿಸಿದ್ದ ಸೇವೆ, ರೈತರ ಬಗೆಗಿನ ಕಳಕಳಿ, ಸ್ಪಂದಿಸುವ ಗುಣವೇ ಆಗ ನನ್ನಗೆ ಗೆಲುವು ದೊರಕಿಸಿತ್ತು. ಹಿಂದಿನ ಚುನಾವಣೆಯಲ್ಲಿ ಗೆದ್ದಿದ್ದ ಶಂಕರರೆಡ್ಡಿ ಸೋಲು ಕಂಡಿದ್ದರು’ ಎಂದು ಸ್ಮರಿಸಿದರು.

1999ರಲ್ಲಿ, 2004ರ ಚುನಾವಣೆಯಲ್ಲೂ ಚಂದ್ರಶೇಖರಯ್ಯ ಸೋಲು ಅನುಭವಿಸಿದ್ದರು. 2008ರಲ್ಲಿ ನಡೆದ ಪುನರ್ವಿಂಗಡಣೆ ಬಳಿಕ ಪರಿಶಿಷ್ಟ ಪಂಗಡಕ್ಕೆ ಕ್ಷೇತ್ರ ಮೀಸಲಾಗಿದ್ದರಿಂದ ಅವರು ಸ್ಪರ್ಧೆಯಿಂದ ಹಿಂದೆ ಸರಿದರು. ‘ಸಹಕಾರ ಕ್ಷೇತ್ರ ಬಹಳ ದೊಡ್ಡದು. ಆ ಕ್ಷೇತ್ರದಲ್ಲಿ ನಾನು ಮಾಡಿದ ಸೇವೆಯೇ ನನ್ನನ್ನು ಇಲ್ಲಿಯವರೆಗೂ ಕೈಹಿಡಿದು ನಡೆಸುತ್ತಿದೆ’ ಎಂದರು.

‘ಶಾಸಕನಾಗಿ ಮಾಡಿದ ಸಾರ್ಥಕ ಕೆಲಸ ಯಾವುದು’ ಎಂಬ ಪ್ರಶ್ನೆಗೆ ಥಟ್ಟನೆ ಉತ್ತರಿಸಿದ ಅವರು, ‘ತಾಲ್ಲೂಕು ಕೇಂದ್ರದಲ್ಲಿ ಅಗ್ನಿಶಾಮಕ ದಳದ ಕಚೇರಿ ಇರಲಿಲ್ಲ. ಬಸ್‌ ಡಿಪೊ ಇರಲಿಲ್ಲ. ಇವೆರಡೂ ಇಲ್ಲಿ ಸ್ಥಾಪನೆಯಾಗುವಂತೆ ಮಾಡಿದ್ದು ನನ್ನಲ್ಲಿ ಸಾರ್ಥಕ ಭಾವನೆ ಮೂಡಿಸಿದೆ’ ಎಂದು ಸ್ಮರಿಸಿದರು.

ಆರೋಗ್ಯದ ಗುಟ್ಟು: ‘ಜನರೊಂದಿಗೆ ಬೆರೆಯುವಂತೆ ಮಾಡಿರುವ ಸಹಕಾರ ಕ್ಷೇತ್ರವೇ ನನ್ನ ಆರೋಗ್ಯವನ್ನು ಉತ್ತಮವಾಗಿಟ್ಟಿದೆ. ಇದುವರೆಗಿನ ಸೇವೆಗಾಗಿ ಸಹಕಾರ ಇಲಾಖೆಯು 2016ರ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ನನಗೆ ‘ಸಹಕಾರಿ ರತ್ನ’ ಎಂಬ ಪ್ರಶಸ್ತಿಯನ್ನೂ ನೀಡಿ ಗೌರವಿಸಿತ್ತು’ಎಂದು ಫಲಕವನ್ನು ಪ್ರದರ್ಶಿಸಿ ಹೆಮ್ಮೆಯಿಂದ ನಕ್ಕರು.

‘ರಾಜಕೀಯಕ್ಕೆ ನಿವೃತ್ತಿ ಎಂಬುದು ಇಲ್ಲ. ಅಧಿಕಾರವಿದ್ದಾಗಲೇ ಜನಸೇವೆ ಮಾಡಬೇಕು ಎಂಬುದೆಲ್ಲ ಸುಳ್ಳು. ಸ್ಪಂದಿಸುವ ಗುಣವಿರುವುದರಿಂದ ಜನ ಈಗಲೂ ನನ್ನ ಮನೆಗೆ ಬರುತ್ತಾರೆ. ಕೈಲಾದಷ್ಟೂ ಸೇವೆ ಮಾಡುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT