ಮಂಗಳವಾರ, ಡಿಸೆಂಬರ್ 10, 2019
20 °C

ಬೆಳಕಿನ ಗಳಿಗೆಗಳು

Published:
Updated:
ಬೆಳಕಿನ ಗಳಿಗೆಗಳು

ಜೀವನೋತ್ಸಾಹವನ್ನು ದಕ್ಕಿಸಿಕೊಳ್ಳುವ ಬಗೆ ಹೇಗೆ? ಕೆಲವರಿದ್ದಾರೆ, ಎಷ್ಟೇ ಜಂಜಾಟಗಳಿದ್ದರೂ ಕುಗ್ಗದೆ, ತಾಳ್ಮೆಗೆಡದೆ ಪ್ರಸನ್ನಚಿತ್ತದಿಂದ ಇರುವವರು. ಬದುಕು ಶೂನ್ಯವೆಂದು ಇವರಿಗೆಂದೂ ಅನಿಸದು. ಚಂದದ ಬದುಕನ್ನು ಕಟ್ಟುವ ದೃಢ ವಿಶ್ವಾಸದಿಂದ ಇವರು ಮುಂದೆ ಸಾಗುತ್ತಲೇ ಇರುತ್ತಾರೆ. ನನಗೋ, ಇಂಥವರನ್ನು ಕಂಡರೆ ಬಲು ಚೋದ್ಯ. ಇದ್ದರೆ ಹೀಗಿರಬೇಕು ಎನ್ನುವ ಸಣ್ಣದೊಂದು ಹಂಬಲ. ನಿತ್ಯ ಎದ್ದೊಡನೆ ಇವರಿಗೆ ಹೇಗೆ ಅದೇ ಆಕಾಶ, ರಸ್ತೆ, ವಾತಾವರಣ ಹುಮ್ಮಸ್ಸನ್ನು ನೀಡುತ್ತದೆ! ಅಥವಾ, ಇವರಿಗೆ ಮಾತ್ರವೇ ಆಕಾಶ ಬೇರೊಂದು ಬಣ್ಣವನ್ನು ಗುಟ್ಟಾಗಿ ತೋರಿಸುತ್ತದೆಯೋ ಎಂಬ ಸಂಶಯ!

ಇಂಥ ಚಿಕ್ಕಪುಟ್ಟ ಸಂಗತಿಗಳು ಕಾಡುವ ಸಮಯದಲ್ಲೇ ಇತ್ತೀಚಿಗೆ ಒಂದು ಲೇಖನ ಗಮನ ಸೆಳೆಯಿತು. ಲೇಖಕರೊಬ್ಬರ ಜೀವನದಲ್ಲಿ ನಾಯಿಯೊಂದು ಜೀವರಕ್ಷಕಳಂತೆ ಬಂದೊದಗಿ ಅವರ ಬದುಕನ್ನೇ ಬದಲಿಸಿದ ಹೃದಯಸ್ಪರ್ಶಿ ಕತೆ. ಚೈತನ್ಯಶೂನ್ಯ ಗಳಿಗೆಗಳನ್ನು ಆ ನಾಯಿಯ ಬೆಂಬಲದೊಂದಿಗೆ ಇಲ್ಲವಾಗಿಸಿದ ಕತೆ. ಇಷ್ಟಕ್ಕೂ ಆ ನಾಯಿ ಮಾಡಿದ್ದೇನು? ತಾನು ತಾನಾಗೇ ಇದ್ದು, ಮಾಲೀಕನನ್ನು ಮೋಡಿಗೊಳಗಾಗಿಸಿದ್ದು. ಆ ಮಾಲೀಕ ತನ್ನ ದೈನಂದಿನ ಚಟುವಟಿಕೆಗಳನ್ನು ತನ್ನ ಪ್ರೀತಿಯ ನಾಯಿಗೋಸ್ಕರ ಕೊಂಚ ಬದಲಾಯಿಸಿಕೊಂಡು ತನ್ನ ಪ್ರತಿ ದಿನದ ಕಾಯಕವನ್ನು ಹಿತಕರವಾಗಿಸಿಕೊಂಡ್ಡಿದ್ದು.

