ಸೋಮವಾರ, ಡಿಸೆಂಬರ್ 9, 2019
24 °C
ಆಟೊ ಎಕ್ಸ್‌ಪೊ 2018

‘ಕಾರು’ಬಾರು ಭಾರಿ ಜೋರು

Published:
Updated:
‘ಕಾರು’ಬಾರು ಭಾರಿ ಜೋರು

2030ರ ಹೊತ್ತಿಗೆ ಭಾರತದ ರಸ್ತೆಗಳ ಮೇಲೆ ಸಂಚರಿಸುವ ಸಾರ್ವಜನಿಕ ಸಾರಿಗೆ ವಾಹನಗಳು ಶೇ 100ರಷ್ಟು ವಿದ್ಯುತ್ ಚಾಲಿತವಾಗಿರಬೇಕು ಹಾಗೂ ವೈಯಕ್ತಿಕ ವಾಹನಗಳಲ್ಲಿ ಶೇ 40ರಷ್ಟು ಪರಿಸರಸ್ನೇಹಿ ವಾಹನಗಳಿರಬೇಕು ಎಂಬ ಸರ್ಕಾರದ ನೀತಿಗೆ ಅನುಗುಣವಾಗಿ ಈ ಬಾರಿಯ ಆಟೊ ಎಕ್ಸ್‌ಪೊದಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಮಾದರಿಗಳು ಅಧಿಕ ಸಂಖ್ಯೆಯಲ್ಲಿದ್ದವು. ಮಾತ್ರವಲ್ಲ, ನಾಲ್ಕೂ ದಿನಗಳ ಕಾಲ ವಿದ್ಯುತ್ ಚಾಲಿತ ವಾಹನಗಳ ಕುರಿತ ಮಾತುಗಳೇ ಪದೇ ಪದೇ ಕೇಳಿಬರುತ್ತಿತ್ತು.

ಎಲೆಕ್ಟ್ರಿಕ್ ವಾಹನಗಳ ಬಳಕೆಯ ಉಪಯೋಗಗಳ ಕುರಿತ ಪ್ರಚಾರಕ್ಕೆ ಇದೊಂದು ಉತ್ತಮ ವೇದಿಕೆ ಎಂದೇ ಭಾವಿಸಿದ್ದಂತಿತ್ತು ಕೆಲ ವಾಹನ ತಯಾರಕ ಕಂಪನಿಗಳು.

ಅದಕ್ಕೆ ತಕ್ಕಂತೆ ಹೆಚ್ಚಾಗಿ ಬ್ಯಾಟರಿ ಚಾಲಿತ, ಜಲಜನಕ ಚಾಲಿತ ವಾಹನಗಳ ಮಾದರಿಗಳು ಪ್ರದರ್ಶನಗೊಂಡವು. ಮೇಳಕ್ಕೆ ಭೇಟಿ ನೀಡಿದ ಬಾಲಿವುಡ್ ನಟ, ನಟಿಯರು ಹಾಗೂ ಕ್ರಿಕೆಟಿಗರು ಇತರ ವಾಹನಗಳ ಬಿಡುಗಡೆಗೆ ಬಂದಿದ್ದರೂ ಅವರ ಮಾತುಗಳು ಮಾತ್ರ ಎಲೆಕ್ಟ್ರಿಕಲ್ ಕಾರುಗಳ ಸುತ್ತಲೇ ಇರುತ್ತಿದ್ದುದು ಜಾಗತಿಕ ತಾಪಮಾನಕ್ಕೆ ಪರಿಹಾರೋಪಾಯದ ಮಾತುಗಳಂತಿದ್ದವು. ಎಲೆಕ್ಟ್ರಿಕ್ ವಾಹನಗಳ ಭವಿಷ್ಯವೂ ದೃಢವಾದಂತೆ ಕಾಣುತ್ತಿತ್ತು.

ಎಲೆಕ್ಟ್ರಿಕ್‌ ವಾಹನಗಳ ಜತೆಯಲ್ಲೇ ಸಾಂಪ್ರದಾಯಿಕವಾಗಿ ಆಟೊ ಎಕ್ಸ್‌ಪೊಗೆ ಭೇಟಿ ನೀಡುವವರ ನಿರೀಕ್ಷೆಯಂತೆ ಹೊಸ ಎಸ್‌ಯುವಿಗಳು, ಸೆಡಾನ್‌ ಹಾಗೂ ಹ್ಯಾಚ್‌ಬ್ಯಾಕ್‌ಗಳು ಪ್ರದರ್ಶನಗೊಂಡವು. ಈ ಬಾರಿ ಹೊಸ ಬಗೆಯ ಪರಿಕಲ್ಪನೆಯ ಮಾದರಿಗಳೂ ನೋಡುಗರ ಗಮನ ಸೆಳೆದವು.

ಗೈರಾದ ಕಂಪನಿಗಳು

ಫೋಕ್ಸ್‌ವ್ಯಾಗನ್‌, ಫಿಯೆಟ್‌ ಕ್ರಿಸ್ಲೆರ್‌, ಜಾಗ್ವಾರ್ ಲ್ಯಾಂಡ್‌ರೋವರ್‌, ನಿಸ್ಸಾನ್‌, ಫೋರ್ಡ್‌, ಹಾರ್ಲೆ ಡೇವಿಡ್ಸನ್‌, ಬಜಾಜ್ ಆಟೋ, ರಾಯಲ್ ಎನ್‌ಫೀಲ್ಡ್

ಹೊಸ ಪರಿಚಯ

ಕಿಯಾ ಮೋಟಾರ್ಸ್‌, ಇಂಡಿಯಾ ಕವಾಸಕಿ ಮೋಟಾರ್ಸ್‌, ಕ್ಲೆವ್‌ಲ್ಯಾಂಡ್‌ ಸೈಕಲ್‌ವರ್ಕ್ಸ್‌

ವಾಹನಗಳೊಂದಿಗೆ ಕಾಣಿಸಿಕೊಂಡ ಖ್ಯಾತನಾಮರು

ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್‌ (ಬಿಎಂಡಬ್ಲೂ 6 ಸಿರೀಸ್), ಗೌತಮ್ ಗಂಭೀರ್‌ (ಫಿನೆಟ್ಜಾ), ಮೊಹಮ್ಮದ್‌ ಅಜರುದ್ದೀನ್‌ (ಆಫ್ಟೆಕ್‌ ಮೋಟಾರ್ಸ್‌ ಸ್ಕಾರ್ಪಿಯನ್‌)

ಬಾಲಿವುಡ್‌ ತಾರೆಯರಾದ ಶಾರೂಖ್ ಖಾನ್‌ (ಹ್ಯುಂಡೈ ಎಲೈಟ್‌ ಐ20), ಜಾನ್ ಅಬ್ರಾಹಮ್‌ (ಯಮಹಾ ಆರ್‌3), ಅಕ್ಷಯ ಕುಮಾರ್‌(ಟಾಟಾ ಇಂಟ್ರಾ) , ಸೊನಾಕ್ಷಿ ಸಿನ್ಹಾ (ದಿಲೀಪ್ ಛಾಬ್ರಿಯಾ), ತಾಪ್ಸಿ ಪನ್ನು (ಹೊಂಡಾ ಸ್ಕೂಟರ್‌ 5ಜಿ), ಗುಲ್ ಪನಾಗ್‌ (ಮಹೀಂದ್ರಸ ಎಲೆಕ್ಟ್ರಿಕ್ ಕಾರು), ರಾಹುಲ್ ಖನ್ನಾ (ಮರ್ಸಿಡಿಸ್ ಬೆಂಜ್‌).

ಕಾನ್ಸೆಪ್ಟ್‌ಗಳಿಗೆ ಕಡಿಮೆಯಿಲ್ಲ

ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿರುವ ಕಾರು ವಿಭಾಗ ಇದು. ಕಾರು ತಯಾರಕರ ಕಡೆಯಿಂದಲೂ ಅದೇ ಉತ್ಸಾಹ. ಟಾಟಾ ಎಚ್‌5ಎಕ್ಸ್‌ ಕಾನ್ಸೆಪ್ಟ್‌ ಕಾರು ಹಾಗೂ ಭಾರತಕ್ಕೆ ಮೊದಲ ಬಾರಿಗೆ ಬಂದ ಕೊರಿಯಾದ ಕಿಯಾ ಕಂಪನಿಯ ಎಸ್‌ಪಿ ಕಾನ್ಸೆಪ್ಟ್‌ ಕಾರು ಕುರಿತು ಹೆಚ್ಚು ಚರ್ಚೆಗಳು ನಡೆದವು.

ಜಾಗ್ವಾರ್‌ ಮತ್ತು ಲ್ಯಾಂಡ್‌ರೋವರ್‌ ಕಂಪನಿ ಖರೀದಿ ನಂತರ ಭಾರತದಲ್ಲಿನ ಟಾಟಾ ಕಂಪನಿಯ ಕಾರುಗಳಲ್ಲಿ ಅದರ ಛಾಯೆ ಕಾಣಲಾರಂಭಿಸಿದೆ ಎಂದು ಎಚ್‌5ಎಕ್ಸ್‌ ಮೂಲಕ ಖಾತ್ರಿಯಾಯಿತು. ಲ್ಯಾಂಡ್‌ರೋವರ್‌ ಮಾದರಿಯ ಮೇಲೆ ಅಭಿವೃದ್ಧಿಗೊಂಡ ಕಾರು ಭವಿಷ್ಯದಲ್ಲಿ ಇಲ್ಲಿ ಪರಿಚಯ ಗೊಳ್ಳಲಿದೆ. 5 ಹಾಗೂ 7 ಆಸನ ವ್ಯವಸ್ಥೆಯಲ್ಲಿ ಈ ಕಾರು ಮಾರುಕಟ್ಟೆ ಪ್ರವೇಶಿಸುವ ಕುರಿತು ಕಂಪನಿ ಹೇಳಿದೆ. ಇದರೊಂದಿಗೆ ಮಾರುತಿ ಸುಜುಕಿ ನಿರೀಕ್ಷಿತ ಕಾನ್ಸೆಪ್ಟ್‌ ಫ್ಯೂಚರ್‌ ಎಸ್‌ ಎಂಬ ಭವಿಷ್ಯದ ಮಾದರಿಯನ್ನು ಪರಿಚಯಿಸಿತು. ಈ ಮಾದರಿಯ ಕಾರು ಮುಂದಿನ ವರ್ಷದಿಂದ ಇಲ್ಲಿ ತಯಾರಾಗಲಿದೆ.

ಕೊರಿಯಾದ ಕಿಯಾ ಮೋಟಾರ್ಸ್‌ ತನ್ನದೇ ದೇಶದ ಪ್ರತಿಸ್ಪರ್ಧಿ ಹ್ಯುಂಡೈನ ಕ್ರೆಟಾ ಮಾದರಿಗೆ ಪೈಪೋಟಿ ನೀಡುವಂತೆ ಭಾರತ ಮಾದರಿಯ ಎಸ್‌ಪಿ ಕಾರನ್ನು ಪರಿಚಯಿಸಿತು. 2019ಕ್ಕೆ ಈ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಇದೇ ಮೊದಲ ಬಾರಿಗೆ ಹೋಂಡಾ ಸಿಆರ್‌ವಿ ಡೀಸೆಲ್ ಮಾದರಿ ಎಕ್ಸ್‌ಪೊದಲ್ಲಿ ಪ್ರದರ್ಶನಗೊಂಡಿತು.

ಮಹೀಂದ್ರಾ ಜಿ4 ರೆಕ್ಸ್‌ಟಾನ್‌, ಹ್ಯುಂಡೈ ಕೊನಾ ಎಸ್‌ಯುವಿ, ಬಿಎಂಡಬ್ಲೂ ಹೊಸ ಎಕ್ಸ್‌3, ಮಿನಿ ಕಂಪನಿ ಕಂಟ್ರಿಮ್ಯಾನ್‌ ಕ್ರಾಸ್‌ ಓವರ್‌, ಮರ್ಸಿಡಿಸ್‌ ಬೆಂಜ್‌ ಇ ಕ್ಲಾಸ್ ಆಲ್‌ ಟೆರೈನ್ ಜತೆಗೆ ಎಲೆಕ್ಟ್ರಿಕ್ ಕಾನ್ಸೆಪ್ಟ್‌ ಎಸ್‌ಯುವಿ ಕೂಡ ಎಕ್ಸ್‌ಪೊದಲ್ಲಿ ಪ್ರದರ್ಶನಗೊಂಡಿತು.

ಬೇಕಾದಷ್ಟಿವೆ ಸೆಡಾನ್‌

ಸೆಡಾನ್ ಮಾದರಿಯಲ್ಲಿ ಬಹಳಷ್ಟು ಕಾರುಗಳು ಈ ಬಾರಿ ಪ್ರದರ್ಶನಗೊಂಡವು. ಹೋಂಡಾ ಅಮೇಜ್‌ ದೆಹಲಿ ಆಟೊ ಎಕ್ಸ್‌ಪೊ ಮೂಲಕ ಜಾಗತಿಕ ಮಾರುಕಟ್ಟೆಗೆ ಪರಿಚಯಗೊಂಡಿದ್ದು ವಿಶೇಷ. ಈ ವರ್ಷಾಂತ್ಯದಲ್ಲಿ ಮಾರುಕಟ್ಟೆಗೆ ಬರಲಿರುವ ಹೊಸ ಮಾದರಿಯ ಸಿವಿಕ್‌ ಇಲ್ಲಿ ಪ್ರದರ್ಶನಗೊಂಡಿತು. ಮತ್ತೊಂದೆಡೆ ಟೊಯೊಟಾ ಮಾರ್ಚ್‌ನಲ್ಲಿ ಪರಿಚಯಿಸುತ್ತಿರುವ ಯರಿಸ್‌ ಕಾರನ್ನು ಮೇಳದಲ್ಲಿ ಬಿಡುಗಡೆ ಮಾಡಿತು. ಕಿಯಾ ಕಂಪನಿಯ ಸ್ಟಿಂಜರ್‌ ಜಿಟಿ ಎಂಬ ಸೆಡಾನ್ ಮಾದರಿಯನ್ನು ಪ್ರದರ್ಶಿಸಿತು. ಟಾಟಾ ಮೋಟಾರ್ಸ್‌ ಟಿಗೋರ್‌ ಮಾದರಿಯ 110ಬಿಎಚ್‌ಪಿ ಜೆಟಿಪಿ, ಬಿಎಂಡಬ್ಲೂ ತನ್ನ 6 ಸಿರೀಸ್‌ ಗ್ರಾನ್‌ ಟೂರಿಸ್ಮೊ, ಮರ್ಸಿಡಿಸ್ ಬೆಂಜ್‌ ಇ–ಕ್ಲಾಸ್‌ ಎಲ್‌ಡಬ್ಲೂಬಿ ಜತೆಯಲ್ಲಿ ಮೇಬ್ಯಾಕ್‌ ಮಾದರಿಯ ಎಸ್‌–560 ಹಾಗೂ ಎಸ್‌–650 ಮಾದರಿ ಕಾರುಗಳು ಪರಿಚಯಗೊಂಡವು.

ಸಣ್ಣ ಕಾರಿನ ಕಾಲ

ಮಾರುತಿ ಸುಜುಕಿ ಹೊಸ ಮಾದರಿಯ ಸ್ವಿಫ್ಟ್‌ ಪರಿಚಯಿಸಿತು. ಈಗಾಗಲೇ ಮಾರುಕಟ್ಟೆಯಲ್ಲಿರುವ ಹೊಸ ಮಾದರಿಯ ಡಿಜೈರ್ ಹೋಲುವ ಸಣ್ಣ ಕಾರು ಅನಾವರಣಗೊಂಡಿತು. ಟಾಟಾ ಕೂಡ 45ಎಕ್ಸ್ ಎಂಬ ಹೊಸ ಮಾದರಿಯ ಕಾರು ಪರಿಚಯಿಸಿತು. ಹ್ಯುಂಡೈ ಹೊಸ ಶೈಲಿಯ ಎಲೈಟ್‌ ಐ20 ಪ್ರದರ್ಶನಗೊಂಡವು. ಕಿಯಾ ಕೂಡ ಈ ಮಾದರಿಯಲ್ಲೂ ತನ್ನ ಸೀಡ್‌ ಎಂಬ ಹ್ಯಾಚ್‌ಬ್ಯಾಕ್ ಕಾರನ್ನು ಪರಿಚಯಿಸಿತು.

ಎಲೆಕ್ಟ್ರಿಕ್ ಕಾರುಗಳ ವೈಭವ

ಈ ಬಾರಿ ಅತಿ ಹೆಚ್ಚು ಚಟುವಟಿಕೆಯಿಂದ ಕೂಡಿದ್ದ ವಿಭಾಗ ಎಲೆಕ್ಟ್ರಿಕ್ ಅಥವಾ ಬ್ಯಾಟರಿ ಚಾಲಿತ ಕಾರುಗಳ ವಿಭಾಗ. ಆಟೊ ಎಕ್ಸ್‌ಪೊದಲ್ಲಿ ಪಾಲ್ಗೊಂಡ ಎಲ್ಲಾ ಕಂಪನಿಗಳೂ ತಮ್ಮದೇ ಮಾದರಿಯ ಎಲೆಕ್ಟ್ರಿಕಲ್ ಕಾರುಗಳ ಮಾದರಿಯನ್ನು ಪ್ರದರ್ಶಿಸಿದವು. ಇದರಲ್ಲಿ ಬಿಎಂಡಬ್ಲೂ ಐ3ಎಸ್‌ ಹ್ಯಾಚ್‌ ಮತ್ತು ಐ8 ರೋಡ್‌ಸ್ಟರ್‌ ಗಮನ ಸೆಳೆದವು. ಹೋಂಡಾ ತನ್ನ ಸ್ಪೋರ್ಟ್ಸ್‌ ಇವಿ ಕಾನ್ಸೆಪ್ಟ್‌, ಹ್ಯುಂಡೈ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್‌ ಮಾದರಿಯ ಐಯಾನಿಕ್‌, ಟಾಟಾ ಮೊದಲ ಬಾರಿಗೆ ರೇಸಿಮೊ ಇವಿ ಎಂಬ ಎಲೆಕ್ಟ್ರಿಕ್ ಕಾರು ಪರಿಚಯಿಸಿತು. ಜತೆಗೆ ಟಿಯಾಗೊ ಮತ್ತು ಟಿಗೋರ್ ಮಾದರಿಯ ಎಲೆಕ್ಟ್ರಿಕ್ ವಾಹನಗಳೂ ಪ್ರದರ್ಶನಗೊಂಡವು.

ಮಹೀಂದ್ರಾದ ಕೆಯುವಿ 100 ಮಾದರಿಯ ಬ್ಯಾಟರಿ ಚಾಲಿತ ಕಾರು ಪ್ರದರ್ಶನ ಗೊಂಡಿತು. ರಿನೊ 460 ಬಿಎಚ್‌ಪಿ ಮಾದರಿಯ ಇ–ಸ್ಪೋರ್ಟ್‌ ಕಾನ್ಸೆಪ್ಟ್‌ ಕಾರನ್ನು ಪರಿಚಯಿಸಿತು. ಕಿಯಾ ಕಂಪನಿ ಈ ಮಾದರಿಯಲ್ಲೂ ತನ್ನ ಅಸ್ತಿತ್ವವನ್ನು ಪ್ರದರ್ಶಿಸಿ ಬ್ಯಾಟರಿ ಚಾಲಿತ ಹಾಗೂ ಹೈಬ್ರಿಡ್ ಮಾದರಿಯ ಹಲವು ಕಾರುಗಳನ್ನು ಪರಿಚಯಿಸಿತು. ಈ ಬಾರಿ ಬ್ಯಾಟರಿ ಚಾಲಿತ ವಾಹನಗಳ ವಿಭಾಗದಲ್ಲಿ ತ್ರಿಚಕ್ರ ವಾಹನವನ್ನು ಲೊಹಿಯಾ ಆಟೊ ಕಂಪನಿ ಪರಿಚಯಿಸಿತು.

ದ್ವಿಚಕ್ರ ವಾಹನ ಲೋಕ

ಈ ಬಾರಿಯ ಆಟೊ ಎಕ್ಸ್‌ಪೊದಲ್ಲಿ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹಲವು ಹೊಸತುಗಳನ್ನು ಪರಿಚಯಿಸಿತು. ಯಮಾಹಾ ಕಂಪನಿ ಬಹು ನಿರೀಕ್ಷಿತ ಆರ್‌15 ವಿ3.0 ಮಾದರಿಯನ್ನು ಪರಿಚಯಿಸಿತು. ಇದು ಈ ಹಿಂದಿನ ಆರ್‌3 ಮಾದರಿಯ ಮೇಲ್ದರ್ಜೆಗೆ ಏರಿಸಿದ ಬೈಕ್‌. ಹೋಂಡಾ 160ಸಿಸಿ ಎಕ್ಸ್‌–ಬ್ಲೇಡ್‌ ಬೈಕ್ ಪರಿಚಯಿಸಿತು. ಇದರೊಂದಿಗೆ ಆಕ್ಟಿವಾ ಸ್ಕೂಟರ್‌ನಲ್ಲಿ 5ಜಿ ಮಾದರಿಯನ್ನು ಪ್ರದರ್ಶಿಸಿತು.

ಸುಜುಕಿ ಬರ್ಗಮನ್‌ ಸ್ಟ್ರೀಟ್‌ ಎಂಬ ದೊಡ್ಡ ಗಾತ್ರದ ಸ್ಕೂಟರ್ ಪರಿಚಯಿಸಿತು. ಇದರೊಂದಿಗೆ 125 ಸಿಸಿ ಸ್ಕೂಟರ್ ಮಾದರಿಯಲ್ಲಿ ಹೀರೊ ಡ್ಯೂಯೆಟ್‌ ಹಾಗೂ ಮೆಸ್ಟ್ರೋ ಎಡ್ಜ್ ಪ್ರದರ್ಶನಗೊಂಡವು. ಪಿಯಾಜಿಯೊ ಕಂಪನಿ ಏಪ್ರಿಲಿಯಾ ಎಸ್‌ಆರ್‌ 125 ಎಂಬ ಸ್ಕೂಟರ್‌ ಪರಿಚಯಿಸಿತು. ಇದರೊಂದಿಗೆ ಆರ್‌ಎಸ್‌ ಹಾಗೂ ಟ್ಯೂನೊ 150ಎಸ್‌ ಮಾದರಿಯ ದ್ವಿಚಕ್ರ ವಾಹನಗಳು ಪ್ರದರ್ಶನಗೊಂಡವು.

ಬಿಎಂಡಬ್ಲೂ ಎಫ್‌ 750 ಜಿಎಸ್‌ ಹಾಗೂ ಎಫ್‌ 850ಜಿಎಸ್‌ ಮಾದರಿ ಬಿಡುಗಡೆ ಮಾಡುವ ಘೋಷಣೆ ಎಕ್ಸ್‌ಪೊದಲ್ಲಿ ಹೊರಬಿತ್ತು. ಇದರೊಂದಿಗೆ ಜಿ 310ಆರ್‌ ಹಾಗೂ ಜಿ 310ಜಿಎಸ್‌ ಬೈಕ್‌ಗಳನ್ನು ಭಾರತದ ಮಾರುಕಟ್ಟೆಗೆ 2019ಕ್ಕೆ ಪ್ರವೇಶಿಸಲಿದೆ ಎಂದೂ ಕೇಳಿಬಂತು. ಇದರೊಂದಿಗೆ ಹೀರೊ ಎಕ್ಸ್‌ಪಲ್ಸ್‌ 200, ಸುಜುಕಿ ಜಿಎಸ್‌ಎಕ್ಸ್‌–ಎಸ್‌750, ಕವಾಸಕಿ ನಿಂಜಾ ಎಚ್‌2 ಎಸ್‌ಎಕ್ಸ್‌, ಯುಎಂ ರೆನೆಗಡ್ ಡ್ಯೂಟಿ ಮತ್ತು ಥಾರ್‌ ಪ್ರದರ್ಶನಗೊಂಡವು. ಮತ್ತೊಂದೆಡೆ ಎಮ್‌ಫ್ಲಕ್ಸ್ ಒನ್‌ ಎಲೆಕ್ಟ್ರಿಕ ಎಂಬ ಸ್ಪೋರ್ಟ್‌ ಬೈಕ್‌ ಕೂಡ ಎಲ್ಲರ ಗಮನ ಸೆಳೆಯಿತು.

ದೇಶದ ಅತಿ ದೊಡ್ಡ ಆಟೊ ಎಕ್ಸ್‌ಪೊಗೆ ಪ್ರಮುಖ ವಾಹನ ತಯಾರಿಕಾ ಕಂಪನಿಗಳ ಗೈರು ಹಲವು ಪ್ರಶ್ನೆಗಳು ಮೂಡುವಂತೆ ಮಾಡಿದೆ. ಅದರ ನಡುವೆಯೂ ಭಾರತದ ವಾಹನ ಪ್ರಪಂಚಕ್ಕೆ ಮತ್ತಷ್ಟು ವಿದೇಶಿ ಕಂಪನಿಗಳು ದಾಂಗುಡಿ ಇಟ್ಟಿವೆ. ಜತೆಗೆ ಭವಿಷ್ಯದ ವಾಹನಗಳ ಕುರಿತ ಪರಿಚಯವನ್ನೂ ನೀಡುವಲ್ಲಿ ಆಟೊ ಎಕ್ಸ್‌ಪೊ ತಕ್ಕಮಟ್ಟಿಗೆ ಯಶಸ್ವಿಯಾಗಿದೆ.

ಪ್ರತಿಕ್ರಿಯಿಸಿ (+)