ಬಿಡಿಯಾಗಿದ್ದಾಗ ಆತ್ಮ ಇಡಿಯಾದಾಗ ಪರಮಾತ್ಮ

7

ಬಿಡಿಯಾಗಿದ್ದಾಗ ಆತ್ಮ ಇಡಿಯಾದಾಗ ಪರಮಾತ್ಮ

Published:
Updated:

‘ಅಧ್ಯಾತ್ಮ’ ಎನ್ನುವುದರ ಸರಳ ನಿರೂಪಣೆಯನ್ನು ಕಳೆದ ವಾರ ನೋಡಿದೆವು. ‘ಅಧ್ಯಾತ್ಮ’ ಎಂಬ ಪದದ ಪರಿಚಯವನ್ನು ಮಾಡಿಕೊಂಡಿವು. ಈಗ ಅದನ್ನು ಒಂದು ವಿದ್ಯೆಯಾಗಿ ಯಾವ ಆಯಾಮಗಳನ್ನು ಪಡೆದುಕೊಂಡಿವೆ ಎನ್ನುವುದನ್ನು ನೋಡೋಣ. ‘ಆತ್ಮ, ಜೀವ, ಜಗತ್ತು, ಬ್ರಹ್ಮ – ಈ ನಾಲ್ಕು ತತ್ತ್ವಗಳನ್ನು ಕುರಿತದ್ದು ಅಧ್ಯಾತ್ಮವಿದ್ಯೆ. ಅದೇ ಅಧ್ಯಾತ್ಮಯೋಗ. ಅದೇ ಬ್ರಹ್ಮವಿದ್ಯೆ. ಅದೇ ವೇದಾಂತಶಾಸ್ತ್ರ’ ಎಂದಿದ್ದಾರೆ, ಡಿವಿಜಿ.

ನಾವು ಸಾಮಾನ್ಯವಾಗಿ ಈ ಶಬ್ದಗಳಲ್ಲಿ ಕೆಲವನ್ನಾದರೂ ನಿತ್ಯವೂ ಬಳಸುತ್ತಿರುತ್ತೇವೆ. ಆದರೆ ಅವುಗಳನ್ನು ಶಾಸ್ತ್ರೀಯವಾಗಿ ಬಳಸುವಾಗ ಅವುಗಳ ಶಾಸ್ತ್ರೀಯ ಸ್ವರೂಪದ ಪರಿಚಯ ಇರಬೇಕು; ಇಲ್ಲದೆ ಹೋದಾಗ ಅವು ತಪ್ಪಾದ ಅರ್ಥಕ್ಕೆ ತುತ್ತಾಗುತ್ತದೆ. ಮೊದಲಿಗೆ ‘ಆತ್ಮ’ ಮತ್ತು ‘ಜೀವ’ – ಎಂದರೆ ಏನು ಎಂದು ನೋಡೋಣ. ಡಿವಿಜಿಯವರು ಮನೋಜ್ಞವಾದ ಉಪಮೆಯ ಮೂಲಕ ಈ ಎರಡು ತತ್ತ್ವಗಳನ್ನು ನಿರೂಪಿಸಿದ್ದಾರೆ:

’ಆತ್ಮವು ಒಂಧು ಸುಗಂಧದ್ರವ್ಯವೆಂದು ಇಟ್ಟುಕೊಳ್ಳೋಣ. ಜೀವವೆಂಬುದು ಆ ದ್ರವ್ಯವಿರುವ ಭರಣಿ. ಆ ಭರಣಿಯ ಮೂಲಕ ಪರಿಮಳ ಹೊರಹೊಮ್ಮಿ ಲೋಕವನ್ನು ಮುಟ್ಟುತ್ತದೆ. ಆಗ ಲೋಕಕ್ಕೆ ಸುಖ. ವಿದ್ಯುಚ್ಛಕ್ತಿಯ ಉಪಮಾನವನ್ನು ನೋಡೋಣ. ವಿದ್ಯುತ್ತೇ ಆತ್ಮಚೈತನ್ಯ. ದೇಹಧಾರಿಯಾದ ಜೀವವೇ ಅದು ಹರಿಯುವ ತಂತಿ. ಆ ತಂತಿಯು ತನ್ನ ಬಳಿಯಿರುವ ಪದಾರ್ಥಗಳಿಗೆಲ್ಲ ತನ್ನ ಕಾವಿನ ಅಲೆಗಳನ್ನು ಸೋಕಿಸಿ ಅದಿರಿಸಿ ಆ ಪದಾರ್ಥಗಳ ರೂಪವನ್ನು ಮಾರ್ಪಡಿಸುತ್ತದೆ. ಇಂಥಾದ್ದು ಜೀವಾತ್ಮಪ್ರಭಾವ.’

ಜೀವ ಎಂದರೆ ಚೈತನ್ಯವು ತುಂಬಿಕೊಂಡಿರುವ ದೇಹ. ಅದಕ್ಕೆ ಡಿವಿಜಿಯವರು ಕೊಟ್ಟಿರುವ ಹೋಲಿಕೆ ಸೊಗಸಾಗಿದೆ. ಪರಿಮಳವನ್ನು ತುಂಬಬೇಕಾದರೆ ಒಂದು ಭರಣಿ, ಎಂದರೆ ‘ಶೀಷೆ’ ಬೇಕು. ಆ ಶೀಷೆಯೇ ಜೀವ; ಪರಿಮಳ ತುಂಬಿರುವ ಶೀಷೆ. ಅಂತೆಯೇ ‘ವಿದ್ಯುತ್‌’ ಆತ್ಮ; ಎಂದರೆ ಚೈತನ್ಯ. ಆದರೆ ಅದು ಪ್ರಕಟವಾಗಲು, ಹರಿಯಲು, ಶಕ್ತಿಯಾಗಿ ಒದಗಲು ತಂತಿಯ ಸಹಾಯ ಬೇಕು. ಆ ತಂತಿಯೇ ‘ಜೀವ’. ಹೀಗೆಯೇ ನಮ್ಮ ಶರೀರಕ್ಕೆ ಚೈತನ್ಯ ಒದಗಿರುವುದೇ ‘ಆತ್ಮ’ದ ಕಾರಣದಿಂದ.

ಆತ್ಮ ಎಂದರೇನು – ಎನ್ನುವುದು ತಿಳಿಯಿತು. ನಾವು ಆಗಾಗ ಪರಮಾತ್ಮ ಎಂದೂ ಉಪಯೋಗಿಸುತ್ತಿರುತ್ತೇವೆ ಅಲ್ಲವೆ? ಹಾಗಾದರೆ ‘ಪರಮಾತ್ಮ’ ಎಂದರೇನು? ಡಿವಿಜಿಯವರ ಮಾತುಗಳನ್ನೇ ಇಲ್ಲಿ ಉಲ್ಲೇಖಿಸಬಹುದು:

‘ಪ್ರಪಂಚದಲ್ಲಿ ಪ್ರಾಣಿಗಳು ಲೆಕ್ಕಮಾಡಲಾಗದಷ್ಟು ಹೇರಳವಾಗಿರುತ್ತವೆ. ಆ ಕೋಟ್ಯನುಕೋಟಿ ಪ್ರಾಣಿಗಳಲ್ಲಿ ಪ್ರತಿಯೊಂದೂ ಒಂದು ಜೀವ. ಆ ಒಂದೊಂದು ಜೀವದೊಳಗೂ ಆತ್ಮವಸ್ತುವಿರುತ್ತದೆ. ಹೀಗೆ ಬೇರೆ ಬೇರೆ ಜೀವಗಳೊಳಗೆ ಬೇರೆ ಬೇರೆಯಾಗಿರುವ ಆತ್ಮವು ಜೀವಾತ್ಮ. ಅಂಥ ಆತ್ಮಾಂಶಗಳ ಒಟ್ಟು (ಸಮಷ್ಟಿ) ಪರಮಾತ್ಮ; ಮತ್ತು ಯಾವ ವಸ್ತುವು ಲೋಕದ ಒಳಗಡೆ ಇರುವಾಗ ಆತ್ಮವೋ ಅದು ನಮ್ಮ ಪ್ರಪಂಚದಿಂದ ಹೊರಗಡೆ ಮಿತಿಮೇರೆಗಳಿಲ್ಲದೆ ಹರಡಿರುವ ಸ್ಥಿತಿಯಲ್ಲಿ ಬ್ರಹ್ಮ ಅಥವಾ ಪರಬ್ರಹ್ಮ.’

ಆತ್ಮ, ಜೀವ, ಪರಮಾತ್ಮ, ಜಗತ್ತು ಮತ್ತು ಬ್ರಹ್ಮ – ಇಷ್ಟಕ್ಕೂ ಪರಸ್ಪರ ಸಂಬಂಧವಿದೆ. ಆ ಸಂಬಂಧದ ಸ್ವರೂಪವನ್ನು ಮೇಲಣ ಮಾತುಗಳಲ್ಲಿ ಡಿವಿಜಿಯವರು ಹೇಳಿದ್ದಾರೆ. ಆತ್ಮ ಎನ್ನುವುದು ‘ಚೈತನ್ಯ’; ಆ ಚೈತನ್ಯವನ್ನು ಹೊಂದಿರುವ ರೂಪವೇ ‘ದೇಹ’. ಇಷ್ಟನ್ನು ಮೊದಲು ಹೇಳಿದ್ದಾಗಿದೆ. ಈಗ ಪರಮಾತ್ಮ, ಜಗತ್ತು ಮತ್ತು ಬ್ರಹ್ಮದ ಬಗ್ಗೆ ಹೇಳಬೇಕಿದೆ.