ನಾವು ಬೆಳಕಿನೆಡೆ ಹಾರುವ ಪತಂಗಗಳಂತೆ ಪ್ರೀತಿ, ಖ್ಯಾತಿ, ದುಡ್ಡು ಹೀಗೆ ಹಲವು ಬೆಳಕಿನ ಕಿಡಿಗಳೆಡೆ ಹಾರುತ್ತಾ ಆಗಾಗ ಗಾಯಾಳುಗಳಾಗಿ, ಲಕ್ಷಿಸದೆ ಮುಂದೆ ಸಾಗುತ್ತಿರುತ್ತೇವೆ. ಬಹುಶಃ ನಮ್ಮೆಲ್ಲರಿಗೂ ಜೀವಿಸಲು ಬೇಕಿರುವುದು ನಮ್ಮನ್ನು ಎಲ್ಲಿಗೋ ಎಳೆದುಕೊಂಡು ಹೋಗುವ ತಾಕತ್ತಿರುವ ಹಣವಲ್ಲ. ಒಬ್ಬರಿಂದೊಬ್ಬರು ಪೈಪೋಟಿಯಿಂದ ಧಾವಿಸುತ್ತಿರುವ ಈ ಸಂದರ್ಭದಲ್ಲಿ ಸ್ಪರ್ಧಾತ್ಮಕ ಮನಃಸ್ಥಿತಿಯಿಂದ ತಪ್ಪಿಸಿಕೊಂಡು ನಮ್ಮದೇ ಲಹರಿಯನ್ನು ಸಿದ್ಧಿಸಿಕೊಳ್ಳುವುದು ಒಂದು ಸವಾಲಿನ ಕೆಲಸವೇ ಸರಿ. ಯಾರೆಷ್ಟು ಗಳಿಸಿದ್ದಾರೆ, ಉಳಿಸಿದ್ದಾರೆ, ಎಲ್ಲಿಗೆ ಹೋಗುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವುದನ್ನು ಲೆಕ್ಕಿಸದಿದ್ದರೆ ಅಲ್ಲಿಗೆ ಒಂದು ಹಂತದ ಸರಳತೆ, ಸಮಾಧಾನ ನಮಗೆ ದಕ್ಕುವ ಸಾಧ್ಯತೆ ಇದೆಯೇನೋ!

ಎಲ್ಲಿಯೋ ಆಗಾಗ ನಡೆಯುವ ಕಥೆಗಳು ಹೊಸ ಕಾಲದ ಹಲವು ಸವಾಲುಗಳನ್ನು ಎದುರಿಸಲು ಸಹಜ ಪ್ರೇರಣೆಯನ್ನು ನೀಡುತ್ತವೆ. ದಟ್ಟ ಜನಜಂಗುಳಿಯ ರಸ್ತೆ ಬದಿಯಲ್ಲಿ ದಿಕ್ಕೇ ತೋಚದೆ ನಿಂತ ಹುಡುಗಿಯನ್ನು ಗುರಾಯಿಸಿ ನೋಡುವವರ ನಡುವೆ ಯಾರೋ ಆಸ್ಥೆ ತೋರಿ ಏನು-ಎತ್ತ ವಿಚಾರಿಸಿ ಸಹಾಯ ಹಸ್ತ ಚಾಚಿದ ಕಥೆಯೋ ಅಥವಾ ಇನ್ನೊಬ್ಬರಾರೋ ಅಪರಿಚಿತರೊಬ್ಬರು ರಾತ್ರಿ ಬಸ್ಸಿನಲ್ಲಿ ಒಂಟಿ ಕುಳಿತಿರುವ ಸಣ್ಣ ಹುಡುಗನೊಬ್ಬ ಇಳಿಯುವವರೆಗೂ ಸುರಕ್ಷಿತನಾಗಿದ್ದಾನೆಂದು ಖಾತ್ರಿಯಾದ ಮೇಲೆಯೇ ತೆರಳಿದ ಕಥೆಯೋ ಅಥವಾ ಅವರ್‍ಯಾರೋ ಮಧ್ಯಮ ವರ್ಗದ ಉದ್ಯೋಗಿ ತಮ್ಮ ಸಂಬಳದ ಕಾಲು ಭಾಗವನ್ನು ವಿದ್ಯಾರ್ಥಿವೇತನಕ್ಕೆ ಮೀಸಲಿಡುವ ಕಥೆಯೋ - ಇವೆಲ್ಲ ಪ್ರಪಂಚವಿನ್ನೂ ನಮಗರ್ಥವಾಗುವ ಪ್ರಪಂಚವಾಗಿಯೇ ಉಳಿದಿದೆ ಎನ್ನುವ ಆಶಾವಾದವನ್ನು ಕೊಡುತ್ತವೆ. 

‘ಅದೆಷ್ಟೇ ದೂರ ನೀನು ಓಡಿದರೂ, ನಿನ್ನ ಭಾರವನ್ನು ನೀನೇ ಹೊರಬೇಕು’ ಎಂಬರ್ಥದ ಒಂದು ಪದ್ಯವನ್ನು ಕೇಳಿದಾಗಲೆಲ್ಲಾ ಅನಿಸುವುದಿಷ್ಟು- ತಾತ್ವಿಕವಾಗಿ ನಮ್ಮೊಳಗಿನ ಭಾರವನ್ನು, ಜವಾಬ್ದಾರಿಯನ್ನು ನಾವೇ ಹೊರಬೇಕಿದೆ ನಿಜ, ಆದರೆ ಜೊತೆಗಿದ್ದು ಸಾಮರ್ಥ್ಯ ತುಂಬಲು ಯಾರಾದರೂ ಏನಾದರೂ ಇದ್ದರೆಷ್ಟು ಒಳ್ಳೆಯದಲ್ಲವೇ? ಇದಕ್ಕೆ ಮನುಷ್ಯರೇ ಆಗಬೇಕೆಂದಿಲ್ಲ. ಒಳಗೊಳಗೇ ಒದ್ದಾಡುವ ಜೀವಗಳಿಗೆ ಹಲವಾರು ರೂಪದಲ್ಲಿ ನೆರವು ಸಿಗುತ್ತದೆ. ಕೆಲವೊಮ್ಮೆ ಆತ್ಮ ಬಂಧುಗಳ ರೂಪದಲ್ಲೋ, ಇನ್ನು ಕೆಲವೊಮ್ಮೆ ಜೀವನದ ಅಮೂಲ್ಯ (ಕೆಲವೊಮ್ಮೆ ಕ್ಷುಲ್ಲಕವೆನಿಸಬಹುದಾದ) ಸಂಗತಿಗಳಲ್ಲೂ ಸಾಂಗತ್ಯದ ನೆರವು ಸಿಗಬಹುದು.

ಅಂದು ನಾನೇ ಬದುಕಿನ ಅತೀ ಹತಾಶ, ನಿರರ್ಥಕ ಕ್ಷಣಗಳನ್ನು ಅನುಭವಿಸುತ್ತಿದ್ದ ಸಂದರ್ಭದಲ್ಲಿ ಗೆಳೆಯರಂತೆ ಬಂದೊದಗಿದ ಎರಡು ಬೆಕ್ಕುಗಳ ಸಹವಾಸ ಯಾವ ಭಾಗ್ಯಕ್ಕಿಂತ ಕಮ್ಮಿ ಹೇಳಿ? ತಮ್ಮದೇ ಠೀವಿಯಲ್ಲಿ ದಿಗಂತವೋ ಮತ್ತೇನನ್ನೋ ದಿಟ್ಟಿಸುತ್ತಾ ನಿಶ್ಶಬ್ದವನ್ನೇ ಹೊದ್ದುಕೊಂಡು ಆಗೀಗ ನನ್ನ ಉಪಸ್ಥಿತಿಯನ್ನು ಪರಿಗಣಿಸುವಂತೆ ಒಂದು ಬೆಚ್ಚನೆಯ ನೋಟ ಎಸೆದು ಮುದುರಿ ಮಲಗುವ ರೀತಿಯೇ ಸಾಕಿತ್ತು, ಲೋಕದ ಎಲ್ಲ ಕಳವಳಗಳನ್ನು ಅಡಗಿಸಿ ಹೊಸ ತಾಕತ್ತು ಕರುಣಿಸಲು.

ಬದುಕು ಕೆಲವೊಮ್ಮೆ ಅತಿ ಸಾಮಾನ್ಯ ಗಳಿಗೆಗಳಲ್ಲೂ ಅರಳುತ್ತದೆ. ಇದನ್ನು ಅರಿತುಕೊಂಡು ಅದೇ ಲಯಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕಿದೆ. ನೋಟವಿದ್ದಷ್ಟೂ ನಡೆಯಬಹುದಾದ ದಾರಿ, ಒಂದು ಲೋಟ ಕಾಫಿ, ಬರವಣಿಗೆ, ಸಾಕು ಪ್ರಾಣಿಗಳು, ಮಂತ್ರಮುಗ್ಧಗೊಳಿಸುವ ಸಂಗೀತ, ಪ್ರತಿದಿನದ ದಿನಚರಿ- ಹೀಗೆ ತಿಳಿದೋ, ತಿಳಿಯದೆಯೋ ನಮ್ಮೊಳಗಿನ ಅದಮ್ಯ ಚೇತನವನ್ನು ಜಾಗೃತಗೊಳಿಸುವ ಶಕ್ತಿಯುಳ್ಳ ವಿಷಯಗಳು; ಇವೂ ನಮ್ಮನ್ನು ಕಾಪಾಡಬಲ್ಲವು!

ಸ್ನೇಹಜಯಾ ಕಾರಂತ

ಪ್ರತಿಕ್ರಿಯಿಸಿ (+)