ಸೋಮವಾರ, ಡಿಸೆಂಬರ್ 9, 2019
22 °C
ಮೆಚ್ಚುಗೆ ಪಡೆದ ಪ್ರೇಮಪತ್ರಗಳು

ಗಂಡುಗಲ್ಲದ ಹುಡುಗಿಯೇ...

Published:
Updated:
ಗಂಡುಗಲ್ಲದ ಹುಡುಗಿಯೇ...

ನನ್ನ ಮನದಂಬರದಲ್ಲಿ ಹೆಪ್ಪುಗಟ್ಟಿದ್ದ ಭಾವಮೋಡಗಳೆಲ್ಲಾ ಇಂದು ಮೋಡದಿಂದ ಘನೀಭವಿಸಿ, ಘಮಲಾದ ಒಲವ ತುಂತುರು ಹನಿಗಳಾಗಿ ಈ ಕಾಗದದ ಮೇಲೆ ಜಾರಿ ಅಕ್ಷರಗಳ ರೂಪುತಾಳಿವೆ! ಇಗೋ,ಈ ಪ್ರೇಮಚೀಟಿಯ ಚಿಟ್ಟೆಯನ್ನು ನಿನ್ನೆಡೆಗೆ ಹಾರಿಬಿಡುತ್ತಿದ್ದೇನೆ, ನಿನ್ನ ಮೊಗ್ಗಿನ ಮನಸ್ಸು ಅರಳಿ ಹೂವಾದೀತೆಂಬ ಅದಮ್ಯ ಆಸೆಯಲ್ಲಿ...

ಲೈಬ್ರರಿಯಲ್ಲಿ ಪುಸ್ತಕದ ಪುಟದೊಳಗಿಳಿದು ನಾನು ಕಳೆದುಹೋಗಿದ್ದಾಗ ಗೆಜ್ಜೆಸದ್ದು ಮಾಡಿ ಎಬ್ಬಿಸಿದ ಪೋರಿ, ಪವಾಡವೆಂಬಂತೆ ನಿನ್ನ ಅಪ್ಯಾಯಮಾನ ಪಿಳಿಪಿಳಿ ಕಣ್ಬೆಳಕಿಗೆ ತಟಕ್ಕನೆ ಜೋತುಬಿದ್ದೆ! ನಿನ್ನೆಡೆಗೆ ಸಮ್ಮೋಹನಗೊಳ್ಳುತ್ತಿದ್ದಂತೆಯೇ ನನ್ನ ಆಂತರ್ಯದಲ್ಲಿ ಸಿಕ್ಕಾಪಟ್ಟೆ ಸಿಹಿ ಅನಾಹುತಗಳ ಚಂಡಮಾರುತ!

ಪರವಶನಾಗಿ ರೆಪ್ಪೆ ಮಿಟುಕಿಸದೆ ನಿನ್ನನ್ನಷ್ಟೇ ದಿಟ್ಟಿಸುವ ಉದ್ಧಟತನ ಕ್ಷಣಾರ್ಧದಲ್ಲಿ ಅಂಟಿಕೊಂಡಿತ್ತು. ಪುಸ್ತಕದ ನಡುವಿಂದ ಚೂರು ಚೂರೇ ಕಾಣುತ್ತಿದ್ದ ಕಾಡುತ್ತಿದ್ದ ಜುಮ್ಕಿಯ ಜತೆಗೆ ನನ್ನ ಮನಸ್ಸೂ ಓಲಾಡುತ್ತಿದ್ದದ್ದು ನನಗೆ ಗೊತ್ತೇ ಆಗಲಿಲ್ಲ. ಆ ಕ್ಷಣದಲ್ಲಿ ಹರೆಯದ ಹುಡುಗನ ಹೃದಯಕ್ಕೆ ನುಗ್ಗಿ ನುಗ್ಗಿ ಬಂದ ಸಿಹಿ ಆಲಾಪಗಳಿಗೆ ನೀನೇ ರೂವಾರಿ.

ಲೈಬ್ರರಿ ಬಾಲೆಯೇ, ನಿನ್ನ ಕಣ್ಣ ಕಾಗುಣಿತಗಳ ಕಾವ್ಯ ಚಿಲುಮೆಗೆ ನಾ ಕರಗಲಿಲ್ಲ; ರೇಶಿಮೆಯ ಕೇಶರಾಶಿಯ ಮಳಿಗೆಗೆ ಮಾರುಹೋಗಲಿಲ್ಲ; ನಿನ್ನ ಗಲ್ಲದಂಚಿನ ತುದಿಗಿರುವ ಕಿರುಮಚ್ಚೆಗೆ ನಾ ಹುಚ್ಚುಹಿಡಿಸಿಕೊಂಡಿಲ್ಲ.!? ಕೇಳು; ನಿನ್ನ ಮೌನದ ಮುಂದಾಳತ್ವ ನನ್ನ ಅಹಮ್ಮಿನ ಅಡ್ಡೆಯ ಮೇಲೆ ದಾಳಿಯಿಟ್ಟು ನನ್ನ ಧಿಮಾಕುಗಳನ್ನೆಲ್ಲಾ ಉಡಾಯಿಸಿಬಿಟ್ಟಿತ್ತು! ಅಲ್ಲಿಂದೀಚೆಗಂತೂ ನಾ ಮಹಾಮೌನಿಯಾಗಿಬಿಟ್ಟೆ!.

ಕತ್ತಲು ಮೆತ್ತಿಕೊಂಡ ಬದುಕಿನಲ್ಲಿ ಬಂದ ಬೆಳದಿಂಗಳ ಬಿಲ್ಲೆಯೇ, ನೀನು ನೂರಾರು ಜನುಮಗಳಲ್ಲಿ ಜೊತೆಯಾಗಿದ್ದ ಪರಮಾಪ್ತ ಜೀವವೇನೋ ಎಂಬ ಅವ್ಯಕ್ತ ಭಾವ ನನ್ನ ಸುಪ್ತ ಮನಸ್ಸಿನೊಳಗೆ ಢಣಢಣನೆ ಮಾರ್ದನಿಸುತ್ತಿದೆ!

ಮುದ್ದಾಗಿ ಮರೆಯಲ್ಲೇ ನಾಚಿ, ನಯನಗಳು ಚಿಮ್ಮಿದ ಆ ಒಲವ ಕಿರುನಗೆಯ ಕಿಡಿಗೆ ನನ್ನ ಎದೆಬಣವೆ ಝಗ್ಗನೆಂದು ಹೊತ್ತಿಕೊಂಡಿತ್ತು! ಅವತ್ತಿನಿಂದ ನನ್ನ ಜಿಂದಗಿಯಲ್ಲಿ ವಸಂತದ ‘ಪ್ರೇಮ ಶಕೆ’ ಶುರು! ಉಸಿರಾಟದ ಉಸಾಬರಿಯನ್ನೂ ಮರೆತು ನಿನ್ನದೇ ಗುಂಗಿನಲ್ಲಿ ಅನುರಾಗದ ಅಪ್ಪಟ ಆಸಾಮಿಯಂತಾಗಿಬಿಟ್ಟೆ! ಧಮಧಮನೆ ಕೋಡಿಬಿದ್ದ ಕನವರಿಕೆಯ ಕನಸುಗಳಿಗೆ ಕಡಿವಾಣದ ಕಾಲು ದಾರಿಯೂ ಕಾಣದೆ ಕಂಗಾಲಾಗಿದ್ದೇನೆ!.

ನೀ ಕಿಸಕ್ಕೆಂದು ನಕ್ಕ ದಿನಗಳನ್ನು ಖಗೋಳ ಶಾಸ್ತ್ರಜ್ಞರು ‘ಹುಣ್ಣಿಮೆ’ಯೆಂದು ಗುರುತುಮಾಡಿರಬಹುದೆಂಬ ಸಣ್ಣ ಗುಮಾನಿ ನನ್ನದು. ನನ್ನ ಮರೆಗುಳಿತನಕ್ಕೆ ಅಪವಾದವಾಗಿಬಿಟ್ಟಿದೆ ನಿನ್ನ ಹೆಸರು! ‘ತಾರೆಗಳೆಲ್ಲಾ ಚಂದ್ರಮನಿಗೆ ವಿಚ್ಛೇದನ ಪತ್ರವನ್ನು ಕಳುಹಿಸಿವೆಯಂತೆ ಬಹುಷಃ ನನ್ನವಳ ಕಂಡಿರಬೇಕು!!’ ಎಂಬ ಪ್ರೇಮದ ಗಜಲುಗಳ ಸಾಲು ಗೀಚುವಷ್ಟರ ಮಟ್ಟಿಗೆ ನಾ ಹಾಳಾಗಿದ್ದುಂಟು!.

ಜಗತ್ತಿನೆಲ್ಲಾ ಸುಖದ ಮುಗಿಯದ ಒರತೆಗಳನ್ನು ನಿನ್ನ ಮುಂದೆ ಸುರಿದು ಜೊತೆ ಗೂಡಿ ಬಾಳಬೇಕೆಂಬ ಬಲಿತ ಕನಸುಗಳಿಗೆ ಸರಪಳಿಯ ಸರಹದ್ದೇ ಇಲ್ಲ. ನಂಬು; ಒಂದೇ ಒಂದು ನ್ಯಾನೊ ಸೆಕೆಂಡೂ ನಿನ್ನ ಬಗ್ಗೆ ಗಲೀಜು ಭಾವನೆಗಳು ಮೂಡಿದ್ದಿಲ್ಲ!; ಆರಾಧನೆಯಲ್ಲಿ ಯಾವ ಕಲ್ಮಶವಿದ್ದೀತು? ನೀನಂದ್ರೆ ನಂಗೆ ತು೦೦೦೦೦೦ಬಾನೇ ಇಷ್ಟಾ ಕಣೋ ಚಿನ್ನಮ್ಮ. ಸತ್ತು ಹೋಗುವಷ್ಟು!

ಅದೇನಾಯ್ತು ಪಾಪು ನಿಂಗೆ? ಈಚೀಚೆಗೆ ನಾಪತ್ತೆಯಾಗಿದ್ದೀ. ನೀ ಇಲ್ಲದೆ ಗ್ರಂಥಾಲಯ ಬಿಕೋ ಅನ್ನುತ್ತಾ ನನ್ನ ಛೇಡಿಸುತ್ತಿದೆ. ಒತ್ತರಿಸಿ ಬರುತ್ತಿದ್ದ ಭಾವಲಹರಿಗಳಿಗೆ ಪೂರ್ಣವಿರಾಮವಿಟ್ಟಂತೆ ನಿನ್ನ ಮೌನ, ಎದೆಗೆ ಬಿಸಿ ಉಸಿರನ್ನು ಒತ್ತಿದ್ದಂತೂ ಸುಳ್ಳಲ್ಲ. ನಿನ್ನ ಮೌನ ಕದನದ ಭೀಕರತೆಗೆ ಸಿಕ್ಕು ಸತ್ತು ಸತ್ತು ಬದುಕು ತ್ತಿದ್ದೇನೆ. ಹದಿನೆಂಟು ಅಕ್ಷೋಹಿಣಿ ಸೇನಾಬಲದಂತಹ ವಿರಹವೇದನೆಯ ದಾಳಿಗೆ ನರಳಿ ನರಳಿ ಪ್ರತಿಕ್ಷಣ ತತ್ತರಿಸುತ್ತಿದ್ದೇನೆ.ನಿನ್ನ ಮೌನದ ನರ್ತನ ಸಾಕುಮಾಡು; ನನ್ನೆದೆಯ ಆರ್ತನಾದ ಕೇಳಿಸುತ್ತಿಲ್ಲವೇ?.

ನನ್ನ ಮೈಮನದ ಕಣಕಣವೂ ನಿನ್ನನ್ನೇ ಜಪಿಸುತ್ತಿದೆ. ಥರಾವರಿ ತರಚುಗಾಯದೆದೆಗೆ ಮೌನದ ಉಪ್ಪು ಸವರಬೇಡ. ಅಪರಾತ್ರಿಯಲ್ಲಿ ಲಡಕಾಸಿ ರೇಡಿಯೊ ಒದರುವ ಹಳೇ ಭಾವಗೀತೆಗೆ ಕಣ್ಣಿನ ಪಸೆಯಲ್ಲಿ ಜಾಗೃತ ಜ್ವಾಲಾಮುಖಿಯಂತೆ ನೀರು ಛಂಗನೆ ಆಚೆಗೆ ಇಣುಕುತ್ತದೆ. ಏಕಾಂತದ ತಣ್ಣನೆಯ ಒಂಟಿ ರಾತ್ರಿಗಳಲ್ಲಿ ಚುರುಗುಟ್ಟಿಸುವ ಬೆಳದಿಂಗಳು!

ಅಬ್ಬಾ, ವಿವರಣೆಗೆ ಸಿಗದ ವೇದನೆ ಒಂದಾ, ಎರಡಾ? ಕ್ಷಣಕ್ಷಣವೂ ಕಡಲ ಅಲೆ ದಡ ತಾಕುವಂತೆ ನಿನ್ನೆಡೆಗೆ ಕಾತರಿಸುವ ಕಡುವಿರಹಿ ನಾ. ಅನುರಾಗದ ಅಧಿವೇಶನಕ್ಕೆ ಹಂಬಲಿಸುವ ಹುಚ್ಚು ಫಕೀರ ನಾನು! ಬಾಳ ಜೋಳಿಗೆಯನ್ನು ನಿನ್ನೆದುರು ಒಡ್ಡಿದ್ದೇನೆ, ಹಿಡಿಪ್ರೀತಿ ಸುರಿದು ತುಂಬಿಸಬೇಕಾದವಳು ನೀನೇ. ಅರ್ಧಕ್ಕೇ ನಿಂತ ಒಲವ ಕಲಾಪವನ್ನು ಪೂರ್ತಿ ಮಾಡು. ನಿನ್ನ ಗೈರು ಹಾಜರಿಯಿಂದ ನನೆಗುದಿಗೆ ಬಿದ್ದ ಕನಸುಗಳಿಗೆಲ್ಲಾ ನಿನ್ನ ಉಸಿರ ತಾಕಿಸಿ ಜೀವಕೊಡು. ಅನುಮಾನಿಸಬೇಡ, ನನ್ನ ಬದುಕಿನ ಪರಮಗುರಿ ನೀನು ಮತ್ತು ನೀನು ಮಾತ್ರ.! ಪ್ರಗಾಢ ಪ್ರೇಮಿಯಾಗಿ ಕಾಯುತ್ತಲೇ ಇರುವೆ ನಿನ್ನ ಬರುವಿಕೆಗಾಗಿ....

ಇಂತಿ ನಿನ್ನ,

ವಾಯಿದೆಯಿಲ್ಲದ ಒಲವ ವಾರಸುದಾರ

ಪ್ರತಿಕ್ರಿಯಿಸಿ (+)