ಜಗತ್ತು ಎಂದರೆ ನಾವು–ನೀವೆಲ್ಲರೂ ಇರುವ ತಾಣ; ‘ನಾನು’ ಎನ್ನುವ ಜೀವಕ್ಕೂ ‘ಅವನು’ ಎನ್ನುವ ಜೀವಕ್ಕೂ ಅಸ್ತಿತ್ವವನ್ನೂ ಅವಕಾಶವನ್ನೂ ಒದಗಿಸಿರುವುದೇ ಈ ಜಗತ್ತು. ಅದರಲ್ಲಿ ‘ನಾನು’ ಮಾತ್ರವೇ ಇಲ್ಲ; ‘ಅವನು’, ’ಅವಳು’, ‘ಅದು’, ‘ಇದು’ – ಹೀಗೆ ಹಲವು ‘ನಾನು’ಗಳಿಗೂ ‘ಅವನು’ಗಳಿಗೂ ‘ಅವುಗಳಿಗೂ’ ಅದು ಜಾಗವನ್ನು ನೀಡಿದೆ. ಚೈತನ್ಯ ಎನ್ನುವುದು ಕೇವಲ ‘ನಾನು’ವಿನ ಮಾತ್ರವೇ ಇಲ್ಲ; ‘ಅವನು’, ‘ಅವಳು’ ‘ಅದು’, ‘ಇದು’ – ಈ ಎಲ್ಲ ‘ಜೀವ’ಗಳಲ್ಲೂ ಆತ್ಮವು ಚೈತನ್ಯರೂಪದಲ್ಲಿದೆ.

ಬಿಡಿಬಿಡಿಯಾಗಿರುವ ಎಲ್ಲ ‘ಜೀವ’ಗಳಲ್ಲೂ ಇರುವ ಆತ್ಮದ ಒಟ್ಟು ರೂಪವೇ ‘ಪರಮಾತ್ಮ’ ಎಂದೆನಿಸಿಕೊಳ್ಳುತ್ತದೆ. ಇದು ಹೇಗೆಂದರೆ ನೀರು ನಮ್ಮ ಮನೆಯ ತಂಬಿಗೆಯಲ್ಲಿದ್ದಾಗ ಅದನ್ನು ‘ತಂಬಿಗೆಯ ನೀರು’ ಎಂದು ಕರೆಯುವುದು ಸರಿ. ಆದರೆ ‘ನೀರು ಹರಿಯುತ್ತದೆ’ ಎಂದೋ ಅಥವಾ ‘ನೀರಿಗೆ ಬಣ್ಣವಿಲ್ಲ’ ಎಂದು ಹೇಳಿದಾಗಲೋ ಕೇವಲ ನಮ್ಮ ಮನೆಯ ನೀರಿನ ಬಗ್ಗೆಯಷ್ಟೆ ಹೇಳುತ್ತಿರುವುದಿಲ್ಲ; ವಿಶ್ವದಲ್ಲಿರುವ ಎಲ್ಲ ‘ನೀರುಗಳ’ ಗುಣವಾಗಿ ಹೇಳುತ್ತಿರುತ್ತೇವೆ. ಅಂತೆಯೇ ಆತ್ಮ ಎಂದಾಗ ಅದು ‘ನನ್ನ’ ಒಳಗೆ ಇರುವ ಚೈತನ್ಯವಷ್ಟೆ; ಆದರೆ ‘ಪರಮಾತ್ಮ’ ಎಂದಾಗ ಅದು ಎಲ್ಲರ, ಎಲ್ಲವುಗಳ ಒಳಗೂ ಇರುವ ಒಟ್ಟು ಮೊತ್ತದ ‘ಚೈತನ್ಯ’ ಎಂದು ಅರ್ಥ. ಲೋಕದ ಒಳಗೆ ಅಲ್ಲದೆ ಲೋಕದ ಹೊರಗೂ ಈ ಚೈತನ್ಯವು ಯಾವುದೇ ಮಿತಿಗಳಿಲ್ಲದೆ ಒಂದಾಗಿ ಹರಡಿರುತ್ತದೆ. ಹೀಗೆ ಎಲ್ಲೆಲ್ಲೂ ವ್ಯಾಪಿಸಿರುವ ಚೈತನ್ಯವೇ ‘ಬ್ರಹ್ಮ’. ಅದನ್ನು ‘ಪರಬ್ರಹ್ಮ’ ಎಂದೂ ಕರೆಯುತ್ತಾರೆ. ಈ ಬ್ರಹ್ಮದ ಸ್ವರೂಪ ಹೇಗಿರುತ್ತದೆ? ಮುಂದೆ ನೋಡೋಣ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry