ಬುಧವಾರ, ಡಿಸೆಂಬರ್ 11, 2019
23 °C
ಆಟೊಮೊಬೈಲ್ ಎಕ್ಸ್‌ಪೊ

ವಾಹನಗಳ ವರ್ಣಯಾನ

Published:
Updated:
ವಾಹನಗಳ ವರ್ಣಯಾನ

ಈಗ ಎಲ್ಲೆಲ್ಲೂ 2018ರ ವಾಹನ ಪ್ರದರ್ಶನದ್ದೇ ಸುದ್ದಿ. ಯಾವ ಹೈ ಎಂಡ್ ಕಾರು ಬಂತು? ಹೊಸ ಬೈಕ್‌ಗಳು ಯಾವುವು? ಈ ಬಾರಿ ಕಾನ್ಸೆಪ್ಟ್ ಮಾದರಿಗಳು ಎಷ್ಟು?... ಹೀಗೆ ಬಿಸಿಬಿಸಿ ಚರ್ಚೆಗಳೇ ನಡೆದಿವೆ. ಅಂತರರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ನೂರಾರು ಕಾರು, ಬೈಕು ಕಂಪನಿಗಳೆಲ್ಲಾ ಗ್ರಾಹಕರನ್ನು ಸೆಳೆಯಲು ಬಂದಿದ್ದವು. ಈ ಎಲ್ಲಾ ಕ್ರೇಜುಗಳ ಮಧ್ಯೆಯೂ ಎಲ್ಲರನ್ನೂ ತನ್ನತ್ತ ಸೆಳೆದ ಇನ್ನೂ ಒಂದು ಆಕರ್ಷಣೆ ಇಲ್ಲಿತ್ತು.

ಅದೇ ಕಾರ್ಟಿಸ್ಟ್. ಆಟೊಮೊಬೈಲ್‌ ಅನ್ನೇ ಮಾಧ್ಯಮವನ್ನಾಗಿಸಿ ಅದರಲ್ಲೇ ಹಲವು ಕಲಾಪ್ರಕಾರಗಳನ್ನು ಹೊರತಂದು ಈ ಪ್ರದರ್ಶನದಲ್ಲಿ ಜನರನ್ನು ಸೆಳೆದಿದ್ದು ‘ಕಾರ್ಟಿಸ್ಟ್’ ಕಲಾ ಸಂಸ್ಥೆ. ‘ಆಟೊಮೊಬೈಲ್ ಆರ್ಟ್’ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಹಲವು ಕಲಾ ಮಾದರಿಗಳು ಇಲ್ಲಿದ್ದವು. ಬಾರ್ಮರ್‌ನ ನೇಕಾರರಿಂದ ವಿನ್ಯಾಸಿತಗೊಂಡು ಚಿತ್ತಾರ ಹೊತ್ತಿದ್ದ ಜಾಗ್ವಾರ್ ಕಾರು, ಫೋಕ್ಸ್‌ವಾಗನ್‌, ಫೆರಾರಿ ಲೋಗೋನ ವೈರ್ ಫ್ರೇಮ್‌ಗಳ ಕಲಾಕೃತಿಗಳು, ಪೇಂಟಿಂಗ್‌ನಿಂದ ತುಂಬಿಕೊಂಡ ನ್ಯಾನೊ ಕಾರು, ಕಾಲುಗಳ ಹೊಂದಿರುವ ಅಂಬಾಸೆಡರ್, ನಿಸ್ಸಾನ್‌ನ ಎಂಜಿನ್‌ನಿಂದ ರೂಪುಗೊಂಡ ಕುರ್ಚಿಗಳು... ಒಂದೇ, ಎರಡೇ....

ಚೆಂದಕ್ಕಿಂತ ಚೆಂದ ಎಂಬಂತೆ ಬಣ್ಣದಲ್ಲಿ ಮಿಂದೆದ್ದ ಆಟೊ ಕೂಡ ತಿರುಗಿ ನೋಡು ವಂತೆ ಮಾಡಿತ್ತು. ಪುಟ್ಟ ಪುಟ್ಟ ಕಲ್ಲುಗಳಿಂದ ಮೈದುಂಬಿಕೊಂಡ ಸ್ಕೂಟರ್‌ ಕೂಡ ನಾನೇನೂ ಕಮ್ಮಿಯಿಲ್ಲ ಎನ್ನುವಂತೆಯೇ ನಿಂತಿತ್ತು. ಟೆರ್‍ರಕೋಟಾದಲ್ಲಿ ರೂಪಿಸಿದ ಪುಟ್ಟ ಕಾರೂ ಕಲೆಯಲ್ಲಿ ಹಿಂದಿಲ್ಲವೆನ್ನಿ!

ಈ ಎಲ್ಲಾ ಕಲೆಯ ಹಿಂದಿನ ಕೈ ಚಳಕ ಜೈಪುರದ ಕಲಾವಿದ ಹಿಮಾಂಶು ಅವರದ್ದು. ಆಟೊಮೊಬೈಲ್ ಹಾಗೂ ಆರ್ಟ್ ಅನ್ನು ಒಟ್ಟಿಗೆ ತರುವ ಆಲೋಚನೆಯೇ ಈ ಹಿಂದಿನ ಪ್ರೇರಣೆಯಂತೆ.

 

ಪ್ರತಿಕ್ರಿಯಿಸಿ (+)